Wednesday, June 19, 2024

ಸತ್ಯ | ನ್ಯಾಯ |ಧರ್ಮ

ಗುಳೇ ಎದ್ದ ಹನುಮ (ಚಂದ್ರಪ್ರಭ ಕಠಾರಿಯವರ ಕಥೆ)

(ರವಿವಾರ 24.03.2024ರಂದು ಬೆಳಗ್ಗೆ 10.30ಕ್ಕೆ ಚಾಮರಾಜಪೇಟೆಯ ಕಸಾಪ ಭವನದಲ್ಲಿ ಹಿರಿಯ ಕಥೆಗಾರ ಚಂದ್ರಪ್ರಭ ಕಠಾರಿಯವರ ʼನಾಲಿಗೆ, ನೆತ್ತರು ಮತ್ತು ಬುದ್ಧʼ ಎಂಬ ಕಥಾಸಂಕಲನ ಬಿಡುಗಡೆಗೊಳ್ಳುತ್ತಿದೆ. ಆ ಕಥಾ ಸಂಕಲನದ ಆಯ್ದ ಕಥೆ ಇಲ್ಲಿ ನಿಮ್ಮ ಓದಿಗಾಗಿ… ಈ ಕಥೆಯು ಕೊರಾನಾ ಕಾಲಘಟ್ಟದಲ್ಲಿ ಗುಳೆಹೊರಟ ಕಾರ್ಮಿಕರ ಭವಣೆಯ ಬದುಕನ್ನು ನಿರ್ಲಿಪ್ತವಾಗಿ ನಿರೂಪಿಸುತ್ತಾ ಹೋಗುತ್ತದೆ.)

***

ಕತೆ ಬರೆದು ಮುಗಿಸಿದ ರಾಮಣ್ಣನಿಗೆ ಎದೆಭಾರ ಕಮ್ಮಿಯಾದಂತಾಯಿತು. 

ರಿಮೋಟನ್ನು ಯಾಂತ್ರಿಕವಾಗಿ ಕೈಗೆತ್ತಿಕೊಂಡವನು ಮತ್ತೆ ಅದನ್ನು ಕೆಳಗಿಟ್ಟು, “ಕೊರೊನಾ ಮಹಾಮಾರಿ ಹಾವಳಿ: ಕೊರೊನಾ ರುದ್ರ ನರ್ತನ: ಕೊರೊನಾ ಸಾವಿನ ಕೇಕೆ: ಕೊರೊನಾ ಮರಣಮೃದಂಗ” ಎಂದು ಆರ್ಭಟಿಸುವ, ಬರೀ ಸಾವಿನ ಸಮಾಚಾರವನ್ನೇ ಉತ್ಪ್ರೇಕ್ಷಿಸಿ ಪ್ರಸಾರ ಮಾಡುತ್ತ ಭಯವನ್ನು ಹುಟ್ಟು ಹಾಕುವ ಟೀವಿಯ ಸುದ್ದಿಯನ್ನು ಇನ್ಮುಂದೆ ನೋಡಬಾರದೆಂದು ನಿರ್ಧಾರ ಮಾಡಿದ. ಹೊಟ್ಟೆ ಚುರುಗುಟ್ಟುತ್ತಿದ್ದು ಅಡುಗೆಮನೆಯಲ್ಲಿ ಮಧ್ಯಾಹ್ನ ಮಾಡಿದ್ದ ಅನ್ನ, ಸ್ವಲ್ಪ ಹುಳಿಗೊಜ್ಜು ಮಿಕ್ಕಿತ್ತು. ಮೊಸರು ಖಾಲಿಯಾಗಿ ತರೋಣವೆಂದರೆ ಆಲಸ್ಯ ಕಾಡಿ, ಅಲ್ಲದೆ ಇಷ್ಟೊತ್ತಲ್ಲಿ ಕಿಟ್ಟಪ್ಪನ ಅಂಗಡಿ ತೆರೆದಿರುತ್ತದೊ ಇಲ್ಲವೋ ಎಂದುಕೊಂಡು ಅನ್ನಕ್ಕೆ ಗೊಜ್ಜು ಕಲಸಿಕೊಂಡು ತಿಂದು ಊಟದ ಶಾಸ್ತ್ರ ಮುಗಿಸಿದ. ಬರೆದ ಕತೆಯನ್ನು ಮತ್ತೊಮ್ಮೆ ಓದುತ್ತ ಕೂತಾಗ ಕಣ್ಣಿಗೆ ನಿದ್ದೆಹತ್ತಿ ಹಾಗೆ ಹಾಸಿಗೆಗೆ ಹೊರಳಿದ.

ಆ ನಟ್ಟಿರುಳು – ಮುಖ ಮುಚ್ಚಿ, ಗುಬರ ಹಾಕಿಕೊಂಡು ಗಡದ್ದಾಗಿ ಮಲಗಿದ್ದ ರಾಮಣ್ಣನಿಗೆ ಯಾರೋ ಕೂಗಿದಂತಾಗಿ ತನ್ನನ್ನು ಅಲುಗಾಡಿಸಿದಂತೆ ಭಾಸವಾಯಿತು. ಗಾಬರಿಯಿಂದ ಗುಬರ ತೆಗೆದು ಅರೆನಿದ್ದೆಯಲ್ಲಿ ಎಚ್ಚೆತ್ತು ನೋಡಿದರೆ ರೂಮಲ್ಲಿ ಏನು ವಿಶೇಷ ಕಾಣಲಿಲ್ಲ. ತುಸು ಹೊತ್ತು ಕುಳಿತವನು ಭ್ರಮೆಯಿರಬೇಕೆಂದು ಮತ್ತೆ ನಿದ್ದೆಗೆ ಜಾರಿದ. ಅರೆತಾಸು ಕಳೆದಿರಬಹುದು. ಮತ್ತದೇ ಅನುಭವ. ಈಗ ಯಾರೋ ಪಾದವನ್ನು ಮುಟ್ಟಿದಂತಾಯಿತು. ಸರಕ್ಕೆಂದು ಕಾಲನ್ನು ಎಳೆದುಕೊಂಡು ಮುಸುಕು ಸರಿಸಿ ಎದ್ದವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಎದುರಿಗೆ ಕುಕ್ಕರಗಾಲಿನಲ್ಲಿ ಹನುಮ ಕುಳಿತಿದ್ದಾನೆ. ಅಳು ಮುಖ ಹೊತ್ತು “ನೀವು ಹೀಗೆ ಮಾಡಬಾರದಿತ್ತು…ಸಾರ್” ಅಂದ. ರಾಮಣ್ಣ ನಖಶಿಖಾಂತ ಬೆವೆತುಹೋಗಿದ್ದ.

ರಾತ್ರಿಯೆಲ್ಲ ಹನುಮನ ಕನವರಿಕೆಯಲ್ಲಿ ಏಳುವುದು, ಮಲಗುವುದು ಮಾಡುತ್ತಿದ್ದವನಿಗೆ ಮುಂಜಾನೆ ಹೊತ್ತಿಗೆ ಚೆನ್ನಾಗಿ ನಿದ್ದೆ ಹತ್ತಿತ್ತು. ಏನನ್ನೋ ನೆನಪಿಸಿಕೊಂಡವನಂತೆ ಗಡಬಡಿಸಿ ಎದ್ದು ನೋಡಿದರೆ ಗೋಡೆ ಗಡಿಯಾರ ಆಗಲೇ ಸಮಯ ಒಂಭತ್ತುವರೆಯಾದದ್ದನ್ನು ತೋರುತ್ತಿತ್ತು. ಹಾಸಿಗೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದ ಲುಂಗಿಯನ್ನು ಸುತ್ತಿಕೊಂಡು, ಕೈಚೀಲ ಹಿಡಿದು ಅವಸರದಲ್ಲಿ ರಾಮಣ್ಣ ತರಕಾರಿ ಮಾರ್ಕೆಟ್ಟಿಗೆ ನಡೆದ. ಕರ್ಫ್ಯೂಗೆ ಕೇವಲ ಇನ್ನರ್ಧ ಗಂಟೆ ಬಾಕಿಯಿತ್ತು. ಅಷ್ಟರಲ್ಲಿ ಹಾಲು, ಮೊಸರು, ತರಕಾರಿ ಕೊಂಡು ಮನೆ ಸೇರಬೇಕಿತ್ತು.

ಮಾರ್ಕೆಟ್ಟಿಗೆ ಬಂದರೆ ಅಲ್ಲಿ ಎಲ್ಲೆಲ್ಲೂ ಜನವೋ, ಜನ. ಕೆಲವರು ಭಂಡಧೈರ್ಯದವರು ಮಾಸ್ಕನ್ನೇ ತೊಟ್ಟಿರಲಿಲ್ಲ. ಇನ್ನೂ ಕೆಲವರು ನೆಪ ಮಾತ್ರಕ್ಕೆ ತೊಟ್ಟಿದ್ದರೂ ಅದು ಕುತ್ತಿಗೆಯಲ್ಲಿ ನೇತಾಡುತ್ತಿತ್ತು. ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ತನ್ನ ವರ್ತನೆಯ ಕಿಟ್ಟಪ್ಪನ ಅಂಗಡಿಯತ್ತ ಮುನ್ನುಗ್ಗುತ್ತಿದ್ದವನಿಗೆ “ಸಾರ್…ನಿಲ್ಲಿ!” ಎಂದು ಯಾರೋ ಜೋರಾಗಿ ಕೂಗಿದಂತಾಯಿತು. ಹಿಂತಿರುಗಿ ನೋಡಿದರೆ ಅಷ್ಟು ಜನರಲ್ಲಿ ಕೂಗಿದ್ದು ಯಾರು, ಯಾರಿಗೆಂದು ತಿಳಿಯಲಿಲ್ಲ. ಮುಂದಕ್ಕೆ ಹತ್ತು ಹೆಜ್ಜೆ ಇಟ್ಟಿರಲಿಲ್ಲ. ಮತ್ತದೇ ಕೂಗು ಕೇಳಿ ಬಂತಾದರೂ ತನ್ನನ್ನು ಕರೆದದ್ದು ಅಲ್ಲವೆಂದು ಎಣಿಸಿ ಮುನ್ನೆಡೆದ.

ಹಾಳಾದರೂ ಪರವಾಗಿಲ್ಲ ವಾರಕ್ಕೆ ಬೇಕಾಗೊವಷ್ಟು ತರಕಾರಿ ಕೊಳ್ಳಬೇಕು. ಇಲ್ಲದಿದ್ರೆ ಈ ಜನರ ಮಧ್ಯೆ ಸೇರಿ ಸೋಂಕು ಅಂಟಿಸಿಕೊಳ್ಳೊದು ಗ್ಯಾರಂಟಿ ಅಂದುಕೊಂಡು ಅಂಗಡಿಯಲ್ಲಿ ತರಕಾರಿ ಆರಿಸುತ್ತಿರುವಾಗ, ನೆಲದ ಮೇಲೆ ನಿಧಾನವಾಗಿ ಸರಿದ ನೆರಳನ್ನು ನೋಡಿ, ಹಿಂದಕ್ಕೆ ತಿರುಗಿದರೆ ದುಗುಡದಿಂದ ಹನುಮ ಕೈಮುಗಿದು ನಿಂತಿದ್ದ. “ಸಾರ್…ಏನಾದರೂ ಮಾಡಿ ಅಪ್ಪನನ್ನು ಉಳಿಸಿ” ಎಂದು ಗೋಗರೆಯುತಲ್ಲಿದ್ದ. ಕಲ್ಲಿನ ಹಾಗೆ ನಿಂತ ರಾಮಣ್ಣ ಅದೆಷ್ಟು ಹೊತ್ತು ಹಾಗೆ ನಿಂತನೋ! ಅಂಗಡಿ ಮಾಲೀಕ ಕಿಟ್ಟಪ್ಪ “ಏನಾಯ್ತ ಸ್ವಾಮಿ? ಹಂಗೆ ನಿಂತ್ಬುಟ್ರಿ…ಬ್ಯಾಗ್ ಹಿಡೀರಿ…ಟೈಮ್ ಆಗುತ್ತೆ” ಅಂದ. ತನಗೇನಾಗುತ್ತಿದೆ? ಎರಡು ಕೈಲಿ ಬ್ಯಾಗಿಡಿದು ರಾಮಣ್ಣ ಅಲ್ಲಿಂದ ಮನೆಯತ್ತ ಓಡಿದ.

ಮಕ್ಕಳಿಗೆ ಮೊಬೈಲಲ್ಲೇ ಪಾಠ ಮಾಡೋದು ಅಂತಾದರೆ, ಸ್ಕೂಲಿಗೆ ಯಾಕೆ ಹೋಗಬೇಕು? ಮನೆಯಲ್ಲೇ ಮಾಡಬಹುದಿತ್ತು. ಆದರೆ, ಜಿಗುಟು ಆಸಾಮಿ ಹೆಡ್ ಮಾಸ್ಟರ್ ಶಾಲೆಯ ವೇಳೆಯಂತೆ ತರಗತಿಯಲ್ಲೇ ಪಾಠ ಮಾಡಬೇಕೆಂದು ಆಜ್ಞೆಮಾಡಿದ್ದ.

ಕ್ಲಾಸ್ ರೂಮಿಗೆ ಬಂದ ರಾಮಣ್ಣ ಬ್ಲಾಕ್ ಬೋರ್ಡ್ ಒರೆಸಿ, ಆರನೇ ತರಗತಿಗೆ ರೇಖಾಗಣಿತ ಪಾಠ ಮಾಡಲು ಜ್ಯಾಮಿತಿ ಚಿತ್ರಿಸಿದ. ವಿದ್ಯಾರ್ಥಿಗಳಿಲ್ಲದೆ ಖಾಲಿ ಬೆಂಚುಗಳಿದ್ದ ಕೋಣೆಯಲ್ಲಿ ಒಬ್ಬನೇ, ಟ್ರೈಪಾಡಿಗೆ ಸಿಗಿಸಿದ್ದ ಮೊಬೈಲ್ ಫೋನನ್ನು ನೋಡುತ್ತ ಗೋಡೆಗಳಿಗೆ ಪಾಠ ಮಾಡುವುದು ಹಿಂಸೆಯೆನಿಸುತ್ತಿತ್ತು. ಹಾಗೆ ಬೋರ್ಡಿನ ಮೇಲೆ ಚಿತ್ರಿಸಿದ ಜ್ಯಾಮಿತಿ ಚಿತ್ರವನ್ನು ತೋರುತ್ತ, ಪಟಪಟಾಂತ ಲೆಕ್ಕ ಹೇಳುತ್ತ ಪ್ರಮೇಯಗಳನ್ನು ಬಿಡಿಸುತ್ತಿರಬೇಕಾದರೆ, ಕೊಠಡಿಯ ಹೊರಗಡೆ ಯಾರೋ ಬಂದು ನಿಂತಂತಾಯಿತು.

“ಮಕ್ಕಳೇ, ಒಂದು ನಿಮಿಷ ಬಂದೆ” ಎಂದು ಮೊಬೈಲ್ ಕ್ಯಾಮೆರಾಗೆ ಹೇಳಿ ಹೊರಗೆ ಬಂದ. ಹಳೇ ಮಾಸಲು ಪ್ಯಾಂಟು, ಶರಟು ತೊಟ್ಟು ಯುವಕನೊಬ್ಬ ನಿಂತಿದ್ದ. “ಯಾರು? ಏನು ಬೇಕಿತ್ತು?” ಅನ್ನುವಾಗ್ಗೆ, ಬೆನ್ನನ್ನು ತೋರಿ ನಿಂತಿದ್ದ ಹನುಮ ತಿರುಗಿದ. “ಸಾರ್..ನೀವು ಭಾಳ ಅನ್ಯಾಯ ಮಾಡುದ್ರಿ” ಅಂದು, ಕಣ್ಣೀರು ಹಾಕತೊಡಗಿದ. ತನಗರಿಯದಂತೆ ರಾಮಣ್ಣ ಕೈಲಿದ್ದ ಚಾಕ್ ಪೀಸನ್ನು ತುಂಡುತುಂಡು ಮಾಡುತ್ತ ನಿರುತ್ತರನಾಗಿ ನಿಂತ. 

ಕತೆ ಬರೆದು ನಿರುಮ್ಮಳನಾದೆನೆಂದು ಕೊಂಡರೆ, ಹನುಮನ ಪಾತ್ರ – ಪ್ರಾಥಮಿಕ ಶಾಲೆಯ ಅಧ್ಯಾಪಕ ರಾಮಣ್ಣನನ್ನು ಬಹುವಾಗಿ ಆವರಿಸಿ, ಕಾಡತೊಡಗಿತ್ತು. ನಿಂತಲ್ಲಿ, ಕುಂತಲ್ಲಿ,  ಹೋದೆಡೆಲೆಲ್ಲ – ಬೆಳಗಿನ ಹೊತ್ತು ಸಾಲದೆಂದು ರಾತ್ರಿ ನೆಮ್ಮದಿಯ ನಿದ್ರೆಯಲ್ಲೂ ಹೊಕ್ಕು ಪರಿಪರಿಯಾಗಿ ಹನುಮ ಬೆನ್ನು ಹತ್ತಿದ್ದ.

******

ಬೆಂಗಳೂರಿನ ಹೊಸೂರ್ ರೋಡಲ್ಲಿ ಸಿವಿಲ್ ಕಂಟ್ರಾಕ್ಟರೊಬ್ಬರ ಬಳಿ, ಗಗನಚುಂಬಿ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಹನುಮ. ಎಲ್ಲೆಡೆ ಕೊರೊನಾ ಕಾಯಿಲೆ ಹೆಚ್ಚಾಗಿ ಹಠಾತ್ತಾಗಿ ಲಾಕ್ ಡೌನ್ ಆಗಿ, ದಿನರಾತ್ರಿ ಪಾದರಸದಂತಿದ್ದ ಇಡೀ ನಗರ ಕಾಲು ಮುರಿದುಕೊಂಡು ಅನಾಥವಾಗಿ ಬಿದ್ದಾಗ, ರೂಮೊಳಗೆ ಬಂಧಿಯಾಗಿ ಮುಂದೇನು? ಎಂದು ಕಂಗಾಲಾಗಿದ್ದ. ಮೂರು ಕಾಸು ಇಲ್ಲದೆ ಮೂರೊತ್ತಿನ ಕೂಳಿಗೆ ಏನು ಮಾಡೋದೆಂದು ಚಿಂತಿತನಾಗಿದ್ದಾಗ, ಉತ್ತರಭಾರತದ ಬಿಹಾರದಿಂದ ಬಂದು ಹನುಮನೊಡನೆ ಕೆಲಸ ಮಾಡುತ್ತಿದ್ದ, ಅವನಿದ್ದ ರೂಮನ್ನು ಹಂಚಿ ಕೊಂಡಿದ್ದ ಅನ್ಸರ್ ಮತ್ತು ರಂಜೀತರಿದ್ದಕ್ಕಾಗಿ ಸದ್ಯಕ್ಕೆ ಹೊಟ್ಟೆಗೇನು ತೊಂದರೆಯಿರಲಿಲ್ಲ. ತನ್ನಲ್ಲಿದ್ದ ಅಕ್ಕಿ, ಜೋಳದ ಹಿಟ್ಟು ಇತ್ಯಾದಿ ರೇಷನ್ನು ದಿನಕಳೆದಂತೆ ಖಾಲಿಯಾಗಿ ಅಡುಗೆ ಸ್ಟೋವ್ ತಣ್ಣಗಾದಾಗ, ಅವರು ಮಾಡಿಕೊಂಡ ರೋಟಿ ಪೂರಿಯನ್ನು ಇವನೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದರು. ಆದರೆಷ್ಟು ದಿನ ಅವರ ಬಳಿ ಇರುವ ಸಾಮಗ್ರಿ ಅಡುಗೆಗೆ ಬಂದೀತು ಅಥವಾ ಹರಕುಮುರುಕು ಹಿಂದಿಯಲ್ಲಿ ತಾನೆಷ್ಟು ದಿನ ನಾಚಿಕೆಯಿಲ್ಲದೆ ಊಟ, ತಿಂಡಿಗೆ ಕೈಯೊಡ್ಡುವುದು?   

ಊರಲ್ಲಿ – ಹಳೇ ಕಂತು ಕಟ್ಟದೆ ವ್ಯವಸಾಯಕ್ಕೆಂದು ಬ್ಯಾಂಕಲ್ಲಿ ಸಾಲ ಸಿಗದಾಗ, ಮೀಟರ್ ಬಡ್ಡಿ ಲೆಕ್ಕಾಚಾರದಲ್ಲಿ ಸಾಲ ಮಾಡಿ ಹಾಕಿದ್ದ ಮೆಕ್ಕೆ ಜೋಳ, ಮೋಡ ಮುನಿಸಿಕೊಂಡು ಮಳೆ ಕೈಕೊಟ್ಟು, ಅಂದುಕೊಂಡಷ್ಟು ಫಸಲು ಕೈಗೆ ಬಾರದೆ ಬರಬಾದಾಗುವ ಪರಿಸ್ಥಿತಿ ಹನುಮನ ಅಪ್ಪನಿಗೆ ಬಂದಿತ್ತು. ಸಾಲ ಕೊಟ್ಟ ದಲ್ಲಾಳಿ ದಿನಾ ಮನೆಯ ಮುಂಬಾಗಿಲಿಗೆ ನಿಂತು ಕೂಗಾಡುವುದು ದಿನಂಪ್ರತಿ ಸಾಗಿ, ಹಳ್ಳಿಯಲ್ಲಿ ತಲೆಯೆತ್ತಿ ಓಡಾಡದಂತಾಗಿ ಹನುಮನ ಅಪ್ಪ ಕಂಗೆಟ್ಟು ಹಣ ಕಳುಹಿಸಲು ಕೇಳಿದ್ದ. ಭೂತಾಯಿಯನ್ನು ಅಪಾರ ನಂಬುವ ಅಪ್ಪನ ಎಂದೂ ಮುಗಿಯದ ಗೋಳಿನ ಕತೆಗೆ ಕೊನೆಯೇ ಇಲ್ಲವೇ? ಎಂದು ನಿಟ್ಟುಸಿರಿಟ್ಟು, ಖರ್ಚಿಗೂ ಉಳಿಸಿಕೊಳ್ಳದೆ ಬ್ಯಾಂಕಲ್ಲಿದ್ದ, ಟ್ರಂಕಿನ ತಳದಲ್ಲಿ ಬಟ್ಟೆಗಳ ಮಧ್ಯೆ ತುರ್ತು ಕಾಲದಲ್ಲಿ ಸಿಗಲಿ ಎಂದಿಟ್ಟಿದ್ದ, ಕೊನೆಗೆ ಜೇಬಲ್ಲಿ ಇದ್ದ ಎಲ್ಲಾ ದುಡ್ಡನ್ನು ಅಪ್ಪನ ಬ್ಯಾಂಕಿನ ಅಕೌಂಟಿಗೆ ಹಾಕಿ ಬಂದಿದ್ದ ಹನುಮ. ಆದರೆ, ಸಹ ಕೆಲಸಗಾರರೊಂದಿಗೆ ಹಂಚಿಕೊಂಡಿದ್ದ ಮನೆಬಾಡಿಗೆ ಕಟ್ಟದೆ ಆಗಲೇ ಮೂರು ತಿಂಗಳಾಗಿದ್ದು ಆ ಹೊತ್ತಿಗೆ ಅವನಿಗೆ ಮರೆತೇ ಹೋಗಿತ್ತು.

ಲೋಕಲ್ ಪೊಲಿಟಿಶಿಯನ್ ಕಮ್ – ಅನಾಮಧೇಯ ಸೈಟುಗಳಲ್ಲಿ ಕಟ್ಟಿಸಿದ್ದ ಹಲವು ಶೆಡ್ ಗಳ, ಮುಟ್ಟಿದರೆ ಬೀಳುವಂತಿದ್ದ ಮನೆಯ ಓನರ್, ಆ ದಿನ ಬೆಳಿಗ್ಗೆ ಸೂರ್ಯ ಕಣ್ಣು ಬಿಡುವ ಹೊತ್ತಿಗೆ ಪ್ರತ್ಯಕ್ಷನಾಗಿ “ಪರದೇಶಿ ನನ್ಮಗನೇ! ಬಾಡಿಗೆ ಕೊಡ್ದೆ ಇರೋಕೆ ಇದೇನು ತೋಂಟದಪ್ಪನ ಛತ್ರನಾ? ಕೈಗೆ ಸಿಕ್ದೆ ತಲೆ ಮರೆಸಿಕೊಂಡು ಓಡಾಡ್ತೀಯಾ? ದುಡ್ಡು ಮಡಗು ಇಲ್ಲಾ ಮನೆ ಖಾಲಿ ಮಾಡು” ಎಂದು ಗಲಾಟೆ ಮಾಡಿದ್ದ. ಆಗಲೂ ಅನ್ಸರ್, ರಂಜೀತ್ – ಹನುಮನ ಬಾಡಿಗೆಯ ಭಾಗವನ್ನು ತಾವೇ ಕೊಟ್ಟು ಉಪಕರಿಸಿದ್ದರು. ಈಗ ಲಾಕ್ ಡೌನ್ ಆಗಿ ಕೆಲಸವಿಲ್ಲ. ಮುಂದೆ ಎಷ್ಟು ತಿಂಗಳಿಗೆ ಮತ್ತೆ ಕೆಲಸ ಆರಂಭವಾಗುತ್ತೆ, ಗೊತ್ತಿಲ್ಲ? ಹುಷಾರಿ ಕಂಟ್ರಾಕ್ಟರ್, ಅರ್ಧದಲ್ಲಿ ಕೆಲಸಕ್ಕೆ ಕೈಕೊಟ್ಟು ಓಡಿಹೋಗುತ್ತಾರೆಂದು ಎರಡು ತಿಂಗಳ ಕೂಲಿಯನ್ನು ತನ್ನಲ್ಲೇ ಇರಿಸಿಕೊಂಡಿದ್ದಾನೆ. ಊಟಕ್ಕೆ, ಬಾಡಿಗೆಗೆ ತೊಂದರೆಯಾಗಿದೆಯೆಂದು ದುಡ್ಡು ಕೇಳಿದರೆ “ಮಾಡಿದ ಕೆಲಸದ ಬಿಲ್ಲು ಇನ್ನು ಪಾಸಾಗಿಲ್ಲ. ಬಂದಾಗ ನೋಡೋಣ” ಎಂದು ಇಲ್ಲದ ಸಬೂಬನ್ನು ಹೇಳಿ ತಾರಮ್ಮಯ್ಯ ಕೈ ಆಡಿಸಿದ್ದ.

ಪ್ಲಾಸ್ಟರ್ ಅಲ್ಲಲ್ಲಿ ಕಿತ್ತು ತೊನ್ನು ಬಂದಂತಿದ್ದ ಗೋಡೆಗಳ, ಹಂದಿಗೂಡಿನಂತಿದ್ದ ಆ ಅರಮನೆಯಲ್ಲಿ ಬಹಳಷ್ಟು ದಿನ ಇರಲಾಗದು. ನೋಡು ನೋಡುತ್ತಿದ್ದಂತೆ ತಿಂಗಳ ಕೊನೇ ದಿನ ಬಂದು ಕ್ಯಾಲೆಂಡರ್ ಮುಗುಚಿಕೊಳ್ಳುತ್ತದೆ. ಲಾಕ್ ಡೌನ್ ಆಗಿ ರೂಮಲ್ಲೇ ಲಾಕಾಗಿ ಕೆಲಸವಿಲ್ಲದೆ, ಕೂಲಿಯೂ ಇಲ್ಲದ್ದಕ್ಕೆ ಕನಿಕರ ತೋರುವ ಆಸಾಮಿಯೇ ಮನೆಓನರ್? ತಾರೀಖು ಒಂದಕ್ಕೆ ಕರಗದ ಕುಣಿತ ಮಾಡುತ್ತ ವಕ್ಕರಿಸುತ್ತಾನೆ. ಆದಷ್ಟು ಬೇಗ ತನ್ನೂರಿಗೆ ಹೊರಟು ಬಿಡಬೇಕೆಂದು ಹನುಮ ನಿರ್ಧರಿಸಿದ.

ಟೀವಿಯಲ್ಲಿ, ಪೇಪರಿನಲ್ಲಿ ಹೇಗೊ ಜನರು ಬಸ್ಸು, ರೈಲಿನ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆಯಲ್ಲೇ ತಮ್ಮೂರಿಗೆ ಹೆಜ್ಜೆ ಹಾಕುತ್ತ ಬೀಳುತ್ತಿದ್ದ ಪಡಿಪಾಟಲ ಬಗ್ಗೆ ಸುದ್ದಿ  ನಿರಂತರವಾಗಿ ಬರುತ್ತಿದ್ದದ್ದು, ಅವರೊಂದಿಗೆ ತಾನೂ ಒಬ್ಬನಾದೇನೆಂಬುದು ಒಂದು ಸಮಾಧಾನ. ಮಲಗುವ ಚಾಪೆ, ಚಾದರ, ಅಡುಗೆ ಸಾಮಾನುಗಳನ್ನು ಒಂದು ಮೂಲೆಗೆ ಕಟ್ಟಿಟ್ಟು, ಬ್ಯಾಗಿಗೆ ಒಂದಷ್ಟು ಬಟ್ಟೆ ತುರುಕಿ, ಪೂರಾ ಚಾರ್ಜ್ ಮಾಡಿದ ಮೊಬೈಲ್ ಹಿಡಿದು, ಸಹವಾಸಿಗಳು ಕೊಟ್ಟ ಉದ್ರಿ ಹಣವನ್ನು ಒಳನಿಕ್ಕರ್ ಜೇಬಿನಲ್ಲಿಟ್ಟ ಹನುಮ, “ಭಯ್ಯಾ…ಅಭಿ ಕ್ಯಾಕರೇಗ..ಮೇ ಗಾಂವ್ ಕು ಜಾತಾ ಹು. ತುಮಾರ ಪೈಸಾ ವಾಪಸ್ ಬಂದಾಗ ದೂಂಗಾ” ಎಂದು, ಅವರಿಗೂ ಅವರೂರಿಗೆ ಹೋಗಲು ಹೇಳಿದ. ರೈಲು ಸಂಚಾರ ಶುರುವಾಗದೇ ಅವರಾದರೂ ಹೇಗೆ ಹೋದಾರು? “ಹಮಾರ ಪೈಸಾ ಕ ಚಿಂತಾ ನಾ ಕರ್. ಬಾದ್ ಮೆ ದೇಸಕ್ತೆ. ಒಶಿಯರ್ ರೆಹೆನಾ. ಮಾಸ್ಕ್ ಮತ್ ನಿಕಲೊ…ಪೊಲೀಸ್ ಕೆ ಪಾಸ್ ಮತ್ ಜಾನಾ” ಎಂದು ರೂಮಿನಿಂದ ಭಯದ ಹಾರ ಹಾಕಿ ಬೀಳ್ಕೊಟ್ಟರು.  

ತನ್ನೂರು ಬೆಂಗಳೂರಿನ ಪಕ್ಕದಲ್ಲಿದೆಯೇ? ಹಾವೇರಿಯ ಸಮೀಪ ಬೆಂಚಿಹಳ್ಳಿ. ಸರಿಸುಮಾರು ನಾಲ್ಕುನೂರು ಕಿಲೋಮೀಟರ್ ದೂರದ್ದು. ದಿನಕ್ಕೆ ಎಷ್ಟು ದೂರ ನಡೆಯಬಹುದು? ಎಷ್ಟು ದಿನ…ಅಲ್ಲ…ಎಷ್ಟು ತಿಂಗಳಿಗೆ ಹಳ್ಳಿ ತಲುಪುವುದು? ದಾರಿಯಲ್ಲಿ ಊಟತಿಂಡಿಗೇನು ಮಾಡುವುದು? ಯಾವ ಚಿಂತೆಯನ್ನು ಮಾಡದೇ ಬೆನ್ನಿಗೆ ಬ್ಯಾಗನ್ನು ಅಂಟಿಸಿ ಹನುಮ ರಸ್ತೆಗಿಳಿದಿದ್ದ. ಅವನಿಗಿದ್ದ ಒಂದು ಧೈರ್ಯ- ದೂರದ ಊರಿಂದ ಬೇರೆ ಬೇರೆ ಕೆಲಸವನರಸಿ ಬಂದು, ನೆಲೆ ನಿಂತು, ತುತ್ತಿನ ಚೀಲ ತುಂಬಿಸಿಕೊಂಡವರು ಅಪ್ಪಿಕೊಂಡ ಬೆಂಗಳೂರಿನ ಕರುಳು ಬಳ್ಳಿಯನ್ನು ಏಕಾಏಕಿ ಕತ್ತರಿಸಿ ಈಗಾಗಲೇ ಗುಳೇ ಹೊರಟಿದ್ದಾರೆಂಬುದು. ಹೇಗೊ ತನ್ನೂರು ತಲುಪಿದರೆ, ಅಲ್ಲಿ ಉಪವಾಸವೊ, ವನವಾಸವೊ – ಮನೆಯವರೊಟ್ಟಿಗೆ ಹೇಗಿದ್ದರೂ ಸಂತೋಷವೆ!

ತಾನಿದ್ದ ಅಷ್ಟ ದಾರಿದ್ರ್ಯದ – ರಸ್ತೆಯಲ್ಲೇ ಕೊಚ್ಚೆ ಹರಿಯುವ, ಬೆಳಗಲ್ಲೇ ಗುಯ್ ಗುಡುವ ಸೊಳ್ಳೆ ಸಾಮ್ರಾಜ್ಯದ, ಗಬ್ಬುನಾರುವ  ಜಾಗವನ್ನು, ಸಂದಿಗೊಂದಿಗಳನ್ನು ದಾಟಿ, ದುಡಿಮೆಯ ನೆನಪುಗಳನ್ನು ಹಿಂದೆ ಬಿಟ್ಟು ಮೇನ್ ರೋಡಿಗೆ ಬಂದಾಗ ಹನುಮನ ಕೈಕಾಲು ಮರಗಟ್ಟಿ ಗಕ್ಕನೆ ನಿಂತ. ನರಪಿಳ್ಳೆ, ನಾಯಿಗಳಿಲ್ಲದೆ ಬಿಕೋ ಎನ್ನುತ್ತ ಉದ್ದುದ್ದ ತಣ್ಣಗೆ ಮಲಗಿದ್ದ ರಸ್ತೆಗಳು. ಲೋಕದ ವ್ಯಾಪಾರವೆಲ್ಲ ಸ್ತಬ್ಧವಾಗಿ ಭೂಮಿ ಸುತ್ತುವುದು ನಿಂತಿತೊ ಎಂಬಂತೆ ಎಲ್ಲೆಲ್ಲೂ ಸ್ಮಶಾನ ಮೌನ! ರೂಮಿನಲ್ಲಿ ಅನ್ಸರ್, ರಂಜೀತರ ಜೊತೆ ಅರ್ಧಂಬರ್ಧ ಅರ್ಥವಾಗುತ್ತಿದ್ದ ಅವರೂರಿನ ಕತೆ, ಹರಟೆ – ಏನನ್ನೋ ಹೇಳಿ ಬಿದ್ದು ಬಿದ್ದು ಅವರು ನಗುತ್ತಿದ್ದಾಗ ಪೆಕರನಂತೆ ತಾನು ಸುಮ್ಮನೆ ನಗುತ್ತಿದ್ದದ್ದು ನೆನಪಾಗಿ, ರೂಮು ಅಸಹನೀಯವೆಂದು ಕೊಂಡಿದ್ದರೆ ಹೊರ ಜಗತ್ತು ರೌರವ ನರಕವೆನಿಸಿತು.

ಬಿಳಿ ಹೆಬ್ಬಾವಿನಂತೆ ಮಲಗಿದ್ದ ವೈಟ್ ಟಾಪಿಂಗ್ ರಸ್ತೆಯಲ್ಲಿ ಒಬ್ಬಂಟಿಯಾಗಿ ಸಾಗಿದಾಗ, ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡುಗಳು. ಮಾಸ್ಕ್ ಹಾಕಿ, ಉಸಿರುಗಟ್ಟಿ ಹಾಗೆ ತೂಕಡಿಸುತ್ತಿದ್ದ ಪೋಲಿಸರು. ಆಗಾಗ್ಗೆ, ಅಶರೀರವಾಣಿಯಂತೆ ಶೂನ್ಯದಲ್ಲಿ ಕೇಳುತ್ತಿದ್ದ ಸೈರನ್ ಧ್ವನಿಯು ಹತ್ತಿರವಾಗುತ್ತ ಎದೆಗೂಡು ಚೂರಾಗುವಂತೆ ಚೀರಿ, ಪಕ್ಕದಲ್ಲೇ ಮಿಂಚಿನಂತೆ ಸರಿದು ಹೋಗುವ ಆಂಬುಲೆನ್ಸುಗಳು. ಅದ್ಯಾವ ಕಾಡಲ್ಲಿ ತಣ್ಣಗಿದ್ದ ಆ ಸೂಕ್ಷ್ಮಜೀವಿ, ನಗರ ಹೊಕ್ಕು, ವಿಶ್ವವ್ಯಾಪ್ತಿಯಾಗಿ ರಕ್ತಬೀಜಾಸುರನಾಗಿ ಹರಡಿ ಅದ್ಯಾವ ಆಮಾಯಕನ ಮೈಯಲ್ಲಿ ಹೊಕ್ಕಿದೆಯೊ? ಅವನು ಬದುಕುತ್ತಾನೊ, ಸಾಯುತ್ತಾನೊ? ಅಯ್ಯೋ…!

ಗಿಜಗುಡುತ್ತಿದ್ದ ರಸ್ತೆಯು ಖಾಲಿ ಖಾಲಿ ಇರುವಾಗಲೂ ಸಲೀಸಾಗಿ ನಡೆಯಲಾಗದೆ, ಕಳ್ಳಹೆಜ್ಜೆಗಳು ಭಾರವಾಗಿ ಸಾಗುತ್ತ ಆಸರೆ ಕೊಟ್ಟ ಬೆಂಗಳೂರಿಂದ ಆಚೆಗೆ ಬಿದ್ದರೆ ಸಾಕೆಂದು ನೋಡುವಾಗ್ಗೆ ದೂರದಲ್ಲಿ ಪೊಲೀಸರು ಆಟೊವೊಂದನ್ನು ಅಡ್ಡಹಾಕಿ ನಿಲ್ಲಿಸಿದ್ದರು. ದಾಡಿ ಬಿಟ್ಟ ಆಟೋ ಡ್ರೈವರ್ ಪೊಲೀಸರಲ್ಲಿ ಕೈಮುಗಿದು ಗೋಗರೆಯುತಲ್ಲಿದ್ದ. ಆಟೋದಲ್ಲಿ ಬಸುರಿ ಮಹಿಳೆಯೊಬ್ಬಳು ನರಳಾಡುತ್ತಿದ್ದಳು. ಹನುಮ, ಒಮ್ಮೆ ಮುಖದ ಮೇಲೆ ಮಾಸ್ಕ್ ಇದೆಯೋ ಎಂದು ಮುಟ್ಟಿ ನೋಡಿಕೊಂಡ. ಪೊಲೀಸರ ಕೈಲಿ ಸಿಕ್ಕಿಕೊಂಡರೆ ಊರು ತಲುಪಿದಂತೆ!

ವಿರುದ್ಧ ದಿಕ್ಕಿಗೆ ನಡೆದು, ಸರ್ವೀಸ್ ರಸ್ತೆ ಬಿಟ್ಟು ಹಿಂತಿರುಗಿ ಫ್ಲೈಒವರ್ ಹತ್ತಿ ಏರುರಸ್ತೆಯಲ್ಲಿ ನಡೆದ…ನಡೆದೇ ನಡೆದ. ಉರಿಬಿಸಿಲು ತಲೆ ಸುಡುವಾಗ, ತನ್ನ ಸೋಲಿಸುವ ಮಾತು ಬೇಡ. ತನ್ನೂರಿನ ಕೆಂಡದ ಮಳೆಯಂಥ ಬಿಸಿಲಿನ ಮುಂದೆ ಇದ್ಯಾವ ಧಗೆಯೆಂದು ನಕ್ಕ.

ನೆಲಮಂಗಲ – ಮಾದಾವಾರ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಮೈದಾನದ ಬಳಿ ಬರುತ್ತಿದ್ದಂತೆ, ಪೊಲೀಸರು ಕಾಲ್ನಡಿಗೆಯಲ್ಲಿ ಬರುತ್ತಿದ್ದ ನೂರಾರು ಜನರನ್ನು ಅಡ್ಡಗಟ್ಟಿ, ನುಸುಳಿ ಹೋಗಲು ಯತ್ನಿಸುತ್ತಿದ್ದವರಿಗೆ ಲಾಠಿ ಬೀಸುತ್ತಿದ್ದನ್ನು ನೋಡಿ ಒಮ್ಮೆಗೆ ಬೆದರಿದ. ತನ್ನನ್ನು ಸೇರಿದಂತೆ ಹೆದ್ದಾರಿಯಲ್ಲಿ ಎಲ್ಲರನ್ನೂ ಕುಕ್ಕರಗಾಲಿನಲ್ಲಿ ಕೂರಿಸಿ, ಮೈಮೇಲೆಲ್ಲ ತಮಗೆ ಕೋವಿಡ್ ವೈರಸ್ ಅಂಟಿದೆಯೆಂಬಂತೆ ಆಂಟಿ ವೈರಸ್ ದ್ರಾವಣ ಸಿಂಪರಣೆ ಮಾಡಿದರು. ನಂತರ, ತಿಂಡಿ ಪೊಟ್ಟಣಗಳನ್ನು ತಿನ್ನಲು ಕೊಟ್ಟು ಅಲ್ಲೇ ಹಾಕಿದ್ದ ಬೃಹತ್ ಶೆಡ್ಡಿನಲಿ ಕ್ವಾರೆಂಟೈನ್ ಆಗಿ ಉಳಿಯಲು ಹೇಳಿದರು.  

 “ಸಾರ್…ನಮ್ಮೂರಿಗೆ ನಾನು ಹೋಗ್ಲೇ ಬೇಕು. ದಯವಿಟ್ಟು ಬಿಟ್ಬಿಡಿ”

“ಅಂತಾದ್ದೇನಯ್ಯ ನಿಮ್ಮೂರಲ್ಲಿ ಕೊಳ್ಳೇ ಹೋಗೋದು…ಜನ್ರು ತುಪತುಪನೆ ಸಾಯ್ತಿದ್ದಾರೆ…ಎರಡು ವಾರ ಇದ್ದೋಗು”

“ಇಲ್ಲಾ…ಸಾರ್…ನಮ್ಮಪ್ಪನಿಗೆ ಮೈ ಚೆನ್ನಾಗಿಲ್ಲ…ಇವತ್ತೋ…ನಾಳೆಯೋ…”

ಅರಿವಿಲ್ಲದೆ, ಆಕಸ್ಮಿಕವಾಗಿ ನಾಲಿಗೆಗೆ ಬಂದ ಒಂದು ಸುಳ್ಳನ್ನು ನುಡಿದದ್ದಕ್ಕೆ “ಹೌದಾ…ಆಗಲಿ…ಹೋಗು” ಎಂದು, ಟೂ ಸ್ಟಾರ್ ಹೆಗಲಿಗೆ ಅಂಟಿಸಿದ್ದ ಪೊಲೀಸ್ ಅಧಿಕಾರಿ ಕರುಣೆ ತೋರಿದ.

ತನ್ನಂತೆ ನೂರಾರು ಜನರು – ಹೆಂಡತಿಯೊಡನೆ, ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಹೊತ್ತು, ಕೈಲಿ ಭಾರದ ಸಂಸಾರದ ಬ್ಯಾಗನ್ನಿಡಿದು ಹೆದ್ದಾರಿಯಲ್ಲಿ ಸಾಗಿದ್ದರು. ಕೆಲವರು ಸುಸ್ತಾಗಿ, ಕುಡಿಯಲು ನೀರಿಲ್ಲದೆ ಕುಸಿದು ಬಿದ್ದರೆ, ಕೆಲವು ಕನಿಕರದ ಮಾನವೀಯತೆಯ ಕೈಗಳು ತಮ್ಮ ಪ್ಲಾಸ್ಟಿಕ್ ಬಾಟಲಿಯಲ್ಲಿ ಉಳಿದಿದ್ದ ತೊಟ್ಟು ನೀರನ್ನು ಹನಿಸಲು ಮುಂದಾಗುತ್ತಿದ್ದವು. ಆದರೆ, ಕೆಲವರ ಬಾಯಲ್ಲಿ ನೀರು ಹೋಗದೆ ತುಟಿಗಳ ಮಧ್ಯೆ ಹೊರ ಚೆಲ್ಲುತ್ತಿತ್ತು. ಅದ ನೋಡಿದ ಹನುಮ, ಕಾಂಕ್ರೀಟು ರಸ್ತೆಯ ಬದಿಗಿನ ಪುಟ್ ಪಾತಲ್ಲಿ ಕೂತು ಬಳಬಳನೆ ಅಳಲು ಆರಂಭಿಸಿದ.

ತಾನೇಕೆ ಅಳುತ್ತಿದ್ದೇನೆ?  ರಸ್ತೆಗೆ ಬಿದ್ದು ಮೂರಾಬಟ್ಟೆಯಾದವರ ಬದುಕಿಗೊ ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪ್ಪನಿಗೆ ಆಪತ್ತಾಗಿದೆ ಎಂದು ಸುಳ್ಳು ನುಡಿದದ್ದಕ್ಕೊ? ಅಥವಾ ನಡಿಗೆಯಲ್ಲೇ ಊರು ಸೇರಬೇಕಾದ ಸಂಕಟಕ್ಕೊ?

ಬೆಂಗಳೂರಲ್ಲಿ ರಸ್ತೆಗೆ ಬಿದ್ದಾಗ, ತಾನು ನಡೆಯುತ್ತಲೇ ಊರಿಗೆ ಬರುತ್ತೇನೆಂದು ಹನುಮ ತನ್ನಪ್ಪನಿಗೆ ಫೋನು ಮಾಡಿದ್ದ. ದಾರಿ ಮಧ್ಯೆ ಅವನ ಅಮ್ಮ, ಅಣ್ಣಅತ್ತಿಗೆ ಆಗಾಗ್ಗೆ ಫೋನು ಮಾಡಿ ಎಲ್ಲಿದ್ದಿಯೆಂದು ವಿಚಾರಿಸುತ್ತಿದ್ದರು. ದಾವಣಗೆರೆ, ಹರಿಹರ ದಾಟಿ ರಾಣೆಬೆನ್ನೂರಿನ ಹತ್ರ ಇರಬೇಕು. ಸುಸ್ತಾಗಿ ಫ್ಲೈಓವರ್ ಮೇಲೆ ದಣಿವಾರಿಸಿಕೊಳ್ಳಲು ಕೂತು, ಮನೆಗೆ ಫೋನು ಮಾಡಿದರೆ ಬ್ಯಾಟರಿ ರೀಚಾರ್ಜ್ ಆಗದೆ ಸ್ವಿಚ್ಚಾಫಾಗಿತ್ತು. ಸಿಟ್ಟಿನಿಂದ ಮೊಬೈಲನ್ನು ಸೇತುವೆ ಕೆಳಗೆ ಎಸೆದು ಬಿಟ್ಟ.

ಹೆದ್ದಾರಿಯಲ್ಲಿ – ಹಾವೇರಿ ಬಲಭಾಗಕ್ಕೆ ಇದ್ದು ಅದ ದಾಟಿ ಮುಂದಕ್ಕೆ ಸಾಗಿ, ಎಡಕ್ಕೆ ಸರ್ವೀಸ್ ರಸ್ತೆಗೆ ಹೊರಳಿ ಹನುಮ ತನ್ನೂರಿನ ಕಡೆ ನಡೆದ. ತಾಯಿಯಂತೆ ಪೊರೆದ ನಗರ – ಇರುಳು ಕಳೆದು ಬೆಳಗಾಗುವುದರೊಳಗೆ ರಾಕ್ಷಸನ ರೂಪ ತಾಳಿ ಬಂದಾಗ, ಪಾರಾದೆನೆಂಬ ಖುಷಿಯಲ್ಲಿ ಸೋತ ಕಾಲುಗಳನ್ನು ಎಳೆಯುತ್ತ ತನ್ನ ಮನೆಯ ಕಡೆ ಹೆಜ್ಜೆ ಹಾಕಿದ.

ಅದೆಷ್ಟು ದಿನಗಳು ಹೊಟ್ಟೆಗೆ ಅನ್ನ, ನೀರಿಲ್ಲದೆ ಕಳೆದವೋ? ಇಡೀ ದೇಹವಿಲ್ಲವಾಗಿ ಚೈತನ್ಯ ಮಾತ್ರ ಉಳಿದಿದೆಯೊ? ಅಂತೂ ದೂರದಲ್ಲಿ ಬಯಲಲ್ಲಿ ಒಂಟಿಯಾಗಿದ್ದ ಮನೆಯ ಕಂಡು ಹನುಮನ ಮುಖವರಳಿತು. ಅವಸರದಿಂದ ಊದಿದ ಪಾದಗಳನ್ನು ಎತ್ತಿಡುತ್ತ ಮನೆಯತ್ತ ಸಾಗಿದಾಗ, ಜಗಲಿಯ ಮೇಲೆ ಯಾರೋ ಬೀಡಿ ಸೇದುತ್ತ ಕುಳಿತಂತೆ ಕಂಡಿತು. ಅದು ಅಣ್ಣನಿರಬಹುದು. ಊರ ಹೊರಗೆ ಕದ್ದುಮುಚ್ಚಿ ಬೀಡಿ ಸೇದುವುದು ತನಗೆ ಗೊತ್ತಿದ್ದೇ! ಆದರೆ, ಅಪ್ಪನಿರುವ ಮನೆಯ ಮುಂದೆ ಬೀಡಿ ಸೇದೊ ಧೈರ್ಯ, ಅಹಂಕಾರ ಅವನಿಗೆಲ್ಲಿಂದ ಬಂತು?

ಮುಂಬಾಗಿಲ ದಾಟಿ ಹಜಾರಕ್ಕೆ ಬಂದರೆ, ಗೋಡೆಗೆ ನೇತು ಹಾಕಿದ್ದ ಅಪ್ಪನ ಫೋಟೊಕ್ಕೆ ಹಣೆಗೆ ಕುಂಕುಮವಿಟ್ಟು, ಹೂವಿನಹಾರ ಹಾಕಿದ್ದರು. ಅದನ್ನು ನೋಡಿ ಅನಾಮತ್ತಾಗಿ ಹನುಮ ನೆಲಕ್ಕೆ ಕುಸಿದ. ಮನೆಮಂದಿಯೆಲ್ಲ ಅವನ ಸುತ್ತಲೂ ಕೂತು ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. “ಅದೇನಾತೊ! ಒಂದೇ ಸಮ ಕೆಮ್ಮು ಶುರುವಾತು. ಆಮೇಲೆ ಜ್ವರ! ಮೈಯೆಲ್ಲ ಬೆಂಕಿಯಾಗಿ ಸುಡುತ್ತಿತ್ತು. ಜಿಲ್ಲಾಸ್ಪತ್ರೆಗೆ ಫೋನು ಮಾಡಿದರೆ ಆಂಬುಲೆನ್ಸಲ್ಲಿ ಕರ್ಕೊಂಡು ಹೋದ್ರು. ಆಸ್ಪತ್ರೆಲೀ ಉಸಿರು ಕಟ್ಟಿದಾಗ, ಇರೋ ಎರಡೇ ಐಸಿಯುನಲ್ಲಿ ಜಾಗ ಸಿಗ್ಲಿಲ್ಲ. ಆಸ್ಪತ್ರೆಲೀ ಆಕ್ಸಿಜೆನ್ನೂ ಇರ್ಲಿಲ್ಲ. ಮೂರೇ ದಿನ…ಉಸಿರು ತಗೊಳೋಕು ಆಗ್ದೆ…ಬಿಡೋಕು ಆಗ್ದೆ ನಿಮ್ಮಪ್ಪ ಪ್ರಾಣ ಬಿಟ್ರಂತೆ ಕಣಪ…” ಎಂದ ಹನುಮನ ಅಮ್ಮ, ಅಳುತ್ತಿದ್ದವನನ್ನು ಎದೆಗಪ್ಪಿಗೊಂಡು ತಲೆನೇವರಿಸುತ್ತ ರೋದಿಸತೊಡಗಿದಳು.

*****

ರಜಾದಿನ. ಮನೆಯಲ್ಲಿ ಒಬ್ಬನೇ ಇದ್ದು, ಶಾಲೆಯಿಲ್ಲದೆ, ಕರ್ಫ್ಯೂಯೆಂದು ಹೊರ ಹೋಗಲಾಗದೆ ರಾಮಣ್ಣ ಒಂಟಿ ಉಳಿದ. ಟೀವಿಯಲ್ಲಿ, ಪತ್ರಿಕೆಗಳಲ್ಲಿ ಬರುತ್ತಿದ್ದ – ಐಸಿಯು ಸಿಗದೆ, ಆಕ್ಸಿಜೆನ್ ಇಲ್ಲದೆ ಸಾಲುಸಾಲು ಸಾಯುತ್ತಿದ್ದವರ ಸುದ್ದಿಗಳು, ನೂರಾರು ಮೈಲಿ ನಡೆದುಕೊಂಡೇ ಗುಳೇ ಹೊರಟ ಅಮಾಯಕ ವಲಸಿಗರ ನೋವು, ಸಂಕಷ್ಟಗಳು ರಾಮಣ್ಣನನ್ನು ಬಹುವಾಗಿ ಕಾಡಿತ್ತು. ಹೊಟ್ಟೆಗೆ ಬೆಂಕಿ ಬಿದ್ದಿತ್ತು. ಆ ಬಗ್ಗೆ ಬರೆದು ನಿರುಮ್ಮಳನಾಗಬೇಕೆಂದು ಹನುಮನ ಕತೆ ಬರೆದ. ಆದರೆ ನೆಮ್ಮದಿ ಇರಲಿಲ್ಲ. ಏನೋ ಆತಂಕ! ಕಣ್ಣು ಮುಚ್ಚಿದರೆ ಸಾಕು, ಹನುಮ ಬಂದು ʼನನ್ನಪ್ಪನನ್ನು ಸಾಯಿಸಬಾರದಿತ್ತುʼ ಎಂದು ಗೋಳಿಡುತ್ತಿದ್ದಂತೆ ಭಾಸವಾಗುತ್ತಿತ್ತು.

ಅವನಪ್ಪನನ್ನು ಸಾಯಿಸಿದ್ದುನಾನೇ? ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದೆ ಆಳುವ ಸರ್ಕಾರ ಆ ಅಸಹಾಯಕ ರೈತನನ್ನು ಸಾಯಿಸಿದ್ದು! ಅದನ್ನೇ ಕತೆಯಲ್ಲಿ ಬರೆದಿದ್ದೇನೆ. ಆದರೆ, ಹನುಮ ತಾನು ತಪ್ಪಾಡಿದ ಮಾತಿನಿಂದ ಅಪ್ಪ ತೀರಿಕೊಂಡನೆಂದು ಭಾವಿಸಿ ಪಾಪಪ್ರಜ್ಞೆಯಿಂದ ಬೇಯುತ್ತಿದ್ದಾನೆ.

ಬಹಳ ಚಿಂತಿಸಿ – ಒಲ್ಲದ ಮನಸ್ಸಿಂದ ಬರೆದ ಕತೆಯ ಕೊನೆಯ ಸಾಲುಗಳಿಗೆ ಕಾಟು ಹಾಕಿ, ಕೆಮ್ಮುಜ್ವರದಿಂದ ವಿಪರೀತ ನರಳುತ್ತಿದ್ದ ಹನುಮನ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿದರು. ಸಕಲ ಸೌಲಭ್ಯವಿದ್ದ ಜಿಲ್ಲಾಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿ, ಆಕ್ಸಿಜೆನ್ನಿಗೆ ಯಾವ ಕೊರತೆಯು ಇಲ್ಲದ್ದರಿಂದ, ಸಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತು ಅವನು ಪ್ರಾಣಾಪಾಯದಿಂದ ಪಾರಾದ. ಹುಷಾರಾಗಿ ಡಿಸ್ಚಾರ್ಜ್ ಆಗುವಾಗ ತನ್ನ ಜೀವ ಉಳಿಸಿದ ವೈದ್ಯರಿಗು, ಆಳುವ ಸರ್ಕಾರಕ್ಕು

ಕೃತಜ್ಞತೆಯಿಂದ ಕಣ್ಣೀರು ಹಾಕುತ್ತ ಕೈಮುಗಿದ…ಎಂದು ಕತೆಯಲ್ಲಿ ರಾಮಣ್ಣ ಬದಲಾವಣೆ ಮಾಡಿದ.

******

Related Articles

ಇತ್ತೀಚಿನ ಸುದ್ದಿಗಳು