Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮಾತಾಡುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆ ವ್ಯಂಗ್ಯ ಮಾಡಿದ ಆರಗ ಜ್ಞಾನೇಂದ್ರ

ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಪ್ರತಿಭಟನೆ ವೇಳೆ ಭಾಷಣ ಮಾಡುವ ಸಂದರ್ಭದಲ್ಲಿ ಅನಗತ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಿಸಿ ಖರ್ಗೆಯವರ ಮೈ ಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದನ್ನು ವಿರೋಧಿಸಿ ಸ್ಥಳೀಯ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಸರ್ಕಾರದ ನಿಲುವನ್ನು ವಿರೋಧಿಸಿ ಘೋಷಣೆ, ಧಿಕ್ಕಾರ ಕೂಗಲಾಗಿತ್ತು. ಈ ಸಂದರ್ಭದಲ್ಲಿ ಆರಗ ಜ್ಞಾನೇಂದ್ರ ಅವರ ಮಾತಿನ ಸರದಿ ಬಂದಾಗ ಈಶ್ವರ್ ಖಂಡ್ರೇ ಹಾಗೂ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಈ ವೇಳೆ ಕಸ್ತೂರಿ ರಂಗನ್ ವರದಿ ಜಾರಿ ಮಾಡಿದರೆ ಮಲೆನಾಡು ಭಾಗಕ್ಕೆ ಆಗಬಹುದಾದ ದುಷ್ಪರಿಣಾಮ ಏನು ಎಂಬ ಬಗ್ಗೆ ಸರ್ಕಾರಕ್ಕೆ ಅರಿವಿರಬೇಕು. ಇದಕ್ಕೆ ಸರಿಯಾಗಿ ಕಾಡಿನ ಬಗ್ಗೆ ಅರಿವೇ ಇರದಂತಹ ಜನಪ್ರತಿನಿಧಿಯನ್ನು ಅರಣ್ಯ ಸಚಿವರನ್ನಾಗಿ ಮಾಡಿದರೆ ಇಂತಹ ವರದಿಗಳು ಜಾರಿ ಆಗುತ್ತವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರ, ಅರಣ್ಯ ಸಚಿವರನ್ನು ಟೀಕಿಸುವ ಮಧ್ಯೆ ಅನಗತ್ಯವಾಗಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಪ್ರಸ್ತಾಪಿಸಿದ ಆರಗ ಜ್ಞಾನೇಂದ್ರ ಖರ್ಗೆಯವರ ಮೈ ಬಣ್ಣದ ಬಗ್ಗೆ ವ್ಯಂಗ್ಯಬರಿತವಾಗಿ ಮಾತನ್ನಾಡಿದ್ದಾರೆ.

“ಅವರಿಗೆ ಮರ-ಗಿಡ ಎನ್ನುವುದರ ಬಗ್ಗೆ ಗೊತ್ತಿಲ್ಲ. ಮರದ ನೆರಳಿನ ಮಹತ್ವ ಗೊತ್ತಿಲ್ಲ. ಸುಟ್ಟು ಕರಕಲಾದಂತೆ ಇರ್ತಾರೆ…, ನಮ್ಮ ಖರ್ಗೆಯವರನ್ನ ನೋಡಿದ್ರೇ ಗೊತ್ತಾಗುತ್ತೆ. ಪಾಪ.., ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಅದೇ ನೆರಳು ಅವರಿಗೆ.  ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಅವರಿಗೆ ಗೊತ್ತಿಲ್ಲ..” ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿಯೇ ಅವರ ಬಣ್ಣದ ಬಗ್ಗೆ ವ್ಯಂಗ್ಯ ಮಾಡುವಂತೆ ಮಾತನ್ನಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು