ಕುರ್ಚಿ ಬಿಟ್ಟು ಒಕ್ಕಲಿಗರ ಮೇಲಿನ ಪ್ರೀತಿ ತೋರಿಸಿ: ಸಿಎಂ ಸಿದ್ದರಾಮಯ್ಯನವರಿಗೆ ಎಚ್.ಡಿ. ಕುಮಾರಸ್ವಾಮಿ ಸವಾಲು

ಬೆಂಗಳೂರು: ಒಕ್ಕಲಿಗರನ್ನು ಬೆಳೆಸಿದ್ದು ಕಾಂಗ್ರೆಸ್ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬರೀ ಬುರುಡೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಒಕ್ಕಲಿಗರನ್ನು ಮುಖ್ಯಮಂತ್ರಿ ಮಾಡುವುದು ಕಾಂಗ್ರೆಸ್ಸೇ ಎನ್ನುವುದಾದರೆ, ತಕ್ಷಣವೇ ನೀವು ಕುರ್ಚಿ ಬಿಡಬೇಕಲ್ಲವೇ ಎಂದು ಪ್ರಶ್ನಿಸಿರುವ ಅವರು, ಒಕ್ಕಲಿಗರ ಮೇಲೆ ನಿಮ್ಮ ಪ್ರೀತಿ ಪ್ರದರ್ಶಿಸಲು ಇದು ಸಕಾಲ ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ನ್ಯಾಯದ ಸಂಹಾರಿ ಎಂದು ಕರೆದಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಅಧಿಕಾರಕ್ಕಾಗಿ ಸಮರ್ಥರ ರಾಜಕೀಯ ನರಮೇಧ ಮಾಡಿ ಸಿಎಂ ಪಟ್ಟ ಆಕ್ರಮಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಅವರಿಗೆ ನೆಹರು ನೀಡಿದ ಕಿರುಕುಳ ಮತ್ತು ದೇವರಾಜ ಅರಸು ಅವರಿಗೆ ಕಾಂಗ್ರೆಸ್ ಮಾಡಿದ ಅಪಮಾನವನ್ನು ಈ ಸಂದರ್ಭದಲ್ಲಿ ಕುಮಾರಸ್ವಾಮಿ ನೆನಪಿಸಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮೆಟ್ಟಿಲು ಹತ್ತಲು ಕಾರಣರಾದ ಎಸ್.ಎಂ. ಕೃಷ್ಣ ಅವರನ್ನು ರಾಜಕೀಯದ ಕಡೆಗಾಲದಲ್ಲಿ ಎಷ್ಟು ಕ್ರೂರವಾಗಿ ವಂಚಿಸಿದರು ಮತ್ತು ತುಚ್ಛವಾಗಿ ನಡೆಸಿಕೊಂಡರು ಎಂಬುದು ಜಗತ್ತಿಗೆ ತಿಳಿದಿದೆ ಎಂದು ಟೀಕಿಸಿದ್ದಾರೆ. ಎಸ್‌ಎಂ ಕೃಷ್ಣ ಅವರ ಹೆಸರು ಹೇಳುವ ಸಾಸಿವೆ ಕಾಳಷ್ಟು ಯೋಗ್ಯತೆ ಮತ್ತು ನೈತಿಕತೆ ನಿಮಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಒಕ್ಕಲಿಗ ನಾಯಕತ್ವದ ಬಗ್ಗೆ ಮಾತನಾಡುವ ಮುನ್ನ ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನಡೆದ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಬಹಿರಂಗಪಡಿಸಿ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ರಾಜಕೀಯ ಸ್ವಾರ್ಥಕ್ಕಾಗಿ ದೇವೇಗೌಡರ ನೆರಳಲ್ಲಿ ಬೆಳೆದು ಈಗ ಅದೇ ವೃಕ್ಷಕ್ಕೆ ಕೊಡಲಿ ಹಾಕುತ್ತಿದ್ದೀರಿ ಎಂದು ದೂರಿದ ಅವರು, ಅಂದು ಗೌಡರು ಕುಟುಂಬ ರಾಜಕಾರಣ ಮಾಡಿದ್ದರೆ ನೀವು ಮಂತ್ರಿಯಾಗುತ್ತಿರಲಿಲ್ಲ ಎಂದು ನೆನಪಿಸಿದ್ದಾರೆ. ಅಲ್ಲದೆ, ಮಲ್ಲಿಕಾರ್ಜುನ ಖర్ಗೆ, ಪರಮೇಶ್ವರ್ ಮತ್ತು ವಿಶ್ವನಾಥ್ ಅವರಂತಹ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕಿದಿರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು