ಹಾಸನ: ನನಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೇಲೆ ಗೌರವವಿದ್ದು, ಸಮಾವೇಶ ಮಾಡುತ್ತಿರುವುದು ಅವರ ವೈಯಕ್ತಿಕವಾಗಿದೆ. ಆದರೇ ನನ್ನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಇಲ್ಲಸಲ್ಲದ ಮತ್ತು ದಾಖಲೆರಹಿತ ಆರೋಪಗಳನ್ನು ಮಾಡುತ್ತಿರುವುದನ್ನು ಖಂಡಿಸುವುದಾಗಿ ಸಂಸದ ಶ್ರೇಯಸ್ ಎಂ. ಪಟೇಲ್ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ವೈಯಕ್ತಿಕ ಗೌರವ ಇದ್ದರೂ, ಅವರ ಸಮಾವೇಶ ಹಾಗೂ ಹೇಳಿಕೆಗಳು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಅನಾವಶ್ಯಕ ಟೀಕೆ ಮಾಡುತ್ತಿರುವುದು ಸರಿಯಲ್ಲ. ಸಮಾವೇಶ ಮಾಡುವುದು ಅವರ ಪಕ್ಷದ ವಿಚಾರವಾದರೂ, ಕಾಂಗ್ರೆಸ್ ಸರ್ಕಾರ, ಸಿಎಂ ಹಾಗೂ ಡಿಸಿಎಂ ವಿರುದ್ಧ ಆಧಾರರಹಿತ ಆರೋಪ ಮಾಡುವ ನೈತಿಕತೆ ಅವರಿಗೆ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದಿಂದ ಸಾಕಷ್ಟು ಸಹಾಯ ಪಡೆದಿದ್ದ ಕುಮಾರಸ್ವಾಮಿ ಅವರು ಈಗ ಬಿಜೆಪಿ ಜೊತೆ ಕೈಜೋಡಿಸಿಕೊಂಡಿದ್ದಾರೆ. ಮೊದಲು ಯಾರ ಜೊತೆ ಇದ್ದರು, ಈಗ ಯಾರ ಜೊತೆ ಇದ್ದಾರೆ ಎಂಬುದು ಜನತೆಗೆ ತಿಳಿದಿದೆ. ಸಮಾವೇಶ ಮಾಡುವ ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು ಎಂದು ಒತ್ತಿ ಹೇಳಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಜನಪರ ಹಾಗೂ ಅಭಿವೃದ್ಧಿಪರವಾಗಿದ್ದು, ಹಾಸನ ಜಿಲ್ಲೆಗೆ ವಿಶೇಷ ಅನುದಾನ ನೀಡಲಾಗಿದೆ. ಅಭಿವೃದ್ಧಿಗೆ ಬೇಕಿದ್ದರೆ ಸಲಹೆ ನೀಡಲಿ, ಆದರೆ ಸುಳ್ಳು ಆರೋಪಗಳನ್ನು ನಿಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು. ಇನ್ನು ಕೇಂದ್ರ ಸಚಿವರು ಜಿಲ್ಲೆಗೆ ಬಂದು ಹೋಗುತ್ತಾರೆ ಅಷ್ಟೆ. ಆದರೇ ಯಾವ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು, ಹಾಸನದಲ್ಲಿ ಜೆಡಿಎಸ್‌ನಿಂದ ಮಾತ್ರ ಸಮಾವೇಶ ನಡೆಸುತ್ತಿರುವುದು ಅವರ ಇಬ್ಬಾಗದ ನೀತಿಯನ್ನು ತೋರಿಸುತ್ತದೆ ಎಂದು ಕುಟುಕಿದರು. ಕೇಂದ್ರದಲ್ಲಿ ಸಚಿವರಾಗಿದ್ದರೂ ಜಿಲ್ಲೆಗೆ ಬೇಕಿರುವ ಐಐಟಿ, ಕಾಡಾನೆ ಸಮಸ್ಯೆ, ಭದ್ರಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಕೇಂದ್ರದ ಮಟ್ಟದಲ್ಲಿ ಧ್ವನಿ ಎತ್ತಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಎರಡು ದೊಡ್ಡ ಸಮಾವೇಶಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಪ್ರತಿಯಾಗಿ ಸಮಾವೇಶ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲ ಎಂದರು.
ನಮ್ಮ ಐದು ಗ್ಯಾರಂಟಿ ಯೋಜನೆಗಳಲ್ಲಿ ಯಾವ ಜಾತಿಯನ್ನೂ ನೋಡಿಲ್ಲ. ಆದರೆ ಜಾತಿ-ಜಾತಿ ಎಂದು ಜನರನ್ನು ಹೊಡೆದಾಡಿಸುವ ಕೆಲಸವನ್ನು ಬಿಜೆಪಿ-ಜೆಡಿಎಸ್ ಮಾಡುತ್ತಿವೆ ಎಂದು ಆರೋಪಿಸಿದರು. ಫಲಾನುಭವಿಗಳ ಸಮಾವೇಶಕ್ಕೆ ಜನರು ಸಾಗರೋಪಾದಿಯಲ್ಲಿ ಬಂದಿರುವುದೇ ಸರ್ಕಾರದ ಜನಪ್ರಿಯತೆಗೆ ಸಾಕ್ಷಿ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಹಾಸನ ಜಿಲ್ಲೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಇದನ್ನು ಸಹಿಸಲಾಗದೆ ವಿರೋಧ ಪಕ್ಷದ ನಾಯಕರು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಯಾರ ಮೇಲಾದರೂ ಆರೋಪ ಮಾಡಬೇಕಾದರೆ ದಾಖಲೆಗಳೊಂದಿಗೆ ಮಾತನಾಡಬೇಕು ಎಂದು ಸ್ಪಷ್ಟಪಡಿಸಿದರು.
