ನೈಸ್ ಕಂಪನಿಯ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ – ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು:  ರಾಜ್ಯದ ಈಗಿನ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ (ಟೇಕ್ ಓವರ್) ಮಾಡಲು ಹೊರಟಿರುವ ವ್ಯಕ್ತಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದರು. ನನಗಿರುವ ಮಾಹಿತಿ ಪ್ರಕಾರ ಬೇನಾಮಿ ಕಂಪನಿಗಳ ಮೂಲಕ ಈ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ರೈತರಿಗೊಂದು ಕಾನೂನು, ಮುಖ್ಯಮಂತ್ರಿಗೆ ಇನ್ನೊಂದು ಕಾನೂನು ಇದೆಯಾ ಈ ರಾಜ್ಯದಲ್ಲಿ? ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕೂತು ಸಂತೆಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ರಾಜ್ಯದ ಈಗಿನ ಮುಖ್ಯಮಂತ್ರಿ ನೈಸ್ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಈ ಮುಖ್ಯಮಂತ್ರಿಯೇ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಎಂದು ಅವರು ಗಂಭೀರ ಆರೋಪ ಮಾಡಿದರು. ವಿಧಾನಸೌಧದ ಮೂರನೇ ಮಾಡಿಯಲ್ಲಿ ಕೂತು ಈ ಮುಖ್ಯಮಂತ್ರಿ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ನೈಸ್ ಕಂಪನಿಯನ್ನು ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನತೆಯ ಮುಂದೆ ಹೇಳಲಿ. ಯೋಜನೆಯನ್ನು ಯಾರು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ?ಬೇನಾಮಿ ಕಂಪನಿಗಳ ಮೂಲಕ ಯಾರು ಯಾರು ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ನನಗಿದೆ. ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಮಾತನಾಡಲಿ. ಈ ಬಗ್ಗೆ ರಾಜ್ಯದ ಜನತೆಯ ಮುಂದೆ ಸತ್ಯವನ್ನು ಬಾಯಿ ಬಿಡಲಿ ಎಂದು ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.

ವಿದ್ಯಾರ್ಥಿ, ಯುವ ಸಮೂಹಕ್ಕೆ ಕರೆ ನೀಡಿದ ಕೇಂದ್ರ ಸಚಿವರು

ನೈಸ್ ಯೋಜನೆ ಇಡೀ ದೇಶದಲ್ಲಿಯೇ ಅತೀ ದೊಡ್ಡ ಭೂ ಹಗರಣ. ಇದು ಸ್ಕ್ಯಾಮ್ ಫಾರ್ ಸ್ಕಿಮ್ ಎನ್ನುವ ರೀತಿಯಲ್ಲಿದೆ. ಈ ಅಕ್ರಮದ ವಿರುದ್ಧ ಇಡೀ ರಾಜ್ಯವೇ ತಿರುಗಿ ಬೀಳಬೇಕಿದೆ. ಯುವಕರು, ವಿದ್ಯಾರ್ಥಿಗಳು ಇದನ್ನು ಪ್ರಶ್ನೆ ಮಾಡಬೇಕಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಕರೆ ನೀಡಿದರು.

ಈ ಮುಖ್ಯಮಂತ್ರಿಗೂ ನೈಸ್ ಯೋಜನೆಗೂ ಇರುವ ಸಂಬಂಧವೇನು? ನೈಸ್ ಜೊತೆ ಸಿಎಂ ಒಡಂಬಡಿಕೆ ಏನು? ಈ ಕಂಪನಿಯ ಮಾಲೀಕರ ಜೊತೆ ಈ ವ್ಯಕ್ತಿಗೆ ಇರುವ ಸಂಬಂಧಗಳು ಮತ್ತು ವ್ಯವಹಾರಗಳು ಏನು? ಧೈರ್ಯವಿದ್ದರೆ ಜನರ ಮುಂದೆ ಈ ಬಗ್ಗೆ ಮಾತನಾಡಲಿ. ನಾನು ಸತ್ಯ ಹೇಳುವುದಕ್ಕೆ ಅಂಜುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು