Sunday, June 16, 2024

ಸತ್ಯ | ನ್ಯಾಯ |ಧರ್ಮ

ಹೆಚ್.ವಿಶ್ವನಾಥ್, ಡಿ.ಕೆ.ಶಿವಕುಮಾರ್ ಭೇಟಿ ; ಕಾಂಗ್ರೆಸ್ ಸೇರುವ ಮುನ್ಸೂಚನೆ?

ಇತ್ತೀಚಿನ ದಿನಗಳಲ್ಲಿ ಮೈಸೂರು ಭಾಗದ ರಾಜಕಾರಣಿ ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಬಿಜೆಪಿ ಪಕ್ಷದ ವಿಧಾನ ಪರಿಷತ್ ಸದಸ್ಯರಾದರೂ ಹೆಚ್.ವಿಶ್ವನಾಥ್ ಇತ್ತೀಚೆಗೆ ಕಾಂಗ್ರೆಸ್ ನಾಯಕರ ಜೊತೆಗೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಅದೇ ರೀತಿ ಶುಕ್ರವಾರ ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೆಲವಷ್ಟು ಸಮಯ ಮಾತುಕತೆ ನಡೆಸಿದ್ದು, ಮತ್ತೆ ವಿಶ್ವನಾಥ್ ಮತ್ತು ಡಿ.ಕೆ.ಶಿವಕುಮಾರ್ ಭೇಟಿಯ ಬಗ್ಗೆ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಸಹ ಇದ್ದಾರೆ.

ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಳೆದ ವಾರ ದೆಹಲಿಗೆ ತೆರಳಿದ ಸಂದರ್ಭದಲ್ಲಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಖುದ್ದು ಭೇಟಿ ಮಾಡಿ ಮಾತನಾಡಿದ್ದರು. ಆ ನಂತರ ಬೆಂಗಳೂರಿಗೆ ಆಗಮಿಸಿದ ವಿಶ್ವನಾಥ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ನಂತರ ಹೊರಬಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಭೇಟಿ ಮಾಡಿದ್ದರು.

ಇಷ್ಟೇ ಆಗಿದ್ದರೆ ಇವುಗಳನ್ನು ಒಂದು ಸೌಹಾರ್ದಯುತ ಭೇಟಿ ಎಂದೇ ಊಹಿಸಬಹುದಿತ್ತು. ಆದರೆ ಹೆಚ್.ವಿಶ್ವನಾಥ್ ಬಿಜೆಪಿ ಪಕ್ಷದಲ್ಲೇ ಇದ್ದು, ಬಿಜೆಪಿ ಪಕ್ಷದ ಆಡಳಿತ ವೈಖರಿ ಮತ್ತು ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧವೂ ಹಲವಷ್ಟು ಬಾರಿ ವಾಗ್ದಾಳಿ ನಡೆಸಿದ್ದು ಸಾಮಾನ್ಯವಾಗಿ ಮರೆಯುವ ವಿಚಾರವಲ್ಲ. ಸೈದ್ಧಾಂತಿಕವಾಗಿ ವಿಶ್ವನಾಥ್ ರಂತಹ ವ್ಯಕ್ತಿತ್ವಕ್ಕೆ ಬಿಜೆಪಿ ಪಕ್ಷ ಸೂಕ್ತ ವೇದಿಕೆ ಅಲ್ಲದೇ ಇದ್ದರೂ ಕಾಂಗ್ರೆಸ್ ಜೊತೆಗಿನ ಸಣ್ಣಪುಟ್ಟ ಮುನಿಸು ಅವರನ್ನು ಕಾಂಗ್ರೆಸ್ ನಿಂದ ದೂರವಿರಲು ಕಾರಣವಾಗಿತ್ತು.

ಸಧ್ಯದ ಅವರ ರಾಜಕೀಯ ನಡೆ ನೋಡಿದರೆ ಹೆಚ್.ವಿಶ್ವನಾಥ್ ಬಿಜೆಪಿ ತೊರೆಯುವುದು ನಿಶ್ಚಿತ ಎಂದೇ ಅಂದಾಜಿಸಲಾಗಿದೆ. ತನ್ನ ಅಲ್ಪಕಾಲದ ಸಿದ್ದರಾಮಯ್ಯರೊಂದಿಗಿನ ಮುನಿಸು ಸಧ್ಯಕ್ಕೆ ದೂರವಾಗಿದ್ದು, ಸಿದ್ಧರಾಮಯ್ಯ ಜೊತೆಗೆ ಆಪ್ತ ಒಡನಾಟ ಈಗ ಮತ್ತೆ ಶುರುವಾಗಿದೆ. ಜೊತೆಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಾನು ಯಾವ ಜಂಡಾದ ಅಡಿಯಲ್ಲಿ ಕೆಲಸ ಮಾಡಿದರೂ ನನ್ನ ಅಜೆಂಡಾ ಮಾತ್ರ ಬದಲಾಗದು ಎಂಬ ಹೇಳಿಕೆ ಕೂಡಾ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ ಎನ್ನಬಹುದು.

ಅಷ್ಟೆ ಅಲ್ಲದೆ ಹೆಚ್.ವಿಶ್ವನಾಥ್ ಪುತ್ರ ಕೂಡಾ ಈಗ ರಾಜಕೀಯ ಅಸ್ತಿತ್ವಕ್ಕೆ ಕಾಂಗ್ರೆಸ್ ಸೂಕ್ತ ವೇದಿಕೆ ಎಂದು ಅರಿತು ಇತ್ತೀಚೆಗೆ ಕಾಂಗ್ರೆಸ್ ಸೇರುವ ಮಾತನ್ನಾಡಿದ್ದಾರೆ. ರಾಜ್ಯದ ರಾಜಕೀಯ ಬೆಳವಣಿಗೆ ನೋಡಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಸಂಭವವಿದ್ದು, ತಾನು ಕಾಂಗ್ರೆಸ್ ಸೇರುವ ಸೂಕ್ತ ಕಾಲ ಹತ್ತಿರ ಬಂದಿದೆ ಎಂದೂ ಆಪ್ತ ವಲಯದಲ್ಲಿ ಮಾತನಾಡಿದ್ದಾರೆ.

ಸಧ್ಯ ಹೆಚ್.ವಿಶ್ವನಾಥ್ ಮತ್ತು ಡಿ.ಕೆ.ಶಿವಕುಮಾರ್ ಭೇಟಿಯ ಬಗ್ಗೆ ಡಿ.ಕೆ.ಶಿವಕುಮಾರ್ ಫೇಸ್ಬುಕ್ ಪೇಜ್ ನಲ್ಲಿ ಹಾಕಿದ್ದು ಇದೊಂದು ಸೌಹಾರ್ದಯುತ ಉಭಯ ಕುಶಲೋಪರಿ ಎಂಬಂತೆ ಇದೆ. ಆದರೆ ಇದರ ಒಳಗೆ ರಾಜಕೀಯ ಇಲ್ಲ ಎಂಬುದಂತೂ ಸತ್ಯಕ್ಕೆ ದೂರದ ಮಾತು.

Related Articles

ಇತ್ತೀಚಿನ ಸುದ್ದಿಗಳು