ಎಲ್ಲ ಕಾಲವೂ ಕುರ್ಚಿಗಂಟಿಕೊಂಡೇ ಕುಳಿತಿರಲು ಇದು ತಮಿಳುನಾಡಲ್ಲ, ಹಾಗೇ ತಾನು ಎಂಜಿಆರ್ ಕೂಡಾ ಅಲ್ಲ ಎನ್ನುವುದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕಿದೆ, ಅವರು ತನ್ನ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌ರಂತಹ ನಾಯಕರು, ಸಿದ್ದರಾಮಯ್ಯನವರಲ್ಲ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕಿದೆ. ಪ್ರಸ್ತುತ ಸರ್ಕಾರದಲ್ಲಿ ಸಚಿವರೇ ಸಿದ್ದರಾಮಯ್ಯನವರ ಮಾತು ಕೇಳದ ಪರಿಸ್ಥಿತಿಯಿದೆʼ ಎಂದು ಅವರು ಹೇಳಿದ್ದಾರೆ.
‘ಸಿದ್ದರಾಮಯ್ಯ ಫ್ರಾನ್ಸ್‌ನ ಸರ್ವಾಧಿಕಾರಿ 16ನೇ ಲೂಯಿಯಂತೆ ವರ್ತಿಸುತ್ತಿದ್ದಾರೆ. ಅವರು ಕರ್ನಾಟಕವನ್ನು ಮುಳುಗಿಸಿಯೇ ಸಿದ್ಧ ಎನ್ನುವಂತೆ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದ ಅವರು, ‘ವೈಯಕ್ತಿಕ ಆಸೆಗಳಿಗಾಗಿ ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಬಾರದು. ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಬಗ್ಗೆ ಆರ್ಥಿಕ ಸಮೀಕ್ಷೆ ಮಾಡಬೇಕು. ಪ್ರತಿ ಯೋಜನೆಗೆ ಮಾನದಂಡ ನಿಗದಿಪಡಿಸಬೇಕು’ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
‘ಮುಖ್ಯಮಂತ್ರಿ ಉಚಿತ ಯೋಜನೆಗಳ ಹೆಸರಿನಲ್ಲಿ ಕರ್ನಾಟಕವನ್ನು ಸಾಲದ ಶೂಲಕ್ಕೆ ಸಿಲುಕಿಸಿದ್ದಾರೆ. 2022-23ರ ಬಜೆಟ್‌ನಲ್ಲಿ ಸರ್ಕಾರ ₹44,549 ಕೋಟಿ ಸಾಲ ಮಾಡಿತ್ತು. 2023-24ರ ಬಜೆಟ್‌ನಲ್ಲಿ ₹85,818 ಕೋಟಿ ಹಾಗೂ 2024-25ರ ಬಜೆಟ್‌ನಲ್ಲಿ ₹1.05 ಲಕ್ಷ ಕೋಟಿ ಹಾಗೂ 2025-26ನೇ ಸಾಲಿಗೆ ₹1.16 ಲಕ್ಷ ಕೋಟಿಗೆ ತಲುಪಿದೆ. ರಾಜ್ಯದ ಮೇಲೆ ಒಟ್ಟು ₹7.64 ಲಕ್ಷ ಕೋಟಿ ಸಾಲದ ಹೊರೆಬಿದ್ದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದನದಲ್ಲಿ ಸಚಿವರೊಬ್ಬರು ಹನಿಟ್ರ್ಯಾಪ್ ಕುರಿತು ದನಿಯೆತ್ತಿದಾಗ ಆ ಕುರಿತು ದಾಖಲೆ ಕೇಳಬೇಕು ಎನ್ನುವಷ್ಟು ಸಹ ವಿವೇಚನೆ ಇಲ್ಲದೆ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ದಿವಾಳಿಯೆದ್ದು ಹೋಗಿವೆ ಎಂದು ಅವರು ಕಟುವಾಗಿ ಟೀಕಿಸಿದರು.