Home ಬೆಂಗಳೂರು ಹಾಲಪ್ಪ ಆಚಾರ್‌ ಅಸಮರ್ಥತೆಯಿಂದ ತಾಯಂದಿರು, ಮಕ್ಕಳ ಸಾವು: ಸಚಿವರ ರಾಜೀನಾಮೆಗೆ ಎಎಪಿ ಆಗ್ರಹ

ಹಾಲಪ್ಪ ಆಚಾರ್‌ ಅಸಮರ್ಥತೆಯಿಂದ ತಾಯಂದಿರು, ಮಕ್ಕಳ ಸಾವು: ಸಚಿವರ ರಾಜೀನಾಮೆಗೆ ಎಎಪಿ ಆಗ್ರಹ

0

ಬೆಂಗಳೂರು : ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ರವರ ಅಸಮರ್ಥತೆಯಿಂದಾಗಿ ರಾಜ್ಯದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ ಎಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಶಲಸ್ವಾಮಿ, “ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಈ ಹಿಂದೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆಯವರು ಇದೇ ಇಲಾಖೆಯಲ್ಲಿ ಮೊಟ್ಟೆ ಖರೀದಿಗೆ ಸಂಬಂಧಿಸಿ ಅಕ್ರಮ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದ್ದರೂ ಅವರನ್ನು ಸಚಿವ ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದೆ. ಹಾಲಿ ಸಚಿವರಾದ ಹಾಲಪ್ಪ ಆಚಾರ್‌ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷವಾದರೂ ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ತಾಯಂದಿರು, ಮಕ್ಕಳ ಮರಣ ಪ್ರಮಾಣ ಏರಿಕೆಯಾಗುತ್ತಿದೆ” ಎಂದು ಹೇಳಿದರು.

“ಮಾತೃಪೂರ್ಣ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದ್ದು, ಯೋಜನೆಯಡಿ ಪೂರೈಸಬೇಕಾದ ಆಹಾರವು ಭ್ರಷ್ಟರ ಪಾಲಾಗುತ್ತಿದೆ. ತೀವ್ರವಾದ ಅಪೌಷ್ಟಿಕತೆ ಹಾಗೂ ಕಲುಷಿತ ಆಹಾರ ಸೇವನೆಯಿಂದ ಬಾಣಂತಿಯರು ಹಾಗೂ ಮಕ್ಕಳು ಬಳಲುತ್ತಿದ್ದರೂ ಸಚಿವ ಹಾಲಪ್ಪ ಆಚಾರ್‌ ಜಾಣಕುರುಡು ತೋರುತ್ತಿದ್ದಾರೆ. ಕೇವಲ ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲೇ 2019-20ರಲ್ಲಿ 60, 2020-21ರಲ್ಲಿ 69, 2021-22ರಲ್ಲಿ 71 ಹಾಗೂ 2022-23ರಲ್ಲಿ ಸೆಪ್ಟೆಂಬರ್‌ ತನಕ 41 ತಾಯಂದಿರು ಮೃತಪಟ್ಟಿದ್ದಾರೆ. ಇನ್ನು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲಿನ ಶಿಶು ಮರಣ ಪ್ರಮಾಣವನ್ನು ನೋಡುವುದಾದರೆ, 2019-20ರಲ್ಲಿ 504, 2020-21ರಲ್ಲಿ 454, 2021-22ರಲ್ಲಿ 327 ಹಾಗೂ 2022-23ರಲ್ಲಿ ಸೆಪ್ಟೆಂಬರ್‌ ತನಕ 206 ಹಸುಗೂಸುಗಳು ಮೃತಪಟ್ಟಿವೆ” ಎಂದು ಮಾಹಿತಿ ನೀಡಿದರು.

“ಮಾತೃಪೂರ್ಣ ಯೋಜನೆಯಡಿ ನೀಡಲಾಗುವ ಆಹಾರ ಪದಾರ್ಥಗಳನ್ನು ಬಿಸಿಲು ಹಾಗೂ ಮಳೆಯಲ್ಲಿ ಅಂಗನವಾಡಿಗಳಿಗೆ ಬಂದು ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿಯೇ ಅನೇಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಗರ್ಭಿಣಿಯರು ಹಾಗೂ ಬಾಣಂತಿಯರ ಮನೆ ಬಾಗಿಲಿಗೆ ಈ ಸೇವೆಯನ್ನು ತಲುಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಇಲಾಖೆಯ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿರುವ ಸಚಿವ ಹಾಲಪ್ಪ ಆಚಾರ್‌ರವರನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಸಚಿವ ಸಂಪುಟದಿಂದ ವಜಾ ಮಾಡಬೇಕು” ಎಂದು ಕುಶಲಸ್ವಾಮಿ ಆಗ್ರಹಿಸಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ವಕ್ತಾರರಾದ ಉಷಾ ಮೋಹನ್‌ ಮಾತನಾಡಿ, “ರಾಜ್ಯದ ಬಾಲಮಂದಿರಗಳಿಂದ ಕಳೆದ ಐದು ವರ್ಷಗಳಲ್ಲಿ 484 ಮಕ್ಕಳು ನಾಪತ್ತೆಯಾಗಿದ್ದು, ಈ ಪೈಕಿ 119 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಬಾಲಮಂದಿರಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಮಕ್ಕಳು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್‌ರವರೇ ಒಪ್ಪಿಕೊಂಡಿದ್ದಾರೆ. ಹೀಗೆ ತಪ್ಪಿಸಿಕೊಂಡ ಮಕ್ಕಳು ಮಾದಕ ವ್ಯಸನಿಗಳಾಗುವ ಹಾಗೂ ಸಮಾಜಘಾತುಕ ಶಕ್ತಿಗಳಾಗುವ ಸಾಧ್ಯತೆಯಿದ್ದರೂ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಂತ” ಎಂದು ಹೇಳಿದರು.

You cannot copy content of this page

Exit mobile version