Tuesday, August 5, 2025

ಸತ್ಯ | ನ್ಯಾಯ |ಧರ್ಮ

ಒಳ ಮೀಸಲಾತಿ ಜಾರಿ ಮಾಡಲು ಆಗ್ರಹಿಸಿ ಅರೆಬೆತ್ತಲೆ ಮೆರವಣಿಗೆ, ಪ್ರತಿಭಟನೆ

ಹಾಸನ : ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಅರೆಬೆತ್ತಲೆ ಮೂಲಕ ಮೆರವಣಿಗೆ ನಡೆಸಿ ಬೃಹತ್ ಪ್ರತಿಭಟನೆ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದೆ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ವಿ.ಆರ್. ಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಸಮಸ್ತ ಜನರು, ಈ ಮೂಲಕ ಹೇಳುವುದೆಂದರೇ ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದೆ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆ ಮತ್ತು ಹೋರಾಟ 35 ವರುಷಗಳಿಂದ ನನೆಗುದಿಗೆ ಬಿದ್ದಿದೆ. ಈ ಅಸಮಾನತೆಯನ್ನು ಸರಿಪಡಿಸಲು, ದಿನಾಂಕ 1-08-2024ರ ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ. ಆದರೆ, ಕರ್ನಾಟಕ ಸರ್ಕಾರವು ಈ ಸರ್ವೋಚ್ಛ ನ್ಯಾಯಾಲಯದ ತೀರ್ಪುನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ಈ ವಿಳಂಬ ನೀತಿಯಿಂದಾಗಿ ನಮ್ಮ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು ಹಾಗೂ ಮಹಿಳೆಯರು ಹಾಗೂ ಒಟ್ಟಾರೆ ಸಮಾಜ ತಮ್ಮ ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.


ಇದೇ 2025 ಆಗಸ್ಟ್ 15 ರ ದಿನಾಚರಣೆಯೊಳಗೆ ಯಾವುದೇ ಹೆಚ್ಚಿನ ವಿಳಂಬಕ್ಕೆ ಆಸ್ಪದ ನೀಡದೆ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಸಂಪೂರ್ಣವಾಗಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು. ಒಂದು ವೇಳೆ ಸರ್ಕಾರವು ಈ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂಬುದನ್ನು ತಮ್ಮ ಮೂಲಕ ಸರ್ಕಾರದ ಗಮನಕ್ಕೆ ತರಬಯಸುತ್ತೇವೆ. ತಾವುಗಳು ನಮ್ಮ ಈ ಮನವಿಯ ಗಂಭೀರತೆಯನ್ನು ಅರಿತು, ರಾಜ್ಯ ಸರ್ಕಾರಕ್ಕೆ ನಮ್ಮ ಆಗ್ರಹವನ್ನು ತಲುಪಿಸಿ, ಶೀಘ್ರವಾಗಿ ಒಳ ಮೀಸಲಾತಿ ಜಾರಿಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಸ್.ಡಿ. ಚಂದ್ರು, ಮಂಜುನಾಥ್, ರಂಗಸ್ವಾಮಿ, ಲೋಕೇಶ್, ರಾಮಚಂದ್ರು, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page