Friday, June 14, 2024

ಸತ್ಯ | ನ್ಯಾಯ |ಧರ್ಮ

ಜರ್ಮನಿಗೆ ಮರಳಿದ ನಾಝಿ ಆಡಳಿತ ಸಮಯದ ಮೆನೋರಾ ದೀಪ

1931ರಲ್ಲಿ ನಾಝಿ(ಹಿಟ್ಲರ್) ರಾಜಕಾರಣ ಜರ್ಮನಿಯಲ್ಲಿ ಬಲ ಪಡೆದುಕೊಳ್ಳುತ್ತಿದ್ದ ಸಮಯ. ಯೆಹೂದಿ ಸಮುದಾಯವು ತನ್ನ ಯೆಹೂದಿತನದ ಗುರುತುಗಳನ್ನು ಮರೆ ಮಾಚಿ ಓಡಾಡುತ್ತಿದ್ದ ಆ ಹೊತ್ತಿನಲ್ಲಿ  ಮೂರು ಮಕ್ಕಳ ತಾಯಿ ರಾಚೆಲ್ ಪೋಸ್ನರ್, ಶ್ಲೆಸ್ವಿಗ್-ಹೋಲ್ಸ್ಟೈನ್ ರಾಜ್ಯದ ಕೀಲ್ ನ ತನ್ನ ಮನೆಯ ಮುಂದಿರುವ ನಾಝಿ ಹೆಡ್ ಕ್ವಾರ್ಟರ್ಸ್ ನ ಕಾರ್ಯಕರ್ತರ ಕಣ್ಣಿಗೆ ರಾಚುವಂತೆ ಹಾನುಕ್ಕಾ ಹಬ್ಬದ ಮೆನೋರಾ ದೀಪ ಬೆಳಗಿಸಿ ಅದರ ಚಿತ್ರ ಸೆರೆ ಹಿಡಿದರು.

ಭಾವುಕ ಕುಟುಂಬ ಸದಸ್ಯ

ಚಿತ್ರ ಪಟದ ಹಿಂದೆ  “ಯೆಹೂದಿ ಮತವು ಸಾಯಲಿ ಎಂದು ಧ್ವಜ ಹೇಳುತ್ತದೆ, ಆದರೆ ಬೆಳಕು ಉತ್ತರಿಸಿದೆ ಯೆಹೂದಿ ಮತವು  ಶಾಶ್ವತವಾಗಿ ಬದುಕುತ್ತದೆ “ – ಎಂದು ಆಕೆ ಜರ್ಮನ್ ಭಾಷೆಯಲ್ಲಿ ಬರೆದಿಟ್ಟರು.

ನಾಜಿಗಳು ಅಧಿಕಾರಕ್ಕೆ ಬರುವುದು ನಿಶ್ಚಯವಾಗಿದ್ದ ಆ  ಸಮಯದಲ್ಲಿ, ಹೆಚ್ಚಿನ ಯಹೂದಿಗಳು ತೆರೆದ ಕಿಟಕಿಯಲ್ಲಿ ಮೆನೊರಾವನ್ನು ಪ್ರದರ್ಶಿಸುವ ಅಪಾಯಕ್ಕೆ ಕೈ ಹಾಕಿರಲಿಲ್ಲ, ಎಂಟು ದಿನಗಳ ಬೆಳಕಿನ ಹಬ್ಬವನ್ನು ಅವರು ಆ ವರ್ಷಗಳಲ್ಲಿ ಕಿಟಕಿ ಪರದೆಗಳನ್ನು ಮುಚ್ಚಿ  ಆಚರಿಸುತ್ತಿದ್ದರು.

ಈ ಐತಿಹಾಸಿಕ ಚಿತ್ರಪಟದಲ್ಲಿರುವ ಹಿತ್ತಾಳೆಯ ಮೆನೋರಾ ವನ್ನು 1933ರಲ್ಲಿ  ಜೆರ್ಮನಿ ತೊರೆದು ಹೋಗುವಾಗ ತನ್ನೊಂದಿಗೆ ಪೊಸ್ನೇರ್ ಕುಟುಂಬ ಒಯ್ದಿತ್ತು. ಸುಮಾರು 90 ವರ್ಷಗಳ ನಂತರ ದೀಪವು  ಜರ್ಮನಿಗೆ ಹಿಂದಿರುಗಿದೆ,ಇಸ್ರೇಲ್ ನಿಂದ ಬಂದ ಪೊಸ್ನೇರ್ ಕುಟುಂಬದ ಸದಸ್ಯರ ಸಮ್ಮುಖ ದಲ್ಲಿ ಜರ್ಮನಿಯ ಅಧ್ಯಕ್ಷರು ಬರ್ಲಿನ್ ನಲ್ಲಿ 2ನೆಯ ದಿನದ ಹಬ್ಬದಂದು ಇದೇ  ದೀಪವನ್ನು ಮತ್ತೆ ಬೆಳಗಿಸಿದರು. ಪೊಸ್ನೇರ್ ಕುಟುಂಬದ ಹಾಗೂ ಅಲ್ಲಿ ನೆರೆದಿದ್ದ ಯೆಹೂದಿ ಸಮುದಾಯದ ಸದಸ್ಯರಿಗೆ ಇದೊಂದು ಭಾವುಕ ಕ್ಷಣವಾಗಿತ್ತು.

1931ರಲ್ಲಿ ರಾಚೆಲ್ ಪೋಸ್ನರ್ ತೆಗೆದ ಈ ಚಿತ್ರದಲ್ಲಿ ಹಿನ್ನೆಲೆಯಲ್ಲಿ ನಾಝಿ ದ್ವಜವನ್ನು ಕಾಣಬಹುದು

ಈ ಎಂಟು ದಿನಗಳ ಯೆಹೂದಿ ಜನರ ಬೆಳಕಿನ ಹಬ್ಬವು, ಅವರ ಕ್ಯಾಲೆಂಡರ್ ಪ್ರಕಾರ ಪ್ರತೀ ವರ್ಷ ನವೆಂಬರ್  ಹಾಗೂ ಡಿಸೆಂಬರ್ ತಿಂಗಳ ವಿವಿಧ ದಿನಗಳಲ್ಲಿ ಆಚರಿಸಲ್ಪಡುತ್ತದೆ. ಈ ವರ್ಷದ ಹಾನುಕ್ಕಾ ಡಿಸೆಂಬರ್ 18ರಂದು ಶುರುವಾಗಿದ್ದು 26ರಂದು ಕೊನೆಯಾಗುತ್ತದೆ . ಹಿಟ್ಲರ್ ಆಡಳಿತದ ಸಮಯದಲ್ಲಿ ನಡೆದ ಜನಾಂಗೀಯ ನರಮೇಧದಲ್ಲಿ ಸುಮಾರು 6 ಮಿಲಿಯನ್ ಯೆಹೂದಿಗಳ ಹತ್ಯೆಯಾಗಿತ್ತು ಎಂದು ದಾಖಲೆಗಳು ಹೇಳುತ್ತವೆ. ಸದ್ಯ ಪ್ರಪಂಚದ ಬಹುತೇಕ  ದೇಶಗಳಂತೆ ಜರ್ಮನಿಯಲ್ಲಿಯೂ ಸಹ ಬಲಪಂಥೀಯ ರಾಜಕಾರಣ ಮತ್ತೆ ಶಕ್ತಿ ವರ್ಧಿಸಿಕೊಳ್ಳುತ್ತಿದೆ. ಮೇ ತಿಂಗಳ ವರದಿಯೊಂದರ ಪ್ರಕಾರ ಯೆಹೂದ್ಯ ವಿರೋಧಿ ದ್ವೇಷಾಪರಾಧಗಳಲ್ಲಿ ಶೇಕಡಾ 29 ರಷ್ಟು ಏರಿಕೆಯಾಗಿದೆ.

– ಜಿ. ಎಚ್‌. ಆರ್.

Related Articles

ಇತ್ತೀಚಿನ ಸುದ್ದಿಗಳು