Thursday, July 31, 2025

ಸತ್ಯ | ನ್ಯಾಯ |ಧರ್ಮ

ವಿದ್ಯಾರ್ಥಿನಿಗೆ ಕಿರುಕುಳ, ಆತ್ಮಹತ್ಯೆ; ತಡವಾಗಿ ಬೆಳಕಿಗೆ ಬಂದ ಪ್ರಕರಣ

ಹಾವೇರಿ : 14 ವರ್ಷದ ವಿದ್ಯಾರ್ಥಿನಿ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ನಡೆದು ಒಂದು ವಾರದ ನಂತರ ಬೆಳಕಿಗೆ ಬಂದಿದೆ. ಮೃತ ಅರ್ಚನಾ ಗೌಡಣ್ಣನವರ್ ಹಿರೇಕೆರೂರು ತಾಲೂಕಿನ ಮೊರಾರ್ಜಿ ದೇಸಾಯಿ ಸರಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ.

ಆಲದಕಟ್ಟಿ ಗ್ರಾಮದ ತನ್ನ ನಿವಾಸದಲ್ಲಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡದೆ ಕುಟುಂಬಸ್ಥರು ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಅರ್ಚನಾ ತನ್ನ ಡೆತ್ ನೋಟ್‌ನಲ್ಲಿ ತನ್ನ ಸಹಪಾಠಿ ಜೋಯಾ ಮತ್ತು ಆಕೆಯ ತಾಯಿ ತನಗೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಜೋಯಾ ಅವರ ತಂದೆ ಆರಿಫುಲ್ಲಾ ಅದೇ ವಸತಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದಾರೆ.

ಘಟನೆ ನಡೆದ ಬಳಿಕ ಶಾಲಾ ಆಡಳಿತ ಮಂಡಳಿ ಅರ್ಚನಾ ಅವರ ಕುಟುಂಬ, ಅರಿಫುಲ್ಲಾ ಹಾಗೂ ಗ್ರಾಮದ ಮುಖಂಡರ ಸಭೆ ಕರೆದು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ನಿರ್ಧರಿಸಲಾಯಿತು. ಕೆಲವು ಗ್ರಾಮಸ್ಥರು ವಿಷಯವನ್ನು ಮುಚ್ಚಿಡಲು ಒಪ್ಪಿಕೊಂಡರು. ಸಭೆಯಲ್ಲಿ ಅರ್ಚನಾ ಕುಟುಂಬವು 10 ಲಕ್ಷ ರೂಪಾಯಿ ಪರಿಹಾರಕ್ಕೆ ಬೇಡಿಕೆಯಿತ್ತು ಆದರೆ ನಂತರ 1 ಲಕ್ಷ ರೂಪಾಯಿಗೆ ಇತ್ಯರ್ಥವಾಯಿತು ಎಂದು ಮೂಲಗಳು ತಿಳಿಸಿವೆ.

ಹಣದಲ್ಲಿ ಪಾಲು ಸಿಗದ ಕೆಲ ಗ್ರಾಮಸ್ಥರು ಘಟನೆ ಕುರಿತು ಸುದ್ದಿ ಹಬ್ಬಿಸಿದ್ದಾರೆ ಎನ್ನಲಾಗಿದೆ. ಅರ್ಚನಾ ಡೆತ್ ನೋಟ್‌ನಲ್ಲಿ ಹೆಸರಿಸಿರುವ ತಾಯಿ, ಮಗಳು ಇಬ್ಬರ ವಿರುದ್ಧವೂ ಶಾಲೆಯ ವಿರುದ್ಧ ದೂರು ನೀಡಲು ಬಾಲಕಿಯ ಕುಟುಂಬದವರು ಮುಂದೆ ಬರುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಚನಾ ಮೃತದೇಹ ಹೊರತೆಗೆದ ಬಳಿಕ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆಯನ್ನು ಮರೆಮಾಚಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗುರುವಾರ ಹಾವೇರಿಯ ಪೊಲೀಸರು ಅರ್ಚನಾ ಅವರ ಗ್ರಾಮ ಹಾಗೂ ಶಾಲೆಗೆ ಭೇಟಿ ನೀಡಿದ್ದರು. ಘಟನೆ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದು, ಗ್ರಾಮಸ್ಥರು, ಶಾಲಾ ಆಡಳಿತ ಮಂಡಳಿ ಹಾಗೂ ಅರ್ಚನಾ ಕುಟುಂಬದವರನ್ನು ವಿಚಾರಣೆ ನಡೆಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page