ಹಾಸನದ ಇಲಿವೇಶನ್ ಪಬ್ಬಿನಲ್ಲಿ ಕನ್ನಡಕ್ಕೆ ಧಕ್ಕೆ: ಕ್ರಮ ಕೈಗೊಳ್ಳುವಂತೆ ಕರವೇ ಆಗ್ರಹ

ಹಾಸನ: ಹಾಸನದ ಬಿ.ಎಂ ರಸ್ತೆಯಲ್ಲಿರುವ ಇಲಿವೇಶನ್ ಪಬ್ಬಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಕನ್ನಡ ಮತ್ತು ಕರ್ನಾಟಕಕ್ಕೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಇತ್ತೀಚೆಗೆ ಹಾಸನದ ಬಿ.ಎಂ ರಸ್ತೆಯಲ್ಲಿರುವ ಇಲಿವೇಶನ್ ಪಬ್ಬಿನಲ್ಲಿ ಕನ್ನಡ ಗೀತೆ ಹಾಕುವಂತೆ ಕೇಳಿದಾಗ, ಅದನ್ನು ನಿರಾಕರಿಸಿ ಹಾಡುಗಳನ್ನು ಹಾಕುವಂತೆ ಕೇಳಿದವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹಾಸನ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಸಿ.ಡಿ ಮನುಕುಮಾರ್ ಅವರು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಸುತ್ತೋಲೆಯಲ್ಲಿ ಹೇಳಲಾಗಿದೆ.

ಇತ್ತೀಚಿಗೆ ಇದೇ ಪಬ್‌ ಮುಂಭಾಗದಲ್ಲೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದ್ದು, ಅಪ್ರಾಪ್ತ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಆದರೆ ಇಂತಹ ಪಬ್‌ಗಳಿಂದ ಕನ್ನಡ ಮತ್ತು ಕರ್ನಾಟಕಕ್ಕೆ ಅವಮಾನವಾದಾಗ ಪ್ರಶ್ನೆ ಮಾಡಿದರೆ ಪ್ರಭಾವಿಗಳು ಜೊತೆಗಿದ್ದಾರೆಂದು ಧಮಕಿ ಹಾಕುತ್ತಾರೆ. ಈ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣ ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕರವೇ ಹಾಸನ ಜಿಲ್ಲಾ ಘಟಕ ಆಗ್ರಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು