ಉಡುಪಿ ಮಠದಲ್ಲಿ ಹರಿಕಥೆ ವಿವಾದ: ಶಂಕರಾಚಾರ್ಯರ ಅವಹೇಳನ; ಕಲಾವಿದೆಯ ಕ್ಷಮೆಯಾಚನೆ, ಶಿರೂರು ಮಠ ವಿಷಾದ

ಉಡುಪಿ ಮಾಧ್ವ ಮಠದಲ್ಲಿ ನಡೆದ ಹರಿಕಥಾ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು ನೀಡಲಾದ ಹೇಳಿಕೆ ಧಾರ್ಮಿಕ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಹರಿಕಥೆ ವೇಳೆ ಶಂಕರಾಚಾರ್ಯರನ್ನು ರಾಕ್ಷಸ ಕುಲಕ್ಕೆ ಹೋಲಿಕೆ ಮತ್ತು ಏಕವಚನ ಪದ ಪ್ರಯೋಗದ ಬಗೆಗಿನ ಆರೋಪದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಶಂಕರಾಚಾರ್ಯರ ಅನುಯಾಯಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಜುಲೈ 11ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬೆಳಗಾವಿಯಿಂದ ಆಗಮಿಸಿದ್ದ ಅಂಕಿತಾ ನಾಯಕ್ ಮತ್ತು ಗೌರಿ ಪಾಂಡುರಂಗಿ ಅವರ ತಂಡ ಭರತನಾಟ್ಯ ಹಾಗೂ ಹರಿಕಥೆ ಕಾರ್ಯಕ್ರಮ ನಡೆಸಿತ್ತು. “ಭಕ್ತ ಪ್ರಹ್ಲಾದ” ಕಥಾ ಪ್ರಸಂಗದ ವೇಳೆ ಮಧ್ವಾಚಾರ್ಯರ ಅವತಾರವನ್ನು ವಿವರಿಸುವ ಸಂದರ್ಭದಲ್ಲಿ ಆದಿ ಶಂಕರಾಚಾರ್ಯರ ಕುರಿತು ವಿವಾದಾತ್ಮಕ ನಿರೂಪಣೆ ಮಾಡಲಾಗಿತ್ತು. ಇದರಲ್ಲಿ ಶಂಕರಾಚಾರ್ಯರನ್ನು ದೈತ್ಯನ ಅವತಾರ ಎಂದು ಉಲ್ಲೇಖಿಸಿರುವುದು ಹಾಗೂ ಅವರ ಅದ್ವೈತ ತತ್ವವನ್ನು ಕೀಳಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ವಿಡಿಯೊ ವೈರಲ್ ಆದ ನಂತರ ಶಂಕರಾಚಾರ್ಯರ ಅನುಯಾಯಿಗಳು ಹಾಗೂ ವಿವಿಧ ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಇದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು. ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು, ಇಲ್ಲವಾದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದರು.

ಕಲಾವಿದೆಯ ಸ್ಪಷ್ಟನೆ ಮತ್ತು ಕ್ಷಮೆಯಾಚನೆ
ವಿವಾದದ ಬೆನ್ನಲ್ಲೇ ಹರಿಕಥೆ ನಿರೂಪಿಸಿದ ಕಲಾವಿದೆ ವಿಡಿಯೊ ಸಂದೇಶ ಬಿಡುಗಡೆ ಮಾಡಿ, ಯಾರನ್ನೂ ನಿಂದಿಸುವ ಉದ್ದೇಶ ತಮ್ಮದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ನಾವು ಯಾವುದೇ ವ್ಯಕ್ತಿ ಅಥವಾ ಮತವನ್ನು ಅವಹೇಳನ ಮಾಡುವ ಉದ್ದೇಶದಿಂದ ಮಾತನಾಡಿಲ್ಲ. ಮಧ್ವ ಮಠದವರು ಈ ಕಥೆಯನ್ನು ನಮಗೆ ಹೇಳಿಕೊಟ್ಟಿಲ್ಲ. ಲಭ್ಯವಿದ್ದ ಪುಸ್ತಕವನ್ನು ಆಧರಿಸಿ ಹರಿಕಥೆ ಮಾಡಿದ್ದೇವೆ. ನಮ್ಮ ಮಾತಿನಿಂದ ಶಂಕರಾಚಾರ್ಯರ ಅನುಯಾಯಿಗಳು ಅಥವಾ ಬೇರೆ ಮತದವರಿಗೆ ನೋವಾಗಿದ್ದರೆ ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇವೆ. ಉಡುಪಿ ಮಠ ಅಥವಾ ಶಿರೂರು ಮಠಕ್ಕೂ ನಮ್ಮ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಹೇಳಿದ್ದಾರೆ.

ಶಿರೂರು ಮಠದ ಅಧಿಕೃತ ಸ್ಪಷ್ಟನೆ
ವಿವಾದದ ಹಿನ್ನೆಲೆಯಲ್ಲಿ ಪರ್ಯಾಯ ಶಿರೂರು ಮಠದ ದಿವಾನರಾದ ಡಾ. ಉದಯಕುಮಾರ ಸರಳತಾಯ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಕಾರ್ಯಕ್ರಮಕ್ಕೆ ಭರತನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಮಾತ್ರ ಅನುಮತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಕಟಣೆಯಲ್ಲಿ, “ಕಾರ್ಯಕ್ರಮದ ಮಧ್ಯೆ ನಡೆದ ಹರಿಕಥೆಯಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಲಾವಿದೆಯರಿಗೆ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಲು ಸೂಚಿಸಲಾಗಿತ್ತು. ಅವರು ಈಗಾಗಲೇ ವಿಡಿಯೊ ಮೂಲಕ ಕ್ಷಮೆಯಾಚಿಸಿದ್ದಾರೆ. ಈ ಅನಪೇಕ್ಷಿತ ಘಟನೆಯ ಬಗ್ಗೆ ಶ್ರೀಮಠ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ” ಎಂದು ಸ್ಪಷ್ಟಪಡಿಸಲಾಗಿದೆ.

ವಿವಾದದ ಹಿನ್ನೆಲೆ
ದ್ವೈತ ಮತ್ತು ಅದ್ವೈತ ವೇದಾಂತ ಪರಂಪರೆಗಳ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಶತಮಾನಗಳಿಂದಲೂ ಇದ್ದರೂ, ಇಂತಹ ವಿಷಯಗಳನ್ನು ಸಾರ್ವಜನಿಕ ಧಾರ್ಮಿಕ ವೇದಿಕೆಗಳಲ್ಲಿ ವ್ಯಕ್ತಿಗಳ ಬಗ್ಗೆ ಅವಹೇಳನವಾಗುವ ರೀತಿಯಲ್ಲಿ ನಿರೂಪಿಸಬಾರದು ಎಂಬ ಅಭಿಪ್ರಾಯವೂ ಈ ಘಟನೆಯ ನಂತರ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಚರ್ಚೆಗಳು ಮುಂದುವರಿದಿದ್ದು, ಕಲಾವಿದೆಯ ಕ್ಷಮೆಯಾಚನೆ ಮತ್ತು ಶಿರೂರು ಮಠದ ವಿಷಾದ ಪ್ರಕಟಣೆಯ ನಂತರ ವಿವಾದ ತಣ್ಣಗಾಗುವ ನಿರೀಕ್ಷೆ ವ್ಯಕ್ತವಾಗಿದೆ.

Related Articles

ಇತ್ತೀಚಿನ ಸುದ್ದಿಗಳು