Home ಇನ್ನಷ್ಟು ಕೋರ್ಟು - ಕಾನೂನು ಹರ್ಷ ಕೊಲೆ ತನಿಖೆ ಎನ್‌ಐಎಗೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಜಾ ಮಾಡಿದ ಹೈಕೋರ್ಟ್

ಹರ್ಷ ಕೊಲೆ ತನಿಖೆ ಎನ್‌ಐಎಗೆ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಜಾ ಮಾಡಿದ ಹೈಕೋರ್ಟ್

0

ಬೆಂಗಳೂರು: ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಿದ್ದ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಕ್ಕೆ ವಹಿಸಿದ್ದನ್ನು ಪ್ರಶ್ನಿಸಿ ಹಾಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಶಿವಮೊಗ್ಗದ ಹೊಸಬೀದಿಯ ನಿವಾಸಿ ಎ.ರೋಷನ್ ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಪ್ರಕರಣವನ್ನು ಎನ್‍ಐಎಗೆ ವಹಿಸಲು ಅನುಮತಿ ಪಡೆದಿಲ್ಲ ಎಂಬ ಅರ್ಜಿದಾರರ ಪರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಈ ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರವಷ್ಟೇ ತನಿಖೆಯ ಹೊಣೆಯನ್ನು ಎನ್‍ಐಎಗೆ ವಹಿಸಲಾಗಿದೆ. ಏನೂ ಆಧಾರವಿಲ್ಲದೆ ತನಿಖೆ ವರ್ಗಾವಣೆ ಮಾಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಈ ಮೂಲಕ ತನಿಖೆಯನ್ನು ಎನ್‍ಐಎಗೆ ವಹಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

2022ರ ಮಾರ್ಚ್‌ ತಿಂಗಳ 20ರಂದು ರಾತ್ರಿ ಶಿವಮೊಗ್ಗದಲ್ಲಿ ಹರ್ಷ ಎಂಬ ಹಿಂದುತ್ವ ಸಂಘಟನೆಯ ಯುವಕನ ಕೊಲೆ ನಡೆದಿತ್ತು. ಮೊದಲು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಐಪಿಸಿ ಸೆಕ್ಷನ್ 302 ಮತ್ತು ಸೆಕ್ಷನ್ 34ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಕೆಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ್ದರು. ಕೊಲೆಯಾದ ಮಾರನೇ ದಿನವೇ ಕೇಂದ್ರ ಸರ್ಕಾರ ತನಿಖೆಯನ್ನು ಎನ್‍ಐಎಗೆ ವಹಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮೊದಲಿಗೆ ಸ್ಥಳೀಯ ಪೊಲೀಸ್ ಸ್ಟೇಷನ್‌ನಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು, ಆಮೇಲೆ ಪ್ರಕರಣ ಎನ್‍ಐಎಗೆ ವಹಿಸಿದಾಗ ಯುಎಪಿಎ ಕಲಂಗಳನ್ನು ಸೇರಿಸಲಾಗಿದೆ. ಆದರೆ, ಅದಕ್ಕೆ ಕೋರ್ಟ್ ಅನುಮತಿ ಪಡೆದಿಲ್ಲ. ಪ್ರಕರಣದಲ್ಲಿ ಯುಎಪಿಎ ರೀತಿಯ ಗಂಭೀರ ಕಾಯಿದೆ ಹೇರಲು ಯಾವುದೇ ಆಧಾರವಿಲ್ಲ. ಕೇವಲ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಯುಎಪಿಎ ಹೇರಲಾಗಿದೆ. ಜೊತೆಗೆ, ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸುವ ಮುನ್ನ ವಿವೇಚನೆ ಬಳಸಿಲ್ಲ. ಹಾಗಾಗಿ ಎನ್‍ಐಎ ದಾಖಲಿಸಿರುವ ಎಫ್‍ಐಆರ್ ಅಕ್ರಮವಾಗಿದೆ. ದೇಶಾದ್ಯಂತ ಇಂತಹ ಹಲವು ಕೊಲೆಗಳು ನಡೆಯುತ್ತಿರುತ್ತವೆ. ಒಂದು ಸಮುದಾಯಕ್ಕೆ ಕಿರುಕುಳ ನೀಡುವ ಉದ್ದೇಶದಿಂದಲೇ ತನಿಖೆ ಎನ್‍ಐಎಗೆ ವಹಿಸಲಾಗಿದೆ ಎಂದು ಆರೋಪಿಸಿ ವಾದಿಸಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಹರ್ಷ ಕೊಲೆ ಪ್ರಕರಣ ಭಯೋತ್ಪಾದಕರ ಒಂದು ಕೃತ್ಯ. ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಕೊಲೆ ಮಾಡಲಾಗಿದೆ. ಹರ್ಷ ಬಜರಂಗದಳ ಹಾಗೂ ಹಿಂದೂ ಸಂಘಟನೆಯ ಸಕ್ರೀಯ ಕಾರ್ಯಕರ್ತ. ಎಲ್ಲಾ ಸಾಕ್ಷಿಗಳ ಆಧರಿಸಿಯೇ ಪ್ರಕರಣದ ತನಿಖೆಯನ್ನು ಎನ್‍ಐಎಗೆ ಕೊಡಲಾಗಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

You cannot copy content of this page

Exit mobile version