Friday, October 10, 2025

ಸತ್ಯ | ನ್ಯಾಯ |ಧರ್ಮ

‌ADGP ವೈ. ಪೂರಣ್ ಕುಮಾರ್ ಆತ್ಮಹತ್ಯೆ ಪ್ರಕರಣ | ಹರಿಯಾಣ ಡಿಜಿಪಿ, ಎಸ್‌ಪಿ ವಿರುದ್ಧ ಜಾತಿ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲು

ಚಂಡೀಗಢ, ಅಕ್ಟೋಬರ್ 9: ಹರಿಯಾಣದ ಹೆಚ್ಚುವರಿ ಡಿಜಿಪಿ (ADGP) ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ರಾಜ್ಯದ ಡಿಜಿಪಿ ಶತ್ರುಜಿತ್ ಸಿಂಗ್ ಕಪೂರ್ ಮತ್ತು ರೋಹತಕ್ ಎಸ್‌ಪಿ ನರೇಂದ್ರ ಬಿಜಾರ್ನಿಯಾ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ, ಪೂರನ್ ಕುಮಾರ್ ಅವರ ಪತ್ನಿ, ಐಎಎಸ್ ಅಧಿಕಾರಿ ಅನ್ಮೀತ್ ಕುಮಾರ್ ಅವರು ಗುರುವಾರ ದೂರು ನೀಡಿದ್ದರು. ಇದರ ಆಧಾರದ ಮೇಲೆ ಚಂಡೀಗಢದ ಸೆಕ್ಟರ್ 11 ಪೊಲೀಸ್ ಠಾಣೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದೂರಿನ ವಿವರಗಳು

ಡಿಜಿಪಿ ಮತ್ತು ಎಸ್‌ಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 108 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಸೆಕ್ಷನ್ ಆತ್ಮಹತ್ಯೆಗೆ ಪ್ರಚೋದನೆ ನೀಡುವುದರ ಜೊತೆಗೆ, ಎಸ್‌ಸಿ, ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳನ್ನು ಸಹ ಒಳಗೊಂಡಿದೆ. ಪೂರನ್ ಕುಮಾರ್ ಅವರ ಪತ್ನಿ ಅನ್ಮೀತ್ ಅವರು, ತಮ್ಮ ದೂರಿನ ಮೇಲೆ ತಕ್ಷಣವೇ ಎಫ್‌ಐಆರ್ ದಾಖಲಿಸಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಲವು ದಲಿತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಸಹ ಸರ್ಕಾರವನ್ನು ಒತ್ತಾಯಿಸಿವೆ.

ಈ ತಿಂಗಳ 7 ರಂದು (ಮಂಗಳವಾರ) ADGP ವೈ. ಪೂರನ್ ಕುಮಾರ್ ಅವರು ಚಂಡೀಗಢದ ಸೆಕ್ಟರ್ 11 ರಲ್ಲಿರುವ ತಮ್ಮ ನಿವಾಸದಲ್ಲಿ ಕುರ್ಚಿಯಲ್ಲಿ ಕುಳಿತು ತಮ್ಮ ಸರ್ವೀಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ಅವರ ನಿವಾಸದಿಂದ ವಿಲ್‌(Will) ಜೊತೆಗೆ ಒಂದು ಸೂಸೈಡ್ ನೋಟ್ ಸಹ ವಶಪಡಿಸಿಕೊಂಡಿದ್ದಾರೆ.

ಸೂಸೈಡ್ ನೋಟ್‌ನಲ್ಲಿ, ಅವರು ತಮ್ಮ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅಸಮಾಧಾನದ ಕುರಿತು ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಆತ್ಮಹತ್ಯೆಗೆ ದೌರ್ಜನ್ಯ ಮತ್ತು ಜಾತಿ ತಾರತಮ್ಯ ಕಾರಣ ಎಂದು ಹೇಳಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page