Wednesday, July 2, 2025

ಸತ್ಯ | ನ್ಯಾಯ |ಧರ್ಮ

ಮತ್ತೆ ಶುರುವಾಯಿತೇ ಕಾಂಗ್ರೆಸ್ಸಿನ ಬಣ ರಾಜಕೀಯ? ಎಷ್ಟಾದ್ರೂ ಡಿಸಿಎಂ ಮಾಡ್ಕೊಳ್ಳಿ ಎಂದ ಡಿ.ಕೆ.ಸುರೇಶ್

ಬೆಂಗಳೂರು: ಲೊಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ ಪಕ್ಷದೊಳಗೆ ಮತ್ತೆ ಬಣ ರಾಜಕೀಯ ಶುರುವಾಗಿದೆ. ಸಿದ್ದರಾಮಯ್ಯ ಬಣದವವರು ಎನ್ನಲಾದ ಕೆಲವು ಮುಖಂಡರು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ವರ್ಚಸ್ಸು ಕುಂದಿಸಲು ಅವರ ಸಮನಾಗಿ ರಾಜ್ಯದಲ್ಲಿ ಇನ್ನು ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಧ್ವನಿ ಎತ್ತಿದ್ದಾರೆ.

ಲೋಕಸಭೆ ಚುನಾವಣೆಗೂ ಮೊದಲು ಈ ಬಗ್ಗೆ ತೀವ್ರವಾದ ಚರ್ಚೆ ಶುರುವಾಗಿತ್ತು. ಆಗ ಎಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಪ್ರವೇಶಿಸಿ ಚರ್ಚೆಯನ್ನು ತಣ್ಣಗಾಗಿಸಿದ್ದರು. ಚುನಾವಣೆ ಮುಗಿದ ಬೆನ್ನಲ್ಲೆ ಕೆಲವು ಸಚಿವರು ಮತ್ತೆ ಈ ವಿಷಯವನ್ನು ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪಿಸುತ್ತಿದ್ದಾರೆ.

ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಹೆಚ್ಚು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಸಚಿವರಾದ ಜಮೀರ್ ಅಹಮದ್ ಖಾನ್, ಸತೀಶ ಜಾರಕಿಹೊಳಿ, ಕೆ.ಎನ್. ರಾಜಣ್ಣ ಮತ್ತೆ ಮತ್ತೆ ಧ್ವನಿ ಎತ್ತುತ್ತಿದ್ದಾರೆ.

ಇದೇ ವಿಚಾರವಾಗಿ ಸೋಮವಾರ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ‘ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವುದರಿಂದ ಎಲ್ಲವೂ ಆಗುತ್ತದೆ ಎಂದಾದರೆ ಮುಖ್ಯಮಂತ್ರಿಯನ್ನು ಬಿಟ್ಟು‌ ಇಡೀ ಸಚಿವ ಸಂಪುಟದ ಎಲ್ಲ ಮಂತ್ರಿಗಳನ್ನು ಉಪ ಮುಖ್ಯಮಂತ್ರಿ ಮಾಡಲಿ ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಮೂರು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಚಿವ ಕೆ.ಎನ್‌. ರಾಜಣ್ಣ ಹೇಳಿರುವುದು ಅವರ ವೈಯಕ್ತಿಕ ವಿಚಾರ. ಎಲ್ಲರಿಗೂ ಕೇಳಲು ಹಕ್ಕಿದೆ. ಹೈಕಮಾಂಡ್ ಬಳಿ ಹೋಗಿ ಕೇಳಲಿ. ಯಾರೂ ಬೇಡ ಅಂದಿಲ್ಲ.” ಎಂದರು.

‘ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆ ತಕ್ಕಂತೆ ಸೀಟುಗಳು ಬಂದಿಲ್ಲ. ನಾಲ್ಕೈದು ಸ್ಥಾನ ಕಡಿಮೆ ಬಂದಿವೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದು ಬಿಟ್ಟು ಇಂಥವೆಲ್ಲ ಚರ್ಚಿಸುವುದು ಒಳ್ಳೆಯದಲ್ಲ ಎಂದ ಅವರು, ಮುಖ್ಯಮಂತ್ರಿ ಹುದ್ದೆಯನ್ನೇ ಕೇಳಿ. ಯಾರು ಬೇಡ ಅಂದವರು? ಆದರೆ, ಈ ವಿಚಾರವನ್ನುಮಾಧ್ಯಮಗಳ ಮುಂದೆ ಹೇಳಿದರೆ ಆಗುತ್ತದೆಯೇ’ ಎಂದು ಬೇಸರವ್ಯಕ್ತಪಡಿಸಿದರು.

ಈ ಕುರಿತು ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಜಿ ಸಂಸದ ಡಿ.ಕೆ. ಸುರೇಶ್‌ ಮಾತನಾಡಿ, ‘ಎಲ್ಲ ಸಮುದಾಯದವರನ್ನೂ ಉಪ ಮುಖ್ಯಮಂತ್ರಿ ಮಾಡಲಿ. ಯಾರು ಬೇಡ ಅಂದವರು’ ಎಂದು ವ್ಯಂಗ್ಯವಾಡಿದರು.

“ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಲಿ. ಪಕ್ಷ ತೀರ್ಮಾನ ಮಾಡಲಿ. ಮೂರು ಜನ ಅಲ್ಲ, ಇನ್ನೂ ಐವರನ್ನು ಉಪ ಮುಖ್ಯಮಂತ್ರಿ ಮಾಡಿದರೂ ಒಳ್ಳೆಯದೇ. ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸತೀಶ ಜಾರಕಿಹೊಳಿ, ಜಮೀರ್, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್,  ಆರ್.ವಿ. ದೇಶಪಾಂಡೆ ಹೀಗೆ ತುಂಬಾ ಜನ ಇದ್ದಾರೆ. ಎಲ್ಲರನ್ನೂ ಉಪ ಮುಖ್ಯಮಂತ್ರಿ ಮಾಡಲಿ. ಬೇಡ ಅಂದವರು ಯಾರು” ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page