Monday, January 12, 2026

ಸತ್ಯ | ನ್ಯಾಯ |ಧರ್ಮ

ಹೆಚ್‌ಡಿಕೆ ರಿ ಎಂಟ್ರಿ : ನಿಖಿಲ್‌ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಂಡಿತೇ ಗೌಡರ ಕುಟುಂಬ?

“..ನಿಖಿಲ್‌ ರನ್ನು ಇಷ್ಟೆಲ್ಲ ಬೂಸ್ಟ್ ಮಾಡಿದ ನಂತರವೂ ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಕೊಡ್ತಾರೆ ಅಂದ್ರೆ ಏನರ್ಥ? ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಪ್ರೂವ್‌ ಮಾಡುವಲ್ಲಿ ನಿಖಿಲ್‌ ಸೋತುಹೋದ್ರಾ?..” ಮಾಚಯ್ಯ ಹಿಪ್ಪರಗಿ ಅವರ ಬರಹದಲ್ಲಿ

ಎಚ್ ಡಿ ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ರೀ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಈಗ ಸಾಕಷ್ಟು ಚರ್ಚೆಯಾಗ್ತಿದೆ. ಅವರು ವಾಪಾಸ್‌ ಬರೋದ್ರಿಂದ ರಾಜ್ಯ ರಾಜಕಾರಣದಲ್ಲಿ ಏನೋ ಅಲ್ಲೋಲಕಲ್ಲೋಲ ಆಗಿಬಿಡುತ್ತೆ ಅನ್ನೋ ಕಾರಣಕ್ಕಲ್ಲ; ಆ ರೀ-ಎಂಟ್ರಿಯನ್ನು project ಮಾಡಲು ಜೆಡಿಎಸ್‌ ಪಡೆ ಬಳಸಿಕೊಂಡ creative presentation ಕಾರಣಕ್ಕೆ ಈ ವಿಚಾರ ಜನರ ಗಮನ ಸೆಳೀತಾ ಇದೆ. ಇತ್ತೀಚೆಗಷ್ಟೆ ಬಿಡುಗಡೆಯಾಗಿ, ಸಾಕಷ್ಟು ವೀಕ್ಷಣೆ-ವಿವಾದಗಳಿಂದ ಸುದ್ದಿಯಾಗಿದ್ದ ನಟ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾದ ಟ್ರೈಲರ್‍‌ ಅನ್ನು ಪೊಲಿಟಿಕಲ್‌ contextಗೆ ಅಳವಡಿಸಿಕೊಂಡು, ಅದನ್ನು ಎಐ ತಂತ್ರಜ್ಞಾನದ ಮೂಲಕ ವಿನೂತನವಾಗಿ ಜೆಡಿಎಸ್‌ ಐಟಿ ಸೆಲ್‌ ಜನರ ಮುಂದಿಟ್ಟಿದೆ. ಮೀಡಿಯಾ attention ಮತ್ತು ನೋಡುಗರನ್ನು attract ಮಾಡುವಲ್ಲಿ ಈ ಯತ್ನ ಯಶಸ್ವಿಯಾಗಿರೋದೇನೊ ನಿಜ. ಆದರೆ ಈ creative aspect ಹಿಂದಿರುವ ಗಂಭೀರ ಸಂಗತಿಯೊಂದನ್ನು ಯಾರೂ ಚರ್ಚಿಸದಿರುವುದು ವಿಪರ್ಯಾಸ.

ಅದು ನಿಖಿಲ್‌ ಕುಮಾರಸ್ವಾಮಿಯ ರಾಜಕೀಯ ಭವಿಷ್ಯದ ಪ್ರಶ್ನೆಗೆ ಸಂಬಂಧಿಸಿದ್ದು!

ಕುಮಾರಸ್ವಾಮಿಯವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೇಂದ್ರ ಮಂತ್ರಿಯಾಗಿ ರಾಷ್ಟ್ರ ರಾಜಕಾರಣಕ್ಕೆ ಶಿಫ್ಟ್‌ ಆಗಲು ಮುಖ್ಯವಾಗಿ ಮೂರು ಕಾರಣಗಳಿದ್ದವು. ಮೊದಲನೆಯದು ಅವರ ಆರೋಗ್ಯ. ರಾಜ್ಯ ರಾಜಕಾರಣದ intensive ಒತ್ತಡ ತಡೆದುಕೊಳ್ಳುವಷ್ಟು ಅವರ ಆರೋಗ್ಯ ಸುಸ್ಥಿತಿಯಲ್ಲಿರಲಿಲ್ಲ. ಎರಡನೆಯದು, ಪಕ್ಷವನ್ನು ಜೀವಂತವಾಗಿ ಉಳಿಸಿಕೊಳ್ಳಬೇಕೆಂದರೆ ಅಧಿಕಾರ ಬೇಕೇಬೇಕಿತ್ತು. ಅದಕ್ಕಾಗಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕೇಂದ್ರ ಮಂತ್ರಿಯಾದ್ರು. ಇನ್ನು ಮೂರನೇ ಕಾರಣವೆಂದರೆ, ಮಗ ನಿಖಿಲ್‌ ಕುಮಾರಸ್ವಾಮಿಯವರನ್ನು ರಾಜ್ಯ ನಾಯಕನನ್ನಾಗಿ ಬೆಳೆಸುವುದು. ರೇವಣ್ಣನವರ ಇಬ್ಬರೂ ಮಕ್ಕಳು ಅನಗತ್ಯ ಆರೋಪಗಳನ್ನು ಮೈಮೇಲೆ ಎಳೆದುಕೊಂಡ ತರುವಾಯ ನಿಖಿಲ್‌ ಜೆಡಿಎಸ್‌ಗೆ ಉಳಿದಿರುವ ಅನಿವಾರ್ಯ ಆಯ್ಕೆ. ಸತತ ಮೂರು ಚುನಾವಣೆಗಳಿಂದ ಸೋತರೂ, ಶತಾಯಗತಾಯ ಆತನಿಗೆ ಜೆಡಿಎಸ್‌ ಸಾರಥ್ಯ ವಹಿಸಬೇಕೆನ್ನುವುದು ಆ ಕುಟುಂಬದ ಯೋಜನೆಯಾಗಿತ್ತು. ಜಿ ಟಿ ದೇವೇಗೌಡ ತರಹದ ಹಿರಿಯ ನಾಯಕರ ವಿರೋಧದ ನಡುವೆಯೂ ನಿಖಿಲ್‌ರನ್ನು ರಾಜ್ಯಾಧ್ಯಕ್ಷ ಮಾಡಲು ಎಲ್ಲಾ ಪ್ರಯತ್ನ ನಡೆದಿದ್ದವು. ಸ್ವತಃ ಕುಮಾರಸ್ವಾಮಿಯವರೇ ಹಲವು ಸಂದರ್ಭಗಳಲ್ಲಿ, ‘ನಾನು ಕೇಂದ್ರ ಮಂತ್ರಿ ಆಗಿರೋದ್ರಿಂದ ಪಕ್ಷ ಸಂಘಟನೆಗೆ ಸಮಯ ಕೊಡಲು ಆಗ್ತಾ ಇಲ್ಲ. ಅದಕ್ಕಾಗಿ ನಿಖಿಲ್‌ ಆ ಹೊಣೆ ಹೊತ್ತುಕೊಳ್ತಾರೆ’ ಎಂದು ಹೇಳಿದ್ದುಂಟು. ಅದೇ ಕಾರಣಕ್ಕೆ ಇತ್ತೀಚೆಗೆ ನಿಖಿಲ್ ನೇತೃತ್ವದಲ್ಲಿ ‘ಜನರೊಂದಿಗೆ ಜನತಾದಳ’ ಎಂಬ ರಾಜ್ಯ ಪ್ರವಾಸವನ್ನೂ ಆಯೋಜಿಸಲಾಯ್ತು. ಜನರಿಗಿಂತ ಮುಖ್ಯವಾಗಿ, ಕಾರ್ಯಕರ್ತರ ಜೊತೆ ನಿಖಿಲ್‌ ನೇರ ಸಂಪರ್ಕಕ್ಕೆ ಬರಲಿ, ಆತನ ಇಮೇಜ್‌ ವೃದ್ಧಿಯಾಗಲಿ ಎಂಬ ಲೆಕ್ಕಾಚಾರ ಇದರ ಹಿಂದೆ ಇತ್ತು. ತಮ್ಮ ಉಪಸ್ಥಿತಿಯಿಂದ ನಿಖಿಲ್‌ಗೆ ಮೀಡಿಯಾ ಕವರೇಜ್‌ ತಪ್ಪಬಾರದೆಂಬ ಉದ್ದೇಶದಿಂದಲೇ ಆ ಪ್ರವಾಸದಲ್ಲಿ ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಕಾಣಿಸಿಕೊಳ್ಳಲಿಲ್ಲ. ನೆಪಮಾತ್ರಕ್ಕೆ ಒಂದೆರಡು ಸಮಾವೇಶಗಳಲ್ಲಿ ಭಾಗವಹಿಸಿದ್ದರಷ್ಟೆ.

ನಿಖಿಲ್‌ ರನ್ನು ಇಷ್ಟೆಲ್ಲ ಬೂಸ್ಟ್ ಮಾಡಿದ ನಂತರವೂ ಕುಮಾರಸ್ವಾಮಿಯವರು ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಕೊಡ್ತಾರೆ ಅಂದ್ರೆ ಏನರ್ಥ? ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಪ್ರೂವ್‌ ಮಾಡುವಲ್ಲಿ ನಿಖಿಲ್‌ ಸೋತುಹೋದ್ರಾ? ನಿಖಿಲ್‌ರನ್ನು ನಂಬಿಕೊಂಡ್ರೆ ಪಕ್ಷ ಉಳಿಯೋದು ಕಷ್ಟ ಅನ್ನೋದು ದೇವೇಗೌಡರ ಕುಟುಂಬಕ್ಕೆ ಮನವರಿಕೆಯಾಗಿ ಕುಮಾರಸ್ವಾಮಿಯವರನ್ನು ವಾಪಾಸ್‌ ಕರೆಸುವ ತೀರ್ಮಾನ ಕೈಗೊಳ್ಳಲಾಯ್ತಾ? ಈಗಾಗಲೇ ಚುನಾವಣೆಗಳಲ್ಲಿ ಸೋತು ವಿಶ್ವಾಸ ಕಳೆದುಕೊಂಡಿರುವ ನಿಖಿಲ್‌ ಇದೀಗ ಕುಟುಂಬದ ಭರವಸೆಯನ್ನೂ ಕಳೆದುಕೊಂಡ್ರಾ? ಜನರೊಂದಿಗೆ ಜನತಾದಳ ಯಾತ್ರೆಯು ನಿಖಿಲ್‌ ಇಮೇಜ್‌ ಬಿಲ್ಡ್‌ ಮಾಡುವಲ್ಲಿ ಸೋತುಹೋಯ್ತಾ? ನಿಖಿಲ್‌ರನ್ನು ನಾಯಕನನ್ನಾಗಿ ಸ್ವೀಕರಿಸಲು ಕಾರ್ಯಕರ್ತರು ಸಿದ್ದರಿಲ್ಲ ಎನ್ನುವ ಗುಪ್ತವರದಿ ದಳಪತಿಗಳ ಕೈಸೇರಿದ್ದರಿಂದ ಈ ನಿರ್ಧಾರ ಕೈಗೊಂಡ್ರಾ?

ಇಂತಹ ಸಾಕಷ್ಟು ಪ್ರಶ್ನೆಗಳು ಕಾಡಲು ಕಾರಣವಿದೆ. ಕುಮಾರಸ್ವಾಮಿಯವರ ರಾಜ್ಯ ರಾಜಕಾರಣದ ರೀ-ಎಂಟ್ರಿ ಚರ್ಚೆ ಮುನ್ನೆಲೆಗೆ ಬಂದಿರುವುದು ಮಾತ್ರವಲ್ಲ, ಸ್ವತಃ ದೇವೇಗೌಡರು ತಮ್ಮ 93ನೇ ಇಳಿವಯಸ್ಸಿನಲ್ಲಿ ಆಕ್ಟಿವ್‌ ಆಗಿ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸುವುದು, ಕಾಂಗ್ರೆಸ್ ಸರ್ಕಾರದ ಮೇಲೆ ರಾಜಕೀಯ ಆರೋಪಗಳನ್ನು ಮಾಡುವುದು ಹೆಚ್ಚಾಗುತ್ತಿದೆ. ನಿಖಿಲ್‌ ತಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ, ತಂದೆ-ತಾತನಲ್ಲಿ ಭರವಸೆ ಹುಟ್ಟಿಸಿದ್ದರೆ ಅವರ್‍ಯಾಕೆ ತಮ್ಮ ಆರೋಗ್ಯ-ವಯಸ್ಸನ್ನು ಪಣಕ್ಕೊಡ್ಡಿ ಇಂತಹ ರಿಸ್ಕ್‌ಗೆ ಮುಂದಾಗುತ್ತಿದ್ದರು?

ಈ ಎಲ್ಲಾ ಪ್ರಶ್ನೆಗಳು ಈಗ ನಿಖಿಲ್‌ ಅವರ ರಾಜಕೀಯ ಭವಿಷ್ಯದ ಮೇಲೆ ಕವಿಯಲಾರಂಭಿಸಿವೆ. ಪದೇಪದೇ ಕೊಟ್ಟ ಅವಕಾಶಗಳ ಹೊರತಾಗಿಯೂ ನಿಖಿಲ್ ತಮ್ಮ ಸಾಮರ್ಥ್ಯ ಸಾಬೀತು ಮಾಡುವಲ್ಲಿ ಸೋತುಹೋಗಿರುವುದರಿಂದ ಪಕ್ಷವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿ ಕುಮಾರಸ್ವಾಮಿಯವರು ಮತ್ತು ದೇವೇಗೌಡರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುತ್ತವೆ ಜೆಡಿಎಸ್‌ ಮೂಲಗಳು!

ಕುಮಾರಸ್ವಾಮಿಯವರ ರಾಜ್ಯ ರಾಜಕಾರಣದ ರೀ-ಎಂಟ್ರಿ ಟಾಕ್ಸಿಕ್‌ ಟ್ರೈಲರ್‍‌ನಷ್ಟು ಸುಲಭವಿರಲಿದೆಯೇ? ಖಂಡಿತ ಇಲ್ಲ. ಯಾಕೆಂದ್ರೆ ಎಚ್‌ಡಿಕೆ ವಾಪಾಸಾತಿಯಿಂದ ರಾಜ್ಯ ಬಿಜೆಪಿ ನಾಯಕರು ಆತಂಕಕ್ಕೆ ಸಿಲುಕಿಕೊಳ್ತಾರೆ. ಮುಖ್ಯವಾಗಿ ಅಪಾರ ಆಂತರಿಕ ವಿರೋಧದ ಹೊರತಾಗಿಯೂ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪನವರ ಮಗ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇದನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ. ಈಗಾಗಲೇ ಎರಡು ಬಾರಿ ಸಿಎಂ ಆಗಿರುವ ಎಚ್‌ಡಿಕೆ, ರಾಜ್ಯ ರಾಜಕಾರಣಕ್ಕೆ ಮರಳಿದ ನಂತರ ಸಿಎಂ ಕುರ್ಚಿ ಮೇಲೆ ಕಣ್ಣಿಡದೆ ಇರ್ತಾರಾ? ಇದು ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮೇಲೆಯೇ ರಾಜ್ಯಮಟ್ಟದಲ್ಲಿ ನಕರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಕುಮಾರಸ್ವಾಮಿಯವರ ಟಾಕ್ಸಿಕ್‌ ಟೀಸರ್‍‌, ಕಾಂಗ್ರೆಸ್‌ ನಾಯಕರಿಗಿಂತ ಹೆಚ್ಚಾಗಿ ಬಿಜೆಪಿ ನಾಯಕರಲ್ಲೆ ತಳಮಳ ಸೃಷ್ಟಿಸಿದೆ ಎನ್ನಲಾಗುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆಯಲಿದೆ ನೋಡಬೇಕು.

ಅಂದಹಾಗೆ, ಯಶ್‌ ಸಿನಿಮಾದ ಟ್ರೈಲರ್‍‌ ಬಹಳಷ್ಟು ಚರ್ಚೆಯಾಗಿದ್ದೇ ಕಾರಿ‌ನ ಕುಲುಕಾಟ ಮತ್ತು ಡೈನಮೈಟ್‌ ಸ್ಫೋಟದ ರೊಮ್ಯಾಂಟಿಕ್‌ ಲಾಜಿಕ್‌ನಿಂದ. ಪುಣ್ಯಕ್ಕೆ ಕುಮಾರಸ್ವಾಮಿಯವರ ಟೀಸರ್‍‌ ಕಾಪಿಯಲ್ಲಿ, ಆ ಮುಖ್ಯ `ದೃಶ್ಯ’ಗಳಿಗೆ ಅವರ ಐಟಿ ಸೆಲ್‌ ಕತ್ತರಿಹಾಕಿದೆ. ಕನ್ನಡಿಗರ ಮೇಲೆ ಅಷ್ಟುಮಾತ್ರ ಕರುಣೆ ತೋರಿದ ಆ ಸೃಜನಶೀಲ ತಂಡಕ್ಕೆ ಧನ್ಯವಾದ ಅರ್ಪಿಸಲೇಬೇಕು. ಕಡೆಯದಾಗಿ ಒಂದು ಮಾತು ಹೇಳಬೇಕಿದೆ. ಸುಮಲತಾ ಅಂಬರೀಷ್‌ ಅವರ ಪರ ಕ್ಯಾಂಪೇನ್‌ ಮಾಡಿದ್ದಕ್ಕೆ ಯಾವ ನಟರಾದ, ದರ್ಶನ್‌ ಮತ್ತು ಯಶ್‌ ಅವರನ್ನು ಕುಮಾರಸ್ವಾಮಿಯವರು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡು, ನಿಂದಿಸಿದ್ದರೋ ಅದೇ ನಟ ಯಶ್‌ ಸಿನಿಮಾದ ಟ್ರೈಲರನ್ನು ಕುಮಾರಸ್ವಾಮಿಯವರ ಟೀಮು ಕಾಪಿ ಮಾಡಬೇಕಾಗಿ ಬಂದಿದ್ದು ವಿಪರ್ಯಾಸವೋ? ಕಾಲಚಕ್ರದ ಮಹಿಮೆಯೋ? ತಿಳಿಯದು…

Related Articles

ಇತ್ತೀಚಿನ ಸುದ್ದಿಗಳು

You cannot copy content of this page