ಹಾಸನ: ಆದಾಯಕ್ಕಿಂತ 214.40% ಹೆಚ್ಚು ಅಕ್ರಮ ಆಸ್ತಿ ಹೊಂದಿದ ಆರೋಪದ ಮೇಲೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಹಾಸನ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಸಿ. ಸತ್ಯನಾರಾಯಣ ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಅವರು *ದಿನಾಂಕ 28-09-2026 ರಂದು ಸರ್ಕಾರದ ಆದೇಶ ಸಂಖ್ಯೆ: ನಅಇ 209 ಮ್ಯು.ಅಪ್ರಾ 2026(ಇ)ರಂತೆ ಈ ಆದೇಶ ಹೊರಡಿಸಿದ್ದಾರೆ.
ಲೋಕಾಯುಕ್ತ ದಾಳಿಯಲ್ಲಿ ಏನು ಸಿಕ್ತು?
ನಗರಾಭಿವೃದ್ಧಿ ಪ್ರಾಧಿಕಾರ ಸೇವಾ ವೃಂದದ ಅಧಿಕಾರಿಯಾಗಿರುವ ಸತ್ಯನಾರಾಯಣ ಅವರು ಪ್ರಸ್ತುತ ಹಾಸನ ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗೊತ್ತಾದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹಾಸನ ಲೋಕಾಯುಕ್ತ ಪೊಲೀಸರು *ಮೊ.ಸಂ. 04/2026 ಕಲಂ 13(1)(ಬಿ) ಸಹಿತ 13(2) PC ಕಾಯ್ದೆ* ಅಡಿ ಪ್ರಕರಣ ದಾಖಲಿಸಿದ್ದರು.
ದಿನಾಂಕ 04-03-2026* ರಂದು ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು *05-03-2026* ರಂದು ಏಕಕಾಲದಲ್ಲಿ 7 ಕಡೆ ದಾಳಿ ನಡೆಸಲಾಗಿತ್ತು:
1. ಹಾಸನ ರವೀಂದ್ರನಗರ 4ನೇ ಕ್ರಾಸ್ ನಲ್ಲಿರುವ ಸ್ವಂತ ಮನೆ ನಂ. 5155
2. ಬೆಂಗಳೂರು ಸದಾಶಿವನಗರ BDA ನಂ-261 ರಲ್ಲಿರುವ 2,415 ಚ.ಅಡಿ ಫ್ಲಾಟ್ (ಸಹೋದರಿ ಸೀಮಾ ಕಿಶೋರ್ ಹೆಸರಿನಲ್ಲಿ)
3. ಬೇಲೂರು ರಸ್ತೆ ತಣ್ಣೀರುಹಳ್ಳ ಸಮೀಪ ಬಸವೇಶ್ವರ ನಗರದಲ್ಲಿರುವ ಪಾಂಡಿತ್ಯ ಎಜುಕೇಶನ್ ಟ್ರಸ್ಟ್ ಕಚೇರಿ / ಯುರೋಕಿಡ್ ಶಾಲೆ
4. ರವೀಂದ್ರನಗರ ಎಂ.ಜಿ ರಸ್ತೆ, ಹೇಮಾವತಿ ನಗರ ಮತ್ತು ಚನ್ನಪಟ್ಟಣ ಬೇಸಮ್ಮ ಬಡಾವಣೆಯಲ್ಲಿರುವ ಯುರೋಕಿಡ್ ಶಾಲೆಗಳು
5. ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ಅವರ ಕೊಠಡಿ
*ತನಿಖೆಯ ಲೆಕ್ಕಾಚಾರ:*
ವಿವರ ಮೊತ್ತ ಚರ ಮತ್ತು ಸ್ಥಿರಾಸ್ತಿ ಮೌಲ್ಯ ರೂ. 8,17,93,997
ಖರ್ಚು-ವೆಚ್ಚ ರೂ. 2,82,46,016
**ಒಟ್ಟು ಆಸ್ತಿ+ಖರ್ಚು** **ರೂ. 11,00,40,013**
ಗೊತ್ತಾದ ಮೂಲಗಳಿಂದ ಬಂದ ಆದಾಯ ರೂ. 3,50,00,000
**ಅಸಮತೋಲನ / ಅಕ್ರಮ ಆಸ್ತಿ** **ರೂ. 7,50,40,013**
**ಶೇಕಡಾವಾರು** **214.40%**
ಇದು ಇನ್ನೂ ಪ್ರಾಥಮಿಕ ಲೆಕ್ಕಾಚಾರ ಮಾತ್ರ. ತನಿಖೆ ಮುಂದುವರೆದಂತೆ ಇನ್ನೂ ಹೆಚ್ಚಿನ ಆಸ್ತಿ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ವರದಿ ತಿಳಿಸಿದೆ.
*ಸರ್ಕಾರದ ಆದೇಶದಲ್ಲಿ ಏನಿದೆ?*
ಪೊಲೀಸ್ ಅಧೀಕ್ಷಕರು, ಹಾಸನ ಲೋಕಾಯುಕ್ತ ಮತ್ತು ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ಲೋಕಾಯುಕ್ತ ಅವರು ಸತ್ಯನಾರಾಯಣ ಅವರನ್ನು ಕೂಡಲೇ ಅಮಾನತುಗೊಳಿಸಲು ಮತ್ತು ಅವರ ಲೀನ್ ಅನ್ನು ಬೇರೆಡೆಗೆ ವರ್ಗಾಯಿಸಲು ಶಿಫಾರಸ್ಸು ಮಾಡಿದ್ದರು. ಇದನ್ನು ಆಧರಿಸಿ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆ ಪರಿಶೀಲಿಸಿದ ಸರ್ಕಾರ, ಅಧಿಕಾರಿಯು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದು, ಅದೇ ಸ್ಥಳದಲ್ಲಿ ಮುಂದುವರೆದರೆ ಸಾಕ್ಷ್ಯಾಧಾರ ನಾಶಪಡಿಸುವ ಮತ್ತು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಮನಗಂಡಿದೆ. ಅಲ್ಲದೆ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 2021ರ ನಿಯಮ 3 ಉಲ್ಲಂಘನೆಯಾಗಿದೆ ಎಂದು ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ *10(1)(ಎ) ರಡಿ ಇಲಾಖಾ ವಿಚಾರಣೆ / ಕ್ರಿಮಿನಲ್ ಪ್ರಕರಣ ಕಾಯ್ದಿರಿಸಿ* ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರ ಲೀನ್ (ಮೂಲ ವೃಂದ) ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ *ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ತೋರಣಗಲ್ಲು, ಬಳ್ಳಾರಿ ಜಿಲ್ಲೆ*ಗೆ ವರ್ಗಾಯಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಅವರು ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
