Tuesday, October 7, 2025

ಸತ್ಯ | ನ್ಯಾಯ |ಧರ್ಮ

ಸಿಜೆಐ ಮೇಲಿನ ಹಲ್ಲೆಗೆ ಹಾಸನ ಜನಪರ ಚಳವಳಿ ಒಕ್ಕೂಟ ತೀವ್ರ ಖಂಡನೆ

ಹಾಸನ : ನ್ಯಾಯಾಲಯದೊಳಗೆ ಕಲಾಪಗಳು ನಡೆಯುತ್ತಿರುವಾಗಲೇ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ವಕೀಲನೊಬ್ಬ ಶೂ ಎಸೆದ ಪ್ರಕರಣ ಖಂಡಿಸಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಸಿಜೆಐ ಜಸ್ಟೀಸ್ ಬಿ.ಆರ್ ಗವಾಯಿ ಅವರತ್ತ ಶೂ ಎಸೆದ ರಾಕೇಶ್ ಕಿಶೋರ್ ಎಂಬ ವಕೀಲ ‘ಸನಾತನ ಧರ್ಮದ ಮೇಲಿನ ಅವಮಾನವನ್ನು ಸಹಿಸಲಾರೆ’ ಹೇಳಿರುವುದು ಅತ್ಯಂತ ಖಂಡನೀಯ ಹಾಗೂ ಅತ್ಯಂತ ಆಘಾತಕಾರಿ ವಿಷಯವಾಗಿದೆ ಮತ್ತು ಆ ಮೂಲಕ ಭಾರತದ ಸಂವಿಧಾನ ಮತ್ತು ಮತಧರ್ಮ ನಿರಪೇಕ್ಷ ಪ್ರಜಾಸತ್ತಾತ್ಮಕ ತತ್ವಗಳನ್ನು ಎತ್ತಿಹಿಡಿಯುವ ಭಾರತದ ಮುಖ್ಯ ನ್ಯಾಯಮೂರ್ತಿ ಅವರ ಮೇಲೆಯೇ ಮನುವಾದಿಗಳು ದಾಳೆ ಮಾಡುತ್ತಾರೆಂದರೆ ಜನಸಾಮಾನ್ಯರ ಪಾಡೇನು? ಎಂದು ಆತಂಕ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್,  ಸಿಜೆಐ ಮೇಲಿನ ಹಲ್ಲೆ ಸಂವಿಧಾನ ಆ ಮೂಲಕ ಭಾರತಕ್ಕೆ ಅವಮಾನ ಮಾಡಿರುವ ಕಿಡಿಗೇಡಿ ವಕೀಲನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ದಲಿತ ಸಮುದಾಯಕ್ಕೆ ಸೇರಿರುವ ಸಿಜೆಐ ಬಿ.ಆರ್.ಗವಾಯಿ ಅವರು ಸಾಮಾಜಿಕ ಪ್ರತಿರೋಧಗಳನ್ನು ಎದುರಿಸಿ ಅರ್ಹತೆ ಮತ್ತು ಸಾಧನೆ ಮೂಲಕ ಉನ್ನತ ಸ್ಥಾನಕ್ಕೇರಿದವರು. ಜಾತಿ ಮೂಲದ ಅಸಮಾನತೆ ಮತ್ತು ಅಸಹನೆ ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಸಲ್ಲಿ ಭಧ್ರವಾಗಿ ಉಳಿದುಕೊಂಡಿದೆ ಎನ್ನುವುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ. ಈ ಪ್ರಕರಣದ ಆರೋಪಿ ಯಾವ ಪಶ್ಚಾತ್ತಾಪವೂ ಇಲ್ಲದೆ ಮಾಧ್ಯಮಗಳಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ಈ ಸನಾತನಿ ವ್ಯವಸ್ಥೆ ಎಂತಹ ಆತಂಕಕಾರಿ ಅನಾಹುತಕ್ಕೆ ಪ್ರಚೋದಿಸುತ್ತಿದೆ ಎಂದು ಈ ಪ್ರಕರಣ ತೋರಿಸಿಕೊಟ್ಟಿದ್ದೆ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಇಂತಹ ಪ್ರಕರಣಗಳು ಮರುಕಳಿಸದಂತೆ ಕಾನೂನು ತಕ್ಕ ಕ್ರಮಕೈಗೊಳ್ಳಬೇಕು ಮತ್ತು ಜನತೆ ಇಂತಹ ಮನಸ್ಥಿತಿಯ ಬೆಳವಣಿಗೆಯನ್ನು ಆರಂಭದಲ್ಲೇ ಚಿವುಟಿ ಹಾಕಬೇಕು ಎಂದು ಹೇಳಿದರು.

ದಸಂಸ(ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಈರೇಶ್ ಹಿರೇಹಳ್ಳಿ ಮಾತನಾಡಿ, ಬಿ.ಆರ್.ಗವಾಯಿ ಅವರು ಒಬ್ಬಂಟಿಯಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಕೋಟ್ಯಂತರ ಜಾತ್ಯತೀತ ಮನಸ್ಸುಗಳು ಅವರ ಬೆಂಬಲಕ್ಕೆ ಇವೆ.ಸಿಜೆಐ ಯಾವುದೇ ಪಕ್ಷ ಇಲ್ಲವೇ ಧರ್ಮಕ್ಕೆ ಸೇರಿದವರಲ್ಲ. ಈ ದೃಷ್ಟಿಯಿಂದ ದೇಶದ ಎಲ್ಲ ಜಾತಿ, ಧರ್ಮ ಮತ್ತು ಪಕ್ಷಗಳ ಜನರು ಸುಪ್ರೀಂ ಕೋರ್ಟ್ ನಲ್ಲಿ ಇಂದು ನಡೆದಿರುವ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಬೇಕೆಂದು ಮನವಿ ಮಾಡಿದರು.ಹಿರಿಯ ದಲಿತ ಮುಖಂಡರಾದ ರಾಜಶೇಖರ್ ಹುಲಿಕಲ್ ಮಾತನಾಡಿ, ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆದುಹಾಕಿ, ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟುಹಾಕಿರುವ ಕಾರಣಕ್ಕಾಗಿಯೇ ರಾಕೇಶ್ ಕಿಶೋರ್ ನಂತಹ ಮನುವಾದಿ ಮನಸ್ಸುಗಳು ಸಮಾಜದಲ್ಲಿ ಹುಟ್ಟಿಕೊಂಡಿವೆ ಎನ್ನುವುದನ್ನು ನಾವು ಮರೆಯಬಾರದು. ನಾಥೂರಾಮ್ ಗೋಡ್ಸೆಯಂತಹ ಒಬ್ಬ ಕೊಲೆಗಡುಕನನ್ನು ದೇಶಪ್ರೇಮಿ ಎಂದು ಮೆರೆಸಲು ಹೊರಟಿರುವ ರೀತಿಯಲ್ಲಿಯೇ ಕೆಲವು ಪುಂಡರು ವಕೀಲನ ಕುಕೃತ್ಯವನ್ನು ಸಂಭ್ರಮಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಹೇಳಿದರು.

ಸಂವಿಧಾನ ಒಂದು ಅಭಿಯಾನದ ರಾಜ್ಈಯ ಸಂಚಾಲಕ ರಾಜು ಗೊರೂರು ಮಾತನಾಡಿ, ವಕೀಲನ ಈ ಕೃತ್ಯ ನೆಲದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ನಾಚಿಕೆಗೇಡಿನ, ಸಹಿಸಲಾಗದ ಆಕ್ರಮಣ ಎಂದರು.ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಸಿಜೆಐ ಅವರ ಮೇಲಿನ ಹಿಂಸಾತ್ಮಕ ಕೃತ್ಯ ನೇರವಾಗಿ ನಮ್ಮ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ವಿರುದ್ಧವಾದ ಅಪಮಾನಕಾರಿ ಕೃತ್ಯವಾಗಿದೆ.ನ್ಯಾಯಾಧೀಶರು ನಮ್ಮ ಪ್ರಜಾಪ್ರಭುತ್ವದ ಧುರೀಣರು ಮತ್ತು ನ್ಯಾಯದ ಕಂಬಗಳಾಗಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಗೌರವವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು. ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ. ಮಾತನಾಡಿ ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೋಮುವಾದಿ, ಮನುವಾದಿ, ಜಾತಿವಾದಿ, ಸಂವಿಧಾನ ವಿರೋಧಿ ಸನಾತನಿಗಳ ವಿರುದ್ಧ ಭಾರತದ ನಾಗರಿಕರು ಒಟ್ಟಾಗಿ ಪ್ರತಿಭಟಿಸಬೇಕಿದೆ ಎಂದರು.ಈ ವೇಳೆ ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ‌ ಕಾರ್ಯದರ್ಶಿ ಎಂ.ಬಿ. ಪುಷ್ಪ, ದಸಂಸ ಮುಖಂಡರಾದ ಅಂಬುಗ ಮಲ್ಲೇಶ್, ದುಮ್ಮಿ ಕೃಷ್ಣ, ಡಿಎಚ್ಎಸ್ ಮುಖಂಡರಾದ ರಾಜು ಸಿಗರನಹಳ್ಳಿ, ಲಿಂಗರಾಜು ಬಿಎಸ್, ಪ್ರಸನ್ನ ಕುಮಾರ್ , ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಬೌದ್ಧ ಮಹಾ ಸಭಾದ ವೀರಭದ್ರಪ್ಪ, ಲಕ್ಕಪ್ಪ, ಮಾದಿಗ ದಂಡೋರ ಮುಖಂಡ ರಂಗಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page