Saturday, August 24, 2024

ಸತ್ಯ | ನ್ಯಾಯ |ಧರ್ಮ

ಹಾಸನ: ಜೀವವಿಮೆ ಹಣಕ್ಕಾಗಿ ಬಿಕ್ಷುಕನನ್ನು ಕೊಲೆ ಮಾಡಿ ತಾನೇ ಸತ್ತಂತೆ ನಾಟಕವಾಡಿದ ವ್ಯಕ್ತಿ ಪೊಲೀಸ್‌ ವಶಕ್ಕೆ

ಹಾಸನ: ಜೀವ ವಿಮೆ ಹಣಕ್ಕಾಗಿ ಭಿಕ್ಷುಕನನ್ನು ಕೊಲೆ ಮಾಡಿ ತಾನೆ ಸತ್ತಿದ್ದೇನೆಂದು ಸಂಬಂಧಿಕರಿಂದ ಪ್ರಕಟಣೆ ಹೊರಡಿಸಿದ ವ್ಯಕ್ತಿ ಈಗ ಪೊಲೀಸ್‌ ಪಾಲಾಗಿರುವ ಪ್ರಕರಣ ಹಾಸನದಲ್ಲಿ ನಡೆದಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವಂತೆ ಬಿಂಬಿಸಿದ್ದ ಹೊಸಕೋಟೆ ತಾಲ್ಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಶಾಮಿಗೌಡ ಇದೀಗ ಪೊಲೀಸರ ಅತಿಥಿಯಾಗಿದ್ದು, ಇದಕ್ಕೆ ಸಹಕರಿಸಿದ ಅವರ ಪತ್ನಿ ಶಿಲ್ಪಾರಾಣಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಆ.13 ರಂದು ಗಂಡಸಿ ಬಳಿಯ ಗೊಲ್ಲರಹೊಸಳ್ಳಿ ಗೇಟ್‌ ಬಳಿ ಅಪಘಾತ ನಡೆದಿತ್ತು. ಕಾರಿನ ಚಕ್ರ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಹೊಸಕೋಟೆ ತಾಲ್ಲೂಕಿನ ಮುನಿಶಾಮಿಗೌಡ ಮೃತಪಟ್ಟಿರುವುದಾಗಿ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶವವನ್ನು ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿತ್ತು. ನಂತರ ಮುನಿಶಾಮಿಗೌಡ ಪತ್ನಿ ಶಿಲ್ಪಾ ಆಸ್ಪತ್ರೆಗೆ ಭೇಟಿ ನೀಡಿ, ಇದು ತನ್ನ ಪತಿಯ ಶವ ಎಂದು ಗುರುತಿಸಿದ್ದರು. ಶವವನ್ನು ತೆಗೆದುಕೊಂಡು ಹೋಗಿ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ, ಶವದ ಕುತ್ತಿಗೆಯ ಮೇಲೆ ಗಾಯದ ಗುರುತು ಇದ್ದುದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.

ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಮುನಿಶಾಮಿಗೌಡ, ಹೊರಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೇ ಒತ್ತಡಕ್ಕೆ ಸಿಲುಕಿದ್ದ. ನಂತರ ಸಂಬಂಧಿಯಾಗಿರುವ ಶಿಡ್ಲಘಟ್ಟ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್‌ ಅವರನ್ನು ಭೇಟಿ ಮಾಡಿ, ‘ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಆ. 13 ರಂದು ನಡೆದ ಅಪಘಾತದಲ್ಲಿ ಆ ವ್ಯಕ್ತಿ ಮೃತಪಟ್ಟಿದ್ದಾನೆ’ ಎಂದು ತಿಳಿಸಿದ್ದ. ಇದರಿಂದ ಅನುಮಾನಗೊಂಡ ಶಿಡ್ಲಘಟ್ಟ ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀನಿವಾಸ್, ಮುನಿಶಾಮಿಗೌಡನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು.

ಇದೀಗ ಪ್ರಕರಣದ ತನಿಖೆ ಆರಂಭಿಸಿದ ಗಂಡಸಿ ಪೊಲೀಸರು, ಪತ್ನಿ ಶಿಲ್ಪಾರಾಣಿಯ ವಿಚಾರಣೆ ನಡೆಸಿದ್ದಾರೆ. ಆದರೆ, ಏನೂ ಗೊತ್ತಿಲ್ಲದಂತೆ ಶಿಲ್ಪಾರಾಣಿ ನಟಿಸಿದ್ದು, ಆಕೆಯ ಎದುರು ಮುನಿಶಾಮಿಗೌಡನನ್ನು ಹಾಜರುಪಡಿಸಿದಾಗ ಎಲ್ಲ ವಿವರವನ್ನು ದಂಪತಿ ಬಹಿರಂಗ ಪಡಿಸಿದ್ದಾರೆ.

ಹೊಸಕೋಟೆಯಲ್ಲಿ ಟಯರ್‌ ಮಾರಾಟ ಮಳಿಗೆ ಹೊಂದಿರುವ ಮುನಿಶಾಮಿಗೌಡ ಸಾಲದಲ್ಲಿ ಮುಳುಗಿದ್ದ. ಇದರಿಂದ ಪಾರಾಗಲು ತಾನೇ ಸತ್ತಂತೆ ನಟಿಸಿ, ಜೀವ ವಿಮೆ ಹಣ ಪಡೆಯಲು ಈ ಯೋಜನೆ ರೂಪಿಸಿದ್ದ. ಅದಕ್ಕೆ ತಕ್ಕಂತೆ ಭಿಕ್ಷುಕನೊಬ್ಬನನ್ನು ವಿಶ್ವಾಸಕ್ಕೆ ಪಡೆದು, ಕಾರಿನಲ್ಲಿ ಕರೆದುಕೊಂಡು ಬಂದಿದ್ದ. ಗಂಡಸಿ ಬಳಿಯ ಗೊಲ್ಲರಹೊಸಳ್ಳಿ ಗೇಟ್ ಬಳಿ ಕಾರಿನ ಟಯರ್‌ ಬದಲಿಸುವಂತೆ ಆ ಭಿಕ್ಷುಕನಿಗೆ ಮುನಿಶಾಮಿಗೌಡ ಹೇಳಿದ್ದ. ಟಯರ್ ಬದಲಿಸುತ್ತಿದ್ದ ವೇಳೆ, ಭಿಕ್ಷುಕನ ಕುತ್ತಿಗೆಗೆ ಹಗ್ಗ ಹಾಕಿ ರಸ್ತೆಗೆ ಎಳೆದಿದ್ದ. ಮೊದಲೇ ಯೋಜನೆ ರೂಪಿಸಿದಂತೆ, ತಾನೇ ತರಿಸಿದ್ದ ಲಾರಿಯನ್ನು ಆ ವ್ಯಕ್ತಿಯ ಮೇಲೆ ಹರಿಸಿದ್ದು, ರಸ್ತೆ ಅಪಘಾತದಲ್ಲಿ ತಾನೇ ಮೃತಪಟ್ಟಿರುವಂತೆ ಮುನಿಶಾಮಿಗೌಡ ಬಿಂಬಿಸಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page