Tuesday, October 28, 2025

ಸತ್ಯ | ನ್ಯಾಯ |ಧರ್ಮ

ಹಾಸನಾಂಬ ಮುಗಿದಿದೆ, ಈಗ ರೈತರ ಕಣ್ಣೀರನ್ನು ಒರೆಸಿರಿ – ಎಚ್.ಡಿ. ರೇವಣ್ಣ ಗರಂ

ಅಧಿಕಾರಿಗಳ ಕಾರ್ಯದಕ್ಷತೆ ಕುರಿತು ಸಭೆಯಲ್ಲಿ ಗರಂ

ಹಾಸನ : ಮಾಜಿ ಸಚಿವ ಹಾಗೂ ಹಾಸನದ ಹಿರಿಯ ನಾಯಕ ಎಚ್.ಡಿ. ರೇವಣ್ಣ ಅವರು ಶನಿವಾರ ತಹಸೀಲ್ದಾರ್ ಕಚೇರಿಯಲ್ಲಿ ತುರ್ತು ಸಭೆ ನಡೆಸಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಭಾರೀ ತರಾಟೆಗೆ ತೆಗೆದುಕೊಂಡರು. ಕೆಲಸದಲ್ಲಿ ಅಲಕ್ಷ್ಯ ತೋರಿದವರಿಗೆ ನೋಟಿಸ್ ನೀಡುವಂತೆ ಸೂಚಿಸಿದರು. ಹಾಸನಾಂಬ ಉತ್ಸವ ಯಶಸ್ವಿಯಾಗಿ ಮುಗಿದಿದೆ, ಈಗಲಾದರೂ ರೈತರ ಬಗ್ಗೆ ಯೋಚಿಸಿ. ಜಿಲ್ಲಾಧಿಕಾರಿಗಳು ನಗರದಲ್ಲಿ ಬೈಕ್ ಸವಾರಿ ಮಾಡುವ ಬದಲು ಹಳ್ಳಿಗಳ ಕಡೆ ತಿರುಗಬೇಕು. ಮಳೆ ಬಂದು ರೈತರ ಬೆಳೆಗಳು ಅಪಾರ ನಷ್ಟಕ್ಕೊಳಗಾಗಿವೆ. ೫೦ ಸಾವಿರ ಎಕರೆಗಳಲ್ಲಿ ಜೋಳ ಬೆಳೆ ನಾಶವಾಗಿದೆ. ರೈತರ ಕಣ್ಣೀರು ಹಾಕಿಸಿದರೆ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಸಭೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಹಾಜರಾತಿ ಇತ್ತು. ಅಧಿಕಾರಿಗಳಿಂದ ನಷ್ಟದ ಅಂಕಿಅಂಶ ಕೇಳಿದಾಗ ಕೆಲವರು ಸಮರ್ಪಕ ಉತ್ತರ ನೀಡಲು ವಿಫಲರಾದ್ದರಿಂದ ಸಭೆಯಲ್ಲಿ ಕ್ಷಣಿಕ ಗೊಂದಲ ಉಂಟಾಯಿತು. ಇತಿಹಾಸದಲ್ಲೇ ಇಷ್ಟೊಂದು ಮಳೆ ಆಗಿಲ್ಲ. ವಾಡಿಕೆ ಮಳೆಯಿಗಿಂತ ಹಲವು ಪಟ್ಟು ಹೆಚ್ಚಾಗಿದೆ. ಎಲ್ಲೆಲ್ಲಿ ಶಾಲೆ, ಅಂಗನವಾಡಿ ಕಟ್ಟಡಗಳು ಬಿದ್ದಿವೆ ಆ ಮಾಹಿತಿಯನ್ನು ಒಂದು ವಾರದೊಳಗೆ ಸಾದರಪಡಿಸಿ. ರೈತರ ಜಮೀನು ನಷ್ಟದ ವರದಿ ಇನ್ನೂ ನೀಡದವರು ಯಾಕೆ? ಕೋಟ್ಯಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ರೇವಣ್ಣ ತೀವ್ರವಾಗಿ ಪ್ರಶ್ನಿಸಿದರು. ಅವರು ತಮ್ಮ ಮೊಬೈಲ್‌ನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವಿಡಿಯೋವನ್ನು ಪ್ರದರ್ಶಿಸಿ ಅಧಿಕಾರಿಗಳಿಗೆ ನೇರವಾಗಿ ಪ್ರಶ್ನೆ ಹಾಕಿದರು. ನಿಮ್ಮನ್ನು ಕತ್ತು ಹಿಡಿದು ಹೊರಗೆ ಹಾಕಿದ್ದಾರೆ ಅಂತ ಕೇಳಿದ್ದೇನೆ ಎಂದು ತಹಸೀಲ್ದಾರ್‌ನ್ನು ಉದ್ದೇಶಿಸಿ ಹೇಳಿದಾಗ ಅವರು ತಬ್ಬಿಬ್ಬಾಗಿ “ಇಲ್ಲ ಸಾರ್, ಹಾಗಾಗಿಲ್ಲ” ಎಂದು ಉತ್ತರಿಸಿದರು. “ಮೀಡಿಯ ಮುಂದೆ ಅಂಥ ಮಾತು ಹೇಳಬೇಡಿ” ಎಂದು ತಹಸೀಲ್ದಾರ್ ವಿನಂತಿಸಿದರು.

ಜಿಲ್ಲಾಧಿಕಾರಿಗಳು ಸದ್ಯಕ್ಕೆ ಸಿಟಿ ರೌಂಡ್ ನಿಲ್ಲಿಸಿ ಹಳ್ಳಿಗಳ ಕಡೆ ಹೋಗಬೇಕು. ರೈತರ ಬೆಳೆ ಹಾನಿ, ಮನೆ ಬಿದ್ದಿರುವುದು, ಬಡ ಕುಟುಂಬಗಳ ಸಂಕಷ್ಟ ಎಲ್ಲದರಿಗೂ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ೩ ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಅರ್ಧ ಭಾಗದ ಮೆಕ್ಕೆಜೋಳ ಬೆಳೆ ನಾಶವಾಗಿದೆ. ಕೆಲವು ಅಧಿಕಾರಿಗಳು ರಜೆಯಲ್ಲಿ ಇದ್ದಾರೆ ? ಅವರನ್ನು ಕೂಡ ಹಾಜರಾಗಲು ಸೂಚಿಸಿಜಡಿu. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರಿಗೆ ಪರಿಹಾರ ನೀಡಿದ್ದರು. ಈಗ ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ಒಳ್ಳೆಯವರು, ಅವರು ಕೂಡ ರೈತರ ನೆರವಿಗೆ ಬರಬೇಕು. ಹಾಸನಾಂಬೆಯ ಆಶೀರ್ವಾದದಿಂದ ಉತ್ಸವ ಯಶಸ್ವಿಯಾಗಿ ನಡೆದುದಾದರೆ, ಈಗ ಆ ಆಶೀರ್ವಾದವನ್ನು ರೈತರ ಕಷ್ಟ ನಿವಾರಣೆಗೆ ಬಳಸಿ. ಕೂಡಲೇ ಜಿಲ್ಲೆಯ ಮಟ್ಟದಲ್ಲಿ ಸಭೆ ಕರೆದರೆ ಮಾತ್ರ ಪರಿಹಾರ ಸಾಧ್ಯ ಎಂದು ಸ್ಪಷ್ಟ ಸಂದೇಶ ನೀಡಿದರು. ಸಭೆಯ ಅಂತ್ಯದಲ್ಲಿ ರೇವಣ್ಣ ಅವರು ಅಧಿಕಾರಿಗಳಿಗೆ ತೀರ್ವ ಎಚ್ಚರ ನೀಡಿ, ಇದು ರಾಜಕೀಯ ಸಭೆ ಅಲ್ಲ ರೈತರ ಬದುಕು ಪ್ರಶ್ನೆಯಲ್ಲಿದೆ. ಕಾಲಹರಣ ಬೇಡ, ಕೆಲಸ ಮಾಡಿ ಎಂದು ಕಟ್ಟೆಚ್ಚರ ಸಂದೇಶ ನೀಡಿ ಸಭೆ ಮುಗಿಸಿದರು. ಈ ವೇಳೆ ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ತಹಸೀಲ್ದಾರ್ ಗೀತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page