Home ಬ್ರೇಕಿಂಗ್ ಸುದ್ದಿ ಹಾಸನ ರಾಜನಹಳ್ಳಿ ವೀರಪ್ಪ ಪ್ರಕರಣ ಸಿಐಡಿ ತನಿಖೆಗೆ – ಜನಪರ ಸಂಘಟನೆಗಳ ಒಕ್ಕೂಟ ಆಗ್ರಹ

ಹಾಸನ ರಾಜನಹಳ್ಳಿ ವೀರಪ್ಪ ಪ್ರಕರಣ ಸಿಐಡಿ ತನಿಖೆಗೆ – ಜನಪರ ಸಂಘಟನೆಗಳ ಒಕ್ಕೂಟ ಆಗ್ರಹ

0

ಹಾಸನ : ಆಲೂರು ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಕೆಎಸ್‌ಆರ್‌ಟಿಸಿ ಚಾಲಕ ಆರ್.ಡಿ. ವೀರಪ್ಪ (58) ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ತಿಂಗಳಾದರೂ ಸತ್ಯ ಹೊರಬಂದಿಲ್ಲ. ಪ್ರಕರಣವನ್ನು ಸಿಐಡಿಗೆ ವಹಿಸಿ ನಿಷ್ಪಕ್ಷಪಾತ ಹಾಗೂ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ದಲಿತ ಮತ್ತು ಜನಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಫೆ.17ರಂದು ವೀರಪ್ಪ ಅವರ ಮೃತದೇಹ ಜಮೀನಿನ ಕಲ್ಲುಮಂಟಿಯಲ್ಲಿ ಶೇ.80ರಷ್ಟು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ದೇಹ ಸುಟ್ಟಿರುವುದು ಹೇಗೆ, ಬೆಂಕಿ ಹೊತ್ತಿಕೊಂಡ ಸಂದರ್ಭವೇನು ಎಂಬುದರ ಕುರಿತು ಪೊಲೀಸರು ಸ್ಪಷ್ಟ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.

ಜಮೀನು ವಿವಾದ, ಹಿಂದಿನ ಗಲಾಟೆ, ಹಲ್ಲೆ-ಬೆದರಿಕೆ ಹಾಗೂ ಅಕ್ರಮ ಮಣ್ಣು ಸಾಗಾಟಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುಟುಂಬಸ್ಥರು ಪೊಲೀಸರ ಗಮನಕ್ಕೆ ತಂದಿದ್ದರೂ ಸಮಗ್ರ ತನಿಖೆ ನಡೆದಿಲ್ಲ. ಪ್ರಕರಣವನ್ನು ಆಕಸ್ಮಿಕ ಸಾವು ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು. ವೀರಪ್ಪ ಅವರ ಅಣ್ಣ, ಅಂಗವಿಕಲ ನಂಜಯ್ಯ ಅವರಿಗೆ ಪೊಲೀಸರು ಕಿರುಕುಳ ನೀಡಿ ತಪ್ಪೊಪ್ಪಿಗೆಗೆ ಒತ್ತಡ ಹೇರಿದ್ದಾರೆ ಹಾಗೂ ಖಾಲಿ ಹಾಳೆಯಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ ಎಂಬ ಕುಟುಂಬದ ಆರೋಪದ ಬಗ್ಗೆಯೂ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರಕರಣದ ಮೂರನೇ ಆರೋಪಿ ಹರೀಶ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ತನಿಖೆಯ ನೈಜ ದಿಕ್ಕಿನ ಬಗ್ಗೆಯೂ ಪ್ರಶ್ನೆಗಳು ಮೂಡಿವೆ ಎಂದರು. ಮರಣೋತ್ತರ ಪರೀಕ್ಷೆ, ವಿಧಿವಿಜ್ಞಾನ ವರದಿ ಹಾಗೂ ಘಟನಾ ಸ್ಥಳದ ಸಾಕ್ಷ್ಯಗಳನ್ನು ಮರುಪರಿಶೀಲಿಸಿ, ಸಾವಿನ ನಿಖರ ಕಾರಣ ಬಹಿರಂಗಪಡಿಸಬೇಕು. ತನಿಖೆ ಚುರುಕುಗೊಳ್ಳದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಸೋಮಶೇಖರ್, ನಂಜಯ್ಯ, ವಿಜಯ್ ಕುಮಾರ್, ರಾಜಶೇಖರ್ ಹಾಗೂ ಕೃಷ್ಣದಾಸ್ ಇದ್ದರು.

You cannot copy content of this page

Exit mobile version