Thursday, December 18, 2025

ಸತ್ಯ | ನ್ಯಾಯ |ಧರ್ಮ

ಗದ್ದಲದ ನಡುವೆಯೇ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕ ಅಂಗೀಕಾರ; ಬಿಜೆಪಿ ನಾಯಕರ ವಿರೋಧ

ಬೆಳಗಾವಿ: ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ವಿಧಾನಸಭೆಯಲ್ಲಿ ತೀವ್ರ ವಿರೋಧ, ಧರಣಿ ಹಾಗೂ ಗದ್ದಲದ ನಡುವೆಯೇ ಗುರುವಾರ ಅಂಗೀಕಾರವಾಯಿತು.

ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸುವಂತೆ ಸದನವನ್ನು ಕೋರಿದರು. ವಿಧೇಯಕದ ಅವಶ್ಯಕತೆ ಕುರಿತು ಅವರು ಕಲಂವಾರು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡುತ್ತಾ, “ಈ ಕಾಯ್ದೆಯ ಅಗತ್ಯವಿಲ್ಲ. ಇದು ರಾಜಕೀಯ ದ್ವೇಷ ತೀರಿಸಿಕೊಳ್ಳಲು ತಂದಿರುವ ಕಾಯ್ದೆ. ಇದರ ಜಾರಿಯಿಂದ ಪೊಲೀಸರು ಹಿಟ್ಲರ್‌ಗಳಂತೆ ವರ್ತಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಇದು ವಿರುದ್ಧವಾಗಿದೆ” ಎಂದು ತೀವ್ರ ಟೀಕೆ ನಡೆಸಿದರು.

ಬಿಎನ್‌ಎಸ್‌ನಲ್ಲೇ ಸಾಕಷ್ಟು ಕಾನೂನುಗಳು ಇರುವಾಗ ಹೊಸ ಕಾಯ್ದೆಯ ಅವಶ್ಯಕತೆ ಇಲ್ಲ. ವಿರೋಧ ಪಕ್ಷಗಳು ಮತ್ತು ಪತ್ರಿಕಾರಂಗವನ್ನು ಗುರಿಯಾಗಿಸಿಕೊಂಡು, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಈ ಕಾಯ್ದೆಯನ್ನು ತಂದಿದೆ ಎಂದು ಅವರು ಆರೋಪಿಸಿದರು. ಈ ಕಾಯ್ದೆ ಅಧಿಕಾರದಲ್ಲಿರುವವರಿಗೆ ಆಯುಧವಾಗಲಿದೆ. ಪೊಲೀಸರು ಹಣ ವಸೂಲಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಈ ಕಾಯ್ದೆಯಡಿ ಯಾರನ್ನು ಬೇಕಾದರೂ ಬಂಧಿಸಬಹುದು. ಇದಕ್ಕಾಗಿ ಹೊಸ ಜೈಲುಗಳ ಅಗತ್ಯ ಬೀಳಬಹುದು ಎಂದು ಎಚ್ಚರಿಸಿದರು.

ಈ ಹಂತದಲ್ಲಿ ಸಚಿವ ಬೈರತಿ ಸುರೇಶ್ ಮಧ್ಯಪ್ರವೇಶಿಸಿ ಮಾತನಾಡಿದಾಗ, ಕರಾವಳಿ ಪ್ರದೇಶವನ್ನು ಕುರಿತು ಅವರು ಬಳಸಿದ ಪದಗಳಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಇದರಿಂದ ಸದನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿಪಕ್ಷ ಸದಸ್ಯರು ಸಚಿವ ಬೈರತಿ ಸುರೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರ ಮಾತುಗಳನ್ನು ದಾಖಲೆಗಳಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು.

ಒಂದು ಹಂತದಲ್ಲಿ ಸಚಿವ ಬೈರತಿ ಸುರೇಶ್ ಹಾಗೂ ಬಿಜೆಪಿ ಸದಸ್ಯ ಚನ್ನಬಸಪ್ಪ ನಡುವೆ ಏಕವಚನದಲ್ಲಿ ಮಾತಿನ ವಿನಿಮಯ ನಡೆದಿದ್ದು, ಸದನದಲ್ಲಿ ಗದ್ದಲ ತೀವ್ರಗೊಂಡಿತು. ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು.

ಗದ್ದಲ ಹಾಗೂ ಧರಣಿಯ ನಡುವೆಯೇ ಸಭಾಧ್ಯಕ್ಷ ಯು.ಟಿ. ಖಾದರ್ ವಿಧೇಯಕವನ್ನು ಮತಕ್ಕೆ ಹಾಕಿ, ಧ್ವನಿಮತದ ಮೂಲಕ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ ಅಂಗೀಕಾರವಾಗಿದೆ ಎಂದು ಘೋಷಿಸಿದರು. ಬಳಿಕ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

ಪೂರ್ಣ ಪ್ರಮಾಣದ ಚರ್ಚೆಗೆ ಅವಕಾಶ ನೀಡದೇ ತರಾತುರಿಯಲ್ಲಿ ವಿಧೇಯಕ ಅಂಗೀಕಾರ ಮಾಡಲಾಗಿದೆ ಎಂದು ವಿಪಕ್ಷ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ವಿಪಕ್ಷಗಳ ವಿರೋಧವನ್ನು ಲೆಕ್ಕಿಸದೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿದೆ ಎಂದು ಆರೋಪಿಸಿದರು. ಸದನ ಮುಂದೂಡಿದ ಬಳಿಕವೂ ವಿಪಕ್ಷ ಸದಸ್ಯರು ಒಳಗೇ ನಿಂತು ಘೋಷಣೆಗಳನ್ನು ಕೂಗುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page