Friday, May 2, 2025

ಸತ್ಯ | ನ್ಯಾಯ |ಧರ್ಮ

ದ್ವೇಷ ಭಾಷಣ ಮಾಡುವ ಮೋದಿ ಪ್ರಧಾನಿ ಸ್ಥಾನಕ್ಕೆ ಅನರ್ಹ: ಬೃಂದಾ ಕಾರಟ್

ತಿರುವನಂತಪುರಂ: ರಾಜಸ್ಥಾನ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಘೋಷಣೆ ಆಘಾತಕಾರಿಯಾಗಿದೆ ಎಂದು ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಹೇಳಿದ್ದಾರೆ.

ಮೋದಿಯವರ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಅವರು ಪ್ರಶ್ನಿಸಿದ್ದಾರೆ. ಭಾರತೀಯ ಕಾನೂನುಗಳು ಧಾರ್ಮಿಕ ದ್ವೇಷ ಮತ್ತು ದ್ವೇಷದ ಭಾಷಣದ ವಿರುದ್ಧವಾಗಿವೆ ಮತ್ತು ಮೋದಿಯವರ ಮಾತುಗಳು ಆ ಕಾನೂನುಗಳನ್ನು ಉಲ್ಲಂಘಿಸಿವೆ ಎಂದು ಹೇಳಿದರು. ಆದರೆ, ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.

”ಪ್ರಧಾನಿ ದೇಶದ ಪ್ರಜೆ. ಅವರು ದೇಶದ ಇತರ ಯಾವುದೇ ನಾಗರಿಕರಿಗಿಂತ ಹೆಚ್ಚಲ್ಲ. ದೇಶದ ಕಾನೂನಿಗಿಂತ ಮೇಲಲ್ಲ. ಪ್ರಧಾನಿಯವರು ಭಾರತದ ಕಾನೂನನ್ನು ಒಪ್ಪಿಕೊಳ್ಳಬೇಕು. ನಮ್ಮ ಕಾನೂನುಗಳು ಅಂತರ್-ಧರ್ಮೀಯ ದ್ವೇಷವನ್ನು ಉತ್ತೇಜಿಸುವುದನ್ನು ವಿರೋಧಿಸುತ್ತವೆ. ಅದು ಅಂತರ್ ಧರ್ಮೀಯ ದ್ವೇಷ ಹರಡುವುದನ್ನು ಸಹ ವಿರೋಧಿಸುತ್ತದೆ.

ಈ ವಿಚಾರದಲ್ಲಿ ಚುನಾವಣಾ ಆಯೋಗದ ಪಾತ್ರ ಸಂಪೂರ್ಣ ಆಘಾತಕಾರಿಯಾಗಿದೆ ಎಂದ ಅವರು, ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅದರ ವಿಶ್ವಾಸಾರ್ಹತೆ ಏನಾಗುತ್ತದೆ ಎಂದು ಪ್ರಶ್ನಿಸಿದರು.

ಭಾರತದಂತಹ ಜಾತ್ಯತೀತ ರಾಷ್ಟ್ರದ ನಾಯಕ ಪ್ರಧಾನಿಯಿಂದ ಇಂತಹ ಭಾಷಣವನ್ನು ನಿರೀಕ್ಷಿಸಿರಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿಯಿಂದ ಆಘಾತಕಾರಿ ಘೋಷಣೆ ಹೊರಬಿದ್ದಿದೆ. ಭಾರತದಂತಹ ಜಾತ್ಯತೀತ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಪ್ರಧಾನಿಯಿಂದ ಇಂತಹ ಮಾತುಗಳು ಅನಿರೀಕ್ಷಿತ. ನೇರವಾಗಿ ಹೇಳಬೇಕೆಂದರೆ, ಅವರು ಮತಾಂಧರಂತೆ ಮಾತನಾಡಿದರು. ಮೋದಿ ಭಾರತದ ಪ್ರಧಾನಿ ಹುದ್ದೆಗೆ ಅನರ್ಹರು ಎಂದು ಬೃಂದಾ ಕಾರಟ್ ಹೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಮತ ಸೆಳೆಯಲು ಮೋದಿ ಅವರು ಧರ್ಮವನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ದ್ವೇಷ ಭಾಷಣ ಮತ್ತು ಧಾರ್ಮಿಕ ಹಿಂಸಾಚಾರಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇನೆ ಎಂದು ಬೃಂದಾ ಕಾರಟ್ ಹೇಳಿದ್ದಾರೆ. ಆದರೆ ಸ್ಥಳೀಯ ಪೊಲೀಸ್ ಠಾಣೆಯು ತನ್ನ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ನೇರವಾಗಿ ದೆಹಲಿ ಪೊಲೀಸ್ ಕಮಿಷನರ್‌ಗೆ ಕಳುಹಿಸಬೇಕಾಯಿತು ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page