Tuesday, June 18, 2024

ಸತ್ಯ | ನ್ಯಾಯ |ಧರ್ಮ

ಹತ್ರಾಸ್‍ನ ‘ನ್ಯಾಯ’ ಪ್ರಕರಣ : ದಲಿತರನ್ನು ಕೊಂದು ದಕ್ಕಿಸಿ ಕೊಳ್ಳಬಹುದಾದ ವ್ಯವಸ್ಥೆ ನೆಲೆಗೊಳ್ಳುತ್ತಲೇ ಇದೆ.

2020 ರಲ್ಲಿ ಹಾತರಸ್‌ ನಲ್ಲಿ ನಡೆದ ಬರ್ಬರ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣಕ್ಕೆ  ಸಂಬಂಧಿಸಿ ತೀರ್ಪು ಹೊರಬಿದ್ದಿದೆ.  ಈ ದೇಶದಲ್ಲಿ ದಲಿತರು, ದಮನಿತರನ್ನು ಸಲೀಸಾಗಿ ಕೊಂದು ದಕ್ಕಿಸಿ ಕೊಳ್ಳಬಹುದು, ದಲಿತರ ಬದುಕು ಇನ್ನಷ್ಟೂ ಶೋಚನೀಯವಾಗಲಿದೆ ಎಂಬ ಆತಂಕಿತ ಸಂದೇಶವನ್ನು ಈ ತೀರ್ಪು ನೀಡಿದೆ. ಸದರಿ ತೀರ್ಪಿನ ಸುತ್ತ ಬರೆದಿದ್ದಾರೆ ಪತ್ರಕರ್ತ ಎನ್‌ ರವಿಕುಮಾರ್.

2020 ರ ಸೆ.14 ರಂದು  ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಯುವತಿಯ  ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತೀರ್ಪು ಪ್ರಕಟವಾಗಿದೆ.  ಎಲ್ಲಾ ನಾಲ್ವರು ಆರೋಪಿಗಳನ್ನು ಹತ್ರಾಸ್ ನ ವಿಶೇಷ ನ್ಯಾಯಾಲಯ  ಅತ್ಯಾಚಾರ ಮತ್ತು ಹತ್ಯೆಯ ಆರೋಪದಿಂದ ಮುಕ್ತಗೊಳಿಸಿದ್ದರೆ ಅವರಲ್ಲಿ ಓರ್ವನಿಗೆ ಮಾತ್ರ ಈ ಮೇಲಿನ ಆರೋಪಗಳಲ್ಲದ ಬೇರೊಂದು(304 ಐಪಿಸಿ) ಅಪರಾಧಕ್ಕಾಗಿ  ಜೀವಾವಧಿ ಶಿಕ್ಷೆ ನೀಡಿ  ಈಗ ತೀರ್ಪು ನೀಡಿದೆ.

ಬರ್ಬರವಾಗಿ ಹತ್ಯೆಯಾದ ಹತ್ರಾಸ್ ದಲಿತ ಹುಡುಗಿಯನ್ನು ನಾನು 1993 ರಲ್ಲಿ ತೆರೆಕಂಡ ರಾಜಕುಮಾರ್‌ ಸಂತೋಷಿಯ ನಿರ್ದೇಶನದ ಹಿಂದಿ ಸಿನಿಮಾದ ‘ಊರ್ಮಿ’ (ಊರ್ಮಿಳಾ) ಎಂದು ಭಾವಿಸಿಕೊಂಡಿದ್ದೇನೆ. ಇವಳು ಇಡೀ ದೇಶವೇ ಖಂಡಿಸಿ ಬೀದಿಗಿಳಿದು ಮೊಂಬತ್ತಿ ಹಚ್ಚಿಸಿಕೊಂಡ ‘ನಿರ್ಭಯಾ’ಳಾಗಲಿ, ಹೈದ್ರಾಬಾದ್‍ನಲ್ಲಿ ಸಜೀವ ದಹನಗೊಂಡು ಆರೋಪಿಗಳು ಎನ್‍ಕೌಂಟರ್‌ ನಲ್ಲಿ ಹತರಾದ ಪ್ರಕರಣದ ಎಲೈಟ್‍ಕ್ಲಾಸ್‍ನ ಹೆಣ್ಣುಮಗಳಂತಲ್ಲ.  ಹತ್ರಾಸ್‍ನ ಅಸಹಾಯಕ ದಲಿತ ಕುಟುಂಬದ  ಆ ಹುಡುಗಿ ದಾಮಿನಿ ಸಿನಿಮಾದಲ್ಲಿ ಬರುವ ಯಕಶ್ಚಿತ್ ‘ಊರ್ಮಿ’ ಅಷ್ಟೇ.

19  ವರ್ಷದ  ಊರ್ಮಿಯ  ಬೆನ್ನ ಮೂಳೆಗಳು  ನುಜ್ಜುಗುಜ್ಜಾಗಿದ್ದವು.  ಕೊರಳ ನರಳಗಳೊಳಗೆ ರಕ್ತ ಹೆಪ್ಪುಗಟ್ಟಿತ್ತು. ನಾಲಿಗೆ ತುಂಡಾಗಿ, ದೇಹವೆಲ್ಲಾ ಕಾಮುಕರ ದಾಳಿಗೆ ತುತ್ತಾಗಿ  ಗಾಯಗಳಿಂದ  ನಂಜಾಡುತ್ತಿದ್ದವು.  ಕೊನೆಯದಾಗಿ ಅಕೆಯ ತಲೆಗೆ ಕಲ್ಲಿನಿಂದ ಜಜ್ಜಿ ಬಿಟ್ಟು ಹೋಗಿದ್ದರು. ಈ ನತದೃಷ್ಟ ಹುಡುಗಿ ಅತ್ಯಾಚಾರದ ಅಮಾನುಷ ಕ್ರೌರ್ಯದಿಂದ ನರಳಿ, ನರಳಿ 15 ದಿನಗಳ ಕಾಲ ಸಾವಿನೊಂದಿಗೆ ಸೆಣಸಾಡುತ್ತಾ ಸೆ.29, 2020 ರಂದು  ದೆಹಲಿಯ ಅಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಕೊನೆಯುಸಿರೆಳೆದಿದ್ದಳು.

ಉತ್ತರಪ್ರದೇಶದ ಯೋಗಿ ಅದಿತ್ಯನಾಥ್‍ನ ಆಡಳಿತ ರಾಮರಾಜ್ಯದ ಅಮಲಿನಲ್ಲಿ ತೇಲುತ್ತಿರುವಾಗ ಹತ್ರಾಸ್  ಜಿಲ್ಲೆಯಲ್ಲಿ 2020 , ಸೆ. 14.  ಎಮ್ಮೆಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದ ಊರ್ಮಿ  ಸಾಮೂಹಿಕ ಅತ್ಯಾಚಾರ, ಹತ್ಯೆಯ ಕ್ರೌರ್ಯಕ್ಕೆ ತುತ್ತಾಗಿ ಬಿದ್ದಿದ್ದಳು.  ಅರೆಬರೆ ಜೀವಸ್ಥಿತಿಯಲ್ಲಿದ್ದ ಆಕೆಯನ್ನು ಹತ್ರಾಸ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಕರಣದ ಕುರಿತು ಹುಡುಗಿ ಕುಟುಂಬ ಪೊಲೀಸ್ ಠಾಣೆಗೆ ಎಡತಾಕಿದರೆ ಪೊಲೀಸರು ಕೇಸು ದಾಖಲಿಸಲು ನಿರಾಕರಿಸಿದರು.  ಆರು ದಿನಗಳ ಆನಂತರ ಚಾಂದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ಹಸಿದ  ತೋಳಗಳು ತಿಂದು ಹಾಕಿದ ದೇಹದ ಅವಶೇಷದಂತಿದ್ದ ಊರ್ಮಿ ಸೆ. 22 ರಂದು ಪೊಲೀಸರಿಗೆ ಹೇಳಿಕೆ ನೀಡಿ ತನ್ನ ಮೇಲೆ ನಡೆದ  ಅತ್ಯಾಚಾರ –ಘೋರ ಹಿಂಸೆಯನ್ನು ವಿವರಿಸುತ್ತಾಳೆ.  ಪೊಲೀಸರು ವಿಧಿಯಿಲ್ಲದೆ ಈ ಕೃತ್ಯ ಎಸಗಿದ ಬಲಾಢ್ಯ ಜಾತಿಯ ಲವಕುಶ್, ಸಂದೀಪ್, ರಾಮು, ರವಿ ಅವರುಗಳನ್ನು ಬಂಧಿಸುತ್ತಾರೆ. 

ಈ ದೇಶದಲ್ಲಿ ಕನಿಷ್ಠ ನ್ಯಾಯ, ಮತ್ತು ವೃತ್ತಿಪರತೆಗೆ ಬದ್ಧವಾಗಿರುವ ಮಾಧ್ಯಮಗಳು ಇರುವುದರಿಂದಲೇ ಈ ಪ್ರಕರಣ ಬಯಲಿಗೆ ಬರುತ್ತದೆ.  ದಲಿತ ಸಂಘಟನೆಗಳು, ವಿಪಕ್ಷಗಳು, ಮನುಷ್ಯರೆಸಿಕೊಂಡವರು  ಊರ್ಮಿ ಪ್ರಕರಣವನ್ನು ಖಂಡಿಸಿ ಬೀದಿಗಳಿಯುತ್ತವೆ.  ಆದರೆ  ಇಡೀ ಆಡಳಿತ  ವ್ಯವಸ್ಥೆಯೇ ಪೈಶಾಚಿಕ ಕೃತ್ಯ ನಡೆಸಿದವರ ರಕ್ಷಣೆಗೆ ನಿಂತಂತೆ ಭಾಸವಾಗುತ್ತದೆ.  ಆಸ್ಪತ್ರೆಯಲ್ಲಿ ಅಸುನೀಗಿದ ಊರ್ಮಿಯ ಶವವನ್ನು ಅವರ ಕುಟುಂಬಕ್ಕೆ ಕೊಡದೆ ಅವರ ಅನುಮತಿಯನ್ನೂ ಕೇಳದೆ ಪೊಲೀಸರೆ ರಾತ್ರೋರಾತ್ರಿ ಸುಟ್ಟು  ಹಾಕುತ್ತಾರೆ. ಇದರ ವರದಿಗೆ ಹೋದ ಪತ್ರಕರ್ತರನ್ನು ಊರ ಒಳಗೆ ಬಿಡದಂತೆ ನಿರ್ಬಂಧಿಸಲಾಗುತ್ತದೆ.

ಊರ್ಮಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಹೊರಟ ಕಾಂಗ್ರೆಸ್ ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ವಿಪಕ್ಷಗಳ  ನಾಯಕರುಗಳನ್ನು ಬಂಧಿಸಿ ಹತ್ರಾಸ್ ಗೆ ಹೋಗದಂತೆ ತಡೆಯಲಾಗುತ್ತದೆ.  ದೆಹಲಿಯ ಪತ್ರಕರ್ತ ಕೇರಳ ಮೂಲದ ಸಿದ್ದಿಕಿ ಕಪ್ಪನ್ ನನ್ನು ಬಂಧಿಸಿ ದೇಶದ್ರೋಹದ ಕೇಸು ಹಾಕಿ ವರ್ಷಗಟ್ಟಲೆ ಜೈಲಿನಲ್ಲಿಡಲಾಗುತ್ತದೆ.

ಊರ್ಮಿಯ ಸಾವಿನ ಕ್ರೌರ್ಯಕ್ಕಿಂತ ಭೀಕರವಾದದ್ದು ಎಂದರೆ ಯೋಗಿ ಆದಿತ್ಯನಾಥ್ ಅಡಳಿತದಲ್ಲಿ ಊರ್ಮಿ ಪ್ರಕರಣದ ಆರೋಪಿಗಳ ಪರವಾಗಿ ಬಲಾಢ್ಯ ಠಾಕೂರ್ ಸಮುದಾಯ ಪ್ರತಿಭಟನೆ ನಡೆಸಿದ್ದು ಈ ದೇಶದಲ್ಲಿ ಜಾತಿವ್ಯವಸ್ಥೆ ಎಷ್ಟೊಂದು  ಪ್ರಜ್ಞಾಪೂರ್ವಕ ದರ್ಪವನ್ನು ಮೆರೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.  ಕರ್ಣಸೇನಾ, ರಾಷ್ಟ್ರೀಯ ಸ್ವರ್ಣ ಪರಿಷದ್ ಹೆಸರಿನಲ್ಲಿ ಮೇಲ್ಜಾತಿಗಳು  ಊರ್ಮಿಯ ಪ್ರಕರಣದ ಆರೋಪಿಗಳ ಪರವಾಗಿ ಬೀದಿಗಿಳಿದಿದ್ದವು. ಆರ್ ಎಸ್ ಎಸ್, ಬಜರಂಗದಳಗಳು ಬಹಿರಂಗವಾಗಿ ಬೆಂಬಲ ನೀಡುವ ಮೂಲಕ ಪರಂಪರಾಗತ ನಿರ್ಲಜ್ಜ ಧೋರಣೆಯನ್ನು ಪ್ರದರ್ಶಿಸಿದವು. ಇದರ ಹಿಂದೆ ಉತ್ತರ ಪ್ರದೇಶದ ಸರ್ಕಾರ ಬೆಂಬಲವಾಗಿ ನಿಂತದ್ದು ಬಹಿರಂಗ ರಹಸ್ಯ!. ಇಡಿ ವ್ಯವಸ್ಥೆಯೇ ಬಲಾಢ್ಯರ ರಕ್ಷಣೆಗೆ ನಿಂತಾಗ  ಅಲಹಾಬಾದ್ ನ್ಯಾಯಾಲಯ ಊರ್ಮಿ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು ಒಂದು ಭರವಸೆಯಾಗಿ ಕಂಡಿತೆನ್ನಬಹುದು.  ಯೋಗಿ ಸರ್ಕಾರಕ್ಕೆ ಹಿನ್ನಡೆಯಾಗಿ ಮುಖ ಉಳಿಸಿಕೊಳ್ಳಲು ಹತ್ರಾಸ್ ನ ಎಸ್ಪಿಯನ್ನು ಅಮಾನತು ಗೊಳಿಸುವ ಪ್ರಹಸನವೂ ನಡೆದು ಹೋಯಿತು.  ಸಿಬಿಐ ತನಿಖೆಯಲ್ಲಿ ಊರ್ಮಿ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆದಿರುವುದನ್ನು ತನ್ನ ಚಾರ್ಜ್‌ ಶೀಟ್ ನಲ್ಲಿ ವಿವರವಾಗಿ  ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಹೀಗಿದ್ದೂ ರೇಪ್, ಕೊಲೆ ಮತ್ತು ಅಟ್ರಾಸಿಟಿ ಕೇಸುಗಳಡಿಯಲ್ಲಿ ಎರಡೂವರೆ ವರ್ಷಗಳ ಕಾಲ ನಡೆದ ಈ ಪ್ರಕರಣದ ವಿಚಾರಣೆಯಲ್ಲಿ ಕೊನೆಗೂ ಊರ್ಮಿಗೆ ನ್ಯಾಯ ದಕ್ಕಲಿಲ್ಲ.

ಹತ್ರಾಸ್‍ನ ವಿಶೇಷ ನ್ಯಾಯಾಲಯ  ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದರೆ, ಓರ್ವನಿಗೆ ಮಾತ್ರ ಇಲ್ಲದ ಕಾರಣಕ್ಕೆ ಶಿಕ್ಷೆ ವಿಧಿಸಿದೆ. ಊರ್ಮಿಗೆ ಈ ಹಂತದಲ್ಲಿ ನ್ಯಾಯ ಸಿಕ್ಕಿಲ್ಲ. ಒಂದು ತೀರ್ಪು ಪ್ರಕಟವಾಗಿದೆ ಅಷ್ಟೆ.  ಪ್ರಾಸಿಕ್ಯೂಶನ್, ಸಿಬಿಐ ತನಿಖೆಯ ಅರೋಪ ಪಟ್ಟಿಯನ್ನು ಸಮರ್ಥವಾಗಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಎಡವಿರುವುದು ಸ್ಪಷ್ಟವಾಗಿದೆ ಎಂದಷ್ಟೆ ಈ ಸಂದರ್ಭದಲ್ಲಿ ಹೇಳಬಹುದು.

ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ, ಅತ್ಯಾಚಾರ, ಹತ್ಯೆ ಪ್ರಕರಣಗಳಲ್ಲಿ ಆರೋಪ‌ ಸಾಬೀತಾಗಿ ಶಿಕ್ಷೆಗೆ ಗುರಿಯಾಗುವ ಪ್ರಕರಣಗಳ ಸಂಖ್ಯೆ ಕೇವಲ ಶೇ. 15.4 ರಷ್ಟು ಮಾತ್ರ. ಉಳಿದ ಶೇ. 84.6 ರಷ್ಟು ಪ್ರಕರಣಗಳಲ್ಲಿ ಅಪರಾಧಿಗಳು ತಪ್ಪಿಸಿ ಕೊಳ್ಳುತ್ತಾರೆ.  ಈ ದೇಶದಲ್ಲಿ ಪ್ರತಿ ಆರು ನಿಮಿಷಕ್ಕೆ ಓರ್ವ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ಅಥವಾ ಹತ್ಯೆ ನಡೆಯುತ್ತದೆ. ಎಲ್ಲಾ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಹಂತದಲ್ಲೆ ಅವುಗಳನ್ನು ಸಮಾಧಿ ಗೊಳಿಸಲಾಗುತ್ತದೆ. 

ಊರ್ಮಿ ಪ್ರಕರಣದ  ಹಿನ್ನಡೆಯನ್ನು  ಕೇವಲ ನ್ಯಾಯದಾನದ ಪ್ರಕ್ರಿಯೆಗೆ ಸೀಮಿತಗೊಳಿಸಿ ನೋಡುವಂತಿಲ್ಲ. ಸಾಮಾಜಿಕವಾಗಿ ಇಂತಹ ತೀರ್ಪುಗಳಿಂದ ಉತ್ತೇಜಿತವಾಗಬಹುದಾದ ಜಾತಿ ಆಧಾರಿತ ಕ್ರೌರ್ಯಗಳು, ಅವುಗಳನ್ನು ಮುಚ್ಚಿ ಹಾಕಲು ಮುಂದಾಗುವ  ಪ್ರಭುತ್ವದ ದ್ರೋಹಗಳು, ಮತ್ತು ಬೆಂಬಲಿಸುವ ಆರ್ ಎಸ್ ಎಸ್ ಸೇರಿದಂತೆ ಜಾತಿ ಸಂಘಟನೆಗಳ  ಸಂವೇದನಾ ರಹಿತ ಧೋರಣೆಗಳ ಬಗ್ಗೆ ಆತಂಕ ಪಡಬೇಕಾಗುತ್ತದೆ.  ಈ ದೇಶದಲ್ಲಿ ದಲಿತರು, ದಮನಿತರನ್ನು ಸಲೀಸಾಗಿ ಕೊಂದು ದಕ್ಕಿಸಿಕೊಂಡು ಬಿಡಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ.  ದಲಿತರನ್ನು ಕೊಂದು ದಕ್ಕಿಸಿಕೊಳ್ಳಬಹುದಾದ ‘ವ್ಯವಸ್ಥೆ’ ನೆಲೆಗೊಳ್ಳುತ್ತಲೆ ಇದೆ. ಅವುಗಳ ಸಾಲಿಗೆ ಹತ್ರಾಸ್‍ನ  ದಲಿತ ಊರ್ಮಿಯ ಪ್ರಕರಣವೂ ಒಂದು ಎನ್ನಬಹುದು. ಜಾಗತಿಕವಾಗಿ ಭಾರತ ವಿಶ್ವಗುರುವೆಂಬ ಭ್ರಮೆಗೆ ದೂಡುವ  ಹುಸಿ ರಾಜಕಾರಣದೊಳಗೆ ಈ ದೇಶದ ದಲಿತರು ದಮನಿತರ ಅತ್ಯಾಚಾರ, ಹತ್ಯೆಗಳು,  ಕಣ್ಣೀರು, ಅಕ್ರಂದನವನ್ನು  ಭಾರತಮಾತೆಯ ಕಿರೀಟ ಕಲಶದಂತೆ   ವಿಜೃಂಭಿಸಲಾಗುತ್ತಿದೆ!        

ಎನ್.ರವಿಕುಮಾರ್

ಪತ್ರಕರ್ತರು

Related Articles

ಇತ್ತೀಚಿನ ಸುದ್ದಿಗಳು