Home ಅಪರಾಧ ಹಾವೇರಿ : ಮನೆಯಿಂದ ಕೆಲಸ ಅಂತ ಮೋಸ, ಕೋಟ್ಯಾಂತರ ಹಣದೊಂದಿಂದಿಗೆ ಪರಾರಿ

ಹಾವೇರಿ : ಮನೆಯಿಂದ ಕೆಲಸ ಅಂತ ಮೋಸ, ಕೋಟ್ಯಾಂತರ ಹಣದೊಂದಿಂದಿಗೆ ಪರಾರಿ

ಹಾವೇರಿ : ಇತ್ತೀಚಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡಿ ಎಂದು ಆಸೆ ತೋರಿಸಿ ಮೋಸ ಮಾಡಿರುವ ಅನೇಕ ಘಟನೆಗಳು ನಡೆದಿದೆ. ಇದೇ ರೀತಿಯ ಜಾಹೀರಾತು ನಂಬಿದ (Job Scam) ನೂರಾರು ಜನರು ದೊಡ್ಡ ವಂಚನೆಗೆ ಸಿಲುಕಿರುವ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸ್ವಯಂ ಉದ್ಯೋಗದ ಆಸೆ ತೋರಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ ಕಂಪನಿಯೊಂದು ರಾತ್ರೋರಾತ್ರಿ ಬಾಗಿಲು ಮುಚ್ಚಿ ಪರಾರಿಯಾಗಿದೆ.

‘SLV ಮಹಿಳಾ ಮಾರ್ಟ್’ ಹೆಸರಲ್ಲಿ ದೋಖಾ
ಹಾವೇರಿಯ ಅಶ್ವಿನಿ ನಗರದಲ್ಲಿದ್ದ ‘SLV ಮಹಿಳಾ ಮಾರ್ಟ್’ ಎಂಬ ಸಂಸ್ಥೆಯೇ ಈ ವಂಚನೆ ಎಸಗಿದೆ. ವಿನಾಯಕ ಆನ್ವೇರಿ ಹಾಗೂ ರಮ್ಯ ಎಂಬುವವರು ಈ ಕಂಪನಿಯ ಮಾಲೀಕರಾಗಿದ್ದು, ಮನೆಯಲ್ಲೇ ಕುಳಿತು ಅಗರಬತ್ತಿ, ಕಸಬರಗಿ ಹಾಗೂ ಮೇಣದಬತ್ತಿಗಳನ್ನು ಪ್ಯಾಕ್ ಮಾಡುವ ಸುಲಭದ ಮನೆ ಕೆಲಸ ನೀಡುವುದಾಗಿ ನಂಬಿಸಿದ್ದರು. ಈ ಕೆಲಸಕ್ಕಾಗಿ ಆರಂಭದಲ್ಲಿ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದ್ದರು. ಜನರ ನಂಬಿಕೆ ಗಳಿಸಲು ಆರಂಭದ ಒಂದೆರಡು ತಿಂಗಳು ಹೂಡಿಕೆ ಮಾಡಿದವರಿಗೆ ಸರಿಯಾಗಿ ಹಣ ಹಾಗೂ ಕಮಿಷನ್ ನೀಡಿ ನಾಟಕವಾಡಿದ್ದರು.

5 ರಿಂದ 10 ಕೋಟಿ ಲಪಟಾಯಿಸಿ ಪರಾರಿ
ಇದನ್ನು ನಿಜವೆಂದು ನಂಬಿ ಹಾವೇರಿ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ನೂರಾರು ಮಹಿಳೆಯರು ಲಕ್ಷಾಂತರ ರೂಪಾಯಿ ಹಣವನ್ನು ತಂದು, ಲಾಭದ ಆಸೆಗೆ ಹೂಡಿಕೆ ಮಾಡಿದ್ದಾರೆ. ಹೀಗೆ ನೂರಾರು ಜನರಿಂದ ಅಂದಾಜು 5 ರಿಂದ 10 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹವಾಗುತ್ತಿದ್ದಂತೆಯೇ ಮಾಲೀಕರಾದ ವಿನಾಯಕ ಮತ್ತು ರಮ್ಯ ಕಂಪನಿಗೆ ಬೀಗಹಾಕಿ, ಮಾಯವಾಗಿದ್ದಾರೆ. ಇದೀಗ, ಹೂಡಿಕೆ ಮಾಡಿರುವ ಮಹಿಳೆಯರು ಬೀದಿಪಾಲಾಗಿದ್ದು, ಕಷ್ಟಪಟ್ಟು ದುಡಿದ ಹಣವನ್ನ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ಅದರ ಜೊತೆಗೆ ಕೆಲಸ ಮಾಡಿದ ಕೂಲಿ ಸಿಗದೆ ಸಹ ಪರದಾಡುತ್ತಿದ್ದಾರೆ.

ಸದ್ಯ ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ನೂರಾರು ಮಹಿಳೆಯರು ಹಾವೇರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ವಂಚಕ ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ಅಧಿಕೃತ ದೂರು ದಾಖಲು ಮಾಡಿದ್ದಾರೆ. ನಾವು ಜೀವನಪೂರ್ತಿ ಕಷ್ಟಪಟ್ಟು ದುಡಿದ ಹಣವನ್ನ ದೋಚಿರುವ ಮೋಸಗಾರರನ್ನು ತಕ್ಷಣವೇ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹ ಮಾಡಿದ್ದಾರೆ.  ಸದ್ಯ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

You cannot copy content of this page

Exit mobile version