Home ದೇಶ ತಮ್ಮದೇ ಸಂಪುಟದ ಐವರು ಸಚಿವರ ವಿರುದ್ಧ ಸ್ಟಿಂಗ್ ನಡೆಸಿದವರ ಜತೆ ಡಿ‌ ಕೆ ಶಿವಕುಮಾರ್ ರಹಸ್ಯ...

ತಮ್ಮದೇ ಸಂಪುಟದ ಐವರು ಸಚಿವರ ವಿರುದ್ಧ ಸ್ಟಿಂಗ್ ನಡೆಸಿದವರ ಜತೆ ಡಿ‌ ಕೆ ಶಿವಕುಮಾರ್ ರಹಸ್ಯ ಸಭೆ ನಡೆಸಿದ್ದಾರೆ: ಎಚ್‌ಡಿಕೆ ಆರೋಪ

0

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ‘ಸ್ಟಿಂಗ್ ಆಪರೇಷನ್’ ಅಸ್ತ್ರ ಪ್ರಯೋಗಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ತಮ್ಮ ವಾಗ್ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಬೆಂಗಳೂರಿನ ಪಂಚತಾರಾ ಹೋಟೆಲೊಂದರಲ್ಲಿ ಸ್ಟಿಂಗ್ ಆಪರೇಷನ್‌ಗಳಲ್ಲಿ ಶಾಮೀಲಾಗಿರುವ ವ್ಯಕ್ತಿಯೊಂದಿಗೆ ಮುಖ್ಯಮಂತ್ರಿಗಳು ಗಂಟೆಗಳ ಕಾಲ ಸುದೀರ್ಘ, ಖಾಸಗಿ ಸಭೆ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಗಳು ಪಂಚತಾರಾ ಹೋಟೆಲ್‌ನಲ್ಲಿ ಸ್ಟಿಂಗ್ ಆಪರೇಷನ್ ಮಾಡುವ ವ್ಯಕ್ತಿಯನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆ ವ್ಯಕ್ತಿ ಯಾರು? ಆತನೊಂದಿಗೆ ಸಿಎಂಗೆ ಇರುವ ಸಂಬಂಧವೇನು? ಆತನ ಮೂಲಕ ಯಾರನ್ನು ಟಾರ್ಗೆಟ್ ಮಾಡಲಾಗಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಉತ್ತರಿಸಬೇಕು,” ಎಂದು ಆಗ್ರಹಿಸಿದರು.

ಅಷ್ಟೇ ಅಲ್ಲದೆ, “ಈ ಭೇಟಿಯ ನಂತರ ಸಿಎಂ ತಮ್ಮ ಸಚಿವ ಸಂಪುಟದ ಐವರು ಸಹೋದ್ಯೋಗಿಗಳಿಗೆ ನೀವೇ ಇಂತಹ ಕಾರ್ಯಾಚರಣೆಯ ಟಾರ್ಗೆಟ್ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಒಂದು ವೇಳೆ ಈ ಸಚಿವರ ವಿರುದ್ಧ ಸ್ಟಿಂಗ್ ನಡೆದಿರುವುದು ನಿಜವೇ ಆಗಿದ್ದರೆ, ಅವರು ಇನ್ನೂ ಸಂಪುಟದಲ್ಲಿ ಮುಂದುವರಿಯುತ್ತಿರುವುದು ಏಕೆ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಎಸ್‌ಐಟಿ ತನಿಖೆಗೆ ಆದೇಶಿಸಲು ಹಿಂಜರಿಕೆ ಏಕೆ?:

ತಮ್ಮ ವಿರುದ್ಧವೇ ಸ್ಟಿಂಗ್ ನಡೆಸಲು ಯತ್ನಿಸಲಾಗಿದೆ ಎಂಬ ಮುಖ್ಯಮಂತ್ರಿಯವರ ಹೇಳಿಕೆಯನ್ನು ತಳ್ಳಿಹಾಕಿದ ಕೇಂದ್ರ ಸಚಿವರು, “ಸಿಎಂ ಸ್ವತಃ ತಮ್ಮ ವಿರುದ್ಧ ಸ್ಟಿಂಗ್ ನಡೆದಿದೆ ಎನ್ನುವುದಾದರೆ, ಅಲ್ಲಿ ನಿಜವಾಗಿ ಏನಾಯಿತು ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಮಾಧ್ಯಮದ ಸೋಗಿನಲ್ಲಿರುವ ವ್ಯಕ್ತಿಯೊಬ್ಬನನ್ನು ರಕ್ಷಿಸುತ್ತಾ ರಾಜಕೀಯ ವಿರೋಧಿಗಳನ್ನು ಹಣಿಯಲು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಬಳಿ ಪೊಲೀಸ್ ವ್ಯವಸ್ಥೆಯಿದೆ, ₹35 ಲಕ್ಷ ಬಹುಮಾನ ಪಡೆದ ಎಸ್‌ಐಟಿ (SIT) ಇದೆ. ಹೀಗಿದ್ದರೂ ಈ ಕುರಿತು ಸಮಗ್ರ ಎಸ್‌ಐಟಿ ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ಹಿಂಜರಿಕೆ ಏಕೆ?” ಎಂದು ಆಕ್ರೋಶ ಹೊರಹಾಕಿದರು.

ಕಳೆದ ಬುಧವಾರ (ಅಕ್ಟೋಬರ್ 7) ಡಿ.ಕೆ. ಶಿವಕುಮಾರ್ ಅವರನ್ನು “ಸ್ಟಿಂಗ್ ಆಪರೇಷನ್‌ಗಳ ಮಾಸ್ಟರ್” ಎಂದು ಕರೆದಿದ್ದ ಕುಮಾರಸ್ವಾಮಿ, “ಹಿಂದೆ ಸಿದ್ದರಾಮಯ್ಯ ವಿರುದ್ಧವೇ ಸ್ಟಿಂಗ್ ನಡೆಸಿ ಹೈಕಮಾಂಡ್‌ಗೆ ಮನವರಿಕೆ ಮಾಡಿ ಅವರನ್ನು ಪದಚ್ಯುತಗೊಳಿಸಲಾಗಿತ್ತು ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಹರಿದಾಡಿದ್ದವು” ಎಂದು ಆರೋಪಿಸಿದ್ದರು. ಇದೀಗ ಹೊಸ ಆರೋಪಗಳ ಮೂಲಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ಬಿರುಗಾಳಿ ಎಬ್ಬಿಸಿದ್ದಾರೆ.

You cannot copy content of this page

Exit mobile version