Home ರಾಜ್ಯ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಆಪಾದಿತ ಸ್ಟಿಂಗ್ ಆಪರೇಷನ್ ಕುರಿತು ತನಿಖೆಗೆ ಎಚ್.ಡಿ. ಕುಮಾರಸ್ವಾಮಿ ಪಟ್ಟು!

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಆಪಾದಿತ ಸ್ಟಿಂಗ್ ಆಪರೇಷನ್ ಕುರಿತು ತನಿಖೆಗೆ ಎಚ್.ಡಿ. ಕುಮಾರಸ್ವಾಮಿ ಪಟ್ಟು!

0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆದಿದೆ ಎನ್ನಲಾದ ಆಪಾದಿತ ‘ಸ್ಟಿಂಗ್ ಆಪರೇಷನ್’ ಕುರಿತು ರಾಜ್ಯ ಸರ್ಕಾರವು ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಆಗ್ರಹಿಸಿದ್ದಾರೆ. ಸರ್ಕಾರ ತಕ್ಷಣವೇ ತನಿಖೆಗೆ ಆದೇಶಿಸಿ, ಈ ಸಂಚಿನ ಹಿಂದಿರುವ ಸೂತ್ರಧಾರಿಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, “‘ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ’ ಎಂದು ಹೇಳಿ ವಿಷಯವನ್ನು ಹಾರಿಕೆ ಮಾಡುವುದನ್ನು ಬಿಟ್ಟು, ಮುಖ್ಯಮಂತ್ರಿಗಳು ನೇರವಾಗಿ ತನಿಖೆಗೆ ಆದೇಶ ನೀಡಬೇಕು. ಸಿದ್ದರಾಮಯ್ಯ ಅವರೇ ಸತ್ಯ ಹೊರಬರಲಿ ಎಂದು ಬಯಸಿದ್ದಾರೆ ಎಂಬ ವರದಿಗಳಿದ್ದರೂ ಸರ್ಕಾರ ತನಿಖೆ ಆರಂಭಿಸಲು ಏಕೆ ಮೀನಮೇಷ ಎಣಿಸುತ್ತಿದೆ? ಈ ಆಪರೇಷನ್‌ನ ಹಿಂದಿರುವವರು ಯಾರು? ಎಂಬ ಪ್ರಶ್ನೆಗಳಿಗೆ ಸರ್ಕಾರ ಜನರಿಗೆ ಉತ್ತರಿಸಲೇಬೇಕು,” ಎಂದು ತರಾಟೆಗೆ ತೆಗೆದುಕೊಂಡರು.

ರಾಜಕೀಯವಾಗಿ ಸಿದ್ದರಾಮಯ್ಯ ಅವರೊಂದಿಗೆ ತಮಗೆ ಹಲವು ಭಿನ್ನಾಭಿಪ್ರಾಯಗಳಿದ್ದರೂ, ಮಾಜಿ ಮುಖ್ಯಮಂತ್ರಿಯೊಬ್ಬರ ತೇಜೋವಧೆ ಮಾಡಲು ಇಂತಹ ಷಡ್ಯಂತ್ರ ನಡೆದಿದ್ದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದ ಕುಮಾರಸ್ವಾಮಿ, “ಇದು ಸಿದ್ದರಾಮಯ್ಯ ಅವರ ಮೇಲಿನ ಅನುಕಂಪದ ಪ್ರಶ್ನೆಯಲ್ಲ. ಸತ್ಯ ಏನು ಎಂಬುದನ್ನು ಬಯಲಿಗೆಳೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯ ಪ್ರಶ್ನೆ,” ಎಂದು ಸ್ಪಷ್ಟಪಡಿಸಿದರು.

ಕ್ಯಾಬಿನೆಟ್ ಗೌಪ್ಯತೆ ಮತ್ತು ಭದ್ರತೆ ಕುರಿತು ಪ್ರಶ್ನೆ:

ಆಪಾದಿತ ಸ್ಟಿಂಗ್ ಕಾರ್ಯಾಚರಣೆಗೆ ಸಂಬಂಧಿಸಿದ ಕಡತವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ಸಭೆಗೆ ಕೊಂಡೊಯ್ದಿದ್ದರು ಎಂಬ ವರದಿಗಳನ್ನು ಪ್ರಸ್ತಾಪಿಸಿದ ಅವರು, “ಸಂಪುಟ ಸಭೆಯ ಚರ್ಚೆಗಳು ಅತ್ಯಂತ ಗೌಪ್ಯವಾಗಿರುತ್ತವೆ. ಹಾಗಾದರೆ ಈ ವಿಷಯ ಮಾಧ್ಯಮಗಳಿಗೆ ಹೇಗೆ ಸೋರಿಕೆಯಾಯಿತು? ಈ ವಿಚಾರವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವ ಬದಲು, ನೈಜ ಸತ್ಯಾಂಶಗಳನ್ನು ಜನರ ಮುಂದೆ ಇಡಲಿ,” ಎಂದರು.

ಇದೇ ವೇಳೆ, ಉತ್ತರ ಪ್ರದೇಶದ ವ್ಯಕ್ತಿಗಳು, ಕೇಂದ್ರ ಸಚಿವರು ಅಥವಾ ಬಿಜೆಪಿ ನಾಯಕರ ಪಾತ್ರದ ಕುರಿತ ಆರೋಪಗಳನ್ನೂ ಒಳಗೊಂಡು ಎಲ್ಲ ಆಯಾಮಗಳಿಂದ ತನಿಖೆ ನಡೆಯಬೇಕು. ಜೊತೆಗೆ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾನೆನ್ನಲಾದ ವ್ಯಕ್ತಿಗೆ ಸರ್ಕಾರಿ ಭದ್ರತೆ ಮತ್ತು ಪೊಲೀಸ್ ರಕ್ಷಣೆ ನೀಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ಮುಖ್ಯಮಂತ್ರಿಗಳು ಸಿಂಹಾಸನದ ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿದ್ದನ್ನು ಲೇವಡಿ ಮಾಡಿದ ಕುಮಾರಸ್ವಾಮಿ, “ವಿವಾದಕ್ಕೆ ಉತ್ತರಿಸುವ ಬದಲು ಅರಮನೆಯಲ್ಲಿ ಫೋಟೋಶೂಟ್ ನಡೆಸುವುದರಲ್ಲಿ ಸಿಎಂ ಬ್ಯುಸಿಯಾಗಿದ್ದಾರೆ. ಅತಿಯಾದ ವಿನಯದ ಪ್ರದರ್ಶನವು ಕೆಲವೊಮ್ಮೆ ಬೇರೆ ಉದ್ದೇಶಗಳನ್ನು ಮುಚ್ಚಿಡುವ ತಂತ್ರವಾಗಿರುತ್ತದೆ,” ಎಂದು ಚಾಟಿ ಬೀಸಿದರು.

You cannot copy content of this page

Exit mobile version