ಕರ್ನಾಟಕದ ಇತಿಹಾಸದಲ್ಲೇ ಇದು ಅತ್ಯಂತ ಭ್ರಷ್ಟ ಸರ್ಕಾರ, ರಾಜ್ಯ ಉಳಿಸಲು ಪಾದಯಾತ್ರೆ: ಸಚಿವ ಎಚ್.ಡಿ. ಕುಮಾರಸ್ವಾಮಿ

ದೆಹಲಿ: ಕರ್ನಾಟಕದ ರಾಜಕೀಯ ಮತ್ತು ಆಡಳಿತದ ಇತಿಹಾಸದಲ್ಲೇ ಹಾಲಿ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಹಾಗೂ ಪರಮ ಭ್ರಷ್ಟ ಸರ್ಕಾರವಾಗಿದ್ದು, ರಾಜ್ಯವನ್ನು ಉಳಿಸುವ ಉದ್ದೇಶದಿಂದಲೇ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಉತ್ತರ ಕರ್ನಾಟಕ ಭಾಗದಲ್ಲಿ 10 ದಿನಗಳ ಪಾದಯಾತ್ರೆ ಆರಂಭಿಸಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇಡೀ ದೇಶಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸಲು ಹಾಗೂ ರಾಜ್ಯದ ಹಿತರಕ್ಷಣೆಗಾಗಿ ಈ ಹೋರಾಟಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ದೇಶದ ಆರ್ಥಿಕ ಪ್ರಗತಿಯ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಜಿಡಿಪಿ (GDP) ಬೆಳವಣಿಗೆ ಸಾಧಿಸಿರುವುದು ಹಣಕಾಸು ಸಚಿವಾಲಯದ ಮಹತ್ತರ ಸಾಧನೆ ಎಂದು ಶ್ಲಾಘಿಸಿದರು. ಜಾಗತಿಕವಾಗಿ ಯುದ್ಧದ ಬಿಕ್ಕಟ್ಟು ಮತ್ತು ಹಲವು ಸವಾಲುಗಳ ನಡುವೆಯೂ ಭಾರತ ಈ ಗಮನಾರ್ಹ ಮೈಲಿಗಲ್ಲು ತಲುಪಿದೆ, ಅಲ್ಲದೆ ಹಣಕಾಸು ವರ್ಷದ ಅಂತ್ಯದ ವೇಳೆಗೆ ಜಿಡಿಪಿ ದರ ಶೇಕಡಾ 10 ಕ್ಕಿಂತಲೂ ಹೆಚ್ಚು ತಲುಪುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಟೀಕೆಗಳಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, “ಭಾರತದ ಆರ್ಥಿಕತೆಯು ಎಂದಿಗೂ ಸತ್ತ ಆರ್ಥಿಕತೆಯಲ್ಲ, ಅದು ಹೊಸ ದಾಖಲೆಯತ್ತ ಮುನ್ನಡೆಯುತ್ತಿದೆ. ಆದರೆ, ಇಂತಹ ಅಪಪ್ರಚಾರಗಳಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷವು ಭವಿಷ್ಯದಲ್ಲಿ ಶೂನ್ಯ ಪಕ್ಷವಾಗಿ (Zero Party) ಮಾರ್ಪಡಲಿದೆ” ಎಂದು ವಾಗ್ದಾಳಿ ನಡೆಸಿದರು.

Related Articles

ಇತ್ತೀಚಿನ ಸುದ್ದಿಗಳು