ಕೆಲಸದ ಒತ್ತಡದಿಂದ ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರು ಕುರ್ಚಿಯಲ್ಲೇ ಕುಸಿದು ಬಿದ್ದಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ಮಂಗಳವಾರ ನಡೆದಿದೆ. ಗೋಮತಿನಗರದ ಖಾಸಗಿ ಬ್ಯಾಂಕ್ ನಲ್ಲಿ ಹೆಚ್ಚುವರಿ ಉಪ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿರುವ ಸದಾಫ್ ಫಾತಿಮಾ ಕಳೆದ ಮಂಗಳವಾರ ಕಚೇರಿಗೆ ಬಂದಿದ್ದರು.
ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕುರ್ಚಿಯಲ್ಲೇ ಕುಸಿದು ಬಿದ್ದಿದ್ದಾರೆ. ಸಹೋದ್ಯೋಗಿಗಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ವೈದ್ಯರು ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಫಾತಿಮಾ ಅವರಿಗೆ ಇತ್ತೀಚೆಗಷ್ಟೇ ಹೆಚ್ಚುವರಿ ಉಪ ಉಪಾಧ್ಯಕ್ಷರಾಗಿ ಬಡ್ತಿ ಸಿಕ್ಕಿತ್ತು.
ಅಂದಿನಿಂದ ಅವರು ತೀವ್ರ ಕೆಲಸದ ಒತ್ತಡಕ್ಕೆ ಒಳಗಾಗಿದ್ದರು ಎನ್ನುತ್ತಾರೆ ಅವರ ಸಹೋದ್ಯೋಗಿಗಳು. ಈ ಘಟನೆಗೆ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಆರ್ಥಿಕ ಗುರಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಇದು ನೌಕರರ ಮೇಲೆ ತೀವ್ರ ಒತ್ತಡಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದರು. ಇದನ್ನು ತಡೆಗಟ್ಟಲು ಕೆಲಸದ ಸ್ಥಳಗಳಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ.