Home ರಾಜ್ಯ ಶಿವಮೊಗ್ಗ ಕನಕಪುರ ಬಂಡೆ ಎಂದು ಎಲ್ಲೆಲ್ಲಿ ನನ್ನ ಕತ್ತು ಕೊಯ್ದಿದ್ದಾರೆ ಎನ್ನುವುದು ಗೊತ್ತು – ಎಚ್.ಡಿ. ಕುಮಾರಸ್ವಾಮಿ

ಕನಕಪುರ ಬಂಡೆ ಎಂದು ಎಲ್ಲೆಲ್ಲಿ ನನ್ನ ಕತ್ತು ಕೊಯ್ದಿದ್ದಾರೆ ಎನ್ನುವುದು ಗೊತ್ತು – ಎಚ್.ಡಿ. ಕುಮಾರಸ್ವಾಮಿ

0
the news minut

ಶಿವಮೊಗ್ಗ: ಇಂದಿನ ರಾಜಕಾರಣದಲ್ಲಿ ಅಭಿವೃದ್ಧಿ ವಿಷಯ ಚರ್ಚೆಗೆ ಸಿಗುತ್ತಿಲ್ಲ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರದ ಆಡಳಿತ ವೈಫಲ್ಯ, ಪೊಲೀಸ್ ವ್ಯವಸ್ಥೆಯ ದುರ್ಬಳಕೆ ಮತ್ತು ವೈಯಕ್ತಿಕ ರಾಜಕೀಯದ ಬಗ್ಗೆ ಅವರು ಹರಿಹಾಯ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಇಲಾಖಾವಾರು ಬಜೆಟ್‌ನ ಅನುದಾನವನ್ನು ಸಹ ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. “ಎಲ್ಲಾ ಇಲಾಖೆಗಳ ಸ್ಥಿತಿ ದಯನೀಯವಾಗಿದೆ. ಯೋಜನೆಗಳಿಗೆ ಶೇ. 40-45 ರಷ್ಟು ಅನುದಾನ ತಲುಪಲು ಸಾಧ್ಯವಾಗಿಲ್ಲ. ತೆರಿಗೆ ಸಂಗ್ರಹದಲ್ಲೂ ಸರ್ಕಾರ ವಿಫಲವಾಗಿದ್ದು, ₹15 ಸಾವಿರ ಕೋಟಿ ನಷ್ಟವಾಗುವ ಮಾಹಿತಿ ಇದೆ,” ಎಂದು ಆರೋಪಿಸಿದರು.

ಶಾಲಾ ಕಟ್ಟಡಗಳ ಸಮಸ್ಯೆಗಳಿದ್ದರೂ ಸರ್ಕಾರ ಗಮನ ಕೊಟ್ಟಿಲ್ಲ. 65,000 ಶಿಕ್ಷಕರ ಕೊರತೆಯನ್ನು ನೀಗಿಸಿಲ್ಲ. ಸಿಎಸ್ಆರ್ (CSR) ಅನುದಾನದಲ್ಲಿ ಸಾವಿರ ಪಬ್ಲಿಕ್ ಶಾಲೆಗಳನ್ನು ಕಟ್ಟುವುದಾಗಿ ಹೇಳುತ್ತಾರೆ. ಆದರೆ, ಅದಕ್ಕೆ ಹಣ ಎಲ್ಲಿದೆ ಎಂದು ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.

“ಗ್ಯಾರಂಟಿ ಯೋಜನೆಗಳ ಬಗ್ಗೆ ನಾನು ಸಣ್ಣ ಮಟ್ಟದಲ್ಲಿ ಟೀಕೆಗೆ ಹೋಗುವುದಿಲ್ಲ. ಆದರೆ, ಈ ಎರಡೂವರೆ ವರ್ಷಗಳಲ್ಲಿ ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ನಾನೆಲ್ಲೂ ಹೇಳಿಲ್ಲ. ತೆರಿಗೆ ರೂಪದಲ್ಲಿ ಖಜಾನೆ ಖಾಲಿಯಾಗಲು ನಮ್ಮ ರಾಜ್ಯದ ಜನರು ಬಿಟ್ಟಿಲ್ಲ,” ಎಂದು ಹೇಳಿದರು.

ನೀರಾವರಿ ಸಚಿವರು (ಡಿ.ಕೆ. ಶಿವಕುಮಾರ್) ನೀರಾವರಿ ಯೋಜನೆಗಿಂತಲೂ ಹೆಚ್ಚಾಗಿ ಬೆಂಗಳೂರಿನ ಬಡಾವಣೆಗಳ ಹೆಸರು ಬದಲಾಯಿಸುವುದರಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ರಾಜ್ಯದ ನೀರಾವರಿ ಸಮಸ್ಯೆ ತಿಳಿದಿಲ್ಲ. ಮಾಧ್ಯಮಗಳು ಎಲ್ಲಿ ಎಡವಿದ್ದೇವೆ ಎಂದು ತೋರಿಸಿದರೂ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಕೇವಲ ಕುರ್ಚಿಯ ಬಗ್ಗೆಯೇ ಗಮನವಿಟ್ಟುಕೊಂಡು ಆಡಳಿತದ ಬಗ್ಗೆ ನಿಗಾ ಇಲ್ಲದಂತಾಗಿದೆ. ಖಜಾನೆಯನ್ನು ಸೋರಿಕೆ ಮಾಡಲು ಗಮನ ನೀಡಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಪೊಲೀಸರು ಹೆಚ್ಚು ಸಕ್ರಿಯರಾಗುತ್ತಾರೆ ಎಂದು ಲೇವಡಿ ಮಾಡಿದ ಅವರು, ಇತ್ತೀಚಿನ ದರೋಡೆ ಪ್ರಕರಣ ಮತ್ತು ಹಳೆಯ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದನ್ನು ಉಲ್ಲೇಖಿಸಿ, “ಇವರ ಸರ್ಕಾರದಲ್ಲಿ ಪೊಲೀಸರು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಕಳ್ಳಕಾಕರನ್ನು ಹಿಡಿಯಲು ಎಷ್ಟರ ಮಟ್ಟಿಗೆ ಮುಂದಾಗಿದ್ದೀರಾ?” ಎಂದು ಪ್ರಶ್ನಿಸಿದರು.

“2028ಕ್ಕೆ ಮತ್ತೆ ಇವರ ಸರ್ಕಾರ ಬರುತ್ತೆ ಅಂತಾ ಹೇಳುತ್ತಿದ್ದಾರೆ. ಜನ ಬಟನ್ ಒತ್ತಲು ಏನು ತಯಾರಾಗಿ ಕುಳಿತಿದ್ದಾರಾ? ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಪುತ್ರ ನಾನೇ ಸಿಎಂ ಅಂತಾ ಭವಿಷ್ಯ ಹೇಳಿದ್ರು, ಅಲ್ಲಿನ ರಾಜಕೀಯ ಏನಾಯ್ತು ಎಂದು ನೋಡಿದ್ದೀರಲ್ಲ. ಇವರು ಸಹ ಅದನ್ನು ಜ್ಞಾಪಿಸಿಕೊಳ್ಳಬೇಕು,” ಎಂದು ಭವಿಷ್ಯ ನುಡಿದವರನ್ನು ಟೀಕಿಸಿದರು.

ತಮ್ಮ ಅಧಿಕಾರಾವಧಿಯ ನೋವುಗಳನ್ನು ಹಂಚಿಕೊಂಡ ಕುಮಾರಸ್ವಾಮಿ, “ಡಿ.ಕೆ. ಶಿವಕುಮಾರ್ ನನಗೆ ವಿಶ್ವಮಾನವ ಎಂದು ಹೇಳಲಿ ಪರವಾಗಿಲ್ಲ. ನಾನು ಸರ್ವಜ್ಞನ ವಚನ ಎಂದಿಗೂ ಹೇಳಲ್ಲ. ನನ್ನದು ತಾಯಿ ಹೃದಯ ಇದ್ದಂತೆ, ಹಾಗಾಗಿ ಆ ಮೂಲಕ ಜನರಿಗೆ ಸ್ಪಂದಿಸುತ್ತೇನೆ. ನನ್ನ ಅಧಿಕಾರಾವಧಿಯಲ್ಲಿ ನನಗೆ ಎಷ್ಟು ಸ್ಪಂದಿಸಿದ್ದಾರೆಂಬುದು ಗೊತ್ತಿದೆ. ಕನಕಪುರ ಬಂಡೆ ಎಂದು ಎಲ್ಲೆಲ್ಲಿ ನನ್ನ ಕತ್ತು ಕೊಯ್ದಿದ್ದಾರೆ ಎಂಬುದು ನನಗೆ ಗೊತ್ತು,” ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

ಒಕ್ಕಲಿಗ ಸ್ವಾಮೀಜಿಗಳ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಎಚ್.ಡಿ.ಕೆ., “ಈ ಹಿಂದೆ ದೇವೇಗೌಡರು ಸಿಎಂ ಆಗಲು ಒಕ್ಕಲಿಗ ಸ್ವಾಮೀಜಿಗಳು ಹೇಳಿದ್ರಾ? ಆಗ ಹೇಳಿದ್ದರೆ ಅಂದೇ ಸಿಎಂ ಆಗುತ್ತಿದ್ದರು. ಸ್ವಾಮೀಜಿಗಳನ್ನು ಎಂದಿಗೂ ದೇವೇಗೌಡರು ಬಳಸಿಕೊಂಡಿಲ್ಲ,” ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ದೇವರಾಜು ಅರಸು ಅವರ ಸಾಧನೆಯನ್ನು ಮೀರಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರ ಸಂಕುಚಿತ ಮನೋಭಾವನೆಯೇ ಅವರಿಗೆ ಮುಳುವಾಗಿದೆ. 5 ವರ್ಷಗಳ ಸಿಎಂ ಆದರೂ ಅವರ ಸಾಧನೆ ಮುರಿಯಲು ಸಾಧ್ಯವಿಲ್ಲ. ಇನ್ನೂ ಎರಡೂವರೆ ವರ್ಷ ಕಳೆದರೂ ಕೂಡ ದೇವರಾಜು ಅರಸು ಅವರ ಸಾಧನೆಯನ್ನು ಮೀರಿಸಲು ಇವರ ಕೈಯಲ್ಲಿ ಆಗುವುದಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

ವಿಐಎಸ್‌ಎಲ್ ಕಾರ್ಖಾನೆ ಕುರಿತು ಮಾತನಾಡಿದ ಅವರು, ಕಾರ್ಖಾನೆಗೆ ಜೀವ ನೀಡಲು ಭಗವಂತನ ಆಶೀರ್ವಾದವಿದೆ. ಮುಂಬರುವ ಜನವರಿ, ಫೆಬ್ರವರಿಗೆ ₹4 ಸಾವಿರ ಕೋಟಿ ಹೂಡಿಕೆಗೆ ಯೋಜನೆ ನಡೆದಿದೆ ಮತ್ತು ಗಣಿಗಾರಿಕೆ ಪ್ರದೇಶ ನೀಡಲು ಸಹ ಚರ್ಚೆ ನಡೆದಿದೆ ಎಂದರು.

You cannot copy content of this page

Exit mobile version