Thursday, June 20, 2024

ಸತ್ಯ | ನ್ಯಾಯ |ಧರ್ಮ

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಅವಾಚ್ಯ ಶಬ್ದದಿಂದ ನಿಂದನೆ: ಮಾತನ್ನು ಹಿಂಪಡೆಯುತ್ತೆನೆ ಎಂದು ವಿಷಾದ ವ್ಯಕ್ತಪಡಿಸಿದ ಹೆಚ್‌.ಡಿ.ಕೆ

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಯ ಪ್ರವಾಸದ ವೇಳೆ, ಶ್ರೀನಿವಾಸಪುರದ ಹಾಲಿ ಶಾಸಕ ಹಾಗೂ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅವರ ಬಗ್ಗೆ ಅವಾಚ್ಯ ಶಬ್ದದಿಂದ ನಿಂದನೆಮಾಡಿರುವುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿಯವರು ವಿಷಾದ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್‌ (ಜನತಾ ದಳ)​ ಪಕ್ಷದ ಪಂಚರತ್ನ ರಥಯಾತ್ರೆ ಹಿನ್ನಲೆಯಲ್ಲಿ ಪಕ್ಷದ ನಾಯಕ ಹೆಚ್‌.ಡಿ.ಕುಮಾರಸ್ವಾಮಿಯವರು, ಕೋಲಾರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದರು. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬಂಗವಾದಿ ಹಾಗೂ ಮಾಸ್ತೇನಹಳ್ಳಿ ಗ್ರಾಮಕ್ಕೆ ರಥಯಾತ್ರೆ ಬರುತ್ತಿದ್ದ ವೇಳೆ ನೂರಾರು ಶಾಲಾ ಮಕ್ಕಳು ಕುಮಾರಸ್ವಾಮಿ ರಥಯಾತ್ರೆ ಬಳಿ ಬಂದು ಪ್ರತಿಭಟನೆ ನಡೆಸಿದರು. ನಂತರ ರಥಯಾತ್ರೆ ಬಿಟ್ಟು ಕೆಳಗೆ ಬಂದ ಕುಮಾರಸ್ವಾಮಿಯವರು ಮಕ್ಕಳು ಹಂಚಿಕೊಂಡ ಶಿಥಿಲಗೊಂಡಿರುವ ಶಾಲಾ ಕಟ್ಟಡದ ಸಮಸ್ಯೆಯ ಬಗ್ಗೆ ಆಲಿಸಿದರು. ಬಳಿಕ ಸ್ವತ: ಕುಮಾರಸ್ವಾಮಿಯವರೇ ಮಕ್ಕಳ ಜೊತೆಗೆ ತೆರಳಿ ಶಾಲಾ ಕಟ್ಟಡವನ್ನು ವೀಕ್ಷಣೆ ಮಾಡಿ, ಸಮಸ್ಯೆ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಮತ್ತು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕರೆ ಮಾಡಿ, ಆದಷ್ಟು ಬೇಗ ಹೊಸದೊಂದು ಕಟ್ಟಡ ನಿರ್ಮಾಣ ಮಾಡಲು ಒತ್ತಾಯಿಸಿದರು.

ಬಳಿಕ ಬಳಿಕ ಕಾರು ಹತ್ತಿದ ಕುಮಾರಸ್ವಾಮಿಯವರು ಆಕ್ರೋಶಗೊಂಡು ಶ್ರೀನಿವಾಸಪುರದ ಹಾಲಿ ಶಾಸಕ ಹಾಗೂ ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಅವರ ಬಗ್ಗೆ ಮಾತನಾಡುತ್ತಾ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಬಗ್ಗೆ ಕುಮಾರಸ್ವಾಮಿಯವರು ಹಲವಾರು ಜನರ ಆಕ್ರೋಶಕ್ಕೆ ಗುರಿಯಾಗಿದ್ದರು.

ಈ ಕುರಿತು ಟ್ವೀಟರ್‌ ನಲ್ಲಿ ವಿಷಾದ ವ್ಯಕ್ತಪಡಿಸಿರುವ ಕುಮಾರಸ್ವಾಮಿಯವರು, ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ  ಎದುರಿನ ಅಶ್ವತ್ಥಕಟ್ಟೆ ಮೇಲೆ ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು, ಈ ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು