Wednesday, April 30, 2025

ಸತ್ಯ | ನ್ಯಾಯ |ಧರ್ಮ

ಒತ್ತಡಕ್ಕೆ ಮಣಿದು ತನ್ನ ಬಂಧುಗಳು ತನ್ನ ವಿರುದ್ಧವೇ ಸುಳ್ಳು ಮತಾಂತರದ ದೂರು ದಾಖಲಿಸಿದ್ದರು : ಆದಿವಾಸಿ ಸಮುದಾಯದ ವ್ಯಕ್ತಿ

ಮನೆ ಕೆಡವುವುದಾಗಿ ಬೆದರಿಕೆ ಹಾಕಿ ಶಕ್ತಿ ಸಿಂಗ್‌ ಅವರ ಚಿಕ್ಕಮ್ಮ ಮತ್ತು ಆಕೆಯ ಮಗನ ಕೈಯಿಂದ ದೂರಿಗೆ ಸಹಿ ಹಾಕಿಸಲಾಗಿತ್ತು ಎಂಬ ಆರೋಪವಿದೆ.

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು, ಕಾನೂನು ಹೋರಾಟಗಳಲ್ಲಿ ಗೆದ್ದು ಬಂದವರ ಸರಣಿ ವರದಿಗಳಲ್ಲಿ ಆರನೇ ಲೇಖನ.

ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 |

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ತನ್ನನ್ನು ಬಂಧಿಸಿ ಲಾಕ್ ಅಪ್‌ಗೆ ಎಳೆದೊಯ್ದಿದ್ದಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಅಧೀನ ಅಧಿಕಾರಿಗಳ ಮೇಲೆ ರೇಗಿದ್ದನ್ನು ಶಕ್ತಿ ಸಿಂಗ್* ನೆನಪಿಸಿಕೊಳ್ಳುತ್ತಾರೆ. “ಇವತ್ತು ಯಾಕೆ ಆತನನ್ನು ಬಂಧಿಸಿ ತಂದಿದ್ದೀರಿ? ಎಂದು ಆಗಸ್ಟ್ 14ರಂದು ಠಾಣೆಯಲ್ಲಿ ಆ ಪೊಲೀಸ್ ಅಧಿಕಾರಿ ಪ್ರಶ್ನಿಸಿದ್ದರು” ಎಂದು ಮಧ್ಯಪ್ರದೇಶದ ಶಕ್ತಿ ಸಿಂಗ್ ಹೇಳುತ್ತಾರೆ.

ಭೀಲ್ ಬುಡಕಟ್ಟು ಸಮುದಾಯದ ರೈತ, 33 ವರ್ಷದ ಶಕ್ತಿ ಸಿಂಗ್, ಅಕ್ರಮ ಮತಾಂತರ ಆರೋಪದ ಮೇಲೆ 2019ರ ಆಗಸ್ಟ್ 14ರಿಂದ 19ರವರೆಗೆ ಆರು ದಿನಗಳ ಕಾಲ ಜೈಲಿನಲ್ಲಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರವೂ, ಸುಮಾರು ಐದು ವರ್ಷಗಳ ಕಾಲ ರಾಜ್ಯದ ವಿವಾದಾತ್ಮಕ ಮತಾಂತರ ನಿಷೇಧ ಕಾನೂನಿನ ಕತ್ತಿಯಲಗನ್ನು ಎದುರಿಸುತ್ತಲೇ ಬದುಕು ಕಳೆದರು. ಕೊನೆಗೆ ಏಪ್ರಿಲ್ 2024ರಲ್ಲಿ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು.

ವಿಚಾರಣೆಯ ಸಮಯದಲ್ಲಿ, ಪ್ರಾಸಿಕ್ಯೂಷನ್ ಸಾಕ್ಷಿಗಳಾದ ಶಕ್ತಿ ಸಿಂಗ್‌ರ ಚಿಕ್ಕಮ್ಮ ಮತ್ತು ಆಕೆಯ ಮಗ ಪೊಲೀಸರು ಹೆಣೆದ ಕಥೆಯನ್ನು ವಿರೋಧಿಸಿ ಹೇಳಿಕೆ ನೀಡಿದ ನಂತರವೇ ಪ್ರಕರಣಕ್ಕೆ ನಿಜವಾದ ತಿರುವು ಸಿಗುವುದು. ಶಕ್ತಿ ಸಿಂಗ್ ‘ದಿ ವೈರ್’ ಜೊತೆ ಮಾತನಾಡುತ್ತಾ, ಬಲಪಂಥೀಯ ಸಂಘಟನೆಯ ಕಾರ್ಯಕರ್ತರ ಬಲವಂತಕ್ಕೆ ಮಣಿದು ತನ್ನ ಮೇಲೆ ದೂರು ದಾಖಲಿಸಲಾಗಿತ್ತು ಎಂದು ಹೇಳಿದರು.

ಆಗಸ್ಟ್ 14, 2019ರಂದು ಮಧ್ಯಪ್ರದೇಶದ ಪೂರ್ವ ಗಡಿಭಾಗದಲ್ಲಿರುವ ಧಾರ್ ಜಿಲ್ಲೆಯ ಕುಕ್ಷಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಶಕ್ತಿ ಸಿಂಗ್ ಅವರ ಚಿಕ್ಕಮ್ಮನ ಮಗ ಯುವರಾಜ್ ವಾಸ್ಕೆಲ್* ಮತ್ತು ಆತನ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷವೊಡ್ಡಿದ ಮತ್ತು ಬಲವಂತಪಡಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ಆ ದಿನ, ಶಕ್ತಿ ಸಿಂಗ್ ತಮ್ಮ ಮನವಾರ್ ತಹಸಿಲ್‌ನ ಗ್ರಾಮದಿಂದ ಸುಮಾರು 25 ಕಿ.ಮೀ ದೂರದ ಲೋಹರಿ ಗ್ರಾಮದಲ್ಲಿರುವ ತನ್ನ ಚಿಕ್ಕಮ್ಮ ಕಾಲಿಬಾಯಿ ಅವರ ಮನೆಯಲ್ಲಿ ಯೇಸು ಕ್ರಿಸ್ತನ ಪ್ರಾರ್ಥನೆಯಲ್ಲಿ ಭಾಗವಹಿಸಲು ಹೋಗಿದ್ದೆ ಎಂದು ಹೇಳುತ್ತಾರೆ. ಕ್ರೈಸ್ತರು ಮತ್ತು ಕ್ರೈಸ್ತರಲ್ಲದವರು ಯೇಸುಕ್ರಿಸ್ತನನ್ನು ನಂಬುವುದು ಮತ್ತು ಕ್ರಿಸ್ತನ ಚಿಕಿತ್ಸಕ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುವುದು ಇಂತಹ ಒಳನಾಡು ರಾಜ್ಯಗಳಲ್ಲಿ ಸಾಮಾನ್ಯ ಸಂಗತಿ.

ಬೆಳಿಗ್ಗೆ 11:30ರ ಸುಮಾರಿಗೆ, ವಾಸ್ಕೆಲ್ ಮತ್ತು ಅವರ ಕುಟುಂಬಕ್ಕೆ ಹಣದ ಆಮಿಷವೊಡ್ಡಿ ಯೇಸುವನ್ನು ತಮ್ಮ ಪ್ರಭುವೆಂದು ಪರಿಗಣಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ರಾಮ ಮತ್ತು ಹನುಮಾನ್ ಸಹಿತ ಹಿಂದೂ ದೇವಾನುದೇವತೆಗಳು ಅವರ ದೇವರುಗಳಲ್ಲ ಎಂದೂ ಸಿಂಗ್ ಹೇಳಿದ್ದರೆಂದು ದೂರಲಾಗಿದೆ. ವಾಸ್ಕೆಲ್ ಅವರ ಮನೆಯಲ್ಲಿದ್ದ ಹನುಮಾನ್ ಭಕ್ತರು ಪಠಿಸುವ ಜನಪ್ರಿಯ ಪ್ರಾರ್ಥನೆಯಾದ ಹನುಮಾನ್ ಚಾಲೀಸಾದ ಪ್ರತಿಯನ್ನು ಸುಟ್ಟು ಹಾಕಿದ ಆರೋಪವನ್ನೂ ಶಕ್ತಿ ಸಿಂಗ್‌ ಮೇಲೆ ಹೊರಿಸಲಾಗಿತ್ತು. ವಾಸ್ಕೆಲ್ ಅವರ ಮನೆಯಲ್ಲಿದ್ದ ಹಿಂದೂ ದೇವರುಗಳ ಎಲ್ಲಾ ವಿಗ್ರಹಗಳನ್ನು ಮತ್ತು ಚಿತ್ರಗಳನ್ನು ಸಿಂಗ್ ಕಿತ್ತು ಹಾಕಿ ಅವುಗಳ ಮೇಲೆ ಮುದ್ರೆಯೊತ್ತಿದ್ದರು ಎಂದೂ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ರಾಮನನ್ನು ನಿಂದಿಸುವ ಮೂಲಕ ಹಿಂದೂಗಳ ನಂಬಿಕೆಯನ್ನು ಅವಮಾನಿಸಿದ್ದಾರೆ, ವಾಸ್ಕೆಲ್ ಮತ್ತು ಅವರ ಕುಟುಂಬವು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದಾಗ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಲಾಗಿತ್ತು.

‘ಬಲವಂತವಾಗಿ’ ಸಹಿ ಹಾಕಿಸಲಾಗಿದ್ದ ದೂರು
ಆದರೆ, ಇದ್ಯಾವುದೂ ನಡೆದೇ ಇಲ್ಲವೆಂದು ಶಕ್ತಿ ಸಿಂಗ್ ಹೇಳುತ್ತಾರೆ. ನಿಜದಲ್ಲಿ, ತನ್ನ ಮೇಲೆ ಚಿಕ್ಕಮ್ಮನ ಮಗ ವಾಸ್ಕೆಲ್ ಪೊಲೀಸ್ ದೂರು ದಾಖಲಿಸಿಯೇ ಇಲ್ಲ ಎಂದು ಅವರು ಹೇಳುತ್ತಾರೆ. ಮನವರ್‌ನಿಂದ ತನ್ನ ಚಿಕ್ಕಮ್ಮನ ಮನೆಗೆ ಅವಾಗವಾಗ ಭೇಟಿ ನೀಡುತ್ತಿರುವುದನ್ನು ಗಮನಿಸುತ್ತಿದ್ದ, ಹಿಂದುತ್ವ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ಕೆಲವರು ಮನೆಯೊಳಗೆ ನುಗ್ಗಿದ್ದರು ಎಂದು ಅವರು ಆರೋಪಿಸುತ್ತಾರೆ. ಶಕ್ತಿ ಸಿಂಗ್ ಒಂದು ದೊಡ್ಡ ಸಂಘಟನೆಯ ಹೆಸರನ್ನು ಉಲ್ಲೇಖಿಸಿದ್ದರು, ಆದರೆ ದಿ ವೈರ್ ಈ ಘಟನೆಯಲ್ಲಿ ಆ ಸಂಘಟನೆಯ ಪಾಲನ್ನು ದೃಢೀಕರಿಸಲು ಸಾಧ್ಯವಾಗದ ಕಾರಣ ಇಲ್ಲಿ ಹೆಸರಿಸದಿರಲು ನಿರ್ಧರಿಸಿದೆ.

ಶಕ್ತಿ ಸಿಂಗ್ ವಾಸ್ಕೆಲ್ ಮನೆಯಲ್ಲಿ ಪ್ರಾರ್ಥನೆ ನಡೆಸುತ್ತಿರುವುದನ್ನು ತಿಳಿದ ಹಿಂದುತ್ವ ಕಾರ್ಯಕರ್ತರು ಮನೆಗೆ ನುಗ್ಗಿ ಸಿಂಗ್ ವಿರುದ್ಧ ದೂರು ದಾಖಲಿಸುವಂತೆ ಬಲವಂತ ಪಡಿಸುತ್ತಾರೆ. ದೂರು ದಾಖಲಿಸದಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸುತ್ತಾರೆ. ಮಧ್ಯಪ್ರದೇಶದಲ್ಲಿ ಈಗಿರುವಂತೆ ಆಗಲೂ ಭಾರತೀಯ ಜನತಾ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು.

ತನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಹಿಂದುತ್ವ ಕಾರ್ಯಕರ್ತರು ತನ್ನ ಚಿಕ್ಕಮ್ಮನ ಮಗನಿಗೆ ಬಲವಂತಪಡಿಸಿದ್ದರು ಎಂದು ಶಕ್ತಿ ಸಿಂಗ್ ಆರೋಪಿಸುತ್ತಾರೆ. “ಅವರಿಗೆ ನಮ್ಮ ಪ್ರಾರ್ಥನೆಯ ಬಗ್ಗೆ ತಿಳಿದಿತ್ತು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದಿದ್ದರೆ, ಅವರ ಮನೆಯನ್ನು ಬುಲ್ಡೋಜರ್‌ನಿಂದ ಕೆಡವಲಾಗುವುದೆಂದು ಬೆದರಿಕೆ ಹಾಕಿದ್ದರು” ಎಂದು ಶಕ್ತಿ ಸಿಂಗ್ ಹೇಳುತ್ತಾರೆ. “ಹಾಗಾಗಿ, ಬಲವಂತಕ್ಕೆ ಮಣಿದು, ವಾಸ್ಕೆಲ್ ನನ್ನ ವಿರುದ್ಧದ ದೂರಿಗೆ ಸಹಿ ಹಾಕಿದ.”

ಸಿಂಗ್ ವಿರುದ್ಧ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 1968ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದು 2020ರಲ್ಲಿ ಮತ್ತಷ್ಟು ಕಠಿಣವಾಗಿ ಜಾರಿಗೆ ಬಂದ ಮತಾಂತರ ನಿಷೇಧ ಕಾಯ್ದೆಗಿಂತ ಮೊದಲು ರಾಜ್ಯದಲ್ಲಿ ಜಾರಿಯಲ್ಲಿದ್ದ ಮತಾಂತರ ವಿರೋಧಿ ಕಾನೂನು. ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳನ್ನು ಬಳಸಿಕೊಂಡು ವಿವಿಧ ಗುಂಪುಗಳ ನಡುವೆ ದ್ವೇಷ ಬೆಳೆಸುವುದು ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನೂ ಎಫ್‌ಐಆರ್‌ನಲ್ಲಿ ದಾಖಲಾಸಿಲಾಗಿತ್ತು. ಈ ಅಪರಾಧಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಮತ್ತು 506 (2)ರ ವ್ಯಾಪ್ತಿಗೆ ಬರುತ್ತವೆ.

ಮಧ್ಯಪ್ರದೇಶದ 1968ರ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ಯಾವುದೇ ವ್ಯಕ್ತಿಯು ಬಲವಂತದ ಮೂಲಕ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳಬಾರದು, ಯಾರನ್ನೂ ಹಾಗೆ ಮತಾಂತರಿಸಲು ಪ್ರಯತ್ನಿಸಬಾರದು ಮತ್ತು ಅಂತಹ ಮತಾಂತರಕ್ಕೆ ಯಾರನ್ನೂ ಪ್ರಚೋದಿಸಬಾರದು.

ಸೆಕ್ಷನ್ 3ರಲ್ಲಿರುವ ನಿಬಂಧನೆಯನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಅದೇ ಕಾನೂನಿನ ಸೆಕ್ಷನ್ 4ರ ಪ್ರಕಾರ, ಆ ವ್ಯಕ್ತಿಯ ಯಾವುದೇ ನಾಗರಿಕ ಸ್ಥಾನಮಾನಗಳ ಪೂರ್ವಾಗ್ರಹವಿಲ್ಲದೆ ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ 5000 ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಈ ಎರಡನ್ನೂ ವಿಧಿಸಬಹುದು. ಅಪ್ರಾಪ್ತ ವಯಸ್ಕರು, ಮಹಿಳೆಯರು ಅಥವಾ ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ವ್ಯಕ್ತಿಯ ಮೇಲೆ ಈ ಅಪರಾಧವನ್ನು ಎಸಗಿದರೆ ಶಿಕ್ಷೆಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ.

ಪ್ರಕರಣ ಬಿದ್ದು ಹೋದ ಕಥೆ
ಶಕ್ತಿ ಸಿಂಗ್ ವಿರುದ್ಧದ ಆರೋಪಪಟ್ಟಿಯನ್ನು ಸೆಪ್ಟೆಂಬರ್ 2019ರಲ್ಲಿ ಸಲ್ಲಿಸಲಾಗಿತ್ತು. ರಾಜ್ಯ ಸರಕಾರದ ಪ್ರಾಸಿಕ್ಯೂಷನ್ ಶಕ್ತಿ ಸಿಂಗ್ ವಿರುದ್ಧ ಕೇವಲ ಮೂವರು ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿತ್ತು; ಪ್ರತ್ಯಕ್ಷದರ್ಶಿ ಚಿಕ್ಕಮ್ಮ ಕಾಲಿಬಾಯಿ, ಆಕೆಯ ಮಗ ಮತ್ತು ದೂರುದಾರ ಎಂದು ಹೇಳಲಾದ ವಾಸ್ಕೆಲ್ ಮತ್ತು ತನಿಖಾಧಿಕಾರಿ ಸಬ್ಇನ್ಸ್‌ಪೆಕ್ಟರ್ ಎಂ.ಕೆ. ರಘುವಂಶಿ.

ತನಿಖೆಯ ವೇಳೆ ಶಕ್ತಿ ಸಿಂಗ್‌ ಬಳಿಯಿಂದ ಒಂದು ಬೈಬಲ್ ಮತ್ತು ಇತರ ಮೂರು ಕ್ರೈಸ್ತ ಧಾರ್ಮಿಕ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದರು. ಅವುಗಳೆಂದರೆ ‘ಮಸೀಹಿ ಕಲೀಶಿಯಾ ಕಿ ಧಾರ್ಮಿಕ್ ವಿಧಿಯೋ ಕಿ ಕಿತಾಬ್’, ‘ಕಲೀಶಿಯಾ ಕಾ ಮಿಷನ್ ಏವಮ್ ಲಕ್ಷಿತ್ ಸ್ಥಾನ್’ ಮತ್ತು ‘ಇಸಾ ಮಸೀಹ್ ಔರ್ ಉಸ್ಕಿ ಕಲೀಶಿಯಾ’. ತುಂಡಾದ ಕಪ್ಪು ಮುತ್ತುಗಳ ಹಾರ, ಯೇಸುವಿನ ಚಿತ್ರವಿರುವ ಉಕ್ಕಿನ ಶಿಲುಬೆ, ಯೇಸುವಿನ ಪುಟ್ಟ ರೂಪವಿರುವ ಸಣ್ಣ ಉಕ್ಕಿನ ಶಿಲುಬೆ ಮತ್ತು ಎಂಟು ಪುಟಗಳು ಸುಟ್ಟಿದ್ದ ಹನುಮಾನ್ ಚಾಲೀಸಾದ ಪ್ರತಿಯನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ದಾಖಲಿಸಲಾಗಿತ್ತು.

ಆದರೂ ಕೂಡ, ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆ. ಪ್ರಾಸಿಕ್ಯೂಷನ್‌ನ ಇಬ್ಬರು ಪ್ರಮುಖ ಸಾಕ್ಷಿಗಳಾದ ವಾಸ್ಕೆಲ್ ಮತ್ತು ಅವರ ತಾಯಿ ಕಾಲಿಬಾಯಿ ಶಕ್ತಿ ಸಿಂಗ್ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕುತ್ತಾರೆ.

ತನ್ನ ಹೆತ್ತವರು ಅನಾರೋಗ್ಯದಿಂದಿದ್ದರು. ಅವರನ್ನು ಕಾಣಲು ಬಂದ ಶಕ್ತಿ ಸಿಂಗ್ ಅವರಿಗಾಗಿ ಪ್ರಾರ್ಥಿಸುತ್ತಿದ್ದರು ಎಂದು ವಾಸ್ಕೆಲ್ ನ್ಯಾಯಾಲಯದಲ್ಲಿ ಹೇಳುತ್ತಾರೆ. ಹೀಗೆ ಪ್ರಾರ್ಥನೆ ನಡೆಸುತ್ತಿರುವಾಗ, ಕೆಲವು ಸ್ಥಳೀಯರು ಮನೆಗೆ ನುಗ್ಗಿ ಬಂದು ಶಕ್ತಿ ಸಿಂಗ್ ಅವರ ಮೇಲೆ ಅಕ್ರಮ ಮತಾಂತರದ ಆರೋಪ ಮಾಡಲು ಪ್ರಾರಂಭಿಸಿದರು. ನಂತರ ಶಕ್ತಿ ಸಿಂಗ್ ಅವರನ್ನು ಕುಕ್ಷಿ ಪೊಲೀಸ್ ಠಾಣೆಗೆ ಕರೆದೊಯ್ದ ಗ್ರಾಮಸ್ಥರು, ಅಲ್ಲಿ ಅವರ ವಿರುದ್ಧ ಪೊಲೀಸರಿಗೆ ಲಿಖಿತ ದೂರು ನೀಡಿದರು ಎಂದು ವಾಸ್ಕೆಲ್ ಹೇಳುತ್ತಾರೆ. ತನ್ನನ್ನು ಅದರಲ್ಲಿ ಸಹಿ ಹಾಕುವಂತೆ ಬಲವಂತಪಡಿಸಲಾಯಿತು ಎಂದು ವಾಸ್ಕೆಲ್‌ ನ್ಯಾಯಾಲಯಕ್ಕೆ ತಿಳಿಸುತ್ತಾರೆ.

ಶಕ್ತಿ ಸಿಂಗ್ ತನ್ನ ಮನೆಯಲ್ಲಿ ಮತಾಂತರದ ಬಗ್ಗೆ ಮಾತೇ ಆಡಿಲ್ಲ. ಯಾವುದೇ ಹಿಂದೂ ದೇವರುಗಳನ್ನು ನಿಂದಿಸಿಲ್ಲ ಎಂದೂ ವಾಸ್ಕೆಲ್ ತನ್ನ ಪಾಟಿ ಸವಾಲಿನಲ್ಲಿ ನ್ಯಾಯಾಲಯಕ್ಕೆ ತಿಳಿಸುತ್ತಾರೆ. ಸ್ಥಳೀಯ ಜನರು ಮನೆಗೆ ನುಗ್ಗಿ ಬಂದು ಅವರ ಮೇಲೆ ಮತಾಂತರದ ಆರೋಪ ಹೊರಿಸಿದ್ದರು ಎಂದು ವಾಸ್ಕೆಲ್ ಮುಂದುವರಿಸುತ್ತಾರೆ. ತನ್ನ ಸಂಬಂಧಿಯಾದ ಶಕ್ತಿ ಸಿಂಗ್ ಮನೆಗೆ ಬಂದಾಗ, ಆತನನ್ನು ಸತ್ಕರಿಸುವ ವಿಚಾರದಲ್ಲಿ ಗೊಂದಲವುಂಟಾಯಿತು ಎಂದಲ್ಲದೆ ಬೇರೆ ಯಾವ ವಿಚಾರದ ಬಗ್ಗೆಯೂ ತನಗೆ ತಿಳಿದಿಲ್ಲವೆಂದು ಕಾಲಿಬಾಯಿ ತನ್ನ ಸಾಕ್ಷಿನುಡಿಯಲ್ಲಿ ಹೇಳುತ್ತಾರೆ.

13 ಮತ್ತು 14 ವರ್ಷ ವಯಸ್ಸಿನ ಇಬ್ಬರು ಮಕ್ಕಳ ತಂದೆಯಾಗಿರುವ ಶಕ್ತಿ ಸಿಂಗ್, ವಾಸ್ಕೆಲ್ ಅವರ ತಾಯಿ, ಅಂದರೆ ತನ್ನ ಚಿಕ್ಕಮ್ಮನ ಅನಾರೋಗ್ಯ ಗುಣಪಡಿಸಲು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳುತ್ತಾರೆ. ಯೇಸು ಕ್ರಿಸ್ತನಿಗೆ ಪ್ರಾರ್ಥಿಸಲು ಪ್ರಾರಂಭಿಸಿದ ನಂತರ ತನ್ನ ಸ್ವಂತ ಜೀವನದಲ್ಲಿ ನಡೆದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, “ಒಬ್ಬ ವ್ಯಕ್ತಿಯು ಪ್ರಾರ್ಥಿಸುವಾಗ, ಆತ ಮದ್ಯಪಾನವನ್ನು ಕೈಬಿಡುತ್ತಾನೆ, ಆತ ಪರನಿಂದನೆಗಳನ್ನು ನಿಲ್ಲಿಸುತ್ತಾನೆ, ಆತ ಎಚ್ಚೆತ್ತುಕೊಳ್ಳುತ್ತಾನೆ ಮತ್ತು ಜಾಗರೂಕರಾಗುತ್ತಾನೆ. ಆತ ಒಳ್ಳೆಯ ಮನುಷ್ಯನಾಗುತ್ತಾನೆ. ಹಿಂಸೆ ಅಥವಾ ಇತರ ಜಗಳಗಳಿಂದ ದೂರವಿರಲು ಬಯಸುತ್ತಾನೆ.” ಎಂದು ಶಕ್ತಿ ಸಿಂಗ್‌ ಹೇಳುತ್ತಾರೆ.

ಏಪ್ರಿಲ್ 15, 2024ರಂದು, ಧಾರ್ನ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ದೀಪೇಂದ್ರ ಮಾಲು ಶಕ್ತಿ ಸಿಂಗ್‌ರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸುತ್ತಾರೆ. ಪೊಲೀಸರು ಹಾಜರುಪಡಿಸಿದ ಇಬ್ಬರು ಸಾಕ್ಷಿಗಳು ಕೂಡ ಪ್ರಾಸಿಕ್ಯೂಷನ್ ಕಥೆಯನ್ನು ನಿರಾಕರಿಸುತ್ತಾರೆ. ಬಲವಂತದ ಮತಾಂತರ, ಹನುಮಾನ್ ಚಾಲೀಸಾವನ್ನು ಸುಟ್ಟದ್ದು, ಹಿಂದೂ ದೇವರುಗಳನ್ನು ಅವಮಾನಿಸಿದ್ದು, ದೇವರ ಚಿತ್ರಗಳನ್ನು ಮತ್ತು ವಿಗ್ರಹಗಳನ್ನು ಕಿತ್ತು ಹಾಕಿದ್ದು ಹಾಗೂ ಬೆದರಿಕೆ ಮೊದಲಾದ ಶಕ್ತಿ ಸಿಂಗ್ ಮೇಲಿನ ಎಲ್ಲಾ ಆರೋಪಗಳನ್ನು ಅವರಿಬ್ಬರೂ ತಳ್ಳಿ ಹಾಕುತ್ತಾರೆ

ಪ್ರಾಸಿಕ್ಯೂಷನ್ ಕಥೆಯು ಅನುಮಾನಾಸ್ಪದವಾಗಿದೆ ಎಂದು ನ್ಯಾಯಾಧೀಶ ಮಾಲು ಹಿಂದಿಯಲ್ಲಿ ನೀಡಿದ 11 ಪುಟಗಳ ತೀರ್ಪಿನಲ್ಲಿ ಗಮನಿಸುತ್ತಾರೆ. ಸಲ್ಲಿಸಲಾಗಿರುವ ಪುರಾವೆಗಳು ಶಕ್ತಿ ಸಿಂಗ್ ವಿರುದ್ಧದ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸುವುದಿಲ್ಲ ಎಂದು ಅವರು ಹೇಳುತ್ತಾರೆ.

ಸೆಕ್ಷನ್ 153A (IPC) ಅಡಿಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣವನ್ನು ಮಂಡಿಸುವ ಮೊದಲು ತನಿಖಾಧಿಕಾರಿಯು ಸರ್ಕಾರದ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಅನುಮತಿಯನ್ನು ಪಡೆದಿರಲಿಲ್ಲ ಎಂಬುದನ್ನೂ ನ್ಯಾಯಾಲಯವು ಬೊಟ್ಟು ಮಾಡುತ್ತದೆ. ಇದು ರಾಷ್ಟ್ರದ ವಿರುದ್ಧ ನಡೆಸುವ ಅಪರಾಧ ಅಥವಾ ಪಿತೂರಿಯ ಭಾಗವಾಗಿರುವುದರಿಂದ ಐಪಿಸಿಯ ಸೆಕ್ಷನ್ 153A ಪ್ರಕಾರ ವಿಚಾರಣೆ ನಡೆಸಲು ಸರಕಾರದ ಪೂರ್ವಾನುಮತಿಯ ಅಗತ್ಯವಿರುತ್ತದೆ.

ಸಿಆರ್‌ಪಿಸಿ ಸೆಕ್ಷನ್ 196ರ ಪ್ರಕಾರ, ರಾಜ್ಯ ಅಥವಾ ಕೇಂದ್ರ ಸರ್ಕಾರದ ಪೂರ್ವಾನುಮತಿಯೊಂದಿಗೆ ಮಾತ್ರವೇ ನ್ಯಾಯಾಲಯವು ಅಂತಹ ಅಪರಾಧಗಳನ್ನು ತನಿಖೆಗೆ ಕೈಗೆತ್ತಿಕೊಳ್ಳಬೇಕಾಗುತ್ತದೆ.

ಒಂದು ಅಪರಾಧದ ವಿಚಾರಣೆಯಲ್ಲಿ ಕೈಗೊಳ್ಳುವ ಪ್ರಕ್ರಿಯೆಗಳೇ ದೋಷಪೂರಿತವಾಗಿದ್ದರೆ, ಆ ಅಪರಾಧದ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲಾಗುವುದಿಲ್ಲ ಎಂದು ನ್ಯಾಯಾಧೀಶ ಮಾಲು ಹೇಳುತ್ತಾರೆ.

“ತನಿಖೆ ಮತ್ತು ಸಲ್ಲಿಸಲಾದ ಸಾಕ್ಷ್ಯಗಳ ಆಧಾರದ ಮೇಲೆ, ಆರೋಪಿಯು ದೂರುದಾರ ವಾಸ್ಕೆಲ್ ಮತ್ತು ಕುಟುಂಬವನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಮತಾಂತರಗೊಳಿಸಿದ್ದಾನೆ ಅಥವಾ ಮತಾಂತರಗೊಳಿಸಲು ಪ್ರಯತ್ನಿಸಿದ್ದಾನೆ ಎಂಬುದು ಸಂಶಯಾತೀತವಾಗಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ.  ಮಾತು, ಬರವಣಿಗೆ, ಸಂಜ್ಞೆಗಳ ಮೂಲಕ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಿನ್ನ ಧಾರ್ಮಿಕ ಸಮುದಾಯಗಳ ನಡುವೆ ಅಸ್ವಾರಸ್ಯ, ದ್ವೇಷ, ಹಗೆತನ ಅಥವಾ ಕೆಟ್ಟ ಭಾವನೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದ್ದಾರೆ ಎಂಬುದು ಕೂಡ ಸಂಶಯಾತೀತವಾಗಿ ಸಾಬೀತಾಗಿಲ್ಲ” ಎಂದು ನ್ಯಾಯಮೂರ್ತಿ ಮಾಲು ಸ್ಪಷ್ಟವಾಗಿ ಹೇಳುತ್ತಾರೆ.

ವಾಸ್ಕೆಲ್ ಮತ್ತು ಆತನ ತಾಯಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

* ಸಂತ್ರಸ್ತರ ಖಾಸಗಿತನವನ್ನು ರಕ್ಷಿಸಲು ಹೆಸರು ಬದಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page