ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಾಮ್ರಾ ಅವರ ‘ಗದ್ದಾರ್’ ಹೇಳಿಕೆ ಸರ್ಕಾರ ಮತ್ತು ವಿರೋಧ ಪಕ್ಷದ ನಡುವಿನ ಪ್ರಮುಖ ಸಂಘರ್ಷಕ್ಕೆ ಕಾರಣವಾಗಿದೆ. ಈ ನಡುವೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಅವರ ಬಗ್ಗೆ ಆಡಿದ ತಮಾಷೆಯ ವಿಡಿಯೋ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ಒಳನೋಟದ ಹಾಸ್ಯದ ಟೀಕೆಯ ಕಾರಣಕ್ಕೆ ಈಗ ಅನೇಕ ಎಫ್‌ಐಆರ್‌ಗಳು, ಬೆದರಿಕೆಗಳು ಸೇರಿದಂತೆ ಅವರ ಫೋನ್ ದಾಖಲೆಗಳ ತನಿಖೆ ಮತ್ತು ಅವರ ಹಣಕಾಸಿನ ದತ್ತಾಂಶಗಳ ಪರಿಶೀಲನೆಯ ಮಟ್ಟಕ್ಕೂ ಈಗ ಬಂದು ನಿಂತಿದೆ. ಈ ನಡುವೆ ತಮ್ಮ ‘ನಯಾ ಭಾರತ್’ ಕಾರ್ಯಕ್ರಮದಲ್ಲಿ, ಕಾಮ್ರಾ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ, ಲೇಖಕಿ ಸುಧಾ ಮೂರ್ತಿ ಅವರನ್ನು ‘ಸರಳತೆ ಮತ್ತು ಕೆಲಸದ ಸಂಸ್ಕೃತಿ’ಯ ಬಗ್ಗೆ ಆಡಿದ ತಮಾಷೆಯ ಮಾತುಗಳು ಈಗ ವೈರಲ್ ಆಗುತ್ತಿದೆ.
ತಮ್ಮ 45 ನಿಮಿಷಗಳ ಪ್ರದರ್ಶನದಲ್ಲಿ, ಕುನಾಲ್ ಕಾಮ್ರಾ ಅವರು ಸುಧಾ ಅವರ ಸಾಧಾರಣ ಜೀವನಶೈಲಿಯನ್ನು ಅಣಕಿಸುತ್ತಾ, “ಮಧ್ಯಮ ವರ್ಗದವರಂತೆ ನಟಿಸುವ ಶ್ರೀಮಂತ ಜನರಲ್ಲಿ, ಸುಧಾ ಮೂರ್ತಿ ಎಂಬ ಮಹಾನ್ ಮಹಿಳೆ ಇದ್ದಾರೆ. ಅವರು ಸರಳತೆಯ ಸಾಕಾರರೂಪ. ಅದು ಅವರ ಹಕ್ಕು. ಅವರು ತಮ್ಮ ಸರಳತೆಯ ಬಗ್ಗೆ 50 ಪುಸ್ತಕಗಳನ್ನು ಬರೆದಿದ್ದಾರೆ… ಪ್ರತಿ ಪುಸ್ತಕದ ವಿಷಯವೆಂದರೆ ಅವರು ಸರಳರು ಎಂಬುದು” ಎಂದು ತಮ್ಮ ಹಾಸ್ಯದ ಧಾಟಿಯಲ್ಲಿ ಅಣಕಿಸಿದ್ದಾರೆ.
ಇನ್ಫೋಸಿಸ್ ನಾರಾಯಣಮೂರ್ತಿಯವರ ‘ಆರ್ಥಿಕ ಬೆಳವಣಿಗೆಗೆ ವಾರಕ್ಕೆ 70 ಗಂಟೆಗಳ ಕೆಲಸ’ ಎಂಬ ಸಲಹೆಯನ್ನು ಟೀಕಿಸಿದ ಕಾಮ್ರಾ, ಕಾರ್ಪೊರೇಟ್ ಉಡುಗೆ ತೊಟ್ಟ ಮಹಿಳೆಗೆ ಹೋಲಿಸಿದರೆ ಸುಧಾ ಅಗ್ಗದ ಬೆಲೆಗೆ ಮಾವಿನಹಣ್ಣುಗಳನ್ನು ಖರೀದಿಸುವ ಕಾಲ್ಪನಿಕ ಕಥೆಯನ್ನು ಅವರು ವಿವರಿಸಿದ್ದಾರೆ.
ಸುಧಾ ಮೂರ್ತಿಯವರು ಮಾವಿನ ಹಣ್ಣಿನ ವ್ಯಾಪಾರಿಯೊಂದಿಗೆ ಮಾಡುವ ಸರಳತೆಯ ಚೌಕಾಸಿ ವ್ಯಾಪಾರದ ಬಗ್ಗೆ ಪ್ರಸ್ತಾಪಿಸಿ, “ನಾನು ಮಾವಿನ ಮಾರಾಟಗಾರನ ಬಳಿಗೆ ಹೋಗಿದ್ದೆ, ನನಗೆ ಕೆಜಿಗೆ 100 ರೂಪಾಯಿ ತೆಗೆದುಕೊಂಡು ಇನ್ನೊಬ್ಬ ಮಹೀಳೆಗೆ ಕೆಜಿಗೆ 150 ರೂಪಾಯಿ ತೆಗೆದುಕೊಳ್ಳುತ್ತಾರೆ. ನನಗೆ ಯಾಕೆ ಅಷ್ಟು ಕಡಿಮೆ ಬೆಲೆ ಎಂದು ಕೇಳಿದಾಗ, ಮಾವಿನ ಹಣ್ಣಿನ ವ್ಯಾಪಾರಿ, ಆ ಮಹಿಳೆಗೆ ಇನ್ಫೋಸಿಸ್ ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಆಧುನಿಕ ಕಾರ್ಪೊರೇಟ್ ಕೆಲಸವಿದೆ ಎಂದು ಹೇಳಿದರು. ನಾರಾಯಣ ಮೂರ್ತಿ ನೀವು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಏಕೆ ಬಯಸುತ್ತಾರೆಂದು ಈಗ ನಮಗೆ ಅರ್ಥವಾಗಿದೆ” ಎಂದು ಟೀಕಿಸಿದ್ದಾರೆ.