Tuesday, January 7, 2025

ಸತ್ಯ | ನ್ಯಾಯ |ಧರ್ಮ

ನನ್ನೂರಿನ ರಸ್ತೆಗಳಲ್ಲಿ ಅವ ಕಾಣೆಯಾಗಿದ್ದಾನೆ.!

ನನ್ನೂರಿನ ರಸ್ತೆಗಳಲ್ಲಿ
ಅವ ಕಾಣೆಯಾಗಿದ್ದಾನೆ.!

ಪಾತ್ರೆ, ಪ್ಲಾಸ್ಟಿಕ್ ಸಾಮಾನು ,
ಹಾಸಿಗೆ ದಿಂಬು ಹೀಗೆ ಅಗತ್ಯ
ಹೊಸತನಗಳ ಮಾರುತಿದ್ದವನು.!
ಈಗ ಕಾಣೆಯಾಗಿದ್ದಾನೆ!

ಹಳೆಯ ಕಬ್ಬಿಣ , ಪುಸ್ತಕ, ಬಟ್ಟೆ
ಹೀಗೆ ಬೇಡದ ಹರಕು ಮುರುಕು
ನೆನಪನ್ನೆಲ್ಲಾ ಕೊಳ್ಳುತ್ತಿದ್ದವನು.
ಈಗ ಕಾಣೆಯಾಗಿದ್ದಾನೆ!

ಸಾಣೆಕಾಣದ ಕತ್ತರಿ, ಚೂರಿಗಳು ಈಗ
ಪ್ರೀತಿ ಕಾಣದ ಮನಸಿನಂತೆಯೇ
ತುಕ್ಕು ಹಿಡಿಯುತ್ತಿವೆ.
ಯಾಕೆಂದರೆ ಅವ ಕಾಣೆಯಾಗಿದ್ದಾನೆ!

ಚಮ್ಮಾರನ ಬೆಸುಗೆಯ
ನೂಲುಕಾಣದೆ ಮೂಲೆಸೇರಿರೋ
ಚಪ್ಪಲಿಗಳೂ ಸಹ, ನಾವೇ ಆಸ್ಥೆಯಿಂದ
ಬೆಸೆದುಕೊಳ್ಳದೆ ಕಳೆದುಕೊಂಡ ಅದೆಷ್ಟೋ
ಬಂಧಗಳ ಬೆಲೆ ಕಲಿಸುತ್ತಿದೆ.
ಯಾಕೆಂದರೆ ಅವ ಕಾಣೆಯಾಗಿದ್ದಾನೆ!

ನನ್ನೂರಿನ ರಸ್ತೆಗಳೂ ಈಗ
ಅವನಿಲ್ಲದೆ ಬದುಕುವುದಕ್ಕೆ
ಹೊಂದಿಕೊಂಡಹಾಗಿದೆ!
ಕುತೂಹಲದಿಂದೊಮ್ಮೆ ರಸ್ತೆಯೊಡನೆ
ಮಾತಿಗಿಳಿ(ಗೆಳೆ)ದೆ.!
ನನ್ನತನದ ನೆಲವ ಕೊಂದು
ಡಾಂಬರಿನ ಸಮಾಧಿ ಕಟ್ಟಿದ ಮೇಲೆ
ಮಳೆಹನಿಯ ಸದ್ದಿನ ಹಿಂದೆ
ಮಣ್ಣಿನ ಘಮಲು ಹುಡುಕುವ
ವ್ಯರ್ಥ ಪ್ರಯತ್ನ ಮಾಡಬೇಡಿ
ಎಂದು ನಕ್ಕಂತೆ ಭಾಸವಾಯ್ತು!

–ಅಹರ್ನಿಶೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page