Monday, June 17, 2024

ಸತ್ಯ | ನ್ಯಾಯ |ಧರ್ಮ

ಬಡವರ ಮಕ್ಕಳು ಹೀರೊ ಆಗ್ಲಿಕ್ಕೆ ಬಿಡ್ತಿರೇನ್ರೊ ನೀವು? ಹೆಡ್‌ ಬುಷ್‌ ವಿವಾದಕ್ಕೆ ನಿರ್ದೇಶಕರ ಆಕ್ರೋಶ

ಬೆಂಗಳೂರು: ಧನಂಜಯ್‌ ನಿರ್ಮಾಣ, ನಟನೆಯ ಹೆಡ್‌ ಬುಷ್‌ ಸಿನಿಮಾ ಕುರಿತು ವಿನಾಕಾರಣ ವಿವಾದಗಳನ್ನು ಸೃಷ್ಟಿಸುತ್ತಿರುವುದರ ಕುರಿತು ಚಲನಚಿತ್ರ ನಿರ್ದೇಶಕರು, ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಧನಂಜಯ್‌ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿರ್ದೇಶಕ ಬಿ.ಎಂ.ಗಿರಿರಾಜ್‌ ಈ ಕುರಿತು ಫೇಸ್‌ ಬುಕ್‌ ನಲ್ಲಿ ಬರೆದಿದ್ದು, ಬಡವರ ಮಕ್ಕಳು ಹೀರೊ ಆಗ್ಲಿಕ್ಕೆ ಬಿಡ್ತಿರೇನ್ರೊ ನೀವು. ಹಿಂದಿಂದಲೇ ಹೊಡೆದು ಬಿಡ್ತೀರ ಎಂದು ಆಕ್ರೋಶ ತೋಡಿಕೊಂಡಿದ್ದಾರೆ.

ನೆಲದ ಬಗ್ಗೆ ಅಪಾರವಾದ ಕಾಳಜಿ, ಮನುಷ್ಯತ್ವ, ಮಾನವೀಯ ಕಾಳಜಿ ಇರುವ ಧನಂಜಯ್‌ ರವರಂತಹ ನಟರು ಕನ್ನಡ ಚಿತ್ರರಂಗಕ್ಕೆ ಹೆಚ್ಚೇ ಅವಶ್ಯಕವಾಗಿದ್ದಾರೆ. ಅವರೊಂದಿಗೆ ಕನ್ನಡ ಚಿತ್ರರಂಗ ನಿಲ್ಲಬೇಕು ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನವರೆಗೆ ಕೇವಲ ಉತ್ತರ ಭಾರತದಲ್ಲಿದ್ದ, ನಂಬಿಕೆಯ ಹೆಸರಲ್ಲಿ ಸಿನೆಮಾಗಳ ಮೇಲೆ ಮುಗಿಬಿದ್ದು ಬಾಯ್ಕಾಟ್-ಬ್ಯಾನ್ ಎಂದು ಕೂಗುವ ಖಾಯಿಲೆ ಈಗ ಕರ್ನಾಟಕಕ್ಕೂ ಬಂದು ನಿಂತಿದೆ. ಎಲ್ರೂ ಎಲ್ಲಾನೂ ಗುತ್ತಿಗೆ ತಗೊಂಡಿದ್ದಾರೆ. ಬಹುಶಃ ಮುಂದೆ ಸಿನೆಮಾದವರು ತಾವು ಹಾಕೋ ಬಟ್ಟೆಗೂ ಇನ್ನೊಬ್ರಿಂದ ಪರ್ಮೀಷನ್ ತಗೋಬೇಕಾಗುತ್ತೇನೋ ಎಂದು ಅವರು ನೊಂದು ನುಡಿದಿದ್ದಾರೆ.

ಸಿನೆಮಾ ನೋಡುವವರಿಗಿಂತ, ನೋಡದೇ ಅರಚುವವರ ಉಪಟಳ ಜಾಸ್ತಿ ಆಗ್ತಿದೆ. ಇಂತಹ ಸಮಯದಲ್ಲಿ ಚಿತ್ರರಂಗದಲ್ಲಿರುವ ‘ಘಟಗಳು’ ಪರಸ್ಪರ ಜೊತೆಯಾಗಿ, ಒಗ್ಗಟ್ಟಾಗಿ ನಿಲ್ಲುವ ಬದಲು..‌ತಮ್ಮ ಲೋಕದಲ್ಲಿ ತಾವಿದ್ದಾರೆ. ಹೀಗೆ ಹೋದ್ರೆ ಚಿತ್ರರಂಗವನ್ನೇ ನಂಬಿರುವ ಕುಟುಂಬಗಳು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೊಂಡು ಮಲಗಬೇಕಾಗುತ್ತದೆ ಎಂದು ಮಂಸೋರೆ ನುಡಿದಿದ್ದಾರೆ.

ಚಿತ್ರಸಾಹಿತಿ ಕವಿರಾಜ್‌ ಫೇಸ್‌ ಬುಕ್‌ ನಲ್ಲಿ ಈ ಕುರಿತು ಬರೆದಿದ್ದು ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ , ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ‌. ಬಣ , ಪಂಥಗಳ ಆಧಾರದ ದ್ವೇಷದಲ್ಲಿ ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನರಲ್ ಆಗಿ‌, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ. ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ‌ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಒಬ್ಬ ಗೀತರಚನಾಕಾರನಾಗಿರುವ ನನ್ನ ಖಚಿತ ನಿಲುವು ಎಂದು ಹೇಳಿದ್ದಾರೆ.

ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ ,ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ ಎಂದು ಕವಿರಾಜ್‌ ನುಡಿದಿದ್ದಾರೆ.

#Amwithdhananjay

Related Articles

ಇತ್ತೀಚಿನ ಸುದ್ದಿಗಳು