Home ಬೆಂಗಳೂರು ಬೆಂಗಳೂರು: ಶಾಲೆಯಲ್ಲಿ ಅನಾರೋಗ್ಯ ಆತಂಕ, ಎಚ್‌1ಎನ್‌1 ದೃಢ – ತರಗತಿಗಳು ಸ್ಥಗಿತ

ಬೆಂಗಳೂರು: ಶಾಲೆಯಲ್ಲಿ ಅನಾರೋಗ್ಯ ಆತಂಕ, ಎಚ್‌1ಎನ್‌1 ದೃಢ – ತರಗತಿಗಳು ಸ್ಥಗಿತ

0

ಬೆಂಗಳೂರಿನ ರಿಚರ್ಡ್ಸ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಅನಾರೋಗ್ಯ ಬಿಕ್ಕಟ್ಟು ತಲೆದೋರಿದ್ದು, ನೂರಾರು ಮಕ್ಕಳು ಹಾಗೂ ಸಿಬ್ಬಂದಿ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿದ್ದಾರೆ. ಒಟ್ಟು 2,500 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳು ಹಾಗೂ 21 ಬೋಧಕ-ಬೋಧಕೇತರ ಸಿಬ್ಬಂದಿ ಏಕಾಏಕಿ ಅಸ್ವಸ್ಥರಾಗಿದ್ದಾರೆ. ಈ ಪೈಕಿ 137 ಮಕ್ಕಳಿಗೆ ತೀವ್ರ ಜ್ವರ ಬಂದಿದ್ದು ಶಾಲೆಯಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದರೆ, 15ಕ್ಕೂ ಹೆಚ್ಚು ಮಕ್ಕಳನ್ನು ತಕ್ಷಣ ಮನೆಗೆ ಕಳುಹಿಸಲಾಗಿತ್ತು.

ಆತಂಕದ ಸಂಗತಿಯೆಂದರೆ, ಇಬ್ಬರು ವಿದ್ಯಾರ್ಥಿಗಳಲ್ಲಿ ಎಚ್‌1ಎನ್‌1 ಸೋಂಕು ಪತ್ತೆಯಾಗಿದೆ. ಇದರಿಂದ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿ ಇಡೀ ಆವರಣವನ್ನು ಸ್ಯಾನಿಟೈಸ್ ಮಾಡಿಸಿ, ಮುಂಜಾಗ್ರತಾ ಕ್ರಮವಾಗಿ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಈ ನಿರ್ಧಾರ ಪೋಷಕರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಆನ್‌ಲೈನ್ ತರಗತಿಗೆ ಮೊರೆ
ಸೋಂಕು ಹರಡುವಿಕೆ ತಡೆಗಟ್ಟಲು ಮಾಂಟೆಸ್ಸರಿ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ತರಗತಿಗಳನ್ನು ಆಗಸ್ಟ್ 18ರವರೆಗೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಆನ್‌ಲೈನ್ ಪಾಠ ವ್ಯವಸ್ಥೆ ಕಲ್ಪಿಸಲಾಗಿದೆ.

ಬೀದಿಬದಿ ಅಂಗಡಿಗಳ ಮೇಲೆ ಆರೋಪ
ಈ ಆರೋಗ್ಯ ಸಮಸ್ಯೆಗೆ ಶಾಲೆಯ ಸುತ್ತಮುತ್ತಲಿನ ಅನೈರ್ಮಲ್ಯ ಬೀದಿಬದಿ ಅಂಗಡಿಗಳೇ ಕಾರಣವೆಂದು ಆಡಳಿತ ಮಂಡಳಿ ಆರೋಪಿಸಿದೆ. ಶಾಲಾ ಆವರಣದ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ದರೂ, ಅದು ಕಾಗದಕ್ಕಷ್ಟೇ ಸೀಮಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಆಡಳಿತ ಮಂಡಳಿ, ಜಿಬಿಎ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅನಧಿಕೃತ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿದೆ.

You cannot copy content of this page

Exit mobile version