Home ವಿಶೇಷ ಹೆಣ್ಣು-ಎಲ್ಲಿ ಅವಳು? ಎಲ್ಲಿ ಅವಳ ಅಸ್ತಿತ್ವ?

ಹೆಣ್ಣು-ಎಲ್ಲಿ ಅವಳು? ಎಲ್ಲಿ ಅವಳ ಅಸ್ತಿತ್ವ?

0

ಅವಳಿಗೆ ಎಷ್ಟೇ ಧೈರ್ಯ, ಬುದ್ಧಿ,ಸಾಧಿಸುವ ಛಲ ಬದುಕಿನ ಮೇಲೆ ಸಾವಿರಾರು ಕನಸುಗಳನ್ನ ಇಟ್ಟುಕೊಂಡಿದ್ದರೂ ಎಲ್ಲವನ್ನೂ ಸಹಿಸಿಕೊಂಡು, ಅದನ್ನ ಸಾಯಿಸಿಕೊಂಡು ತನ್ನ ಮನೆಯವರ ಮಾತುಗಳಲ್ಲೇ ಬಂದನವಾಗಿರುವವಳು ಹೆಣ್ಣು ಎನ್ನುತ್ತಾರೆ
ಅಂಜನಿದೇವಿ ಕೆ ಸಿ.

ಮನಸಲ್ಲಿ ನೂರಾರು ಆಸೆಗಳು…ಆದ್ರೆ ಮದುವೆಗೂ ಮುನ್ನ ಅವಳ ಪೋಷಕರು ಹೆಣ್ಣು ಎಂಬ ಕಾರಣಕ್ಕೆ ಅವಳನ್ನು ಅಂದುಕೊಂಡಿರುವ ಯಾವ ಕೆಲಸವನ್ನೂ ಮಾಡಲಿಕ್ಕೆ ಬಿಡದೆ, ಗುರಿ ತಲುಪಲಿಕ್ಕೆ ಬಿಡದೆ ಅವರಿಗಿಷ್ಟ ಬಂದ ದಾರಿಯಲ್ಲಿ ಕಳಿಸುತ್ತಾರೆ…ಒಪ್ಪಿಕೊಳ್ಳೋಣ ಯಾವ ತಂದೆ ತಾಯಿಯು ಮಗಳಿಗೆ ಕೆಟ್ಟದ್ದು ಬಯಸೋದಿಲ್ಲ…ಹಾಗಂತ ಎಲ್ಲರೂ ಎಲ್ಲವನ್ನೂ ತಿಳಿದಿರಲಿಕ್ಕೆ ಸಾಧ್ಯವಿಲ್ಲ ಅಲ್ವಾ ತಂದೆ ತಾಯಿಗೆ ಗೊತ್ತಿರದ ನೂರಾರು ಒಳ್ಳೆಯ ದಾರಿಗಳೂ ಇರುತ್ತವೆ ಅದನ್ನು ಪೋಷಕರು ಅರಿತು ಹೆಣ್ಣಿಗೆ ಪ್ರೋತ್ಸಾಹ ಯಾಕೆ ಕೊಡದೆ ಎಲ್ಲವನ್ನೂ ನಿರ್ಭಂದ ಮಾಡ್ತಾರೆ.  ಮದುವೆ ಎಂಬ ಮಾತನಾಡಿ ತಾಳಿ ಎಂಬ ದಾರದಿಂದ ಹೆಣ್ಣನ್ನು ಕಟ್ಟಿ ಹಾಕಿ ಅವಳನ್ನು ಒಂದೇ ಬಾರಿಗೆ ಗಂಡನ ಮನೆಗೆ ಒಪ್ಪಿಸಿಬಿಡುತ್ತಾರೆ. ಮತ್ತೆ ಅವಳು ಹುಟ್ಟಿದ ಮನೆಗೆ ಬರಬೇಕಾದರೆ ನೆಂಟರಾಗಿ ಬರಬೇಕೆ ವಿನಹ ಅಲ್ಲೇ ಬಂದು ಕೆಲವು ದಿನ ಆಸೆ ಇಂದ ಉಳಿದರೂ, ತೊಂದರೆ ಬಂದು ಉಳಿದರೂ, ಕಷ್ಟ ಬಂದಾಗ ಬಂದು ಉಳಿದರೂ ಅವಳ ತವರು ಮನೆಯ ಅಸ್ತಿತ್ವವನ್ನೂ ಅಲ್ಲಿನವರು ಮರೆತು ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂಬ ಚುಚ್ಚುಮಾತುಗಳನ್ನಾಡಿ ಅವಳ ಮನಸನ್ನೇ ಸಾಯಿಸಿಬಿಡುತ್ತಾರೆ.

ಒಂದು ಹೆಣ್ಣು ಹುಟ್ಟಿನಿಂದ ಮದುವೆ ಆಗುವವರೆಗೆ ಅಪ್ಪನ ಮನೆಯಲ್ಲಿ ಇರುತ್ತಾಳೆ. ಅಲ್ಲಿ ನೀ ಎಷ್ಟೇ ಆಗಲಿ ಬೇರೆ ಮನೆಗೆ ಸೇರಿದವಳೆ ಎಂಬ ಮಾತುಗಳನ್ನು ಕೇಳುತ್ತ… ಮದುವೆಯ ನಂತರ ಗಂಡನ ಮನೆಗೆ ಶಾಶ್ವತವಾಗಿ ಹೋಗಿ ಜೀವಿಸುತ್ತಾಳೆ. ಆದ್ರೆ ಈ ಸಮಾಜ ಕಟ್ಟಿದ ಸಂಸ್ಕೃತಿ ಏನೆಂದರೆ ಗಂಡು ಹೆಣ್ಣಿನ ಮನೆಗೆ ಬಂದು ಮನೆಯನ್ನ, ಮನೆ ಹೇಗಿದೆ ಎಂದೆಲ್ಲಾ ನೋಡಬಹುದಂತೆ, ಆದ್ರೆ ಹೆಣ್ಣು ಮಾತ್ರ ಸಾಯೋವರೆಗು ಬಾಳಿ ಬದುಕುವ ಮನೆಯನ್ನ ಮದುವೆಯಾದ ನಂತರವೇ ಆ ಮನೆಗೆ ಹೋಗಬೇಕು, ಒಂದು ವೇಳೆ ಆ ಮನೆಯ ವಾತಾವರಣ ಇಷ್ಟವಿಲ್ಲದಿದ್ದರೂ ಅಲ್ಲಿಯೇ ಇರಬೇಕು. ಅಬ್ಭಾ ಇದೆಂತಾ ಸಂಸ್ಕೃತಿ….

ಸರಿ…ಅಲ್ಲಿ ಹೇಗಿದ್ದರೂ ಆ ಹೊಸ ಜನಗಳನ್ನು ಅನುಸರಿಸಿಕೊಂಡು ಹೋಗಿಬಿಡುತ್ತಾಳೆ ಅಂದ್ರೆ ಹುಟ್ಟಿದ ಮನೆಯಲ್ಲಿದ್ದಾಗ ಅವಳು ಹಾಕುವ ಬಟ್ಟೆ, ಅವಳಿಗೆ ಇಷ್ಟವಾಗುವ ಆಹಾರ, ಅಪ್ಪನ ಮನೆಯಲ್ಲಿ ಮಾಡುತ್ತಿದ್ದ ತರ್ಲೆ ಒಂದೆಡೆಯ ರಾಶಿ ಕನಸುಗಳನ್ನೆಲ್ಲಾ ಹುಟ್ಟಿದ ಮನೆಯಲ್ಲಿಯೇ ಬಿಟ್ಟು ಎಲ್ಲವನ್ನೂ ಬದಲಿಸಿ ತನ್ನತನವನ್ನ ಮರೆತು ಅಸ್ತಿತ್ವವನ್ನೇ ಬಿಟ್ಟು ಬದುಕುವ ಪರಿಸ್ಥಿತಿ. ಒಂದೇ ಬಾರಿಗೆ ಎದುರಿಸುತ್ತಾ ಬದಲಾಗುತ್ತಾ ಬದುಕಲು ಆರಂಭಿಸುವ ಹೆಣ್ಣು…ಅಲ್ಲಿಂದ ಇಷ್ಟವೋ ಕಷ್ಟವೋ ಇಷ್ಟು ದಿನ ಮಗುವಾಗಿದ್ದ ಅವಳೇ ಮಗುವನ್ನು ಪಡೆದು ಅಮ್ಮನಾಗ್ತಾಳೆ. ಅವರನ್ನ ಬೆಳೆಸಿ ದೊಡ್ಡವರನ್ನು ಮಾಡುವಷ್ಟರಲ್ಲಿ ಮಕ್ಕಳ ಹಂಗಿಗೆ ಒಳಗಾಗುತ್ತಾಳೆ. ಹೀಗಿದ್ದಾಗ ಅಲ್ಲಿಯೂ ಎಲ್ಲೋಯಿತು ಅವಳ ಸ್ಥಾನ?

ಅವಳಿಗೆ ಎಷ್ಟೇ ಧೈರ್ಯ, ಬುದ್ಧಿ,ಸಾಧಿಸುವ ಛಲ ಬದುಕಿನ ಮೇಲೆ ಸಾವಿರಾರು ಕನಸುಗಳನ್ನ ಇಟ್ಟುಕೊಂಡಿದ್ದರೂ ಎಲ್ಲವನ್ನೂ ಸಹಿಸಿಕೊಂಡು, ಅದನ್ನ ಸಾಯಿಸಿಕೊಂಡು ತನ್ನ ಮನೆಯವರ ಮಾತುಗಳಲ್ಲೇ ಬಂದನವಾಗಿರುವವಳು ಹೆಣ್ಣು. ಈ ಸಮಾಜದ ಶೇ.99% ರಷ್ಟು ಹೆಣ್ಣು ಮಕ್ಕಳ ಪರಿಸ್ಥಿತಿ ಇದೇ ಆಗಿದೆ.

ಮದುವೆ ವಿಷಯಕ್ಕೆ ಬರುವುದಾದರೆ ಒಬ್ಬ ಗಂಡು ಮಗ ಅವನಿಗಿಷ್ಟವಾದ ಯಾವುದೇ ಕೆಲಸ ಮಾಡಿದರೂ, ಇಷ್ಟವಾದ ಸಂಗಾತಿಯ ಆಯ್ಕೆ ಮಾಡಿದರೂ ‘ಅವನು ಗಂಡು ಮಗ ಏನು ಮಾಡಿದರೂ ನಡೆಯುತ್ತದೆ’ ಎನ್ನುವ ಒಂದೇ ಮಾತಿನಿಂದ ಹೆಣ್ಣನ್ನು ಕುಗ್ಗಿಸುತ್ತಾ ಬಂದುಬಿಟ್ಟಿದ್ದಾರೆ.

ಒಬ್ಬ ಹೆಣ್ಣು ಏನಾದರೂ ಅವಳ ಗುರಿಯ ಕಡೆ ಯೋಚನೆ ಮಾಡೋವಾಗ,  ʼನೀನು ಎಷ್ಟೇ ಓದಿದರೂ ಏನೇ ಮಾಡಿದರೂ ಪಾತ್ರೆ ತೊಳೆಯುವುದು ತಪ್ಪಲ್ಲʼ ಎನ್ನುವ ಹಿಯಾಳಿಕೆಯ ಮಾತುಗಳು ಸಿದ್ಧವಾಗಿರುತ್ತವೆ. ಒಬ್ಬ ತಾಯಿ ತನ್ನ ಮಗಳು ಕೆಲಸ ಕಲಿಯಬೇಕು ಅನ್ನೋ ಭಾವನೆಗಿಂತಲೂ ಹೆಚ್ಚಾಗಿ ಮುಂದೆ ಗಂಡನ ಮನೆಯಲ್ಲಿ ಅವರು ಏನನ್ನುತ್ತಾರೋ ಎಂದೇ ಪ್ರತಿ ದಿನ ಅವಳು ಕೆಲಸದಲ್ಲಿ ತಪ್ಪು ಮಾಡಿದಾಗ ತಾಯಿ ಕೇಳೋದು ಇಷ್ಟೇ – ʼನೀನು ಹೋಗೋ ಮನೇಲಿ ಹೇಗೆ ಬಾಳುತ್ತೀಯ?ʼ ಎಂದು.

ಒಬ್ಬ ಹೆಣ್ಣು ಮದುವೆ ಆಗುವಷ್ಟರಲ್ಲಿ ಮನೆ ಕೆಲಸವನ್ನೆಲ್ಲಾ ಕಲಿಯಬೇಕು, ಅಡುಗೆ ಕಲಿಯಬೇಕು ಎನ್ನುವಂತದ್ದು ಯಾಕೆ? ಅವಳು ಮದುವೆಯ ನಂತರ ಮನೆ ಕೆಲಸಕ್ಕೇ ಹೋಗಬೇಕೇನೋ ಎನ್ನುವಂತೆ ಮಾತುಗಳನ್ನಾಡುತ್ತಾರೆ. ಒಂದು ಹುಡುಗ ಒಬ್ಬ ಹುಡುಗಿಯನ್ನು ಮದುವೆಯಾಗಬೇಕಾದ ಭಾವನೆ ಬರಬೇಕಾದುದು ಅವನಿಗೆ ಒಬ್ಬ ಪ್ರೀತಿಯ ಸಂಗಾತಿಗೋಸ್ಕರ. ಕೆಲಸ ಬರಬೇಕಾದುದು ಅವರು ಸ್ವತಂತ್ರವಾಗಿ ಮಾಡಿಕೊಂಡು ತಿನ್ನಲು ಎಂದಷ್ಟೆ ಅಲ್ಲವೇ? ಸಮಾಜದಲ್ಲಿ ಹೆಣ್ಣು ಗಂಡು ಎನ್ನದೇ ಸಮಾನ ಗೌರವ ಸಮಾನ ಸ್ಥಾನಮಾನ ಎಂಬುದನ್ನು ಕಾಣಲು ಇನ್ನೂ ಎಷ್ಟು ಶತಮಾನಗಳು ಬೇಕಾದೀತು?

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಅಂಜನಿದೇವಿ ಕೆ ಸಿ
ಮಾಲೂರು

You cannot copy content of this page

Exit mobile version