Saturday, October 5, 2024

ಸತ್ಯ | ನ್ಯಾಯ |ಧರ್ಮ

Her Story – 3: ಇದು ಪುಟ್ಟಗೌರಿಗಳ ಮದುವೆ

“…ಹೆಣ್ಣುಮಕ್ಕಳ ತಂದೆತಾಯಿಯರಿಗೆ ತಮ್ಮ ಮಕ್ಕಳನ್ನು ಸಾಗ ಹಾಕಿದರೆ ಸಾಕು ಎನ್ನುವಂತಹಾ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಾವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಕೂಡ ಅಗತ್ಯ…” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಈಗಷ್ಟೇ ಹತ್ತನೇ ತರಗತಿ ಮುಗಿಸಿರುವ ರೂಪಾ ಮದುವೆಗೆ ಸಿದ್ಧವಾಗುತ್ತಿದ್ದಾಳೆ. ತಂದೆ ತಾಯಿಗೆ ಮುಂದೆ ಓದಿಸುವ ಯೋಚನೆಯಿಲ್ಲ. ಒಳ್ಳೆ ಮನೆ ಸಿಕ್ಕಿದೆ. ಮದುವೆ ಮಾಡಿ ಕೊಟ್ಟರೆ ಕಷ್ಟಗಳೆಲ್ಲ ಪರಿಹಾರವಾಗುತ್ತದೆ ಎಂದು ನಂಬಿದ್ದಾರೆ. ರೂಪಾಗೆ ಮನೆ ಮಂದಿಯ ಸಂಭ್ರಮದ ನಡುವೆ ತನ್ನ ಆಯ್ಕೆ, ಆಸೆ ಯಾವುದೂ ತಿಳಿಯದೇ ತಾನೂ ಸಂಭ್ರಮಿಸುತ್ತಿದ್ದಾಳೆ. ಒಳಗೆಲ್ಲೋ ಭಯ, ಆತಂಕ.

ಅವಳ ಆತಂಕ ಹೊಸ ಮನೆ, ಹೊಸ ಜನದ ನಡುವೆ ಹೇಗೆ ಹೊಂದಿಕೊಳ್ಳುವುದು ಎಂದಷ್ಟೇ. ಇದೆಲ್ಲದರ ನಡುವೆ ಮುಂದಿನ ದೈಹಿಕ, ಮಾನಸಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ಆಕೆಯ ದೇಹ, ಮನಸ್ಸು ಎರಡೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಮುಂದಿನ ಎಷ್ಟೋ ವರ್ಷಗಳ ನಂತರ ಆಕೆಯ ಆರೋಗ್ಯ ಅಥವಾ ಮಾನಸಿಕ ಸ್ಥಿತಿಗತಿಯ ಬಗ್ಗೆ ಯೋಚಿಸಲು ಸಮಯವಾಗಲೀ ಕಾಳಜಿಯಾಗಲೀ ಯಾರಿಗೂ ಇಲ್ಲ.


ಹದಿಮೂರರ ಕುಸುಮಾ ಮದುವೆಯಾಗಲಿರುವುದು 40ರ ವ್ಯಕ್ತಿಯನ್ನು. ಆಕೆಗೆ ಅವನನ್ನು ನೋಡಿದರೆ ಹೆದರಿ ಓಡಿಹೋಗುವಂತಾಗುತ್ತದೆ. ಅಪ್ಪನಿಲ್ಲದ ಮನೆ, ಅಮ್ಮನಿಗೆ ಕುಸುಮಾಳನ್ನು ಸಾಕುವ ಶಕ್ತಿಯಿಲ್ಲ. ಮದುವೆ ಮಾಡಿಕೊಟ್ಟರೆ ಹೇಗೋ ಮಗಳ ಊಟ ಬಟ್ಟೆಗೆ ಸಮಸ್ಯೆಯಿಲ್ಲ ಎಂದು ಒಲ್ಲದ ಮನಸ್ಸಿನಿಂದಲೇ ಒಪ್ಪಿದ್ದಾಳೆ. ಮುಂದಿನ ಅನಾಹುತಗಳು ಮಗುವಿಗಲ್ಲ, ತಾಯಿಯ ಕಲ್ಪನೆಗಳಿಗೂ ಮೀರಿದ್ದು.


ದಶಕಗಳ ಹಿಂದೆ ಬಾಲ್ಯವಿವಾಹವೆಂಬ ಪಿಡುಗಿಗೆ ಬಲಿಯಾದ ಫತ್ರುಬೀಯವರ ನೋವು ಇನ್ನೂ ಅವರ ಕಣ್ಣಲ್ಲೇ ಇದೆ. ಎಳೆಯ ವಯಸ್ಸಿಗೆ ಮದುವೆ ಮಾಡಿಕೊಟ್ಟ ತಂದೆ ತಾಯಿ. ಕುಡಿತದ ಚಟಕ್ಕೆ ಮನೆಯ ಚೂರುಪಾರು ಆಸ್ತಿಯನ್ನೂ ಮಾರಿಕೊಂಡ ಗಂಡ ಮಕ್ಕಳು ಮರಿ ಎನ್ನುವ ಮೊದಲೇ ಕುಡಿತಕ್ಕೆ ಬಲಿಯಾಗಿದ್ದಾನೆ. ಈಗ ತಂದೆ ತಾಯಿಯೂ ತೀರಿಕೊಂಡಿದ್ದಾರೆ. ತನ್ನವರು, ತನ್ನದು ಎನ್ನುವ ಏನೂ ಇಲ್ಲದ ಆಕೆ ಈಗ ಬೀದಿಪಾಲಾಗಿದ್ದಾಳೆ.


ಮಹಿಳಾವಾದ ಧ್ವನಿಗಳು, ಪುರುಷ ಪ್ರಧಾನ ಸಮಾಜದ ಅಸಹನೆಯ ನಡುವಿನ ಭಿನ್ನಾಭಿಪ್ರಾಯಗಳ ನಡುವೆಲ್ಲೋ ಸುದ್ದಿಗೆ ಬಂದೂ ಮತ್ತೆ ಸದ್ದಿಲ್ಲದೇ ಮಾಯವಾಗುವ, ಮಾತುಗಳಲ್ಲೇ ಮರೆಯಾಗಿ ಕೊನೆಗೆ ಸರ್ಕಾರದ ಯಾವುದೋ ಅಂಗದ ಜವಾಬ್ದಾರಿಗಳ ಪಟ್ಟಿಯಲ್ಲಿ ಉಳಿದುಬಿಡುವ ವಿಷಯ ಬಾಲ್ಯ ವಿವಾಹ.

National Family Health Survey ಮತ್ತು National Crime Records Bureau ಒದಗಿಸಿರುವ ಅಂಕಿಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಡೆದ ಬಾಲ್ಯ ವಿವಾಹಗಳಲ್ಲಿ ಕರ್ನಾಟಕ ಮೊದಲನೆಯ ಸ್ಥಾನದಲ್ಲಿದೆ. 2030ರ ವೇಳೆಗೆ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂಬ ಉದ್ದೇಶದಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು 2006ರಲ್ಲಿ ಜಾರಿಗೆ ತರಲಾಯಿತು.ಇದರ ಹೊರತಾಗಿಯೂ 2018ರಿಂದ 2022ರವರೆಗೆ 3500ಕ್ಕೂ ಹೆಚ್ಚೂ ಬಾಲ್ಯ ವಿವಾಹಗಳು ನಡೆದಿರುವುದು ಆತಂಕಕಾರಿ. ಕಳೆದ 5 ವರ್ಷಗಳಲ್ಲಿ ಕರ್ನಾಟಕಕ್ಕೆ ಸುಮಾರು 700ಕ್ಕೂ ಹೆಚ್ಚಿನ ಬಾಲ್ಯ ವಿವಾಹಗಳು ವರದಿಯಾಗಿವೆ.

ಬಾಲ್ಯವಿವಾಹದಷ್ಟೇ ಭೀಕರವಾದ ಮತ್ತು ಇನ್ನಷ್ಟು ಬಿಚ್ಚಿಬೀಳಿಸುವ ಸಮಸ್ಯೆ ಹೆಚ್ಚಿದ ಬಾಲ ಗರ್ಭಿಣಿಯರು ಸಂಖ್ಯೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಅನುಸಾರ 2023ರಲ್ಲಿಯೇ ಸುಮಾರು 28,657 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೇ ಅತಿಹೆಚ್ಚು ಬಾಲಗರ್ಭಿಣಿಯರು ಪತ್ತೆಯಾಗಿದ್ದು, 2750ಕ್ಕೂ ಹೆಚ್ಚಿನ ಬಾಲಗರ್ಭಿಣಿಯರ ಸಂಖ್ಯೆ ಹೊಂದಿ ಬೆಳಗಾವಿ ಎರಡನೆಯ ಸ್ಥಾನದಲ್ಲಿದೆ.

ಲೈಂಗಿಕ ದೌರ್ಜನ್ಯ ಮತ್ತು ಅಪ್ರಾಪ್ತ ವಯಸ್ಸಿಗೆ ದೈಹಿಕ ಸಂಪರ್ಕಗಳು ಹೆಚ್ಚುತ್ತಿರುವುದು ಇದಕ್ಕೆ ಒಂದು ಕಾರಣವಾದರೆ ಬಾಲ್ಯ ವಿವಾಹ ಇದಕ್ಕೆ ಅತಿದೊಡ್ಡ ಕಾರಣ. ಶಾಲಾ ಶಿಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕೆಲಸ ನಿರ್ವಹಿಸುತ್ತಿರುವವರು, ಬಾಲ್ಯವಿವಾಹ ತಡೆ ಕಾವಲು ಸಮಿತಿ, ಮಕ್ಕಳ ರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹೀಗೆ ಎಲ್ಲಾ ಹಂತದಲ್ಲಿಯೂ ಬಾಲ್ಯ ವಿವಾಹ ನಿಷೇಧಕ್ಕೆ ಪೂರಕವಾದ ಅಧಿಕಾರಿ ಸಿಬ್ಬಂದಿಗಳಿದ್ದಾಗಲೂ ಈ ಸಂಖ್ಯೆಗಳಲ್ಲಿ ಹೆಚ್ಚಳವಾಗುತ್ತಿರುವುದು ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ.

ಅಧಿಕೃತವಾಗಿ ಬೆಳಕಿಗೆ ಬಂದ ಪ್ರಕರಣಗಳೇ ಇಷ್ಟಿರುವಾಗ ಇನ್ನು ವಾಸ್ತವ ಹೇಗಿರಬಹುದು ಎನ್ನುವುದು ಆತಂಕಕಾರಿ. ಓದುವ ವಯಸ್ಸಿಗೆ ಶಾಲೆ ಬಿಟ್ಟು ಮನೆಯಲ್ಲಿರುವುದು, ಕೆಲಸಗಳಿಗೆ ಹೋಗುವುದು ಒಂದು ಕಾರಣವಾದರೆ, ಕರ್ನಾಟಕದ ಎಷ್ಟೋ ಭಾಗದಲ್ಲಿ ಇನ್ನೂ ದೇವದಾಸಿ ಪದ್ಧತಿಯಂತಹಾ ಅಮಾನುಷ ಪದ್ಧತಿಗಳು ಇನ್ನೂ ಜಾರಿಯಲ್ಲಿವೆ. ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣವೇ ಅವುಗಳ ಭವಿಷ್ಯವನ್ನು ನಿರ್ಧರಿಸಿ ಬಾಲ್ಯವನ್ನು ಮೊಟಕುಗೊಳಿಸುವ ಅಮಾನವೀಯ ಪದ್ಧತಿಗಳಿಂದ ಪುರುಷ ಪ್ರಧಾನ ಸಮಾಜ ಹೊರಬಂದಿಲ್ಲ. ಹಳೆಯ ಅಮಾನವೀಯ ಪದ್ಧತಿಗಳಿಂದ ಹೊರಬರದ ಸಮಾಜ ಒಂದು ಭಾಗವಾದರೆ ಇದರ ಇನ್ನೊಂದು ಆಯಾಮ ಬಹಳ ಸಂಕೀರ್ಣವಾದದ್ದು.

ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದಂತಹ ಪ್ರಕರಣಗಳು ಬಡ ತಂದೆತಾಯಿಯರಿಗೆ ಇನ್ನೂ ಅಭದ್ರತೆಯನ್ನು ಹೆಚ್ಚಿಸುತ್ತದೆ.ಎಲ್ಲಿಂದಲೋ ವಲಸೆ ಬಂದು ನಗರಗಳಲ್ಲಿ ನೆಲೆ ಕಂಡುಕೊಂಡು ಪುಟ್ಟ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೂಲಿಗೆ ಹೋಗುವ ಲಕ್ಷಾಂತರ ಅಪ್ಪ ಅಮ್ಮಂದಿರಿದ್ದಾರೆ. ಎರಡು ಹೊತ್ತಿನ ಊಟಕ್ಕಾಗಿ ಹೊರಹೋಗಿ ಬಂದಾಗ ತಮ್ಮ ಐದೋ ಆರೋ ವರ್ಷದ ಕಂದಮ್ಮ ಅತ್ಯಾಚಾರಕ್ಕೊಳಗಾಗಿ ಎಲ್ಲೋ ಹೆಣವಾಗಿ ಬಿದ್ದಿರುವುದನ್ನು ನೋಡಿ ಎದೆಯೊಡೆದುಕೊಂಡವರಿದ್ದಾರೆ. ನಮ್ಮೊಡನೆಯೇ ಇದ್ದು ರಕ್ಷಣೆ ಕೊಡಲಾಗದ ಸಂದರ್ಭದಲ್ಲಿ ಮಗು ಮದುವೆಯ ನೆಪದಲ್ಲಾದರೂ ಯಾರದೋ ಮನೆಯಲ್ಲಿ ಜೀವಂತವಾಗಿ ಸುರಕ್ಷಿತವಾಗಿರಲಿ ಎಂದುಕೊಂಡವರಿದ್ದಾರೆ.

ಇದು ಕೇವಲ ನಡೆಯುತ್ತಿರುವ ಬಾಲ್ಯವಿವಾಹವನ್ನು ಸಿನಿಮೀಯ ರೀತಿಯಲ್ಲಿ ನಿಲ್ಲಿಸಿದರೆ ಪರಿಹಾರವಾಗುವ ಸಮಸ್ಯೆಯಲ್ಲ. ಬಾಲ್ಯವಿವಾಹವಾದರೆ ಒಂದು ಮಗುವಿನ ಮಾನಸಿಕ, ದೈಹಿಕ ಆರೋಗ್ಯಕ್ಕೆ ಉಂಟಾಗುವ ಸಮಸ್ಯೆಗಳ ಕುರಿತಾಗಿ ಜಾಗೃತಿ ಮೂಡಿಸುವಷ್ಟೇ ಕಾಳಜಿಯಿಂದ ಬಾಲ್ಯವಿವಾಹಕ್ಕೆ ದೂಡುತ್ತಿರುವ ಕಾರಣಗಳ ಕುರಿತೂ ಯೋಚಿಸಿ ಪರಿಹಾರ ಕಂಡುಕೊಳ್ಳುವಿಕೆಯತ್ತ ಗಮನ ಹರಿಸಬೇಕಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಮಾಡುವ ಕುಟುಂಬದ ಮಕ್ಕಳನ್ನು ನೋಡಿಕೊಳ್ಳಲು ಶಿಶುಪಾಲನಾ ಕೇಂದ್ರಗಳಿವೆ, ಅಂಗನವಾಡಿಗಳಿವೆ. ನಗರ ಪ್ರದೇಶದ ಕೂಲಿಕಾರರಿಗೆ ಆ ಸೌಲಭ್ಯವಿದೆಯೇ? ಈ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಿಶುಪಾಲನಾ ಕೇಂದ್ರಗಳ ಕುರಿತು ಇಂತಹಾ ಪೋಷಕರಿಗೆ ಮಾಹಿತಿ ಇದೆಯೇ ಮತ್ತು ಅವುಗಳು ಸುಸಜ್ಜಿತ ಹಾಗೂ ಸುರಕ್ಷಿತವಾಗಿದೆಯೇ? ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗು ಎನ್ನುವುದರ ಹೊರತಾಗಿ ಅದದಿಂದಾಗುವ ಸಮಸ್ಯೆಗಳ ಕುರಿತು ಮಕ್ಕಳಿಗೆ ಅರಿವಿದೆಯೇ? ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ತಾನು ಅಪ್ರಾಪ್ತ ವಯಸ್ಸಿಗೆ ಮದುವೆಯಾಗಬಾರದು, ದೈಹಿಕ ಸಂಪರ್ಕ ಬೆಳೆಸಬಾರದು ಮತ್ತು ಏಕೆ, ಅದರಿಂದ ಏನಾಗುತ್ತದೆ ಎಂಬ ಅರಿವು ಮೂಡಿಸುವುದರ ಜೊತೆಗ, ಗಂಡು ಮಕ್ಕಳಿಗೂ ತಾವು ಯಾವುದೇ ಹೆಣ್ಣುಮಗಳನ್ನು ಆಕೆಯ ಒಪ್ಪಿಗೆಯಿಲ್ಲದೇ ಮುಟ್ಟಬಾರದು ಮತ್ತು ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳನ್ನು ಆಕೆಯ ಒಪ್ಪಿಗೆಯಿದ್ದರೂ ಮುಟ್ಟಬಾರದು ಎನ್ನುವ ಜಾಗೃತಿಯಿದೆಯೇ?

ಶಾಲೆ ಬಿಟ್ಟ ಮಕ್ಕಳಿಗೆ ಬಾಲ್ಯ ವಿವಾಹವಾದ ಪ್ರಕರಣಗಳು ಹೆಚ್ಚಿದ್ದರೆ, ಮಕ್ಕಳು ಶಾಲೆ ಬಿಡಲು ಕಾರಣವೇನು? ಶಾಲೆಗಳಲ್ಲಿ ಸರಿಯಾದ ಶೌಚಾಲಯ, ಸುರಕ್ಷತೆಯ ವ್ಯವಸ್ಥೆ ಇದೆಯೇ, ಋತುಮತಿಯಾದ ಹೆಣ್ಣುಮಕ್ಕಳಿಗೆ ಶಾಲೆಗೆ ಬರುವ ವಾತಾವರಣ, ನೀರು, ಸ್ವಚ್ಛತೆಯ ವ್ಯವಸ್ಥೆಯಿದೆಯೇ ಎನ್ನುವುದನ್ನೂ ಸಹ ಪ್ರಶ್ನಿಸಬೇಕಾಗಿದೆ.

ಜೊತೆ ಜೊತೆಗೇ, ಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ತಕ್ಷಣವೇ ಶಿಕ್ಷೆಯಾಗಿದೆಯೇ ಅಥವಾ ಬಡ ಹೆಣ್ಣುಮಕ್ಕಳ ಪ್ರಾಣ, ಮಾನ ಯಾರಿಗೂ ಬೇಡದ ವಸ್ತುವಾಗಿದೆಯೇ? ಹೆಣ್ಣುಮಕ್ಕಳ ತಂದೆತಾಯಿಯರಿಗೆ ತಮ್ಮ ಮಕ್ಕಳನ್ನು ಸಾಗ ಹಾಕಿದರೆ ಸಾಕು ಎನ್ನುವಂತಹಾ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಾವ ಪ್ರಯತ್ನ ನಡೆಯುತ್ತಿದೆ ಎನ್ನುವುದು ಕೂಡ ಅಗತ್ಯ.

ಇಂತಹ ಪ್ರತಿ ಸೂಕ್ಷ್ಮ ಸಮಸ್ಯೆಗಳಿಗೂ ಸಮಗ್ರವಾಗಿ, ಸಮಾನಾಂತರವಾಗಿ ಪರಿಹಾರ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರಬೇಕಾಗಿದೆ. ಇಲ್ಲವಾದರೆ ನಮ್ಮ ನಡುವಿನ ಪುಟ್ಟಗೌರಿಯರು ಮದುವೆಯಾಗಿ ಜೀವಮಾನದುದ್ದಕ್ಕೂ ಗಂಡನ ಪ್ರೀತಿ ದಕ್ಕಿಸಿಕೊಳ್ಳುವುದನ್ನೇ ಬದುಕು ಎಂದುಕೊಂಡು ಬದುಕು ಮುಗಿಸುತ್ತಾರೆ. ಬಾಣಂತಿ ಸಾವು, ಗರ್ಭಿಣಿ ಸಾವು, ನವಜಾತ ಶಿಶು ಸಾವು, ದೌರ್ಜನ್ಯ ಮುಂತಾದ ಪ್ರಕರಣಗಳು ಹೆಚ್ಚುತ್ತಲೇ ಇರುತ್ತವೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page