“..ಮಕ್ಕಳು ಹುಟ್ಟಿದಾಗಿನಿಂದ ಅವರನ್ನು ಸಮಾಜದ ನಿರೀಕ್ಷೆಗಳಿಗೆ ತಕ್ಕ ಹಾಗೆಯೇ ಬೆಳೆಸಲಾಗುತ್ತದೆ. ಎಳೆಯ ಕೂಸುಗಳ ತೊಟ್ಟಿಲಾದರೂ ಗಂಡುಮಕ್ಕಳ ತೊಟ್ಟಿಲಲ್ಲಿ ಹೆಲಿಕಾಪ್ಟರ್ ನೇತಾಡಿದರೆ, ಹೆಣ್ಣುಮಕ್ಕಳ ತೊಟ್ಟಿಲಲ್ಲಿ ಇನ್ಯಾವುದೋ ಗೊಂಬೆ ಇರುತ್ತದೆ…” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ..
ಅಕ್ಕನಿಗೆ ಹೆಣ್ಣು ಮಗುವಾಯಿತು ಅಂದ ಕೂಡಲೇ ಒಂದಿಷ್ಟು ಬೇಬಿ ಪಿಂಕ್ ಫ್ರಾಕ್ ಗಳ ಜೊತೆಗೆ ಹೋದವಳು ಸಾಫ್ಟ್ ಟಾಯ್ಸ್ ಗಳನ್ನೂ ಕೊಂಡೊಯ್ಯುತ್ತಾಳೆ. ಅಣ್ಣನ ಮಗನಿಗೆಂದು ಮೊನ್ನೆ ತೆಗೆದು ಕೊಟ್ಟ ಹೆಲಿಕಾಪ್ಟರ್ರನ್ನು ಅವನು ಮೂರು ದಿನಕ್ಕೆ ಮುರಿದು ಹಾಕಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ.
ಮಗಳ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಮಗನಿಗೇನೋ ಸೂಪರ್ ಹೀರೋ ಕೇಕ್ ಆರ್ಡರ್ ಕೊಟ್ಟು ಮಾಡಿಸಿದ್ದಾಯ್ತು. ಈಗ ಮಗಳಿಗು ಒಂದು ಬಾರ್ಬಿ ಇರುವ ಕೇಕ್ ಮಾಡಿಸೋದಿದೆ. ಒಂದು ಅಪ್ಸರೆ ಥರದ ಕಿರೀಟ, ಅದಕ್ಕೊಂದು ನಕ್ಷತ್ರ ಇರೋ ಮಂತ್ರದಂಡ..
ಏನೇ ಆದರೂ ನೀವು ಸೀರೆಲಿ ಚಂದ ಕಂಡ ಹಾಗೆ ಬೇರೆ ಯಾವ ಡ್ರೆಸ್ ನಲ್ಲೂ ಕಾಣೋದಿಲ್ಲ ಅಂತ ಅವನು ಒಮ್ಮೆ ಹೇಳಿದ್ದನ್ನು ನೆನಪಿಟ್ಟುಕೊಂಡು ಪ್ರತಿ ಬಾರಿಯೂ ಸೀರೆ ಉಡುವುದನ್ನು ಕಲಿಯುತ್ತಿದ್ದಾಳೆ. ಜೊತೆಗೊಂದಿಷ್ಟು ಮ್ಯಾಚಿಂಗ್ ಗಳು ಕೂಡ ಬೇಕಿದೆ.
ಟೀ ಅಂಗಡಿಯಲ್ಲಿ ಕೂತಾಗ ಕಾಡಿದ ಮುದ್ದು ಮುಖ ಟೇಬಲ್ ಒರೆಸುತ್ತಿದ್ದ ಹುಡುಗನದ್ದು. ಸ್ಕೂಲಿಗೆ ಹೋಗೋದಿಲ್ವಾ ಅಂದ ಮಾತಿಗೆ ಅವನು ನಕ್ಕನೋ, ತಲೆಯಾಡಿಸಿದನೋ ತಿಳಿಯದಷ್ಟು ಗೊಂದಲ ಕೂಡ.
ಮಗು ಹುಟ್ಟುವ ಮೊದಲಿನಿಂದಲೇ ಅದರ ಭವಿಷ್ಯವನ್ನು ಅದು ಗಂಡೋ ಹೆಣ್ಣೋ ಎಂಬುದರ ಮೇಲೆಯೇ ಸಮಾಜ ನಿರ್ಧರಿಸಿಬಿಡುತ್ತದೆ. ಹೆಣ್ಣುಮಗುವಿಗೆ ಪಿಂಕ್, ಗಂಡು ಮಕ್ಕಳಿಗೆ ನೀಲಿ ಅನ್ನುವ ಬಣ್ಣವನ್ನು ಯಾವತ್ತೋ ಸಮಾಜ ನಿರ್ಧರಿಸಿದ್ದಾಗಿದೆ. ಎಷ್ಟರ ಮಟ್ಟಿಗೆ ಅದು ಮಕ್ಕಳಲ್ಲಿಯೂ ಇಳಿದುಬಿಟ್ಟಿದೆಯೆಂದರೆ ಪುಟ್ಟ ಐದಾರು ವರ್ಷದ ಗಂಡುಮಕ್ಕಳು ಕೂಡ ಗರ್ಲ್ಸ್ ಕಲರ್ ನಾ ಹಾಕಲ್ಲ ಎಂದು ಹಟ ಮಾಡಲಾರಂಭಿಸುತ್ತಾರೆ, ಮತ್ತು ಅವರ ಅಮ್ಮಂದಿರು ಅಷ್ಟೇ ಹೆಮ್ಮೆಯಿಂದ ಅದನ್ನು ಹೇಳಿಕೊಳ್ಳುತ್ತಾರೆ.
ಮಕ್ಕಳು ಹುಟ್ಟಿದಾಗಿನಿಂದ ಅವರನ್ನು ಸಮಾಜದ ನಿರೀಕ್ಷೆಗಳಿಗೆ ತಕ್ಕ ಹಾಗೆಯೇ ಬೆಳೆಸಲಾಗುತ್ತದೆ. ಎಳೆಯ ಕೂಸುಗಳ ತೊಟ್ಟಿಲಾದರೂ ಗಂಡುಮಕ್ಕಳ ತೊಟ್ಟಿಲಲ್ಲಿ ಹೆಲಿಕಾಪ್ಟರ್ ನೇತಾಡಿದರೆ, ಹೆಣ್ಣುಮಕ್ಕಳ ತೊಟ್ಟಿಲಲ್ಲಿ ಇನ್ಯಾವುದೋ ಗೊಂಬೆ ಇರುತ್ತದೆ. ಮಕ್ಕಳಿಗೆ ತಾನು ಯಾರು, ತಾನು ಏನು ಎನ್ನುವ ಅರಿವು ಬರುವ ಮೊದಲೇ ಸಮಾಜದ ನಿರೀಕ್ಷೆಗಳನ್ನು ಅವರೊಳಗೆ ಹೇರಲಾಗುತ್ತದೆ.
ಬೆಳೆಯುತ್ತಾ ಕುಟುಂಬವರ್ಗದವರ, ಬಂಧುಗಳ ಒಡನಾಟದಿಂದ ಇದು ಇನ್ನಷ್ಟು ಹೆಚ್ಚುತ್ತಲೇ ಹೋಗುತ್ತದೆ. ಹಾಗೆಲ್ಲ ಹುಡುಗರು ಅಳ್ತಾರಾ, ನೀನೇನು ಹುಡುಗೀನಾ ಅಳೋಕೆ ಎನ್ನುವ ಮೂಲಕ ಗಂಡು ಅಳಬಾರದು ಮತ್ತು ಹೆಣ್ಣು ಅಳಬೇಕು ಎನ್ನುವುದನ್ನೂ ಅಭ್ಯಾಸವಾಗಿಸುತ್ತಾ ಹೋಗುತ್ತೇವೆ. ತಾನು ಗಂಡು ಅನ್ನುವ ಒಂದೇ ಕಾರಣಕ್ಕೆ ಒಂದು ಮಗು ಕಟ್ಟೆಯೊಡೆಯುವ ಕಣ್ಣೀರನ್ನು ನಿಲ್ಲಿಸಿ ಕಲ್ಲಾಗುತ್ತದೆ, ಮತ್ತು ತಾನು ಹೆಣ್ಣು ಅನ್ನುವ ಒಂದೇ ಕಾರಣಕ್ಕೆ ಒಂದು ಮಗು ತನ್ನ ಎಲ್ಲ ಭಾವನೆಗಳಿಗೂ ಕಣ್ಣೀರಿನ ರೂಪ ಕೊಡುತ್ತಾ ಹೋಗುತ್ತದೆ.
ಅಮ್ಮಾ ಶಾಲೆಯಲ್ಲಿ ಇವತ್ತು ನಮ್ಮ ಡ್ರಾಯಿಂಗ್ ಟೀಚರ್ ಹುಡುಗಿಯರಿಗೆ ಹೂವಿನ ಚಿತ್ರ ಬರೆಯೋಕೆ ಹೇಳಿದರು, ಹುಡುಗರಿಗೆಲ್ಲ ಏರೋಪ್ಲೇನ್ ಚಿತ್ರ ಬರೆಯೋಕೆ ಹೇಳಿದರು ಎನ್ನುತ್ತಾನೆ ಹತ್ತು ವರ್ಷದ ಮಗ. ಒಬ್ಬ ಹುಡುಗನಲ್ಲಿ ಬೆಳೆಯಬಹುದಾಗಿದ್ದ ಮೃದುವಾದ ಹೂವನ್ನು ಚಿವುಟಲು ಮತ್ತು ಒಬ್ಬ ಹುಡುಗಿಯಲ್ಲಿ ಮೂಡಬಹುದಾದ ರೆಕ್ಕೆಗಳನ್ನು ತುಂಡರಿಸಲು ಲಿಂಗಾಧಾರಿತ ಶಿಕ್ಷಣ ಕಾರಣವಾಗುತ್ತಾ ಹೋಗುತ್ತದೆ.
ಹೆಣ್ಣುಮಕ್ಕಳು ಕಿರುಚಾಡಬಾರದು, ಹುಡುಗರ ಹಾಗೆ ನಿರಾಳವಾಗಿ ಕೂರಬಾರದು, ನಿಲ್ಲುವಾಗ ಹೀಗೇ ನಿಲ್ಲಬೇಕು, ಬಗ್ಗುವಾಗ ಹೀಗೇ ಬಗ್ಗಬೇಕು, ಯಾರಾದರೂ ಬಂದ ಕೂಡಲೇ ದುಪ್ಪಟ್ಟಾ ಹಾಕಬೇಕು.. ಇನ್ನೂ ಸಾಕಷ್ಟು ನೀತಿ ನಿಯಮಗಳು ಯಾವುದೋ ಕಾಲದ್ದಲ್ಲ.
ಇಂದಿಗೂ ನಮ್ಮ ಸುತ್ತಮುತ್ತಲೇ ನಡೆಯುತ್ತಿರುವ ಬದುಕುಗಳು. ಬೆಳಿಗ್ಗೆ ಏಳುವುದು ತಡವಾದರೂ ಮೊದಲು ಕೇಳುವ ಮಾತು ಹೆಣ್ಣುಮಕ್ಕಳು ಇಷ್ಟು ಹೊತ್ತಾದರೂ ಮಲಗಿರ್ತಾರಾ ಅನ್ನೋದು. ಜೈವಿಕ ಗಡಿಯಾರಕ್ಕೆ, ನೈಸರ್ಗಿಕ ಗಡಿಯಾರಕ್ಕೂ ಈ ಹೇರಿಕೆ ಅನ್ವಯವಾಗುತ್ತಾ ಹೋಗುತ್ತದೆ.
ಬೆಳೆಯುತ್ತಾ ಬೆಳೆಯುತ್ತಾ, ಹೆಣ್ಣುಮಕ್ಕಳಾಗಿ ಈ ಕೆಲಸ ಗೊತ್ತಿಲ್ವಾ, ಮನೆಲಿ ತಾಯಿ ಏನೂ ಹೇಳಿಕೊಟ್ಟಿಲ್ವಾ ಅನ್ನುವ ಮಾತುಗಳಿಂದ ತಪ್ಪಿಸಿಕೊಳ್ಳಲು ಹದಿಹರೆಯದಲ್ಲಿ ಒಂದಿಡೀ ಟ್ರೈನಿಂಗ್ ಪಿರಿಯಡ್ ಆರಂಭವಾಗಿರುತ್ತದೆ. ಸಂಜೆ ಹೊತ್ತು ಮನೆ ಮುಂದೆ ಗುಡಿಸುವುದು, ಅಡಿಗೆ ಕಲಿಯುವುದು, ಬಟ್ಟೆ ಒಣ ಹಾಕುವುದು ಎಲ್ಲವೂ.
ವಿಷಾದನೀಯವೆಂದರೆ ಈ ಎಲ್ಲಾ ಕೆಲಸಗಳನ್ನು ಹೆಣ್ಣುಮಕ್ಕಳು ಮಾತ್ರ ಮಾಡುತ್ತಿರುತ್ತಾರೆ. ಹುಡುಗಿಯರ ಹಾಗೆ ಇಲ್ಲಿಯವರೆಗೂ ಯಾವ ಗಂಡು ಮಗುವಿಗೂ ಬಾಗಿಲು ಗುಡಿಸಿ ನೀರು ಹಾಕುವುದು ಒಂದು ಸಹಜವಾದ ಕೆಲಸ ಎನ್ನುವಂತೆ ಮಾಡಲು ಸಾಧ್ಯವೇ ಆಗುವುದಿಲ್ಲ ಎನ್ನುವುದು ಕಣ್ಣ ಮುಂದಿನ ವಾಸ್ತವ. ಅಕಸ್ಮಾತ್ ಒಬ್ಬ ಮುಂದೆ ಬಂದರೂ, ಇದೇನಿದು ಗಂಡು ಹುಡುಗ ಈ ಕೆಲಸ ಮಾಡ್ತಿದಾನೆ ಅಂತಲೇ ಸಮಾಜ ಮಾತನಾಡುತ್ತದೆ. ಇದರ ಮುಂದಿನ ಭಾಗವೇ ಮದುವೆಯಾಗಿ ಹೋದರೆ ತಂದೆತಾಯಿಗಳ ಭಾರ ಇಳಿಯುತ್ತದೆ ಎಂದು ಮದುವೆಯಾಗುವುದು, ತಾಯ್ತನವೇ ಬದುಕಿನ ಪರಮಗುರಿ ಎಂದು ಮಕ್ಕಳಿಗೆ ಜನ್ಮ ನೀಡುವುದು, ಕೊನೆಗೆ ತನ್ನದು ಎನ್ನುವ ಒಂದು ಬದುಕನ್ನು ಮರೆಯುವುದು.
ಲಿಂಗಭೇಧದಿಂದ ಹೆಣ್ಣುಮಕ್ಕಳಷ್ಟು ಅಲ್ಲದಿದ್ದರೂ ಬೆಳೆಯುವ ವಯಸ್ಸಿನಲ್ಲಿ ಗಂಡುಮಕ್ಕಳಿಗೂ ಹಲವಷ್ಟು ಅಪಾಯಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಗಂಡು ಎನ್ನುವ ಕಾರಣದಿಂದ ಫ್ಯಾಕ್ಟರಿಗಳಲ್ಲಿ, ಹೋಟೆಲ್ ಗಳಲ್ಲಿ ಇನ್ನಿತರ ಉದ್ಯಮಗಳಲ್ಲಿ ಬಾಲಕಾರ್ಮಿಕರಾಗಿ ಗಂಡುಮಕ್ಕಳನ್ನು ಬಳಸಿಕೊಳ್ಳುವವರ ಸಂಖ್ಯೆ ಬಹಳಷ್ಟಿದೆ. ಬಾಲಕಾರ್ಮಿಕರಾಗುವ ಮಕ್ಕಳು, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಸಿಲುಕಿಕೊಳ್ಳುವ ಅಪಾಯವೂ ಹೆಚ್ಚಿದೆ. ಜೊತೆಗೆ ಹಲವಾರು ಕಡೆಗಳಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ, ಬಂಡಾಯ ಗುಂಪುಗಳಿಗೆ ಗಂಡು ಮಕ್ಕಳು ಸಣ್ಣವರಿರುವಾಗಲೇ ಕರೆದೊಯ್ದು ತರಬೇತಿ ಕೊಡಿಸುವ ಘಟನೆಗಳೂ ಇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಇನ್ನೂ ಓದುವ ಮಕ್ಕಳಿಗೆ ನೀನಿ ನಮ್ಮನ್ನು ಸಾಕಬೇಕು ಎಂದು ತಲೆಗೆ ತುಂಬುವ ಕುಟುಂಬಗಳೂ ಎಷ್ಟೋ ಇವೆ. ಮಧ್ಯಮ, ಕೆಳಮಧ್ಯಮ ವರ್ಗದ ಎಷ್ಟೋ ಗಂಡುಮಕ್ಕಳು ಅವರ ಬದುಕಲ್ಲಿ ಒಮ್ಮೆಯಾದರೂ ರಕ್ತ ಕೊಟ್ಟೋ, ಕಿಡ್ನಿ ಕೊಟ್ಟೋ ಮನೆಗೆ ಆಧಾರವಾಗಬೇಕು, ಅಮ್ಮನ ಕಣ್ಣೀರು ಒರೆಸಬೇಕು ಎಂದುಕೊಂಡಿರುತ್ತಾರೆ. ದುಡಿದು ಸಾಕುವುದು ಅವರ ಬದುಕಿನ ಪರಮೋಚ್ಛ ಗುರಿ ಎನ್ನುವುದನ್ನೇ ಮರೆತು ಗಾಣದ ಎತ್ತಾಗಿ ಬದುಕುತ್ತಾರೆ.
ಮಕ್ಕಳು ಬೆಳೆಯುವಾಗ ಆಗುವ ಬದಲಾವಣೆಗಳು, ಮತ್ತು ಅವರನ್ನು ನಡೆಸಿಕೊಂಡು ಬಂದ ರೀತಿಯನ್ನೇ ಅವರು ಸಾರ್ವತ್ರಿಕಗೊಳಿಸಿ ಸಮಾಜದಲ್ಲಿ ನಾವು ಹೀಗೆಯೇ ಇರಬೇಕು ಮತ್ತು ಉಳಿದವರು ಕೂಡ ಹಾಗೆಯೇ ಇರಬೇಕು ಎನ್ನುವ ಮನೋಭಾವಕ್ಕೆ ತಲುಪುತ್ತಾರೆ. ಒಂದು ವ್ಯಕ್ತಿಯ ಬದಲಾವಣೆಯನ್ನು ಕೂಡ ಸಹಿಸಲು ಸಾಧ್ಯವಾಗದೇ ಇದ್ದಾಗ ಅಪಾಯಕಾರಿ ಮಟ್ಟಕ್ಕೆ ಬದಲಾಗುವ ಸಾಧ್ಯತೆಗಳು ಇವೆ.
ಪ್ರಬುದ್ಧರಿಗೆ ಲಿಂಗತ್ವದ ಕುರಿತಾದ ಸೂಕ್ಷ್ಮತೆಯ ಬಗ್ಗೆ ತಿಳಿಸುವುದು ಎಷ್ಟಿದೆಯೋ, ಬೆಳೆಯುವ ಮಕ್ಕಳಲ್ಲಿ ಕೂಡ ಲಿಂಗಾಧಾರಿತ ಭೇಧ ಇಲ್ಲದಂತೆ ಬೆಳೆಸುವುದು ಅಷ್ಟೇ ಮುಖ್ಯ. ಹುಟ್ಟಿದ ಕ್ಷಣದಿಂದ ಮನೆಯವರು, ಸಮಾಜ, ಶಿಕ್ಷಣ ಸಂಸ್ಥೆಗಳು ಸಹ ಗಂಡು ಹೆಣ್ಣಿನ ನಡುವಿನ ಹೋಲಿಕೆಗಳನ್ನು ವ್ಯತ್ಯಾಸಗಳನ್ನು ಗುರುತಿಸಿ ಗೌರವಿಸಿ, ಸಮಾನ ಅವಕಾಶ, ಸಮಾನ ಜವಾಬ್ದಾರಿಗಳನ್ನು ಸಮತೆಯ ಆಧಾರದ ಮೇಲೆ ಒದಗಿಸುವ ಪರಿಸರ ಕಟ್ಟಿಕೊಡಬೇಕಿದೆ.