ಬ್ರಾಂಡ್ ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಈಗಾಗಲೇ ಹಲವಷ್ಟು ಅಭಿವೃದ್ಧಿ ಕೆಲಸಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಈಗ ಭಾರತದಲ್ಲೇ ಮೊಟ್ಟ ಮೊದಲನೆಯದಾಗಿ ತಲೆ ಎತ್ತಲಿರುವ ಸ್ಕೈಡೆಕ್ ಯೋಜನೆಗೆ ಮುಂದಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿರೀಕ್ಷೆಯಂತೆ ಈ ಯೋಜನೆ ಜಾರಿಯಾದರೆ, ದೇಶದಲ್ಲೇ ಅತ್ಯುನ್ನತ ವೀಕ್ಷಣಾ ಡೆಕ್ ಗೆ ಬೆಂಗಳೂರು ಮೊದಲ ಮುನ್ನುಡಿ ಬರೆದಂತಾಗಲಿದೆ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್, ಈಗಾಗಲೇ ಬೆಂಗಳೂರು ಸ್ಕೈಡೆಕ್ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೊಂದು ಹೈಟೆಕ್ ಯೋಜನೆ ಆಗಲಿದ್ದು, ಬ್ರಾಂಡ್ ಬೆಂಗಳೂರಿಗೆ ಕಿರೀಟವಾಗಲಿದೆ ಎಂದೇ ಅಂದಾಜಿಸಲಾಗಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು 190 ಕಿಲೋಮೀಟರ್ ಗಳ ಸುರಂಗ ಮಾರ್ಗದ ಬಗ್ಗೆ ಹೊಸ ಯೋಜನೆ ರೂಪಿಸಿದ ಬೆನ್ನಲ್ಲೇ ಈಗ ಸ್ಕೈಡೆಕ್ ಯೋಜನೆಯ ವರದಿ ಸಿದ್ಧಪಡಿಸಲು ಹೇಳಿದ್ದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಬೆಂಗಳೂರಿನಲ್ಲಿ ವಿಶ್ವ ವಿನ್ಯಾಸ ಸಂಸ್ಥೆ (WDO) ಸಹಯೋಗದೊಂದಿಗೆ ಆಸ್ಟ್ರಿಯಾದ COOP HIMMELB(L)AU (ವಾಸ್ತುಶಿಲ್ಪ, ನಗರ ಯೋಜನೆ, ವಿನ್ಯಾಸ ಮತ್ತು ಕಲಾ ಸಂಸ್ಥೆ) ಪ್ರಸ್ತಾವಿತ ಯೋಜನೆ ಕುರಿತು ಪರಿಶೀಲಿಸಿದ್ದಾರೆ. ಯೋಜನೆಗೆ ಸುಮಾರು 10 ಎಕರೆ ಜಮೀನು ಅಗತ್ಯವಿದೆ. ಯೋಜನೆಗೆ ನಗರದಲ್ಲಿ ಜಾಗ ಗುರುತಿಸುವಂತೆ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರದ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಯ ಭಾಗವಾಗಿರುವ ಅನೇಕ ಆರ್ಕಿಟೆಕ್ ಮತ್ತು ತಜ್ಞರಿಗೆ ಈ ಯೋಜನೆಯ ಬಗ್ಗೆ ತಿಳಿದಿಲ್ಲ. “ಈ ಯೋಜನೆಯು ಪ್ರವಾಸಿ ಆಕರ್ಷಣೆಯ ಕೇಂದ್ರಬಿಂದು ಆಗಲಿದೆ. ಕಾರ್ಯಸಾಧ್ಯತೆಯ ವರದಿ ಸಿದ್ಧವಾದಾಗ ಮಾತ್ರ ಇದರ ಬಗ್ಗೆ ವಿಚಾರ ಹೊರಬರಲಿದೆ. ಈಗ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಲು ಇದು ಸರಿಯಾದ ಸಮಯವಲ್ಲ ”ಎಂದು IISC ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಆಶಿಶ್ ವರ್ಮಾ ಹೇಳಿದರು.
ಯೋಜನೆಗೆ ಸುಮಾರು 10 ಎಕರೆ ಜಮೀನು ಅಗತ್ಯವಿದೆ. ಯೋಜನೆಗೆ ನಗರದಲ್ಲಿ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಯೋಜನೆಯು ಆಕರ್ಷಕವಾಗಿ ಕಾಣುತ್ತದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಾವು ಅಂತಹ ಯೋಜನೆಗಳನ್ನು ನೋಡಿದ್ದೇವೆ. ಬೆಂಗಳೂರಿನಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣ ಇರುವುದರಿಂದ ಪೂರ್ವ ವಲಯದಲ್ಲಿ ಮಾಡಲು ಸಾಧ್ಯವಿಲ್ಲ” ಎಂದು ವಾಸ್ತುಶಿಲ್ಪ ತಜ್ಞರು ಹೇಳಿದ್ದಾರೆ.
ಅದೇ ರೀತಿ, ಬೆಂಗಳೂರು ಮತ್ತು ಉತ್ತರ ಬೆಂಗಳೂರಿನ ಮಧ್ಯ ಭಾಗವು ಜಕ್ಕೂರ್ ಏರೋಡ್ರೋಮ್, ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಮತ್ತು ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (KIAL) ನೊಂದಿಗೆ ಹಾರಾಟದ ಚಲನೆಯನ್ನು ಹೊಂದಿದೆ. ಯಾವುದೇ ಎತ್ತರದ ರಚನೆಯು (160 ಮೀಟರ್‌ಗಿಂತ ಹೆಚ್ಚು) ವಿಮಾನ ಕಾರ್ಯಾಚರಣೆಗಳಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ನಗರದ ದಕ್ಷಿಣ ಅಥವಾ ಪಶ್ಚಿಮ ಭಾಗ ಮಾತ್ರ ಆಯ್ಕೆಯಾಗಿದೆ,” ಎಂದು ಯೋಜನೆಯ ಆರ್ಕಿಟೆಕ್ ಒಬ್ಬರು ಹೇಳಿದ್ದಾರೆ.