Saturday, August 31, 2024

ಸತ್ಯ | ನ್ಯಾಯ |ಧರ್ಮ

ಬಹು ನಿರೀಕ್ಷಿತ ‘ಮುಡಾ ಪ್ರಾಸಿಕ್ಯೂಷನ್ ಅರ್ಜಿ ವಿಚಾರಣೆ’ : ಸೆ.2 ಕ್ಕೆ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಮುಡಾ ಪ್ರಕರಣ ಆರೋಪ ಸಂಬಂಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ವಿಚಾರವಾಗಿ ನಡೆದ ವಿಚಾರಣೆ ಮತ್ತು ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಿಎಂ ಸಿದ್ಧರಾಮಯ್ಯ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆ.2 ಕ್ಕೆ ಮುಂದೂಡಿದೆ.

ಇಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠದಲ್ಲಿ ಸಿಎಂ ಸಿದ್ಧರಾಮಯ್ಯ ರಾಜ್ಯಪಾಲರ ಅನುಮತಿ ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ನಡೆಯಿತು. ದೂರುದಾರ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾದವಗಿ ಅವರು ಆರೋಪಿಗಳಿಗೆ ನೋಟಿಸ್ ನೀಡಿ ತನಿಖೆಗೆ ಅವಕಾಶ ನೀಡಬಾರದು. ನೋಟಿಸ್ ನೀಡಿದರೇ ತನಿಖೆಯೇ ಪೂರ್ವಗ್ರಾಹಕ್ಕೊಳಗಾಗಲಿದೆ. 17ಎ ಹಂತದಲ್ಲಿ ರಾಜ್ಯಪಾಲರ ಕ್ರಮ ಪ್ರಶ್ನಿಸಲು ಅವಕಾಶವಿಲ್ಲ. ಎಫ್‌ಐಆರ್ ದಾಖಲಾದ ಬಳಿಕವಷ್ಟೇ ಆರೋಪಿಗೆ ಅದನ್ನು ಪ್ರಶ್ನಿಸುವ ಹಕ್ಕು ಬರಲಿದೆ ಎಂದು ವಾದಿಸಿದರು.

ಪ್ರದೀಪ್‌ ಕುಮಾರ್‌ ಪರವಾಗಿ ವಕೀಲ ಪ್ರಭುಲಿಂಗ ನಾವದಗಿ ವಾದ ಆರಂಭಿಸುತ್ತಿದ್ದಂತೆ “ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರೂ ಕೂಡಾ ಸಿದ್ದರಾಮಯ್ಯ ಅವರ ಪಾತ್ರವೇನೆಂದು ಹೇಳಿಲ್ಲ. ನೀವಾದರೂ ಈ ಬಗ್ಗೆ ಪ್ರಸ್ತಾಪಿಸುವಿರೇ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಪ್ರಶ್ನಿಸಿದ್ದಾರೆ.

ಈವರೆಗೆ ಸಿದ್ದರಾಮಯ್ಯ ವಿರುದ್ಧವಾಗಿ ಸಲ್ಲಿಕೆಯಾದ ಮೂರು ದೂರಗಳಲ್ಲೂ ಒಂದೇ ಅಂಶ ಪ್ರಸ್ತಾಪವಾಗಿದೆ. ಆದ್ದರಿಂದ ಒಂದೇ ಶೋಕಾಸ್ ನೋಟಿಸ್ ನೀಡಲಾಗಿದೆ. ಎಲ್ಲಾ ದೂರುಗಳಿಗೂ ಪ್ರತ್ಯೇಕ ಶೋಕಾಸ್ ನೋಟಿಸ್ ನೀಡಬೇಕೇ ಅಥವಾ ನೀಡಬಾರದೇ ಎಂಬುದು ರಾಜ್ಯಪಾಲರಿಗೆ ಬಿಟ್ಟ ವಿಚಾರ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.

“ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ಬಂದಾಗ ರಾಜ್ಯಪಾಲರು ಏಕಾಏಕಿ ನಿರ್ಧಾರ ಕೈಗೊಂಡಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಹೆಚ್ಚುವರಿ ದಾಖಲೆ ತರಿಸಿಕೊಂಡು ಪರಿಶೀಲಿಸಿ ತನಿಖೆಗೆ ಅನುಮತಿಸಿದ್ದಾರೆ” ಎಂದು ತುಷಾರ್ ಮೆಹ್ತಾ ರಾಜ್ಯಪಾಲರ ನಿರ್ಧಾರದ ಬಗ್ಗೆ ಸ್ಪಷ್ಟಪಡಿಸಿದರು.

ಮುಡಾ ಪ್ರಕರಣದಲ್ಲಿ 6ನೇ ಪ್ರತಿವಾದಿ ಪಿ ಎಸ್‌ ಪ್ರದೀಪ್‌ ಕುಮಾರ್‌ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಮಣೀಂದರ್‌ ಸಿಂಗ್‌ ವಾದ ಮಂಡಿಸಿದರು. ಟಿ ಜೆ ಅಬ್ರಾಹಂ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದಿಸಿದರು.

ಕೊನೆಯದಾಗಿ ವಾದ ವಿವಾದದ ನಂತರ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಸೆ.2 ಕ್ಕೆ ಮುಂದೂಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page