ನಿರ್ದೇಶಕ ಟಿ ಎನ್ ಸೀತಾರಾಂ ಮೇಲಿನ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅತಿಕ್ರಮ ಪ್ರವೇಶ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಕನ್ನಡ ಕಿರುತೆರೆ ನಿರ್ದೇಶಕ ಟಿಎನ್‌ ಸೀತಾರಾಮ್‌ ಮತ್ತು ಇತರರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಪ್ರಕರಣ ರದ್ದುಪಡಿಸುವಂತೆ ಕೋರಿ ಟಿಎನ್‌ ಸೀತಾರಾಮ್‌ ಮತ್ತು ಕೆಎಸ್‌ ವಿಜಯಲಕ್ಷ್ಮೀ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್‌. ಕಮಲ್‌ ಅವರಿದ್ದ ರಜಾಕಾಲದ ಏಕಸದಸ್ಯ ಪೀಠ ಗುರುವಾರ ನಡೆಸಿತು. ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ ಏನು?
ದೊಡ್ಡಬಳ್ಳಾಪುರ ತಾಲೂಕಿನ ಹಸನಘಟ್ಟ ಗ್ರಾಮದಲ್ಲಿನ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿ ದೂರುದಾರ ಎಂ.ಎ. ಅರವಿಂದ ಕುಮಾರ್‌ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 74 (ಮಹಿಳೆಯ ಮೇಲೆ ದೌರ್ಜನ್ಯ), ಕಲಂ 352 (ಅತಿಕ್ರಮ ಪ್ರವೇಶ), ಕಲಂ 351(2) ಮತ್ತು ಕಲಂ 318(4) (ವಂಚನೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ತನಿಖೆ ರದ್ದುಪಡಿಸಬೇಕೆಂದು ಕೋರಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹಿಂದಿನ ವಿಚಾರಣೆ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮತ್ತು ದೂರುದಾರ ಅರವಿಂದ ಕುಮಾರ್‌ಗೆ ನೋಟಿಸ್‌ ಜಾರಿಗೊಳಿಸುವಂತೆ ನ್ಯಾಯಪೀಠ ಆದೇಶಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು