ಚಿತ್ತಾಪುರದಲ್ಲಿ ಭೀಮ್ ಆರ್ಮಿ ಸೇರಿದಂತೆ ಸುಮಾರು 8 ಸಂಘಟನೆಗಳ ಪಥ ಸಂಚಲನದ ಅರ್ಜಿ ಕುರಿತು ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠವು ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ. ಅದರಂತೆ ಅಕ್ಟೋಬರ್ 28 ಕ್ಕೆ ಶಾಂತಿ ಸಭೆ ನಡೆಸಲು ಹೈಕೋರ್ಟ್ ಪೀಠ ತಿಳಿಸಿದೆ.
28 ಕ್ಕೆ ಶಾಂತಿ ಸಭೆಯ ಬಳಿಕ 30 ಕ್ಕೆ ಈ ಬಗ್ಗೆ ವಿಚಾರಣೆ ಕೈಗೆತ್ತುಕೊಳ್ಳಲಾಗುವುದು ಎಂದು ಹೈಕೋರ್ಟ್‌ನ ಕಲಬುರಗಿ ಪೀಠದ ನ್ಯಾಯಮೂರ್ತಿ ಎಂಜಿಎಸ್ ಕಮಲ ಹೇಳಿದರು. ಆರ್‌ಎಸ್‌ಎಸ್ ಸಂಘಟನೆ ಅದೇ ದಿನ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅರ್ಜಿ ಸಲ್ಲಿಸಿತ್ತು. ಆ ಸಂಘಟನೆಯ ಅರ್ಜಿಯನ್ನು ತಹಶೀಲ್ದಾರ್ ನಿರಾಕರಿಸಿದ ಬಗ್ಗೆ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು.
“ಹೀಗಾಗಿ ಅಕ್ಟೋಬರ್ 28ಕ್ಕೆ ಶಾಂತಿ ಸಭೆ ನಡೆಸಬೇಕು. ಶಾಂತಿ ಸಭೆಯ ನಂತರ ಅಕ್ಟೋಬರ್ 30ರಂದು ಅರ್ಜಿಯ ವಿಚಾರಣೆ ನಡೆಸಬಹುದು” ಎಂದು ಹೈಕೋರ್ಟ್ ಪೀಠ ಹೇಳಿದೆ.
ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಅರ್ಜಿದಾರರ ಪರವಾಗಿ ವಾದ ನಡೆಸಿ, ನವೆಂಬರ್ 2 ಕ್ಕೆ ಪಥಸಂಚಲನಕ್ಕೆ ಸಿದ್ಧತೆ ನಡೆದಿದೆ. ಅದರಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ರೂಟ್ ಮ್ಯಾಪ್ ಸಹ ನೀಡಿದ್ದೇವೆ ಎಂದು ವಾದ ಮಂಡಿಸಿದರು.
ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದು, ಶಾಂತಿ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಇನ್ನಷ್ಟು ಸಮಯ ನೀಡಬೇಕು ಎಂದು ಕೋರಿದರು. ಜತೆಗೆ ಪಟ್ಟಣದ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯನ್ನು ಅಡ್ವೊಕೇಟ್ ಜನರಲ್ ಪೀಠದ ಮುಂದೆ ಓದಿದರು.
“ಆರ್‌ಎಸ್‌ಎಸ್ ಸಂಘಟನೆ ಸೂಚಿಸಿದ ರೂಟ್ ಮ್ಯಾಪ್ ಹೆಚ್ಚು ಜನಸಂದಣಿ ಇರುವ ಪ್ರದೇಶ ಎಂದು ಹೇಳಲಾಗಿದೆ. ಇಲ್ಲಿ ಮೆರವಣಿಗೆ, ಸಭೆ ನಡೆಸಲು ಅನುಮತಿಸಲಾಗದು ಎಂದು ವರದಿಯಲ್ಲಿ ಹೇಳಲಾಗಿದೆ. ಜನಸಂದಣಿ ಉಂಟಾಗಲಿದೆ ಎಂದೂ ವರದಿಯಾಗಲಿದೆ ” ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಕೋರ್ಟ್‌ನ ಗಮನಕ್ಕೆ ತಂದರು.
ಸಧ್ಯ ಪರಿಸ್ಥಿತಿ ಇನ್ನಷ್ಟು ಬಿಗಿಯಾಗುವ ಸಂಭವವಿದೆ. 28 ಕ್ಕೆ ನಡೆಸುವ ಶಾಂತಿ ಸಭೆಯ ತೀರ್ಮಾನವನ್ನು ಅಕ್ಟೋಬರ್ 30 ರ ಮಧ್ಯಾಹ್ನ 2.30 ಕ್ಕೆ ಪೀಠಕ್ಕೆ ತಿಳಿಸಿ. ಆ ದಿನವೇ ವಿಚಾರಣೆ ಮುಂದುವರೆಸಲಾಗುವುದು ಎಂದು ನ್ಯಾಯಾಧೀಶರು ಹೇಳಿದರು.
