ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ. ಅಲ್ಲದೇ ರಾಜಿ ಸಂಧಾನಕ್ಕೆ ಪ್ರಯತ್ನಿಸುವಂತೆ ಇಬ್ಬರೂ ಅಧಿಕಾರಿಗಳಿಗೆ ನ್ಯಾಯಾಲಯ ಮತ್ತೆ ಸಲಹೆ ನೀಡಿದೆ.
ಡಿ.ರೂಪಾ ತಮ್ಮ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಮಧ್ಯಾಂತರ ತಡೆ ನೀಡಬೇಕು ಎಂದು ಕೋರಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಮಾರ್ಚ್ 12ರ ವರೆಗೆ ತಡೆ ನೀಡಿ ವಿಚಾರಣೆ ಮುಂದೂಡಿತು. ಇದರಿಂದ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಪ್ರಕರಣಕ್ಕೆ ಮಧ್ಯಾಂತರ ತಡೆ ನೀಡಿದ ಬಳಿಕ ಇಬ್ಬರೂ ಅಧಿಕಾರಿಗಳು ರಾಜಿ ಸಂಧಾನಕ್ಕೆ ಪ್ರಯತ್ನಿಸುವುದು ಸೂಕ್ತ ಎಂದು ಎರಡೂ ಕಡೆಯ ವಕೀಲರಿಗೆ ನ್ಯಾಯಾಲಯ ಸಲಹೆ ನೀಡಿತು.
ಈ ಇಬ್ಬರೂ ಅಧಿಕಾರಿಗಳ ಕಾನೂನು ಸಂಘರ್ಷ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ರಾಜಿ ಸಂಧಾನಕ್ಕೆ ನ್ಯಾಯಾಲಯ ಸೂಚಿಸಿತ್ತು. ಅದಕ್ಕೆ ಇಬ್ಬರೂ ಒಪ್ಪದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತೆ ವಿಚಾರಣ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.