Wednesday, June 19, 2024

ಸತ್ಯ | ನ್ಯಾಯ |ಧರ್ಮ

ಹಿಜಾಬ್‌ ನಿಷೇಧ: ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿನ ಮೇಲಿನ ದಾಳಿಗೆ ಒಂದು ವರ್ಷ

ಕರ್ನಾಟಕದ ಕೋಮು ರಾಜಕಾರಣದ ಭಾಗವಾಗಿ ಸಮವಸ್ತ್ರದ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ತರಗತಿಗಳ ಹೊರಗೆ ನಿಲ್ಲಿಸಿ ಮೊನ್ನೆ ಡಿಸೆಂಬರ್‌ ಕೊನೆಯ ವಾರಕ್ಕೆ ಒಂದು ವರ್ಷವಾಯಿತು. ಅದರ ನಂತರ ಕರ್ನಾಟಕದ ರಾಜಕಾರಣದಲ್ಲಿ ಒಂದು ಮಳೆಗಾಲ ಸಂದು ಹೋಗಿದೆ. ಆ ಶಾಲಾವಂಚಿತ ಹೆಣ್ಣುಮಕ್ಕಳ ದಯನೀಯ ನೋಟಗಳು ಎಲ್ಲರಿಗೂ ಮರೆತುಹೋಗಿದೆ. ಆದರೆ ಜವಬ್ದಾರಿಯುತ ಮಾಧ್ಯಮಗಳು ಈ ಘಟನೆಗಳನ್ನು ಮರೆತಿಲ್ಲ. Thescroll.in ಈ ಘಟನೆಯಿಂದ ಬಾಧಿತರಾದ ಹೆಣ್ಣುಮಕ್ಕಳನ್ನು ಹುಡುಕಿ ಮಾತನಾಡಿಸಿದೆ. ದಿ ಸ್ಕ್ರಾಲ್‌ನ ವರದಿಯ ಕನ್ನಡ ಅನುವಾದವನ್ನು ಪೀಪಲ್‌ ಮೀಡಿಯಾ ಡಾಟ್‌ ಕಾಮ್‌ ಸರಣಿಯಾಗಿ ಪ್ರಕಟಿಸಲಿದೆ. ಇದು ಆ ಸರಣಿಯ ಒಂದನೇ ಭಾಗ

ಮೂಲ ವರದಿ: ಜೊಹಾನ್ನಾ ದೀಕ್ಷಾ

ದಿ ಸ್ಕ್ರಾಲ್‌ ಡಾಟ್‌ ಇನ್

ಆಯೇಷಾರಿಗೆ ಮದುವೆ ಪ್ರಸ್ತಾಪ ಬಂದಾಗ ಅವರು ಡಿಗ್ರಿ ಓದುತ್ತಿದ್ದರು. ಆಯೇಷಾಗೆ ಈ ಮದುವೆ ಪ್ರಸ್ತಾಪದಿಂದ ಖುಷಿಯೇನೂ ಆಗಿರಲಿಲ್ಲ. ಅವರಿಗೆ ತನ್ನ ಓದು ನಿಲ್ಲುವ ಭಯ ಕಾಡುತ್ತಿತ್ತು. ಅವರ ಓದು ಈಗಾಗಲೇ ಒಮ್ಮೆ ನಿಂತಿತ್ತು. ಅವರು ಪಿಯುಸಿ ಓದುತ್ತಿದ್ದ ಸಮಯದಲ್ಲಿ ಅವರ ಕುಟುಂಬ ಬಹಳ ಕಷ್ಟದಲ್ಲಿತ್ತು. ಹೀಗಾಗಿ ಅವರು ಕಾಲೇಜು ಮುಗಿದ ಕೂಡಲೇ ಓದು ನಿಲ್ಲಿಸಿ ಕಾಲ್‌ ಸೆಂಟರ್‌ ಒಂದರಲ್ಲಿ ಕೆಲಸಕ್ಕೆ ಸೇರಿದ್ದರು. ಹೀಗೆ ಕೆಲಸ ಮಾಡುತ್ತಾ ನಾಲ್ಕು ವರ್ಷದ ನಂತರ ಅವರು ಸೋಶಿಯಾಲಜಿ, ಎಕನಾಮಿಕ್ಸ್‌ ಮತ್ತು ಹಿಸ್ಟರಿಯಲ್ಲಿ ಪದವಿ ಪಡೆಯುವ ಸಲುವಾಗಿ ಮತ್ತೆ ಕಾಲೇಜಿಗೆ ಸೇರಿದ್ದರು. ಆದರೆ ಈಗ ಮತ್ತೆ ಮದುವೆ ಪ್ರಸ್ತಾಪ ತನ್ನ ಓದಿಗೆ ತೊಡರುಗಾಲು ನೀಡಬಹುದೆನ್ನುವ ಭಯ ಅವರನ್ನು ಕಾಡತೊಡಗಿತ್ತು.

ಕೊನೆಗೆ ಮದುವೆಯ ನಂತರವೂ ಓದು ಮುಂದುವರೆಸಲು ಒಪ್ಪಿಗೆ ಸಿಕ್ಕಿದ ಬಳಿಕವೇ ಆಯೇಷಾ ಸೈಯದ್‌ ಮದುವೆಗೆ ಒಪ್ಪಿಕೊಂಡಿದ್ದು. 2019ರಲ್ಲಿ ಅವರು ಡಿಗ್ರಿ ಮುಗಿಸಿದರು. 

ಇದಾದ ನಂತರ ಆಯೇಷಾ ತನ್ನ ಬಾಲ್ಯದ ಕನಸಾದ ಎಲ್‌ಎಲ್‌ಬಿ ಓದಲು ನಿರ್ಧರಿಸಿದರು. ಚಿಕ್ಕಂದಿನಿಂದಲೂ ಭಾರತದ ಸಂವಿಧಾನದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಅವರಿಗೆ ಸುಪ್ರೀಂ ಕೋರ್ಟಿನಲ್ಲಿ ವಕೀಲಿಕೆ ಮಾಡುವ ಆಸೆಯಿತ್ತು. 2021ರಲ್ಲಿ ತನ್ನ ಅತ್ತೆ-ಮಾವಂದಿರ ಮನವೊಲಿಸಿ ಲಾ ಕೋರ್ಸ್‌ ತೆಗೆದುಕೊಂಡ ಅವರಿಗೆ ಆಗ ಮೂರು ವರ್ಷದ ಪುಟ್ಟ ಮಗುವಿತ್ತು. ಹೀಗಾಗಿ ಕಾಲೇಜಿಗೆ ಹೋಗಿ ಬರುವುದು, ಮಗುವಿನ ಆರೈಕೆ ಹೀಗೆ ಎಲ್ಲವನ್ನೂ ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅವರ ಮನೆಯಿಂದ ಕಾಲೇಜಿಗೆ ಒಂದು ಗಂಟೆಯ ದಾರಿ ಹಿಡಿಯುತ್ತಿತ್ತು.

ಹೇಗೋ ಅತ್ತೆ ಮಾವನ ಮನವೊಲಿಸಿ ಕಾಲೇಜಿಗೆ ಸೇರಿದ ಅವರು ಮಗುವನ್ನು ನೋಡಿಕೊಳ್ಳಲು ಪಕ್ಕದ ಮನೆಯವರೊಬ್ಬರ ಸಹಾಯ ಪಡೆದರು. 2022ರ ಜನವರಿ ತಿಂಗಳಿನಲ್ಲಿ ತರಗತಿಗಳು ಆರಂಭಗೊಂಡವು. ಆಯೇಷಾ ದಿನಾಲೂ ಮಗುವನ್ನು ನೆರೆಯವರ ಸುಪರ್ದಿಗೆ ಬಿಟ್ಟು ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿಗೆ ಹೋಗಲು ಬಸ್ಸನ್ನು ಅವಲಂಬಿಸಿದ್ದ ಅವರು, ಒಂದು ಗಂಟೆಯ ಪ್ರಯಾಣ, ಮಗುವಿನ ಆರೈಕೆ ಇದೆಲ್ಲದರ ನಡುವೆ ಓದನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಿದ್ದರು.

ಅವರ ಪಾಲಿಗೆ ಓದಿನ ಪಯಣ ರೋಮಾಂಚಕಾರಿಯಾಗಿತ್ತು. ಅವರು ತನ್ನ ಓದನ್ನು ಆನಂದಿಸುತ್ತಿದ್ದರು. ಅಷ್ಟೇ ಅಲ್ಲದೆ ಆಯೇಷಾ ಕ್ರೀಡಾಪಟು ಕೂಡಾ ಆಗಿದ್ದರು. ಕಾಲೇಜು ಮೈದಾನದಲ್ಲಿ ತಾನು ಜಾವೆಲಿನ್‌ ಥ್ರೋವಿಂಗ್‌ನಲ್ಲಿ ಭಾಗವಹಿಸಿದ ವೀಡಿಯೊ ಒಂದನ್ನು ಅವರು ನನಗೆ ತೋರಿಸಿದರು.

ಆದರೆ ಅವರ ಈ ಕಾಲೇಜಿಗೆ ಹೋಗುವ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಜನವರಿ ತಿಂಗಳ ಆರಂಭದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್‌ ಅಥವಾ ತಲೆಗೆ ಬಟ್ಟೆ ಕಟ್ಟಿಕೊಂಡು ಬರುವುದನ್ನು ವಿರೋಧಿಸಿ ಉಡುಪಿಯಲ್ಲಿ ಆರಂಭಗೊಂಡ ಹೋರಾಟ ಮೆಲ್ಲನೆ ಎಲ್ಲೆಡೆ ವ್ಯಾಪಿಸ ತೊಡಗಿತ್ತು. ಕೆಲವೆಡೆಗಳಲ್ಲಿ ಈ ಕುರಿತಾದ ಹೋರಾಟ ಮುಗಿಲು ಮುಟ್ಟತೊಡಗಿತು ಕಾಲೇಜುಗಳಲ್ಲಿ ಮೊದಲಿನಿಂದಲೂ ಸಮವಸ್ತ್ರ ಇತ್ತಾದರೂ ಈ ಹೆಣ್ಣುಮಕ್ಕಳು ಶಿರವಸ್ತ್ರವನ್ನು ಧರಿಸುವುದು ಅವರ ಗುರುತು ಮತ್ತು ಅವರ ಧಾರ್ಮಿಕ ನಂಬಿಕೆಯ ಅವಿಭಾಜ್ಯ ನಂಬಿಕೆಯ ಭಾಗವೆಂದು ಭಾವಿಸಿ ಆ ಕುರಿತು ಆಕ್ಷೇಪ ಎತ್ತುತ್ತಿರಲಿಲ್ಲ.

ಡಿಸೆಂಬರ್ ಅಂತ್ಯದಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿತ್ತು. ಆರು ವಿದ್ಯಾರ್ಥಿಗಳು ಈ ಕ್ರಮವನ್ನು ವಿರೋಧಿಸಿದರು. ಆಡಳಿತವು ತನ್ನ ಹೊಸ ನಿಯಮವನ್ನು ಬದಲಾಯಿಸಲು ನಿರಾಕರಿಸಿತು, ಇದು ಮುಸ್ಲಿಂ ವಿದ್ಯಾರ್ಥಿಗಳಿಂದ ಮತ್ತಷ್ಟು ಪ್ರತಿಭಟನೆಗೆ ಕಾರಣವಾಯಿತು. ತರುವಾಯ, ಜನವರಿಯಲ್ಲಿ, ನೂರಾರು ಹಿಂದೂ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಬಂದು ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ ಪ್ರವೇಶವನ್ನು ನಿರಾಕರಿಸಬೇಕೆಂದು ಒತ್ತಾಯಿಸಿದರು. ಹಿಜಾಬ್‌ ಸಮವಸ್ತ್ರದ ಕುರಿತಾದ ತಮ್ಮ ಸಂಸ್ಥೆಗಳ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದರು.

ಇದಾದ ನಂತರ ಇತರ ಕೆಲವು ಕಾಲೇಜುಗಳು ಸಹ ವಿದ್ಯಾರ್ಥಿಗಳು ಶಿರವಸ್ತ್ರ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಿದವು. ಮುಂದಿನ ದಿನಗಳಲ್ಲಿ, ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜು ದ್ವಾರಗಳಲ್ಲಿ ತಡೆದು, ಅವರ ಬುರ್ಖಾ ಮತ್ತು ಹಿಜಾಬುಗಳನ್ನು ಅಲ್ಲೇ ತೆಗೆಯುವಂತೆ ಒತ್ತಾಯಿಸುವುದು, ಶಿಕ್ಷಕರು ಮತ್ತು ಬಲಪಂಥೀಯ ವಿದ್ಯಾರ್ಥಿ ಗುಂಪುಗಳಿಂದ ಕಿರುಕುಳ ನೀಡುವುದು ಮತ್ತು ಕೆಲವು ಸಂದರ್ಭಗಳಲ್ಲಿ, ಹಿಜಾಬ್ ತೆಗೆಯಲು ನಿರಾಕರಿಸಿದರೆ ಅವರನ್ನು ಮನೆಗೆ ಕಳುಹಿಸುವ ಹಲವಾರು ವೀಡಿಯೊಗಳು ಓಡಾಡ ತೊಡಗಿದವು.

ಫೆಬ್ರವರಿ 5ರಂದು ಕರ್ನಾಟಕ ಸರ್ಕಾರವು ಹೊರಡಿಸಿದ ಆದೇಶದಲ್ಲಿ ಎಲ್ಲಾ ಕಾಲೇಜುಗಳೂ ತಮ್ಮ ಸಮವಸ್ತ್ರ ನಿಯಮಕ್ಕೆ ಬದ್ಧವಾಗಿರಬೇಕು ಮತ್ತು ಹಿಜಾಬ್‌ಗೆ ಯಾವುದೇ ರಿಯಾಯಿತಿ ನೀಡಬಾರದೆಂದು ಹೇಳಿತು.

ಈ ಆದೇಶವನ್ನು ವಿರೋಧಿಸಿ ಹಲವಾರು ಮುಸ್ಲಿಂ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಕೋರ್ಟಿನಲ್ಲಿ ಅರ್ಜಿಗಳನ್ನು ಸಲ್ಲಿಸಿದರು. ಫೆಬ್ರವರಿ ಹತ್ತನೇ ತಾರೀಖಿನಂದು ಕರ್ನಾಟಕ ಹೈಕೋರ್ಟ್‌ “ಕೇಸರಿ ಶಾಲುಗಳು, ಸ್ಕಾರ್ಫ್, ಹಿಜಾಬ್‌, ಧಾರ್ಮಿಕ ಧ್ವಜ ಅಥವಾ ಅಂತಹವುಗಳನ್ನು ಧರಿಸಿ ತರಗತಿಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿ ಮಧ್ಯಂತರ ಆದೇಶವನ್ನು ಹೊರಡಿಸಿತು. ಆಗ ಆಯೇಷಾ ಕಾಲೇಜು ಸೇರಿ ಒಂದು ತಿಂಗಳಷ್ಟೇ ಆಗಿತ್ತು.

ಈ ಆದೇಶವು ಅನೇಕರನ್ನು ಆಘಾತಕ್ಕೀಡುಮಾಡಿತು. 2017-18ರ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ ಪ್ರಕಾರ, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳು ಸೇರಿದಂತೆ ಎಲ್ಲಾ ಅವಕಾಶ ವಂಚಿತ ಗುಂಪುಗಳಲ್ಲೇ ಉನ್ನತ ಶಿಕ್ಷಣದಲ್ಲಿ ಮುಸ್ಲಿಮರ ದಾಖಲಾತಿ ಅತ್ಯಂತ ಕಡಿಮೆ. ಈ ಆದೇಶದ ನಂತರ ಡಿಬಾರ್‌ ಭಯದಿಂದಾಗಿ ಹಲವು ವಿದ್ಯಾರ್ಥಿಗಳು ತಮ್ಮ ಹಿಜಾಬ್‌ ತೆಗೆದಿಟ್ಟು ತರಗತಿಗೆ ಹಾಜರಾಗಬೇಕಾಯಿತು. ಕೆಲವರು ಹಿಜಾಬ್‌ ನಿಷೇಧವಿಲ್ಲದ ಕಾಲೇಜಿಗೆ ಸೇರಿಕೊಂಡರು-ಇಂತಹ ಹೆಚ್ಚಿನ ಕಾಲೇಜುಗಳನ್ನು ಮುಸ್ಲಿಂ ಸಂಘಟನೆಗಳು ನಡೆಸುತ್ತಿದ್ದವು. ಇವೆರಡೂ ಸಾಧ್ಯವಿಲ್ಲದವರು ಕಾಲೇಜಿನ ಕನಸಿಗೆ ನೀರು ಚೆಲ್ಲಿದರು.

ಪ್ರತಿಭಟನೆಯ ಆರಂಭಿಕ ದಿನಗಳಲ್ಲಿ ತನ್ನ ಕಾಲೇಜಿನ ತರಗತಿಯಲ್ಲಿ ಹಿಜಾಬ್‌ ಧರಿಸುವ ಏಕೈಕ ವಿದ್ಯಾರ್ಥಿಯಾಗಿದ್ದ ಆಯೇಷಾ, ಈ ಪ್ರತಿಭಟನೆ ತನ್ನ ಕಾಲೇಜಿನ ಮೇಲೆ ಪರಿಣಾಮ ಬೀರಲಾರದು ಎಂದುಕೊಂಡಿದ್ದರು. ಅವರ ನಂಬಿಕೆ ಒಂದಿಷ್ಟು ಸರಿಯಾಗಿತ್ತು. ಅವರ ಕಾಲೇಜಿನ ಆಡಳಿತ ಹೈಕೋರ್ಟ್‌ ಇಂಟರಿಮ್ ಆರ್ಡರಿನ ನಂತರವೂ ಹಿಜಾಬ್‌ ಮೇಲೆ ನಿಷೇಧ ಹೇರಿರಲಿಲ್ಲ.

ಆದರೆ ಮಾರ್ಚ್‌ ತಿಂಗಳಿನಲ್ಲಿ ಹೈಕೋರ್ಟ್‌, ಕಾಲೇಜುಗಳಲ್ಲಿ ಹಿಜಾಬ್‌ ತೊಡುವುದನ್ನು ನಿಷೇಧಿಸುವ ಕಾಲೇಜುಗಳ ಹಕ್ಕುಗಳನ್ನು ಎತ್ತಿ ಹಿಡಿದು ತೀರ್ಪು ನೀಡಿದ ನಂತರ ಕಾಲೇಜುಗಳು ಹಿಜಾಬ್‌ ನಿಷೇಧವನ್ನು ಜಾರಿಗೆ ತರಲಾರಂಭಿಸಿದವು. ಇದನ್ನು ವ್ಯಾಪಕವಾಗಿ ಹಿಜಾಬ್‌ ನಿಷೇಧವೆಂದು ಕರೆಯಲಾಯಿತು. “ಇಸ್ಲಾಮಿನಲ್ಲಿ ಹಿಜಾಬ್‌ ಧರಿಸುವುದು ಕಡ್ಡಾಯವೆಂದು ನಿರೂಪಿಸಲು ಅರ್ಜಿದಾರರು ವಿಫಲರಾಗಿದ್ದಾರೆ. ಅದೊಂದು ʼಅಗತ್ಯ ಧಾರ್ಮಿಕ ಆಚರಣೆʼ ಎನ್ನುವುದನ್ನು ಅವರು ಸಾಬೀತುಪಡಿಸಿಲ್ಲ” ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು.

ವಸ್ತ್ರ ಸಂಹಿತೆಯ ಶಿಫಾರಸ್ಸು “ವಿಮೋಚನೆಯ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ” ಎಂದು ನ್ಯಾಯಾಲಯ ಹೇಳಿತ್ತು. “ಇದು ಮಹಿಳೆಯರ ಸ್ವಾಯತ್ತತೆಯನ್ನು ಅಥವಾ ಅವರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಎಂದು ಹೇಳಬೇಕಾಗಿಲ್ಲ, ಏಕೆಂದರೆ ಅವರು ತರಗತಿಯ ಹೊರಗೆ ತಮ್ಮ ಆಯ್ಕೆಯ ಯಾವುದೇ ಉಡುಪನ್ನು ಧರಿಸಬಹುದು” ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ತೀರ್ಪಿನಿಂದ ತೃಪ್ತರಾಗದ ಅರ್ಜಿದಾರರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು – ಅಕ್ಟೋಬರ್ 2022ರಲ್ಲಿ, ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ವಿಭಜಿತ ತೀರ್ಪನ್ನು ನೀಡಿತು, ನಂತರ ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಲಾಯಿತು. ಪರಿಣಾಮಕಾರಿಯಾಗಿ, ಹೈಕೋರ್ಟ್ ತೀರ್ಪಿನ ಸಮಯದಿಂದ, ಪ್ರಸ್ತುತ, ಅರ್ಜಿದಾರರು ಈ ವಿಷಯವನ್ನು ಆಲಿಸಲು ಹೊಸ ಪೀಠದ ರಚನೆಗಾಗಿ ಕಾಯುತ್ತಿರುವಾಗ, ಹಿಜಾಬ್ ನಿಷೇಧವು ಪರಿಣಾಮಕಾರಿಯಾಗಿ ಜಾರಿಯಲ್ಲಿದೆ.

ಹೈಕೋರ್ಟ್‌ ತೀರ್ಪಿನ ನಂತರ ಕಾಲೇಜು ಅಧಿಕಾರಿಗಳು ಆಯೇಷಾ ಅವರ ಬಳಿ ಹಿಜಾಬ್‌ ತೆಗೆದಿಟ್ಟು ಬರದಿದ್ದರೆ ತರಗತಿಗೆ ಅನುಮತಿಸಲಾಗದು ಎಂದು ಹೇಳಿದರು. “ನಾನು ಹಲವು ಬಾರಿ ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಮಾತುಗಳನ್ನು ಕನಿಷ್ಟ ಕೇಳುವ ಸ್ಥಿತಿಯಲ್ಲೂ ಇದ್ದಿರಲಿಲ್ಲ.” ಎನ್ನುತ್ತಾರೆ ಆಯೇಷಾ.

ಕೆಲವು ವಾರಗಳ ನಂತರ ಆಯೇಷಾ ಮನೆಯಲ್ಲೇ ಉಳಿಯತೊಡಗಿದರು. ಮನೆಯಲ್ಲಿ ಮಗನನ್ನು ನೋಡಿಕೊಳ್ಳುವುದು ಮತ್ತೆ ಮನೆಗೆಲಸ ನೋಡಿಕೊಳ್ಳುವುದರಲ್ಲಿ ಅವರ ದಿನ ಮುಗಿದು ಹೋಗುತ್ತಿತ್ತು. ಈಗ ಓದು ಮುಂದುವರೆಸಲು ಹಿಜಾಬ್‌ ಇಲ್ಲದೆ ಹೊರಗೆ ಓಡಾಡಲು ಅತ್ತೆ ಮಾವನ ಅನುಮತಿ ಸಿಗುವುದು ಕಷ್ಟವಿತ್ತು. ಹಿಜಾಬ್‌ ಧರಿಸುತ್ತಿದ್ದ ಸಮಯದಲ್ಲೇ ಬಹಳ ಕಷ್ಟದಿಂದ ಓದಲು ಅನುಮತಿ ದೊರಕಿತ್ತಾದ್ದರಿಂದ ಈ ಬಾರಿ ಅವರು ಅವರನ್ನು ಕೇಳುವ ಸಾಹಸ ಮಾಡಲಿಲ್ಲ.

ಅವರ ಪಾಲಿಗೆ ಅದು (ಹಿಜಾಬ್ ಇಲ್ಲದೆ ಓಡಾಡುವುದು) ಅವರು ಬಯಸಿದ ಹೋರಾಟವಾಗಿರಲಿಲ್ಲ. ಅವರು ಹೇಳುವಂತೆ, “ಆಕೆ ಯಾವುದೇ ಹಿನ್ನೆಲೆಯಿಂದಲೇ ಬಂದಿರಲಿ ಪ್ರತಿಯೊಬ್ಬ ಮಹಿಳೆಗೂ ಓದುವ ಅವಕಾಶ ದೊರೆಯಬೇಕು. ಅವಳು ಬಿಕಿನಿ ತೊಟ್ಟಿದ್ದಾಳೆಯೇ, ಅಥವಾ ಮೈತುಂಬಾ ಬಟ್ಟೆ ತೊಟ್ಟಿದ್ದಾಳೆಯೇ ಎನ್ನುವುದು ಇಲ್ಲಿ ಪ್ರಶ್ನೆಯಾಗಬಾರದು. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಅರ್ಹರು.”

ಆದರೆ ಆಯೇಷಾ ಹೀಗೆ ಒಂದು ಧರ್ಮದ ಜನರ ಕುರಿತಾದ ಪೂರ್ವಗ್ರಹ ತನ್ನ ಕನಸನ್ನು ದೋಚಿದ್ದನ್ನು ಕಂಡು ಆಕ್ರೋಶಿತರಾಗಿದ್ದಾರೆ. “ನನ್ನ ಬದುಕು ಈ ನಾಲ್ಕು ಗೋಡೆಗಳ ನಡುವೆ ಮುಗಿದು ಹೋಗಬಾರದು” ಎಂದು ತನ್ನ ಮಲಗುವ ಕೋಣೆಯ ಪ್ರಕಾಶಮಾನವಾದ ಹಳದಿ ಗೋಡೆಗಳನ್ನು ನೋಡುತ್ತಾ ಹೇಳುತ್ತಾರೆ. ಅವರ ತೋಳಿನಲ್ಲಿ ಅವರ ನಾಲ್ಕು ವರ್ಷದ ಮಗ ಆಡುತ್ತಿದ್ದ.

“ನನ್ನಮ್ಮ ನನಗೆ ಜನ್ಮ ನೀಡಿದಾಗ ನನ್ನ ಕುರಿತಾಗಿ ಒಂದು ಕನಸು ಕಂಡಿರ ಬಹುದಲ್ಲವೆ? ಆಕೆಯ ಕನಸಿನ ನನ್ನ ಬದುಕು ಹೀಗೆ ಅಡುಗೆ ಮನೆ ನೋಡಿ ಕೊಳ್ಳುವುದು, ಬಚ್ಚಲು ಮನೆ ತೊಳೆಯುವುದರಲ್ಲಿಯೇ ಕಳೆದು ಹೋಗುವುದು ನ್ಯಾಯವಲ್ಲ.” ಎಂದು ಬೇಸರದಿಂದ ಹೇಳಿದರು.

ಅನು: ಶಂಕರ ಎನ್‌. ಕೆಂಚನೂರು

Related Articles

ಇತ್ತೀಚಿನ ಸುದ್ದಿಗಳು