Monday, June 17, 2024

ಸತ್ಯ | ನ್ಯಾಯ |ಧರ್ಮ

ಮುಸ್ಲಿಂ ವಿದ್ಯಾರ್ಥಿನಿಯರ ಖಾಸಗಿ ಹಕ್ಕನ್ನು ಎತ್ತಿ ಹಿಡಿದ ಹಿಜಾಬ್ ತೀರ್ಪು

ಇಡೀ ದೇಶದ ಕುತೂಹಲ ಕೆರಳಿಸಿದ್ದ, ಇಂದು ಅಂತಿಮ ತೀರ್ಪು ಹೊರಬೀಳಬಹುದು ಎಂದೇ ಅಂದಾಜಿಸಲಾಗಿದ್ದ ಹಿಜಾಬ್ ಕುರಿತಾದ ತೀರ್ಪು ಅಂತೂ ಹೊರಬಿದ್ದಿದೆ. ಆದರೆ ದ್ವಿಸದಸ್ಯ ಪೀಠದ ಈ ತೀರ್ಪು ಭಿನ್ನ ಅಭಿಪ್ರಾಯದಿಂದ ಕೂಡಿದ್ದು ಹಿಜಾಬ್ ಪರವೂ ಅಲ್ಲದ, ಹಿಜಾಬಿನ ವಿರುದ್ಧವೂ ಅಲ್ಲದಂತೆ ವ್ಯತಿರಿಕ್ತವಾಗಿ ಕೂಡಿದೆ. ಹಾಗಾಗಿ ಹಿಜಾಬ್ ತೀರ್ಪಿನ ಕುರಿತಾದ ಕುತೂಹಲ ಮತ್ತಷ್ಟು ಜಟಿಲಗೊಂಡಿದೆ.

ನ್ಯಾ.ಹೇಮಂತ್ ಗುಪ್ತಾ ಹಿಜಾಬ್ ಕುರಿತಾದ ಮೇಲ್ಮನವಿ ರದ್ದುಗೊಳಿಸಿದರೆ, ನ್ಯಾ.ಸುದಾಂಶು ಧುಲಿಯಾ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಮುಂದಿನ ತೀರ್ಪು ಹೊರಬರುವ ವರೆಗೂ ಶಾಲಾ ಕಾಲೇಜುಗಳಲ್ಲಿ ಯಥಾಸ್ಥಿತಿ ಮುಂದುವರೆಯುವಂತೆ ಆದೇಶಿಸಿದ್ದಾರೆ. ಸಧ್ಯ ದ್ವಿಸದಸ್ಯ ಪೀಠದಿಂದ ಈ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಜೊತೆಗೆ ವಿಸ್ತೃತ ಪೀಠಕ್ಕೆ 11 ಪ್ರಶ್ನೆಗಳನ್ನು ಮುಂದಿಟ್ಟು ಕರ್ನಾಟಕ ಹೈಕೋರ್ಟ್ ಆದೇಶವನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಎತ್ತಿಹಿಡಿಯಬೇಕಾದ ಸಾಂವಿಧಾನಿಕ, ಸಾರ್ವಭೌಮತ್ವದ ದೇಶದಲ್ಲಿ ಧಾರ್ಮಿಕ ಹಿನ್ನೆಲೆಯ ಕಾರಣಕ್ಕೆ, ಸೈದ್ಧಾಂತಿಕ ಸಂಘರ್ಷದ ಕಾರಣಕ್ಕೆ ಮಕ್ಕಳನ್ನು ಶಿಕ್ಷಣದ ಹಕ್ಕಿನಿಂದ ವಂಚಿಸಬಾರದು ಎಂದು ನ್ಯಾ.ಸುದಾಂಶು ಧುಲಿಯಾ ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಅವರವರ ವಸ್ತ್ರದ ಆಯ್ಕೆ ಅವರವರಿಗೆ ಬಿಟ್ಟದ್ದು, ಇದರಲ್ಲಿ ಮೂರನೇ ವ್ಯಕ್ತಿ, ಸಂಘಟನೆ, ಧರ್ಮ, ಸಿದ್ಧಾಂತಗಳು ಮೂಗು ತೂರಿಸುವುದು ಅನಗತ್ಯ ಎಂದೂ ಸಹ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಹೆಣ್ಣು ಮಕ್ಕಳ ಆಯ್ಕೆ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಂಗತಿ. ಜೊತೆಗೆ ನಮ್ಮ ಮುಖ್ಯ ಆಧ್ಯತೆ ಹೆಣ್ಣು ಮಕ್ಕಳ ಶಿಕ್ಷಣವಾಗಬೇಕಿದೆ, ನ್ಯಾಯಾಲಯಗಳು ಕೊಡುವ ಈ ರೀತಿಯ ತೀರ್ಪು ಕಳವಳಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಹಳ ಕುತೂಹಲ ಕೆರಳಿಸಿದ್ದ ಹಿಜಾಬ್ ತೀರ್ಪು ಈಗ ಹಿಜಾಬ್ ಪರ ಮತ್ತು ವಿರುದ್ಧ ಇದ್ದ ಎರಡೂ ಗುಂಪುಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಜೊತೆಗೆ ಅಂತಿಮ ತೀರ್ಪಿನ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಹಿಜಾಬ್ ಧರಿಸುವುದು ತಮ್ಮ ನಂಬಿಕೆಯ ಭಾಗ ಜೊತೆಗೆ ಅದು ಮೂಲಭೂತ ಹಕ್ಕು ಎಂದು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು‌. ಆದರೆ ಕರ್ನಾಟಕ ಹೈಕೋರ್ಟ್ ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಮುಸ್ಲಿಮರು ಹಿಜಾಬ್ ಧರಿಸುವುದು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದೆ. ಪ್ರಸ್ತುತ ಕರ್ನಾಟಕದಲ್ಲಿ, ಮುಸ್ಲಿಮರು ನಡೆಸುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಮಾತ್ರ ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುತ್ತಿವೆ ಎಂದು ಹಿಜಾಬ್ ವಿರುದ್ಧ ವಾದ ಮಂಡಿಸಲಾಗಿತ್ತು.

ಎರಡೂ ಕಡೆಗಳ ಸುಧೀರ್ಘ ವಾದ ಪ್ರತಿವಾದದಲ್ಲಿ ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ರಾಜೀವ್ ಧವನ್, ದುಶ್ಯಂತ್ ದವೆ, ಯೂಸುಫ್ ಮುಚ್ಚಲ, ಎಂ ಆರ್ ಶಂಶದ್, ಸಲ್ಮಾನ್ ಖುರ್ಷೀದ್, ನಿಜಾಂ ಪಾಷಾ, ಪ್ರಶಾಂತ್ ಭೂಷಣ್, ದೇವದತ್ ಕಾಮತ್, ಶೋಯೆಬ್ ಆಲಂ ಹಾಗೂ ವಕೀಲೆ ವಿ ಮೋಹನಾ ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹಾಗೂ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ಸಧ್ಯ ಪ್ರಕರಣ ಸಿಜೆಐ ಗೆ ವರ್ಗಾವಣೆ ಆದ ಬೆನ್ನಲ್ಲೇ ಸಿಜೆಐ ಅವರು ಹಿಜಾಬ್ ವಿಚಾರಣೆ ಸಂಬಂಧ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ ರಚಿಸಬೇಕು ಎಂದು ತೀರ್ಪಿನಲ್ಲಿ ಕೋರಿದ್ದಾರೆ.

ಇನ್ನು ಇದೇ ಅಕ್ಟೋಬರ್ 16 ಕ್ಕೆ ನ್ಯಾ.ಹೇಮಂತ್ ಗುಪ್ತಾ ರಾಜೀನಾಮೆ ಹಿನ್ನೆಲೆಯಲ್ಲಿ ಪೂರ್ಣ ಹಂತದ ತೀರ್ಪು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಲಿದೆ. ಆಗಲೂ ನ್ಯಾಯಮೂರ್ತಿಗಳ ಭಿನ್ನ ರೀತಿಯ ತೀರ್ಪು ಬಂದರೂ ಬಹುಮತದ ಆಧಾರದಲ್ಲಿ ಅಥವಾ ಸಿಜೆಐ ಪ್ರಕಟಿಸುವ ಅಭಿಪ್ರಾಯದ ಮೇಲೆ ತೀರ್ಪು ನಿರ್ಧಾರವಾಗಲಿದೆ. ಯಾವುದೇ ತೀರ್ಪು ಬಂದರೂ ಮುಂದಿನ ಹಂತದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭವಿಷ್ಯದ ದೃಷ್ಟಿಯಿಂದ ತೀರ್ಪು ಸ್ವೀಕರಿಸಬೇಕು. ಮತ್ತು ಸರ್ಕಾರ ಕೂಡಾ ತನ್ನ ಸೈದ್ಧಾಂತಿಕ ಹಠ ಬಿಟ್ಟು ವರ್ತಿಸಿದರೆ ರಾಜ್ಯ ಕೂಡಾ ಇವೆಲ್ಲಾ ಗೊಂದಲಗಳಿಗೆ ಅಂತ್ಯ ಹಾಡಬಹುದು ಎಂಬುದು ಸಾರ್ವಜನಿಕವಾಗಿ ಕೇಳಿಬಂದ ಅಭಿಪ್ರಾಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು