Monday, June 17, 2024

ಸತ್ಯ | ನ್ಯಾಯ |ಧರ್ಮ

ಮಂಜಿಲ್ಲದ ಬೆಟ್ಟಗಳು ನೀರಿಲ್ಲದ ತೊರೆಗಳು

ಹಿಮಾಲಯದ ಹಿಮನದಿಗಳ ಮಂಜುಗಡ್ಡೆಗಳ ಕರಗುವಿಕೆಯ ವೇಗವು ಕಳೆದ ಕೆಲವು ದಶಕಗಳಿಂದ ವೃದ್ಧಿಸಿದೆ. ಆಹಾರ, ನೀರು ಮತ್ತು ಇನ್ನಿತರ ಬದುಕಿನ ಅವಶ್ಯಕತೆಗಳಿಗಾಗಿ ಆ ನದಿಗಳನ್ನೇ ಅವಲಂಬಿಸಿರುವ ಲಕ್ಷಾಂತರ ಮಂದಿಯ ಮೇಲೆ ಹಿಮನದಿ ಕರಗುವಿಕೆ ತೀವ್ರ ಪರಿಣಾಮ ಬೀರಲಿದೆ ಎಂದು ಈಗಾಗಲೇ ಅಂದಾಜಿಸಿದ್ದರೂ ನಮ್ಮ ಸರ್ಕಾರಗಳು, ಮಾಧ್ಯಮಗಳು ಈವರೆಗೂ ಎಚ್ಚರಗೊಂಡಿಲ್ಲ ಎಂಬ ಆತಂಕದಿಂದಲೇ ಮುಂಬರಲಿರುವ ಘೋರ ದಿನಗಳ ಕುರಿತು ಬರೆಯುತ್ತಾರೆ ವಿಜ್ಞಾನ ಲೇಖಕ ಕೆ ಎಸ್‌ ರವಿಕುಮಾರ್.

ಬುದ್ಧನಿಗರ್ಪಿಸಿದ ಹೂವುಗಳು

ಥಂಡಿ ಕೊರೆಯುವ ಹೊಳೆಯಲ್ಲಿ

ತೇಲಿ ಬರುತ್ತಿವೆ

– ಬುಸಾನ್

ಗ್ಯಾಂಗ್ಟೊಕ್ ಪ್ರವಾಸದ ವೇಳೆ ನನ್ನ ಬಾವ ಇಂದ್ರದೇವ್ ಗುರುಂಗ್ ಕಾಂಚೆನ್‍ಜುಂಗಾ ಶಿಖರವನ್ನು ತೋರಿಸಲು ತಾಶೀ ವ್ಯೂ ಪಾಯಿಂಟ್‍ಗೆ ಕರೆದೊಯ್ದಿದ್ದರು. ಮೋಡವಿಲ್ಲದ ದಿನವಾದರೆ ಕಾಂಚೆನ್‍ಜುಂಗಾದ ನೋಟ ಬಹಳ ಚೆನ್ನಾಗಿರುತ್ತದೆ. ಮಂಜು ಹೊದ್ದ ಅದರ ಕಡಿದಾದ ಏಣುಗಳು ದೂರದಿಂದಲೆ ಗಮನ ಸೆಳೆಯುತ್ತವೆ. ಎವರೆಸ್ಟ್ ಏರುವುದು ಸಲೀಸು, ಕಾಂಚೆನ್‍ಜುಂಗಾ ಏರುವುದು ತೊಡಕು ಎಂಬ ಮಾತಿದೆ. ಇದು ದಿಟ ಕೂಡಾ. ಬೆಟ್ಟವೇರುವ ಸಾಹಸಿಗಳಿಗೆ ಕಾಂಚೆನ್‍ಜುಂಗಾ ದೊಡ್ಡ ದುಸ್ತರ ಸವಾಲೇ ಸರಿ. ಓಹ್, ವಿಷಯ ಬೇರೆಲ್ಲಿಗೊ ಹೊರಳಿಕೊಂಡಿತು!

ನಿಜಕ್ಕೂ ಆವತ್ತು ನಾವು ನೋಡಿದ್ದು ಮೋಡಗಳ ನಡುವೆ ಕಣ್ಣುಮುಚ್ಚಾಲೆಯಾಟ ಆಡುತ್ತಿದ್ದ  ಕಾಂಚೆನ್‍ಜುಂಗಾವನ್ನು. ಮೋಡ ಸರಿಯುವುದನ್ನೆ ಕಾಯುತ್ತಿದ್ದಾಗ ನನ್ನ ಬಾವ ‘ಕಾಂಚೆನ್‍ಜುಂಗಾದ ಮೇಲೆ ಮುಂಚಿನಂತೆ ವರುಷಪೂರ್ತಿ ಮಂಜು ಕವಿದು ಕೊಂಡಿರುವುದಿಲ್ಲ’ ಎಂದರು. ಗ್ಯಾಂಗ್ಟೋಕಿನಲ್ಲೆ ಹುಟ್ಟಿ ವರುಷವೆಲ್ಲ ಕಾಂಚೆನ್‍ಜುಂಗಾವನ್ನು ನೋಡುತ್ತ ಬೆಳೆದು ಬಂದ ಅವರ ಮಾತನ್ನು ಸಂದೇಹಿಸಲು ನನಗೆ ಕಾರಣವಿರಲಿಲ್ಲ. ಆ ದಿವಸ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಅವರ ಮಾತುಗಳು ಇವತ್ತಿಗೂ ಒಂದು ಪದವೂ ಮರೆತು ಹೋಗದಂತೆ ನೆನಪಿನಲ್ಲುಳಿದಿವೆ. ಈ ಮಾತುಗಳು ನನ್ನ ಕಿವಿಗೆ ಬಿದ್ದದ್ದು 2007ರ ಅಕ್ಟೋಬರ್ ತಿಂಗಳ 6ನೇ ತಾರೀಕಿನಂದು, ಅಂದರೆ 14 ವರುಷಗಳ ಹಿಂದೆ! ಹಿಮಾಲಯದ ಹೆಬ್ಬೆಟ್ಟಗಳು ಮಂಜು ಕಳಚಿಕೊಳ್ಳುತ್ತಿರುವ ವಿಚಾರದ ಕುರಿತಾದ ತುರುಸಿನ ಚರ್ಚೆ ತೊಂಬತ್ತರ ದಶಕದ ಕೊನೆಯಿಂದಲೆ ಶುರುವಾಗಿತ್ತು. ವಿಜ್ಞಾನಿಗಳ ಮಾತಿಗೆ ಅಂದು ಮಾಧ್ಯಮಗಳಾಗಲಿ, ಸರ್ಕಾರಗಳಾಗಲಿ ತಲೆ ಕೆಡಿಸಿ ಕೊಂಡಿರಲಿಲ್ಲ (ಹಾಗಂತ ಈಗಲೂ ಭರವಸೆಯ ಸನ್ನಿವೇಶವಿಲ್ಲ. ಇಂದಿನ ನಮ್ಮ ದೃಶ್ಯ ಮಾಧ್ಯಮಗಳಿಗಂತೂ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪ ಏರಿಕೆಗಳ ಕುರಿತು ವಾರಕ್ಕೊಮ್ಮೆಯಾದರೂ ಅರ್ಧ ಗಂಟೆಯ ಒಂದು ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡಲು ಹುಮ್ಮಸ್ಸಿಲ್ಲ. ಒಂದೇ ಒಂದು Panel discussion ಮಾಡುವುದಿಲ್ಲ. ಹವಾಮಾನದ ಅಪರೂಪದ ಮತ್ತು ಅತಿರೇಕದ ಘಟನೆಗಳನ್ನು ಪ್ರಸಾರ ಮಾಡುತ್ತಿರಬೇಕು ಎಂಬ ಕಳಕಳಿಯಿಲ್ಲ. ಹವಾಮಾನ ಬದಲಾವಣೆಯನ್ನು ಎದುರಿಸುವ ನಿಟ್ಟಿನಲ್ಲಿ ಯಾರಾದರು ಮಾಡಿರುವ ಸುಧಾರಣೆಯ ಹೊಸ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಲು ಇವಕ್ಕೆ ಸಮಯವಿಲ್ಲ. ಎಲ್ಲಾದರು ಹೊಸ ಸಂಶೋಧನೆಗಳು ಜರುಗಿದರೆ ಅವುಗಳ ಬಗ್ಗೆ ವರದಿ ಮಾಡಲು ಕುತೂಹಲವಿಲ್ಲ. Television Rating Point  ಬಗ್ಗೆ ಮಾತ್ರ ಇರುವ ತೋಳನ ಹಸಿವು ಮತ್ತು ರಾಜಕೀಯ ಲೆಕ್ಕಾಚಾರಗಳನ್ನು ಹೊರತುಪಡಿಸಿ ಬೇರೆ ದಿಕ್ಕಿಗೆ ಅವು ದಿಟ್ಟಿ ಹಾಯಿಸುವುದಿಲ್ಲ).

ಕಾಂಚೆನ್‍ಜುಂಗಾ ಜಗತ್ತಿನಲ್ಲಿ ಮೂರನೆ ಎತ್ತರದ ಹೆಬ್ಬೆಟ್ಟವಾದರೆ ಭಾರತದಲ್ಲಿ ಮೊದಲ ಎತ್ತರದ ಹೆಬ್ಬೆಟ್ಟ. ಎತ್ತರ ಕಡಲಿನ ಮಟ್ಟದಿಂದ 8,586 ಮೀಟರುಗಳು. ಕಣಿವೆಯ ತಪ್ಪಲಿನಿಂದ ಮೇಲಕ್ಕೆ ಇದರ ಮುಕ್ಕಾಲು ಪಾಲು ಮಂಜು ಕವಿದಿರುವುದು ಸಾಮಾನ್ಯ. ಜಾಗತಿಕ ತಾಪ ಏರಿಕೆ ಜಗತ್ತನ್ನೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವಾಗ ಬಡಪಾಯಿ ಕಾಂಚೆನ್‍ಜುಂಗಾ ಹೊರತಾಗಿ ಉಳಿದೀತು ಹೇಗೆ? ವಾತಾವರಣದ ಅನಗತ್ಯ ಹೆಚ್ಚುವರಿ ಕಾವು ಕಾಂಚೆನ್‍ಜುಂಗಾದ ಮಂಜನ್ನು ಕರಗಿಸದೆ ಬಿಟ್ಟೀತು ಹೇಗೆ? ಹೀಗಾಗಿ ಈಗ  ವರುಷದ ಏಳೆಂಟು ತಿಂಗಳು ಕಾಂಚೆನ್‍ಜುಂಗಾ ತಪ್ಪಲಿನಿಂದ ಮುಕ್ಕಾಲು ಪಾಲು ಬೆತ್ತಲಾಗಿ ನಿಲ್ಲುತ್ತದೆ. ಈಗ ಹಿಮಾಲಯದ ಮಂಜಿನ ಸಂವಿಧಾನಕ್ಕೆ ಬಂದ ಬೆದರಿಕೆಯಾದರೂ ಯಾರಿಂದ?

ಮೂರನೆಯ ತುದಿ (Third Pole)

ದಕ್ಷಿಣ ಹಾಗೂ ಉತ್ತರ ಧ್ರುವಗಳು ಜಗತ್ತಿನ ಎರಡು ತುದಿಗಳಾದರೆ ಎತಿ ಎತ್ತರದ ಎವರೆಸ್ಟ್ ಅನ್ನು ಮೂರನೆಯ ತುದಿ ಎನ್ನಲಾಗುತ್ತದೆ. ಎವೆರೆಸ್ಟ್ ಇರುವ ಹಿಮಾಲಯವನ್ನೂ ಇಡಿಯಾಗಿ ಮೂರನೆಯ ತುದಿ ಎಂದೂ ಕರೆಯುತ್ತಾರೆ. ಜಗತ್ತಿನ ಅತಿ ಎತ್ತರದ ಬೆಟ್ಟ ಸಾಲು ಹಿಮಾಲಯವಾದ್ದರಿಂದ ಈ ರೀತಿಯಲ್ಲಿ ಕರೆಯುವುದು ವಾಡಿಕೆ. ಅಂಟಾರ್ಕಟಿಕಾ ಮತ್ತು ಆರ್ಕಟಿಕ್ ಪ್ರದೇಶಗಳನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಪ್ರಮಾಣದ ಮಂಜು ಕವಿಯುವುದು ಮತ್ತು ಶಾಶ್ವತ ಮಂಜಿ (Perpetual snow)ರುವುದು ಹಿಮಾಲಯದಲ್ಲೆ. ಶಾಶ್ವತ ಮಂಜು ಹೊದೆಯುವ ಜಗತ್ತಿನ ಬೇರೆಲ್ಲ ಬೆಟ್ಟಸಾಲುಗಳಿಗಿಂತ ಹಿಮಾಲಯದಲ್ಲಿ ಕಲೆತ ಮಂಜು ಈಗ ಬೇಗ ಬೇಗ ಕರಗಿಹೋಗುತ್ತಿರುವ ವೇಗದ ದರ ಹೆಚ್ಚು ಎನ್ನಲಾಗಿದೆ. ಅಫಘಾನಿಸ್ತಾನದ ಹಿಂದೂಕುಶ್ ಸಾಲಿನಿಂದ ಹಿಡಿದು ಪಾಕಿಸ್ತಾನ, ಭಾರತ, ಚೀನ, ನೇಪಾಳ, ಭೂತಾನ, ಬಾಂಗ್ಲಾದೇಶಗಳ ಮೂಲಕ ಮಯಮ್ನಾರ್‍ ವರೆಗೆ ಹಿಮಾಲಯ ಸುಮಾರು ಎಂಟು ದೇಶಗಳಲ್ಲಿ ಹಬ್ಬಿಹೋಗಿದೆ (ಬಾಂಗ್ಲಾದೇಶದಲ್ಲಿ ಹಾದುಹೋಗದಿದ್ದರೂ ಹಿಮಾಲಯದ ನದಿಗಳಿಂದಲೇ ಬದುಕಿರುವ ಆ ದೇಶವನ್ನು ಈ ಎಂಟು ದೇಶಗಳ ಗುಂಪಿನಲ್ಲಿ ಸೇರಿಸಲಾಗುತ್ತದೆ). ಹಿಮಾಲಯದಲ್ಲಿ ಮಂಜು ತುಂಬಿದ ಗ್ಲೇಸಿಯರ್‍ಗಳು ವರುಷದಿಂದ ವರುಷಕ್ಕೆ ಕುಗ್ಗುತ್ತ ಹಿಂಜರಿಯುವುದನ್ನು ಅಧ್ಯಯನ ಮಾಡಿದ ಈ ಎಂಟು ದೇಶಗಳ ವಿಜ್ಞಾನಿಗಳ ತಂಡದ ವರದಿಯನ್ನು ಆಧರಿಸಿ ಕಾಠ್ಮಂಡುವಿನಲ್ಲಿ ನೆಲೆ ಹೊಂದಿರುವ International Centre for Integrated Mountain Development (ICIMOD) ಎಂಬ ಅಂತರ ಸರ್ಕಾರೀಯ ಕೂಟವೊಂದು 2019ರಲ್ಲಿ 627 ಪುಟಗಳ ದಾಖಲೆಯನ್ನು ಬಿಡುಗಡೆ ಮಾಡಿತು. 1970ರಿಂದ ಈಚೆಗೆ ಹಿಂದೂಕುಶ್-ಹಿಮಾಲಯ ಪ್ರದೇಶದಲ್ಲಿ ಶೇಕಡಾ 15ರಷ್ಟು ವರುಷಪೂರ್ತಿ ಇರಬೇಕಾದ ಶಾಶ್ವತ ಮಂಜು ಕರಗಿ ಹೋಗಿದೆಯೆಂದು ದಾಖಲೆ ತಿಳಿಸಿತು. ಜಾಗತಿಕ ತಾಪವನ್ನು ಹತೋಟಿಗೆ ತರದಿದ್ದರೆ 2100ರ ಹೊತ್ತಿಗೆ ಇನ್ನೂ ಶೇಕಡಾ 15-20ರಷ್ಟು ಮಂಜು ಕಣ್ಮರೆಯಾಗುವುದೆಂದು ಅದು ಮುನ್ನೆಚ್ಚರಿಕೆಯನ್ನೂ ನೀಡಿತು. ಹಳೆಯ ಮಂಜು ಹೋದರೇನಾದೀತು, ಹೊಸ ಮಂಜು ಉದುರುವುದಿಲ್ಲವೆ? ಇದು ಪ್ರಶ್ನೆ. ಹೌದು, ಏನಾದೀತು?

ಹಳೆಯ ಮಂಜು ಹೋದರೇನಾದೀತು?

ಹಿಮಾಲಯದ ಹೆಬ್ಬೆಟ್ಟಗಳಲ್ಲಿ ಶಾಶ್ವತ ಮಂಜು ಸಾಮಾನ್ಯವಾಗಿ ತಗ್ಗು ಜಾಗಗಳು, ಕಣಿವೆಯ ಇಳಿಜಾರುಗಳಲ್ಲಿ, ಅಡ್ಡ ನಿಂತ ಬಂಡೆಗಳ ಆಸರೆ ಪಡೆದು ಗ್ಲೇಸಿಯರ್ ರೂಪದಲ್ಲಿ ಟನ್ನುಗಟ್ಟಲೆ ಸಂಗ್ರಹಗೊಂಡು ನಿಧಾನಕ್ಕೆ ಕರಗುತ್ತ ವರುಷ ಪೂರ್ತಿ ಲಕ್ಷಾಂತರ ತೊರೆಗಳಿಗೆ ಜನುಮ ನೀಡುತ್ತದೆ. ಈ ತೊರೆಗಳು ಪುಟ್ಟ ಪುಟ್ಟ ಹಳ್ಳಗಳನ್ನು ರೂಪಿಸಿ ನಂತರ ಹೊಳೆಯಾಗಿ ಕಡೆಯಲ್ಲಿ ದೊಡ್ಡ ನದಿಗಳಾಗಿ ಸಾವಿರಾರು ಮೈಲುಗಳವರೆಗೆ ಹರಿದು ಕಡಲು ಸೇರಿ ತಮ್ಮ ಬದುಕನ್ನು ಕೊನೆಗೊಳಿಸಿಕೊಳ್ಳುತ್ತವೆ.  ಸಿಂಧೂ, ಗಂಗಾ, ಯಮುನ, ಬ್ರಹ್ಮಪುತ್ರ(ತ್ಸಾಂಗ್ ಪೊ), ಅಮುದರ್ಯಾ, ಇರವಾಡಿ, ಮೆಕಾಂಗ್, ಸಾಲ್ವಿನ್, ಯಾಂಗ್ಟ್ಜೆ , ಹುವಾಂಗ್ ಹೊ ಮುಂತಾದ ಜೀವನದಿಗಳ ಇರುವಿಕೆಯ ಬೇರಿರುವುದು ಹಿಮಾಲಯದ ಶಾಶ್ವತ ಮಂಜಿನಲ್ಲಿ ಅನ್ನುವುದನ್ನು ನಾವು ಮರೆಯಬಾರದು. ಈ ನದಿಗಳು ಇನ್ನೂರು ಕೋಟಿಗೂ ಹೆಚ್ಚು ಜನರ ಬದುಕನ್ನು ಪೊರೆಯುತ್ತವೆ ಎಂಬುದನ್ನೂ ನಾವು ಮರೆಯಬಾರದು.

ನದಿಗಳ ತಾಯಂದಿರಾದ ತೊರೆಗಳು ವರುಷದ ಯಾವ ಕಾಲದಲ್ಲೂ ಬತ್ತಬಾರದು. ಅಂದರೆ ಶಾಶ್ವತ ಮಂಜು ಉಳಿದಿರಬೇಕು. ಆಗ ಹಿಮಾಲಯದ ನದಿಗಳ ಇರುವಿಕೆಗೊಂದು ಹುರುಳು ಬರುತ್ತದೆ. ಅವು ವರುಷಪೂರ್ತಿ ತುಂಬಿ ಹರಿಯುತ್ತ ತಮ್ಮ ಹರಿವಿನ ಉದ್ದಕ್ಕೂ ಇಕ್ಕೆಡೆಯಲ್ಲಿ ನೆಲೆಸಿರುವ ಜನ, ಜೀವಸಂಕುಲಗಳಿಗೆ ನೆರವಾಗುತ್ತವೆ. ಇಷ್ಟುಕಾಲ ಸನ್ನಿವೇಶ ಇದ್ದದ್ದು ಹೀಗೆಯೆ. ಆದರೆ ಹಿಮಾಲಯದ ತೊರೆಗಳು ಸಾವಿರಾರು ಸಂಖ್ಯೆಯಲ್ಲಿ ಬತ್ತುತ್ತಿರುವುದರ ಕುರಿತು ಈತನಕ ಅಧ್ಯಯನಗಳು ಜರುಗಿಲ್ಲ. ಹೀಗಾಗಿ ಈ ಸಂಬಂಧದ ದತ್ತಾಂಶಗಳು ಸರ್ಕಾರಗಳ ಬಳಿ ಇಲ್ಲ. ಅಲ್ಲಲ್ಲಿ ಹಲವು ವಿಜ್ಞಾನಿಗಳು ತಾವಾಗಿಯೆ ನಡೆಸಿದ ಸರ್ವೆಯ ವರದಿಗಳಿವೆ ಅಷ್ಟೆ.

ಹಿಂಜರಿಯುತ್ತಿರುವ ಗ್ಲೇಸಿಯರ್‌ ಗಳು

ನಮ್ಮ ಕಾರ್ಬನ್ ಸೂಸುವಿಕೆಯ ಚಟುವಟಿಕೆಗಳಿಂದ ವಾತಾವರಣದಲ್ಲಿ ಏರುತ್ತಿರುವ ತಾಪ ಹಿಮಾಲಯದಲ್ಲಿ ಕವಿಯುವ ಶಾಶ್ವತ ಮಂಜಿನ ಮೇಲೆ ಎರಡು ಬಗೆಯ ಪರಿಣಾಮ ಬೀರುತ್ತಿದೆ. ಗಾಳಿಯ ಮೇಲುಮೇಲಿನ ಹಂತಗಳು ಒಂದೊಂದಾಗಿ ತಾಪ ಏರಿಸಿ ಕೊಳ್ಳುತ್ತ ಸಾಗಿದಂತೆ ಮಂಜು ಮಳೆಯ ರೂಪಕ್ಕೆ ಕರಗುತ್ತದೆ. ಅದು ಗಟ್ಟಿಯಾಗಿ ನೆಲ ತಲುಪುವ ಬದಲು ನೀರಾಗಿ ತಲುಪುತ್ತದೆ. ಮುಂದೆ ನಿಡುಗಾಲ ಗಟ್ಟಿಯಾಗಿ ಉಳಿದು ಮಂದಗತಿಯಲ್ಲಿ ಕರಗಬೇಕಿದ್ದ ಮಂಜು ನೀರಾಗಿ ಹರಿದುಹೋಗಿ ನದಿಗಳ ಮೂಲಕ ಕಡಲು ಸೇರಿ ಬಿಡುತ್ತದೆ. ಈಗಾಗಲೆ ಬಿದ್ದಿರುವ ಹಳೆಯ ಮಂಜು ಹೊಸ ಮಂಜು ಪಡೆದು ದಪ್ಪವಾಗುವ ಬದಲು ಮಳೆಗೆ ಮೈಯೊಡ್ಡಿ ತಾನೂ ಕರಗಿ ನೀರಾಗಿ ಬಿಡುತ್ತದೆ. ಮಳೆಯ ಒಳತಾಪ ಮಂಜಿನ ಒಳತಾಪಕ್ಕಿಂತ ಹೆಚ್ಚು ತಾನೆ? ಬೇಸಿಗೆ ಮುಗಿಯುವ ಹೊತ್ತಿಗೇ ಹಿಂದಿನ ಚಳಿಗಾಲದ ಹೊಸ ಮಂಜು ನೀರಾಗಿ ಹೋಗಿ ಹಿಮಾಲಯದ ಹೆಬ್ಬೆಟ್ಟಗಳು ವರುಷದ ಬಹುಕಾಲ ಬೋಳುಬೋಳಾಗಿ ನಿಲ್ಲುವ ಸನ್ನಿವೇಶ ಈಗ ತೀರಾ ಮಾಮೂಲಾಗುತ್ತಿದೆ.

ಇನ್ನೊಂದು ಪರಿಣಾಮ ವರುಷದಿಂದ ವರುಷಕ್ಕೆ ಮಂಜು ಬೀಳುವ ಪ್ರಮಾಣ ಕಡಿಮೆಯಾಗುತ್ತಿರುವುದು. ಬಿದ್ದ ಮಂಜು ಗ್ಲೇಸಿಯರ್‌ ಗಳಲ್ಲಿ ಕಲೆತು ಮುಂದಿನ ಚಳಿಗಾಲದವರೆಗೆ ಉಳಿಯದೆ ಮೇ-ಜೂನ್ ಮುಗಿಯುವ ಮೊದಲೆ ಕರಗಿಹೋಗುವುದು ಮತ್ತು ಕಡಿಮೆ ಸಂಗ್ರಹವಾಗುವುದರ ಮೂಲಕ ಹಿಮಾಲಯದಂತಹ ಬೆಟ್ಟಗಳಲ್ಲಿ ನೀರಿನ ಕೊರತೆ ಸೃಷ್ಟಿಯಾಗುವುದು ಈಗ ಸಾಮಾನ್ಯ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹರಡಿ ಹೋಗಿರುವ ಗ್ಲೇಸಿಯರ್‍ಗಳು ಬಿರುಸಿನಿಂದ ಕರಗಿ ಹೋಗಿ (ಹೆಚ್ಚಾಗಿ ಬೇಸಿಗೆಯಲ್ಲಿ) ಆಗಾಗ್ಗೆ ದಿಡೀರ್ ನೆರೆಯನ್ನು ಸೃಷ್ಟಿಸಬಲ್ಲವು. ಉತ್ತರಾಖಂಡ್ ರಾಜ್ಯದಲ್ಲಿ ಈ ವಿದ್ಯಮಾನ ಪದೇ ಪದೇ ಜರುಗುತ್ತಿರುತ್ತದೆ. ನೆರೆಯಲ್ಲಿ ಕೊಚ್ಚಿಹೋಗುವ ಜನ, ಜಾನುವಾರುಗಳ ಲೆಕ್ಕ ಗಾಬರಿ ಹುಟ್ಟಿಸುತ್ತದೆ. ನಾವೀಗ ನೋಡುತ್ತಿರುವ ಹಿಮಾಲಯದ ಪಾಡು ಹೀಗಿದೆ. ಗಂಗೆಗೆ ಜನುಮ ಕೊಡುವ ಗಂಗೋತ್ರಿ ಗ್ಲೇಸಿಯರ್ ವರುಷಕ್ಕೆ 22 ಮೀಟರಿನಷ್ಟು ಕುಗ್ಗಿ ಹಿಂಜರಿಯುತ್ತಿರುವುದನ್ನು ಹವಾಮಾನ ವಿಜ್ಞಾನಿಗಳು ದಾಖಲಿಸಿದ್ದಾರೆ. ಹಿಮಾಲಯದಲ್ಲಿ ಹುಟ್ಟುವ ಗಂಗೆಯ ಉಪನದಿಗಳ ಕತೆಯೂ ಬೇರೆಯಾಗಿಲ್ಲ. ಇದು ಹೀಗೆಯೆ ಮುಂದುವರಿದರೆ ಒಂದು ದಿನ ಗಂಗೆ ಸಣಕಲಾಗುತ್ತಾಳೆ. ಹಿಮಾಲಯದ ಚೊಕ್ಕಟ ನೀರಿಗಿಂತ ತನ್ನ ಪಯಣದುದ್ದಕ್ಕೂ ಮನುಷ್ಯರು ತನ್ನೊಡಲಿಗೆ ಸೇರಿಸಿದ ಕೊಳಚೆ ನೀರನ್ನೇ ಹೆಚ್ಚಿನ ಪ್ರಮಾಣದಲ್ಲಿ ಒಯ್ಯುವ ದೊಡ್ಡ ಗಟಾರವಾಗುವಳೇನೊ ಎಂಬ ಅಂಜಿಕೆ ನನಗೆ. ಅವಳು ಮುಂದೊಂದು ದಿನ ಕಡಲ ಮಡಿಲು ಸೇರುವ ಮುನ್ನವೇ ತನ್ನದೇ ತಳದ ಉಸುಕಿನಲ್ಲಿ ಉಸ್ಸಪ್ಪ ಅಂತ ಇಂಗಿ ಹೋದರೆ…!? ಆಫ್ರಿಕಾದ ಒಕವಾಂಗೊ ನದಿ ಗೊತ್ತಿರಬೇಕಲ್ಲ. ಅದು ಅಂಗೊಲಾದ ಬೆಟ್ಟಗಳಲ್ಲಿ ಹುಟ್ಟುತ್ತದೆ. ಅಲ್ಲಿ ಬೀಳುವ ಮಳೆಯ ನೀರಿನಿಂದ ಮೈದುಂಬಿ ನಮಿಬಿಯಾ ಗಡಿಯಗುಂಟ ಹರಿದು ಬೊಟ್ಸ್‍ವಾನಾದಲ್ಲಿ ತೆವಳಿ ಕಡೆಗೆ ಮೂಡಣದಲ್ಲಿ ಇಂಡಿಯನ್ ಹೆಗ್ಗಡಲು ಸಾವಿರ ಕಿ.ಮೀ ದೂರವಿದೆ ಎನ್ನುವಾಗಲೆ ಕಲಹರಿ ಬೆಂಗಾಡಿನಲ್ಲಿ ಮುಗ್ಗರಿಸಿ ಇಂಗಿ ಹೋಗುತ್ತದೆ. ನಮಿಬಿಯಾ, ಬೊಟ್ಸ್‍ವಾನಾಗಳಲ್ಲೂ ಮಳೆ ಬೀಳುವಂತಿದ್ದರೆ ಒಕವಾಂಗೊ ಒಂದೊಮ್ಮೆ ಕಡಲನ್ನು ತಲುಪುತ್ತಿತ್ತೇನೊ. ಅಂಗೊಲಾದ ನೀರು ಅದು 1600 ಕಿ.ಮೀ. ದೂರ ಹರಿಯಲಷ್ಟೆ ಕಸುವು ನೀಡುತ್ತದೆ (ಒಕವಾಂಗೋ ನಡುಹಾದಿಯಲ್ಲೆ ಕಾಣೆಯಾಗುವುದಕ್ಕೆ ಹವಾಮಾನ ಬದಲಾವಣೆ ಕಾರಣವಲ್ಲ. ಆದರೆ ನಿಸರ್ಗದ ಅಳವಿಗೆ ಮೀರಿದ್ದು ಏನೂ ಇಲ್ಲ ಎಂದು ತಿಳಿಸುವ ಉದ್ದೇಶ ಅಷ್ಟೆ). ಈ ಉದಾಹರಣೆಯ ಹಿನ್ನೆಲೆಯಲ್ಲಿ ಗಂಗೆ ತನ್ನ ಪಯಣದ ನಡುವೆ ಸಾವು ಕಾಣುವುದು ಬೇಡ ಎಂದು ಹಾರಯಿಸುವ ಪೈಕಿಯವ ನಾನು. ಹೌದು ಆ ದಿನಗಳು ಬರುವುದು ಬೇಡ! ಬಂದರೆ ಗಂಗೆಯನ್ನು ಅವಲಂಬಿಸಿರುವ 59 ಕೋಟಿ ಮಂದಿ ಕಂಗಾಲಾಗುತ್ತಾರೆ. ಇನ್ನು ನೆಲ ನೀರಿನಲ್ಲಿ ವಾಸಿಸುವ ಮನುಷ್ಯೇತರ ಜೀವ ಪ್ರಭೇದಗಳ ಕತೆಯೇನು?

(ಮುಂದಿನ ಭಾಗ ನಾಳೆ [೨-೦೨-೨೦೨೩] ಪ್ರಕಟವಾಗಲಿದೆ)

ಕೆ ಎಸ್‌ ರವಿಕುಮಾರ್‌

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

Related Articles

ಇತ್ತೀಚಿನ ಸುದ್ದಿಗಳು