ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯಲು 35 ಸ್ಥಾನಗಳ ಅವಶ್ಯಕತೆ ಇದ್ದು ಕಾಂಗ್ರೆಸ್ ಅಲ್ಪ ಸ್ಥಾನಗಳ ಮುನ್ನಡೆ ಕಾಯ್ದುಕೊಂಡಿದೆ. ಈ ನಡುವೆ ಅಲ್ಲಿ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಹೊರಬೀಳುವ ಮುನ್ನವೇ ಶಾಸಕರ ಕಳ್ಳತನಕ್ಕೆ ಎಲ್ಲಾ ರೀತಿಯ ತಯಾರಿಯನ್ನು ಬಿಜೆಪಿ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ಪಕ್ಷದ ಆಪರೇಷನ್ ಕಮಲದ ಮುನ್ಸೂಚನೆ ಅರಿತ ಕಾಂಗ್ರೆಸ್ ಪಕ್ಷ ತಮ್ಮ ಶಾಸಕರು ಆಮಿಷಕ್ಕೆ ಒಳಗಾಗ ಬಹುದು ಎನ್ನುವ ಭೀತಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಛತ್ತೀಸಗಢದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ಕಡೆಯಿಂದ ಹೊರಬಿದ್ದಿದೆ.
ಹಿಮಾಚಲ ಪ್ರದೇಶದ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಶಾಸಕರ ಕಳ್ಳತನದ ಭೀತಿಯಲ್ಲಿದ್ದರು. “ಹಿ.ಪ್ರದೇಶದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಅಥವಾ ಅಲ್ಪ ಸ್ಥಾನಗಳ ಮುನ್ನಡೆ ಕಾಯ್ದುಕೊಂಡರೆ, ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಯಾದ ಇಡಿ ಮತ್ತು ಸಿಬಿಐ ಅನ್ನು ಬಳಸಿಕೊಂಡು ಕುದುರೆ ವ್ಯಾಪಾರ ನಡೆಸಬಹುದು” ಎಂದು ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಮುನ್ಸೂಚನೆ ನೀಡಿದ್ದರು.
ಸಧ್ಯದ ಪರಿಸ್ಥಿತಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಯಾವುದೇ ಪಕ್ಷಕ್ಕೂ ಅಧಿಕಾರ ಹಿಡಿಯಲು ಇತರ ಪಕ್ಷ ಅಥವಾ ಪಕ್ಷೇತರರ ಬೆಂಬಲ ಬೇಕಿದೆ.
ಈ ನಡುವೆ ಕಾಂಗ್ರೆಸ್ ಗೆ ಆಪರೇಷನ್ ಕಮಲದ ಎಲ್ಲಾ ಮುನ್ಸೂಚನೆ ಸಿಕ್ಕಿರುವ ಕಾರಣ, ತನಗೆ ಬೆಂಬಲ ನೀಡುವ ಪಕ್ಷೇತರರ ಜೊತೆಗೆ ತನ್ನದೇ ಪಕ್ಷದ ಶಾಸಕರನ್ನು ಕಾಪಾಡಿಕೊಳ್ಳುವುದು ದೊಡ್ಡ ತಲೆನೋವಾಗಿದೆ.