ನಮ್ಮ ಸರ್ಕಾರ ಸ್ಕೂಲ್‌ ಅಡ್ಮಿಷನ್‌ ಫಾರ್ಮ್‌ನಿಂದ ಜಾತಿ ಕಾಲಂ ತೆಗೆದುಹಾಕಲಿದೆ: ಹಿಮಾಚಲ ಪ್ರದೇಶ ಸಿಎಂ ಸುಖವಿಂದರ್ ಸುಖು

ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪ್ರವೇಶಾತಿ ಅರ್ಜಿಗಳಿಂದ ಜಾತಿಯ ಕಾಲಂ ಅನ್ನು ತೆಗೆದುಹಾಕಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ. ಶಾಲಾ ಮಕ್ಕಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ಹಾಗೂ ಸಮಾನತೆ ಮತ್ತು ಭ್ರಾತೃತ್ವದ ಭಾವನೆಯನ್ನು ಬೆಳೆಸಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಶಿಮ್ಲಾದಲ್ಲಿ ನಡೆದ ಹಿಮಾಚಲ ಪ್ರದೇಶ ಪರಿಶಿಷ್ಟ ಜಾತಿ ಕಲ್ಯಾಣ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಖು, ಪ್ರವೇಶ ನಮೂನೆಗಳಿಂದ ಜಾತಿಯ ಕಾಲಂ ತೆಗೆದುಹಾಕುವುದರಿಂದ ಮಕ್ಕಳಲ್ಲಿ ಕೀಳರಿಮೆ ಬೆಳೆಯುವುದನ್ನು ತಪ್ಪಿಸಬಹುದು ಎಂದರು. ಯಾವುದೇ ತಾರತಮ್ಯವಿಲ್ಲದ ಸಮಾನತೆಯ ಸಮಾಜ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಆದರೆ, ಸರ್ಕಾರಿ ಯೋಜನೆಗಳು ಹಾಗೂ ಕಲ್ಯಾಣ ಸೌಲಭ್ಯಗಳನ್ನು ಪಡೆಯಲು ಪರಿಶಿಷ್ಟ ಜಾತಿಯ ಫಲಾನುಭವಿಗಳು ತಮ್ಮ ಜಾತಿ ವಿವರಗಳನ್ನು ನೀಡುವುದು ಮುಂದುವರಿಯಲಿದೆ; ಇದರಿಂದ ಅರ್ಹರಿಗೆ ನೇರವಾಗಿ ಸೌಲಭ್ಯ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಕೇವಲ ಶೇ. 1ರ ಬಡ್ಡಿದರದಲ್ಲಿ 20 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಉಲ್ಲೇಖಿಸಿದರು. ಇದಲ್ಲದೆ, ಅತ್ಯಂತ ಬಡ ಕುಟುಂಬಗಳಿಗಾಗಿ ‘ಅಪ್ನಾ ಪರಿವಾರ್ ಸುಖಿ ಪರಿವಾರ್ ಯೋಜನೆ’ಯನ್ನು ಜಾರಿಗೆ ತರಲಾಗುತ್ತಿದ್ದು, ಇದರಡಿ ಅರ್ಹ ಕುಟುಂಬಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಹಾಗೂ ಆ ಕುಟುಂಬಗಳ ಮಹಿಳೆಯರಿಗೆ ಮಾಸಿಕ 1,500 ರೂ. ಪಿಂಚಣಿ ನೀಡಲಾಗುತ್ತದೆ. 100 ಕಿಲೋವ್ಯಾಟ್‌ನಿಂದ 2 ಮೆಗಾವ್ಯಾಟ್‌ವರೆಗಿನ ಸೌರ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲು ‘ರಾಜೀವ್ ಗಾಂಧಿ ಸ್ಟಾರ್ಟ್-ಅಪ್ ಸ್ವರೋಜ್‌ಗಾರ್ ಸೌರ ಯೋಜನೆ’ಯಡಿ ಸರ್ಕಾರ ಆರ್ಥಿಕ ನೆರವು ನೀಡುತ್ತಿದ್ದು, ಬುಡಕಟ್ಟು ಪ್ರದೇಶಗಳಲ್ಲಿ ಶೇ. 5 ಮತ್ತು ಇತರ ಪ್ರದೇಶಗಳಲ್ಲಿ ಶೇ. 4 ಸಬ್ಸಿಡಿ ಒದಗಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಸದ್ಯ 8,41,917 ಜನರಿಗೆ ಸಾಮಾಜಿಕ ಭದ್ರತಾ ಪಿಂಚಣಿ ನೀಡಲಾಗುತ್ತಿದ್ದು, ಇದಕ್ಕಾಗಿ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸುಮಾರು 1,400 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ಧನಿ ರಾಮ್ ಶಾಂಡಿಲ್ ಮಾಹಿತಿ ನೀಡಿದ್ದಾರೆ. ವೃದ್ಧ ಪುರುಷರಿಗೆ ಮಾಸಿಕ 1,000 ರೂ., ಮಹಿಳೆಯರು, ಅಂಗವಿಕಲರು ಹಾಗೂ ವಿಧವೆಯರಿಗೆ 1,500 ರೂ. ಮತ್ತು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 1,700 ರೂ. ಪಿಂಚಣಿ ವಿತರಿಸಲಾಗುತ್ತಿದೆ. ಇದಲ್ಲದೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು, ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕಾಗಿ 314.90 ಕೋಟಿ ರೂ. ಹಾಗೂ ಪರಿಶಿಷ್ಟ ಜಾತಿ ಅಭಿವೃದ್ಧಿ ಕಾರ್ಯಕ್ರಮದಡಿ 1,105.37 ಕೋಟಿ ರೂ. ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು